ಸಮುದ್ರದಲ್ಲಿ 3 ತಿಂಗಳಿದ್ದರೂ ಹಾಳಾಗದ ಜೆಬಿಎಲ್ ಸ್ಪೀಕರ್: ಗುಣಮಟ್ಟಕ್ಕೆ ಮನಸೋತ ನೆಟ್ಟಿಗರು
Viral Video: ಸಮುದ್ರ ತೀರದಲ್ಲಿ ತಿಂಗಳುಗಟ್ಟಲೆ ಬಿದ್ದ ಉಪಕರಣವೊಂದು ಮತ್ತೆ ಕೆಲಸ ಮಾಡುವ ಮೂಲಕ ಎಲ್ಲರನ್ನೂ ದಂಗಾಗಿಸಿದೆ. ಜೆಬಿಎಲ್ (JBL) ಬ್ಲೂಟೂತ್ ಸ್ಪೀಕರ್ ಮೂರು ತಿಂಗಳ ಕಾಲ ಸಮುದ್ರದಲ್ಲಿ ತೇಲುತ್ತಿದ್ದರೂ ಸರಿಯಾಗಿ ಕಾರ್ಯ ನಿರ್ವಹಿಸಿದೆ. ಸದ್ಯ ಈ ವಿಚಾರ ಸದ್ದು ಮಾಡುತ್ತಿದೆ.
ಸಮುದ್ರಕ್ಕೆ ಬಿದ್ದರೂ ಹಾಳಾಗದ ಜೆಬಿಎಲ್ ಸ್ಪೀಕರ್ -
ನವದೆಹಲಿ, ಜ. 4: ಇತ್ತೀಚೆಗೆ ಮೊಬೈಲ್, ಲ್ಯಾಪ್‌ಟಾಪ್, ಬ್ಲೂಟೂತ್ ಹೀಗೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ಇಂತಹ ದುಬಾರಿ ಬೆಲೆಯ ವಸ್ತುಗಳು ನೀರಿಗೆ ಬಿದ್ದರೆ ಹಾಳಾಗುತ್ತವೆ ಎಂಬ ಭಯ ಹೆಚ್ಚಿನವರಲ್ಲಿದೆ. ಆದರೆ ಇದೀಗ ಇದಕ್ಕೆ ತದ್ವಿರುದ್ಧ ಘಟನೆಯೊಂದು ನಡೆದಿದೆ. ಸಮುದ್ರಕ್ಕೆ ಬಿದ್ದು, 3 ತಿಂಗಳು ನೀರಲ್ಲೇ ಇದ್ದರೂ ಬ್ಲೂಟೂತ್ ಹಾಳಾಗಿಲ್ಲ. ಮತ್ತೆ ಸರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಎಲ್ಲರನ್ನೂ ದಂಗಾಗಿಸಿದೆ. ಜೆಬಿಎಲ್ (JBL) ಕಂಪನಿಯ ಬ್ಲೂಟೂತ್ ಸ್ಪೀಕರ್ 3 ತಿಂಗಳ ಕಾಲ ಸಮುದ್ರದಲ್ಲಿದ್ದರೂ ಈಗ ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಸುಮಾರು ಮೂರು ತಿಂಗಳ ಕಾಲ ಸಮುದ್ರದಲ್ಲಿ ತೇಲುತ್ತಿದ್ದ JBL ಬ್ಲೂಟೂತ್ ಸ್ಪೀಕರ್ ಇನ್ನೂ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಈ ಸ್ಪೀಕರ್ ಸರಿಸುಮಾರು ಮೂರು ತಿಂಗಳವರೆಗೆ ಸಮುದ್ರದ ಅಲೆಗಳ ನಡುವೆ ಸಿಲುಕಿತ್ತು. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ಸಮುದ್ರದ ಮಣ್ಣು, ಚಿಪ್ಪುಗಳು ಮತ್ತು ಸಮುದ್ರದ ಅವಶೇಷಗಳಿಂದ ಲೇಪಿತವಾದ JBL ಸ್ಪೀಕರ್ ಸಮುದ್ರ ತೀರದಲ್ಲಿ ಬಿದ್ದಿರುವುದು ಕಂಡು ಬಂದಿದೆ.
ವಿಡಿಯೊ ಇಲ್ಲಿದೆ:
This JBL speaker was found after floating in the ocean for 3 months, and it still works perfectly. pic.twitter.com/K2cytfZMI8
— Erimus (@HeDontMakeNoise) January 1, 2026
ಸ್ಪೀಕರ್ ಪೂರ್ತಿ ಸಮುದ್ರದ ಕೆಸರು, ಪಾಚಿಗಳಿಂದ ಆವೃತವಾಗಿತ್ತು. ಇಂತಹ ಸ್ಥಿತಿಯಲ್ಲಿದ್ದರೂ ಸ್ಪೀಕರ್ ಆನ್ ಮಾಡಿದಾಗ ಮಾತ್ರ ಅದರಲ್ಲಿ ಸಂಗೀತ ಸ್ಪಷ್ಟವಾಗಿ ಕೇಳಿಬಂದಿದೆ. ಹಾಡಿನ ಬೀಟ್‌ಗೆ ತಕ್ಕಂತೆ ಅದರ ಮೇಲೆ ಅಂಟಿಕೊಂಡಿದ್ದ ಶಂಖಗಳು ಕೂಡ ಕಂಪಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಕಂಡುಬಂದಿದೆ.
ವಧುವಿನ ಲೆಹೆಂಗಾ ಹಿಡಿದುಕೊಂಡು ಸಪ್ತಪದಿ ತುಳಿಯಲು ಮುಂದಾದ ಸ್ನೇಹಿತೆಯರು
ಈ ವಿಡಿಯೊ ಈಗಾಗಲೇ 1.7 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದ್ದು, ಜನರು ಜೆಬಿಎಲ್ ಕಂಪನಿಯ ಗುಣಮಟ್ಟಕ್ಕೆ ಫಿದಾ ಆಗಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಇದು ಜೆಬಿಎಲ್ ಪಾಲಿಗೆ ಸಿಕ್ಕ ಉಚಿತ ಜಾಹೀರಾತು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇದರ ಬಾಳಿಕೆ ಅದ್ಭುತ ಎಂದಿದ್ದಾರೆ. ಈಗ ಅದನ್ನು ಹೆಚ್ಚಿನ ಬೆಲೆಗೆ ಕೂಡ ಮಾರಾಟ ಮಾಡಬಹುದು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಫಿಲಿಪೈನ್ಸ್ ಚಂಡಮಾರುತದ ಸಮಯದಲ್ಲಿ ಐಫೋನ್ 17 ಪ್ರವಾಹದ ನೀರಿಗೆ ಜಾರಿಬಿದ್ದಿತ್ತು. ಚಂಡಮಾರುತದ ವೇಳೆ ಕೆಸರಿನಲ್ಲಿ ಹೂತು ಹೋಗಿದ್ದ ಐಫೋನ್ 17 ಮೂರು ದಿನಗಳ ಬಳಿಕ ಸಿಕ್ಕರೂ ಯಾವುದೇ ತೊಂದರೆಯಿಲ್ಲದೆ ಕಾರ್ಯ ನಿರ್ವಹಿಸಿತ್ತು.