ಮುಂಬೈ,ಫೆ.1: ದೇಶ ಎಷ್ಟೇ ಅಭಿವೃದ್ಧಿಯಾದರೂ, ಶಿಕ್ಷಣವಂತರ ಸಂಖ್ಯೆ ಜಾಸ್ತಿಯಾದರೂ ಜನರು ಮಾನವೀಯತೆ ಅನ್ನೋದನ್ನು ಮರೆತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮುಂಬೈನಲ್ಲಿ ಡೆಲಿವರಿ ಬಾಯ್ ಒಬ್ಬರು ಭಾರೀ ತೂಕದ ಪಾರ್ಸೆಲ್ ಅನ್ನು ಬೆನ್ನಿನ ಮೇಲೆ ಆರು ಮಹಡಿಗಳ ಮೆಟ್ಟಿಲಿನ ಮೂಲಕವೇ ಹೊತ್ತೊಯ್ದಿದ್ದಾರೆ. ಆ ಕಟ್ಟಡದ ಲಿಫ್ಟ್ ಅನ್ನು ಬಳಕೆ ಮಾಡಲು ಅವರಿಗೆ ಅನುಮತಿ ನಿರಾಕರಿಸಲಾಗಿತ್ತು. ಈ ಕಾರಣದಿಂದಾಗಿ ಆರು ಮಹಡಿಗಳ ಮೆಟ್ಟಿಲುಗಳ ಮೂಲಕವೇ ಬೆನ್ನಿನ ಮೇಲೆ ಪಾರ್ಸೆಲ್ ಸಾಗಿಸಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವಸತಿ ಸಮುಚ್ಚಯಗಳಲ್ಲಿ ಡೆಲಿವರಿ ಸಿಬ್ಬಂದಿ ಮತ್ತು ಮನೆಕೆಲಸದವರ ವಿರುದ್ಧ ನಡೆಯುತ್ತಿರುವ ತಾರತಮ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು ಡೆಲಿವರಿ ಬಾಯ್ ತಮ್ಮ ದೇಹದ ಗಾತ್ರಕ್ಕಿಂತಲೂ ದೊಡ್ಡದಾದ ಪಾರ್ಸೆಲ್ ಅನ್ನು ಹೊತ್ತು ಮೆಟ್ಟಿಲು ಹತ್ತುತ್ತಿರುವುದನ್ನು ಕಾಣಬಹುದು. ತೂಕ ತಾಳಲಾರದೆ ಅವರು ಪ್ರತಿ ಹೆಜ್ಜೆಯಲ್ಲೂ ಪರದಾಡುತ್ತಿದ್ದರು.
ವಿಡಿಯೋ ನೋಡಿ:
ವಿಡಿಯೋದಲ್ಲಿ ಒಬ್ಬ ಡೆಲಿವರಿ ಮ್ಯಾನ್ ಬೆನ್ನಿನ ಮೇಲೆ ದೊಡ್ಡ ಪಾರ್ಸೆಲ್ ಹಿಡಿದುಕೊಂಡು ಹಲವಾರು ಮೆಟ್ಟಿಲುಗಳನ್ನು ನಿಧಾನವಾಗಿ ಹತ್ತುವುದನ್ನು ತೋರಿಸಲಾಗಿದೆ. ತೂಕವು ದೇಹದ ಸಾಮರ್ಥ್ಯವನ್ನು ಮೀರಿತ್ತು. ಒಂದು ಹಂತದಲ್ಲಿ, ಅವನು ಬಹುತೇಕ ತನ್ನ ಸಮತೋಲನವನ್ನು ಕಳೆದುಕೊಂಡಿದ್ದು ಕಷ್ಟಪಟ್ಟು ಅಪಾರ್ಟ್ಮೆಂಟ್ ಅನ್ನು ತಲುಪುತ್ತಾನೆ.
ಆದರೆ ಅವನ ಹೋರಾಟ ಅಲ್ಲಿಗೆ ಮುಗಿಯಲಿಲ್ಲ. ಡೆಲಿವರಿ ಬಾಯ್ ಫ್ಲಾಟ್‌ನ ಬಾಗಿಲಿನೊಳಗೆ ಹೋಗಲು ಪ್ರಯತ್ನಿಸುವಾಗ ಎಡವಿ ಬೀಳುತ್ತಾನೆ. ಪ್ಯಾಕೇಜ್ ತುಂಬಾ ದೊಡ್ಡದಾಗಿದ್ದು, ಫ್ಲಾಟ್‌ನ ಬಾಗಿಲಿನ ಮೂಲಕ ಒಳಗೆ ಹೋಗಲು ಅವನಿಗೆ ತೊಂದರೆಯಾಯಿತು. ಈ ದೃಶ್ಯವನ್ನು ಕಂಡು ನೆಟ್ಟಿಗರು ಮರುಗಿ ದ್ದಾರೆ. ಕ್ಲಿಪ್ ಅನ್ನು ಪೋಸ್ಟ್ ಮಾಡಿದ ವ್ಯಕ್ತಿ "ವಿತರಣಾ ಸಿಬ್ಬಂದಿ ಲಿಫ್ಟ್‌ಗಳನ್ನು ಬಳಸದಂತೆ ನಿರ್ಬಂಧಿಸುವುದು ಅಸ್ಪೃಶ್ಯತೆ ಯಾಗಿದೆ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು "ಮಾಲೀಕನಿಗೆ ತಿಳಿದಿರಬೇಕು ಇವರು ಯಂತ್ರಗಳಲ್ಲ, ಮನುಷ್ಯರು" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಲಿಫ್ಟ್‌ಗಳಲ್ಲಿ ಭಾರವಾದ ವಸ್ತುಗಳನ್ನು ಸ್ಥಳಾಂತರಿಸುವುದರಿಂದ ಸ್ಥಗಿತಗೊಳ್ಳುತ್ತದೆ, ದುಬಾರಿ ದುರಸ್ತಿ ಉಂಟಾಗುತ್ತದೆ" ಎಂದು ಹೇಳಿದ್ದಾರೆ.