ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ನಿರಾಕರಣೆ; ರಟ್ಟಿನ ಪೆಟ್ಟಿಗೆಯಲ್ಲಿ ಮಗುವಿನ ಶವ ಹೊತ್ತೊಯ್ದ ತಂದೆ
ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯೊಂದು ಅಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಆರೋಪದ ನಡುವೆ ಮನಕಲಕುವ ಘಟನೆ ನಡೆದಿದೆ. ನವಜಾತ ಮಗು ಮೃತಪಟ್ಟ ನಂತರ, ಗ್ರಾಮಕ್ಕೆ ಮರಳಲು ವಾಹನದ ವ್ಯವಸ್ಥೆ ಸಿಗದ ಕಾರಣ ತಂದೆ ಮಗುವಿನ ಶವವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಮನೆಗೆ ಹೊತ್ತೊಯ್ದಿದ್ದಾರೆ. ಘಟನೆ ಕುರಿತು ಜಿಲ್ಲಾಡಳಿತ ತನಿಖೆ ಆರಂಭಿಸಿದೆ.
ಶಿಶುವಿನ ಮೃತದೇಹ ಹೊತ್ತಿರುವ ತಂದೆ -
ರಾಂಚಿ: ಜಾರ್ಖಂಡ್ (Jharkhand)ನ ಪಶ್ಚಿಮ ಸಿಂಗ್‌ಭೂಮ್ (West Singhbhum) ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯೊಂದು ಆ್ಯಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಕಾರಣ, ತಂದೆಯೊಬ್ಬರು ತಮ್ಮ ನವಜಾತ ಶಿಶುವಿನ ಮೃತದೇಹವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಮನೆಗೆ ಹೊತ್ತೊಯ್ದ ಮನಕಲಕುವ ಘಟನೆ ನಡೆದಿದೆ. ಬಂಗ್ರಾಸಾಯಿ (Bangrasai) ಗ್ರಾಮದ ನಿವಾಸಿ ರಾಮಕೃಷ್ಣ ಹೇಂಬ್ರಾಮ್ (Ramkrishna Hembram) ಎಂಬುವವರು ಈ ದುರದೃಷ್ಟಕರ ಘಟನೆಯ ಬಗ್ಗೆ ಭಾನುವಾರ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ. ಹೇಂಬ್ರಾಮ್ ಅವರು ತಮ್ಮ ಗರ್ಭಿಣಿ ಪತ್ನಿ ರೀಟಾ ತಿರಿಯಾ ಅವರನ್ನು ಕಳೆದ ಗುರುವಾರ ಚಕ್ರಧರಪುರ ಉಪವಿಭಾಗದ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಿದ್ದರು. ಶನಿವಾರ ಪತ್ನಿ ಮಗುವಿಗೆ ಜನ್ಮ ನೀಡಿದ್ದರೂ ಸಹ, ದುರದೃಷ್ಟವಶಾತ್ ಆ ಮಗು ಜನಿಸಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ.
ವೈದ್ಯರು ಹೆರಿಗೆಯ ಸಮಯದಲ್ಲಿ ಮತ್ತು ನಂತರದ ಅವಧಿಯಲ್ಲಿ ಸರಿಯಾದ ಆರೈಕೆ ಹಾಗೂ ಚಿಕಿತ್ಸೆ ನೀಡದ ಕಾರಣ ಮಗು ಮೃತಪಟ್ಟಿದೆ ಎಂದು ಹೇಂಬ್ರಾಮ್ ಗಂಭೀರವಾಗಿ ಆರೋಪಿಸಿದ್ದಾರೆ. ಮಗು ಮೃತಪಟ್ಟ ತಕ್ಷಣವೇ, ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಮೃತದೇಹವನ್ನು ಅಲ್ಲಿಂದ ಬೇಗನೆ ತೆಗೆದುಕೊಂಡು ಹೋಗುವಂತೆ ತಮ್ಮ ಮೇಲೆ ಒತ್ತಾಯ ಮಾಡಿದರು. ತಮ್ಮ ಗ್ರಾಮಕ್ಕೆ ಮರಳಲು ಅಂಬ್ಯುಲೆನ್ಸ್ ಅಥವಾ ಬೇರೆ ಯಾವುದಾದರೂ ವಾಹನದ ವ್ಯವಸ್ಥೆ ಮಾಡುವಂತೆ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಪದೇ ಪದೇ ವಿನಂತಿಸಿದರೂ ಅವರು ಅದನ್ನು ನಿರಾಕರಿಸಿದ್ದಾರೆ. ಅಂತಿಮವಾಗಿ ಬೇರೆ ದಾರಿಯಿಲ್ಲದೆ, ಹಳೆಯ ರಟ್ಟಿನ ಪೆಟ್ಟಿಗೆಯೊಂದರಲ್ಲಿ ಮಗುವಿನ ಶವವನ್ನು ಇಟ್ಟುಕೊಂಡು ಗ್ರಾಮಕ್ಕೆ ತೆರಳಬೇಕಾಯಿತು ಎಂದು ಅವರು ನೋವಿನಿಂದ ಅಳಲು ತೋಡಿಕೊಂಡಿದ್ದಾರೆ.
Viral Video: ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್
ಆದರೆ, ಚಕ್ರಧರಪುರ ಉಪವಿಭಾಗದ ಆಸ್ಪತ್ರೆಯ ಉಸ್ತುವಾರಿ ವೈದ್ಯರಾದ ಡಾ. ಅಂಶುಮಾನ್ ಶರ್ಮಾ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. "ಮಗುವಿನ ತಂದೆಯಾಗಲಿ ಅಥವಾ ಅವರ ಕುಟುಂಬದವರಾಗಲಿ ಅಂಬ್ಯುಲೆನ್ಸ್‌ಗಾಗಿ ನಮ್ಮನ್ನು ಅಥವಾ ಆಸ್ಪತ್ರೆಯ ಯಾವುದೇ ಅಧಿಕಾರಿಯನ್ನು ಅಧಿಕೃತವಾಗಿ ಸಂಪರ್ಕಿಸಿಲ್ಲ. ಒಂದು ವೇಳೆ ಅವರು ನಮ್ಮನ್ನು ಕೇಳಿದ್ದರೆ ನಾವು ಖಂಡಿತವಾಗಿಯೂ ವಾಹನದ ವ್ಯವಸ್ಥೆ ಮಾಡುತ್ತಿದ್ದೆವು" ಎಂದು ಅವರು ಹೇಳಿದ್ದಾರೆ. ಈ ಸೂಕ್ಷ್ಮ ವಿಷಯದ ಬಗ್ಗೆ ಜಿಲ್ಲಾಡಳಿತವು ಈಗಾಗಲೇ ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಶ್ರುತಿ ರಾಜಲಕ್ಷ್ಮಿ ತಿಳಿಸಿದ್ದಾರೆ. ಕಳೆದ ಎಂಟು ದಿನಗಳಿಂದ ಜಿಲ್ಲಾ ಸಿವಿಲ್ ಸರ್ಜನ್ ಹುದ್ದೆಯು ಖಾಲಿ ಇರುವುದು ಈ ಭಾಗದ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ.