ನವದೆಹಲಿ: ಇಬ್ಬರು ನುರಿತ ಮಹಿಳಾ ಕಳ್ಳರು ಹಗಲು ಹೊತ್ತಿನಲ್ಲೇ ಆಭರಣ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ. ದೆಹಲಿಯ (Delhi) ಲಕ್ಷ್ಮಿ ನಗರದ ಆಭರಣದ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಈ ವೈರಲ್ ದೃಶ್ಯಗಳು ನೆಟ್ಟಿಗರಲ್ಲಿ ಆಘಾತಕಾರಿ ಅಲೆಗಳನ್ನು ಉಂಟುಮಾಡಿದೆ. ಅಂಗಡಿಯಲ್ಲಿದ್ದ ಸಿಬ್ಬಂದಿಗೆ ಸಿಕ್ಕಿಬೀಳದೆ ಮಹಿಳೆಯರು, ಕಣ್ಣು ಮಿಟುಕಿಸುವುದರೊಳಗೆ ಚಿನ್ನದ ಉಂಗುರವನ್ನು ಕದ್ದು ನಕಲಿ ಉಂಗುರವನ್ನು ಅಲ್ಲಿಟ್ಟಿದ್ದಾರೆ. ಅಂಗಡಿಯೊಳಗಿನ ಸಿಸಿಟಿವಿಯಲ್ಲಿ ಇಡೀ ದೃಶ್ಯ ಸೆರೆಯಾಗಿದ್ದು, ಇದೀಗ ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹಗಲು ಕಳ್ಳತನ ಮಾಡುವುದು ಎಂದರೆ ಖದೀಮರಿಗೆ ಯಾವುದೇ ಭಯವಿಲ್ಲ ಎಂದರ್ಥ. ಬೇರೊಬ್ಬರ ಕಣ್ಣಿಗೆ ಹೇಗೆ ಮಣ್ಣೆರಚಿ ಕಳ್ಳತನ ಮಾಡಲಾಗಿದೆ ಅನ್ನೋದನ್ನು ಈ ವಿಡಿಯೊದಲ್ಲಿ ನೋಡಬಹುದು. ಚಿನ್ನದ ಅಂಗಡಿಯಲ್ಲಿ ಗ್ರಾಹಕರು ಹೆಚ್ಚಿದ್ದರು. ಈ ವೇಳೆ ಇಬ್ಬರು ಮಹಿಳಾ ಖದೀಮರು ಬಂದು ಕುಳಿತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಸಿಬ್ಬಂದಿ ಅವರಿಗೆ ಚಿನ್ನದ ಉಂಗುರಗಳನ್ನು ತೋರಿಸುತ್ತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು.
ವಿಡಿಯೊ ವೀಕ್ಷಿಸಿ:
ಮಹಿಳಾ ಸಿಬ್ಬಂದಿಯು, ಮಹಿಳಾ ಗ್ರಾಹಕರಿಗೆ ಉಂಗುರಗಳಿಂದ ತುಂಬಿದ ಪೆಟ್ಟಿಗೆಯನ್ನು ಪ್ರದರ್ಶಿಸಿದ್ದಾರೆ. ಅವರಲ್ಲಿ ಒಬ್ಬರು ಉಂಗುರವನ್ನು ಆರಿಸಿದ್ದಾರೆ. ಅದನ್ನು ತಮ್ಮ ಕೈಯಲ್ಲಿರುವ ನಕಲಿ ಉಂಗುರದೊಂದಿಗೆ ಬದಲಾಯಿಸಿದ್ದಾರೆ. ನಂತರ ಮೆಲ್ಲನೆ ಆ ಚಿನ್ನದ ಉಂಗುರವನ್ನು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಮಹಿಳೆಯ ಕೈಗೆ ಕಳ್ಳಿ ನೀಡಿದ್ದಾಳೆ.
ಇದನ್ನೂ ಓದಿ: Viral Video: ಚಲಿಸುತ್ತಿದ್ದ ವಾಹನದಿಂದ ರಸ್ತೆಗೆ ಜಿಗಿದ ಸಿಂಹ; ಮೈಜುಮ್ಮೆನಿಸುವ ವಿಡಿಯೊ ಇಲ್ಲಿದೆ
ಇನ್ನೊಬ್ಬ ಮಹಿಳೆ ತಾನು ಹೊತ್ತೊಯ್ಯುವ ಕೈಚೀಲದಲ್ಲಿ ಉಂಗುರವನ್ನು ರಹಸ್ಯವಾಗಿ ಮರೆಮಾಡಿದ್ದಾಳೆ. ಆದರೆ, ಉಂಗುರಗಳನ್ನು ಬದಲಾಯಿಸಿಕೊಂಡ ಮಹಿಳೆ ಸಾಮಾನ್ಯ ಗ್ರಾಹಕರಂತೆ ತನ್ನ ಜೊತೆಗಾತಿಯೊಂದಿಗೆ ಮಾತನಾಡುತ್ತಾ ಪೆಟ್ಟಿಗೆಯನ್ನು ಮತ್ತೆ ಕೌಂಟರ್‌ನಲ್ಲಿ ಇಟ್ಟಿದ್ದಾಳೆ. ಕಳ್ಳಿಯರು ಎಷ್ಟು ಕೌಶಲ್ಯದಿಂದ ಈ ಪರಿಸ್ಥಿತಿಯನ್ನು ನಿರ್ವಹಿಸಿದ್ದಾರೆ ಎಂಬ ಬಗ್ಗೆ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಆದರೆ, ಇಂತಹ ವಿಡಿಯೊಗಳು ತೀವ್ರ ಕಳವಳವನ್ನು ಹುಟ್ಟುಹಾಕಿದೆ.
ಕಳ್ಳಿಯರು ಕದ್ದಿರುವುದು ಇದೇ ಮೊದಲಲ್ಲ. ಅವರ ವರ್ತನೆ ನೋಡಿದರೆ ಈ ಹಿಂದೆಯೂ ಹಲವು ಬಾರಿ ಕಳ್ಳತನ ಮಾಡಿರುವ ಸಾಧ್ಯತೆಗಳಿವೆ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ. ಮಹಿಳಾ ಕಳ್ಳರು ಶತಮೂರ್ಖರು. ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಆಭರಣ ಅಂಗಡಿಗಳಲ್ಲಿಯೂ ಸಿಸಿಟಿವಿ ಇರುತ್ತದೆ. ಯಾರೂ ನೋಡುತ್ತಿಲ್ಲ ಎಂದು ಅವರು ನಿಜವಾಗಿಯೂ ಭಾವಿಸಿದ್ದಾರೆಯೇ? ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಆಭರಣ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮರಾ ಇದ್ದರೂ ಚಿನ್ನದ ಉಂಗುರವನ್ನು ನಕಲಿ ಉಂಗುರಕ್ಕೆ ಬದಲಾಯಿಸುವುದು ಮಾಸ್ಟರ್ ಮೈಂಡ್ ಅಲ್ಲ. ಇವರು ಖಂಡಿತಾ ಬೇಗನೆ ಸಿಕ್ಕಿಬೀಳುತ್ತಾರೆ ಎಂದು ಮಗದೊಬ್ಬ ಬಳಕೆದಾರರು ಹೇಳಿದ್ದಾರೆ.