ಪಾಟ್ನಾ,ಡಿ.30: ಕಷ್ಟಪಟ್ಟು ಓದಿದರೆ ಮುಂದೊಂದು ದಿನ ಉತ್ತಮ ಕೆಲಸ ಸಿಗಬಹುದು ಎಂದು ಹೆಚ್ಚಿನವರು ಶ್ರಮ ವಹಿಸುತ್ತಾರೆ. ಹಾಗಾಗಿ ಪರೀಕ್ಷೆ, ರೆಕಾರ್ಡ್, ಪ್ರಾಜೆಕ್ಟ್ ಹೀಗೆ ಶಾಲೆಯಲ್ಲಿ ಕೊಡುವ ಎಲ್ಲ ಕೆಲಸಗಳಿಗೂ ವಿದ್ಯಾರ್ಥಿಗಳು ಸಿದ್ದರಾಗಿರುತ್ತಾರೆ. ಆದರೆ ಬಿಹಾರದ ಈ ವಿದ್ಯಾರ್ಥಿಗೆ ತಾನು ಪಟ್ಟ ಶ್ರಮಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೀಡಿ ಆತನೇ ಶಾಕ್ ಆಗಿದ್ದಾನೆ. ತಾನು ಬರೆದಿರುವ ಪ್ರಾಕ್ಟಿಕಲ್ ಪರೀಕ್ಷೆಯ ಪುಸ್ತಕದ ಪುಟಗಳಲ್ಲೇ ಆತನಿಗೆ ಶಾಲೆಯಲ್ಲಿ ಗಣರಾಜ್ಯೋತ್ಸವದ ಸಿಹಿತಿಂಡಿ ಹಂಚಿದ್ದು ವಿದ್ಯಾರ್ಥಿ ಆಶ್ಚರ್ಯಚಕಿತನಾಗಿದ್ದಾನೆ.
ಶಾಲೆಗಳಲ್ಲಿ ಗಣರಾಜ್ಯೋತ್ಸವ ಆಚರಣೆಗಳು ಸಾಮಾನ್ಯವಾಗಿ ನಡೆಯುತ್ತವೆ. ಹೀಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳು ಮತ್ತು ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ಹಂಚಿ ಆಚರಣೆ ಮಾಡಲಾಗುತ್ತದೆ. ಆದರೆ ಬಿಹಾರ ಶಾಲೆ ಯೊಂದರ ವಿಡಿಯೊ ಇತ್ತೀಚೆಗೆ ಭಾರೀ ವೈರಲ್ (Viral Video) ಆಗಿದೆ. ವಿದ್ಯಾರ್ಥಿಯೊಬ್ಬನಿಗೆ ತಾನೇ ಬರೆದ ನೋಟ್‌ಬುಕ್ ಹರಿದು ಸಿಹಿತಿಂಡಿ ಬಡಿಸಿರುವುದನ್ನು ನೋಡಿ ವಿದ್ಯಾರ್ಥಿ ಆಶ್ಚರ್ಯ ಗೊಂಡಿದ್ದಾನೆ.
ವಿಡಿಯೋ ನೋಡಿ
ಗಣರಾಜ್ಯೋತ್ಸವ ದಿನ ಸಿಹಿತಿಂಡಿಯಾದ ಬೂಂದಿ ಪಡೆಯಲು ಹೋದ ವಿದ್ಯಾರ್ಥಿಗೆ ಕೈಗೆ ಸಿಕ್ಕ ಕಾಗದ ನೋಡಿ ಆಘಾತವಾಗಿದೆ. ಏಕೆಂದರೆ, ಈ ತಿಂಡಿಯನ್ನು ಹಾಕಿಕೊಟ್ಟಿದ್ದ ಕಾಗದ ಆತ ಕೆಲವು ದಿನಗಳ ಹಿಂದೆ ಪ್ರಾಕ್ಟಿಕಲ್ ಪರೀಕ್ಷೆಗಾಗಿ ನೀಡಿದ ನೋಟ್ ಬುಕ್‌ನ ಪುಟವಾಗಿತ್ತು. ವೀಡಿಯೊದಲ್ಲಿ, ಕ್ಲಿಪ್ ಅನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯೊಬ್ಬರು, ಗಣರಾಜ್ಯೋತ್ಸವದ ಶುಭಾಶಯಗಳು. ನೀವು ನೋಟ್‌ಬುಕ್‌ನಲ್ಲಿ ಬೂಂದಿ ತಿನ್ನುತ್ತಿದ್ದೀರಾ? ಎಂದು ಹೇಳುವುದು ಕೇಳಿಸುತ್ತದೆ.
ವಿಡಿಯೋ ಮಾಡುವ ವ್ಯಕ್ತಿ, "ಬಾಬು, ಇದು ನಿನ್ನದೇ ಕಾಪಿಯೇ?" ಎಂದು ಕೇಳಿದಾಗ, ವಿದ್ಯಾರ್ಥಿ ಹೌದು ನಾನು ತುಂಬಾ ಶ್ರಮ ದಿಂದ ಈ ಪ್ರಾಕ್ಟಿಕಲ್ ಬರೆದಿದ್ದೇನೆ ಮತ್ತು ಅವರು ಅದೇ ಪುಟದಲ್ಲಿ ಬೂಂದಿ ಕೊಟ್ಟರು. ನನ್ನ ಎಲ್ಲಾ ಶ್ರಮ ವ್ಯರ್ಥವಾಯಿತು ಎಂದಿದ್ದಾನೆ. ನಂತರ ಆತನ ಸ್ನೇಹಿತ, ಪ್ರಾಕ್ಟಿಕಲ್‌ನಲ್ಲಿ ಮಾರ್ಕ್ ಪಡೆಯಲು ನಾನು 500 ರೂಪಾಯಿ ಕೊಟ್ಟಿದ್ದೇನೆ. ಕೊಟ್ಟ ಹಣಕ್ಕೂ ಅಂಕ ಸಿಗುತ್ತದೆ ಎಂದಿದ್ದಾನೆ.
ಈ ವೀಡಿಯೊ ಹರಡುತ್ತಿದ್ದಂತೆ, ಅನೇಕ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆ ಗಳನ್ನು ಹಂಚಿಕೊಂಡರು. ಬಳಕೆದಾರರೊಬ್ಬರು ಕಷ್ಟಪಟ್ಟಿದ್ದಕ್ಕೆ ಸಿಹಿ ಫಲ ಸಿಗುತ್ತದೆ ಎಂಬ ಮಾತು ಇಂದು ನಿಜವಾಯಿತು ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಇದು ಸರ್ಕಾರಿ ಮತ್ತು ಖಾಸಗಿ ಶಾಲೆಗಳೆರಡರಲ್ಲೂ ನಡೆಯುತ್ತದೆ, ಭ್ರಷ್ಟಾಚಾರ ಮತ್ತು ಲಂಚದ ವ್ಯಾಪಕ ಸಮಸ್ಯೆ ಇಂದು ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ.