ಜೈಪುರ, ಜ. 26: ಇತ್ತೀಚೆಗೆ ಮೊಬೈಲ್ ಗೀಳು ಮಿತಿ ಮೀರಿದೆ. ಅದರಲ್ಲೂ ಮೊಬೈಲ್‌ನಲ್ಲೇ ಸಮಯ ಕಳೆಯುವ ಯುವ ಸಮುದಾಯ ಸಮಯ ವ್ಯರ್ಥ ಮಾಡುತ್ತಿದೆ ಎನ್ನುವ ದೂರು ಹೆಚ್ಚಾಗಿ ಕೇಳಿ ಬರುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೇಮಕಥೆಯೊಂದು ಅಪಾಯಕಾರಿ ಹಂತದ ತಲುಪಿದ ಘಟನೆಯೊಂದು ನಡೆದಿದೆ. ರಾಜಸ್ಥಾನದ ಹದಿಹರೆಯದ ಹುಡುಗಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು 8 ಕಿ.ಮೀ. ನಡೆದುಕೊಂಡು ಹೋಗಿ ಕುಸಿದು ಬಿದ್ದಿದ್ದಾಳೆ. ಸದ್ಯ ಈ ಸುದ್ದಿ ಭಾರಿ ವೈರಲ್ ಆಗಿದ್ದು, (Viral News) ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಅರಳಿದ ಪ್ರೀತಿ ಆಘಾತಕಾರಿ ಹಂತಕ್ಕೆ ಬಂದು ತಲುಪಿದೆ. ಸ್ನ್ಯಾಪ್ ಚಾಟ್‌ನಲ್ಲಿ ಪರಿಚಯವಾದ ಯುವಕನನ್ನು ಭೇಟಿಯಾಗಲು ಹದಿಹರೆಯದ ಬಾಲಕಿಯೊಬ್ಬಳು 8 ಕಿಲೋ ಮೀಟರ್ ನಡೆದುಕೊಂಡು ಹೋಗಿದ್ದಾಳೆ. ಬಳಿಕ ಸುಡು ಬಿಸಿಲಿನಲ್ಲಿ ನಡೆದು ಆಯಾಸದಿಂದ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾಳೆ. ಸ್ಥಳೀಯ ನಿವಾಸಿಗಳಿಗೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ತಕ್ಷಣ ಆಕೆಯನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಧಿಕಾರಿಗಳ ಪ್ರಕಾರ, ಆ ಹುಡುಗಿ ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ ಯುವಕನೊಂದಿಗೆ ಸುಮಾರು ಒಂದೂವರೆ ವರ್ಷದಿಂದ ಚಾಟ್ ಮಾಡುತ್ತಿದ್ದಳು. ಜನವರಿ 26ರಂದು ಹತ್ತಿರದ ಅಂಗಡಿಗೆ ಹೋಗುವ ನೆಪದಲ್ಲಿ, ಹುಡುಗಿ ಯಾರಿಗೂ ತಿಳಿಸದೆ ತನ್ನ ಮನೆಯಿಂದ ಹೊರಟು ಬಂದಿದ್ದಾಳೆ. ಯಾವುದೇ ಹಣ ಅಥವಾ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದೆ ಮಧ್ಯ ಪ್ರದೇಶದತ್ತ ನಡೆಯಲು ಶುರು ಮಾಡಿದ್ದಾಳೆ.
ಸೂರ್ಯನನ್ನೇ ಹಾದು ಹೋದ ಸ್ಕೈಡೈವರ್- ಅಪರೂಪದ ಕ್ಷಣ ಕ್ಯಾಮರಾದಲ್ಲಿ ಸೆರೆ!
ಸುಮಾರು 8 ಕಿಲೋ ಮೀಟರ್ ದೂರ ನಡೆದ ನಂತರ, ಅತಿಯಾದ ಬಿಸಿಲು ಮತ್ತು ಆಯಾಸ ತಾಳಲಾರದೆ ಆಕೆ ರಸ್ತೆ ಬದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಸ್ಥಳೀಯರು ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅಲ್ವಾರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.