Viral Video: ಚಲಿಸುತ್ತಿದ್ದ ವಾಹನದಿಂದ ರಸ್ತೆಗೆ ಜಿಗಿದ ಸಿಂಹ; ಮೈಜುಮ್ಮೆನಿಸುವ ವಿಡಿಯೊ ಇಲ್ಲಿದೆ
Lion Jumps Heroically: ಚಲಿಸುತ್ತಿರುವ ವಾಹನದ ಮೇಲಿಂದ ಸಿಂಹವೊಂದು ಕೆಳಕ್ಕೆ ರಸ್ತೆಗೆ ಜಿಗಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಕ್ಷಿಣ ಆಫ್ರಿಕಾದ ವಾಯುವ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಪ್ರಾಣಿ ಸಂರಕ್ಷಣಾ ಸಂಸ್ಥೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.
-
Priyanka P
Oct 25, 2025 6:49 PM
ಕೇಪ್‍ಟೌನ್: ಚಲಿಸುತ್ತಿರುವ ವಾಹನದ ಮೇಲಿಂದ ಸಿಂಹವೊಂದು ಕೆಳಕ್ಕೆ ಜಿಗಿದಿರುವ ಘಟನೆ ದಕ್ಷಿಣ ಆಫ್ರಿಕಾದ (South Africa) ವಾಯುವ್ಯ ಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಪ್ರಾಣಿ ಸಂರಕ್ಷಣಾ ಸಂಸ್ಥೆಗಳು ಅಧಿಕಾರಿಗಳನ್ನು ಪ್ರಶ್ನಿಸುತ್ತಿವೆ. ಕಾಡು ಪ್ರಾಣಿಗಳ ಸ್ಥಳಾಂತರದ ಸಮಯದಲ್ಲಿ ಅವುಗಳ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಸಂಸ್ಥೆಯು ಕಳವಳ ವ್ಯಕ್ತಪಡಿಸಿವೆ.
ಫ್ರೀ ಸ್ಟೇಟ್‌ನಿಂದ ಗಂಡು ಸಿಂಹವನ್ನು ವಾಯುವ್ಯದ ರಾಮೋತ್ಶೆರೆ ಮೊಯಿಲೋವಾ ಪ್ರದೇಶದ ನೀಟ್ವರ್ಡಿಯಂಡ್‌ನಲ್ಲಿರುವ ಬೇಟೆ ಫಾರ್ಮ್‌ಗೆ ತರಲಾಯಿತು. ಅದು ನೆಲಕ್ಕೆ ಹಾರುವ ಸ್ವಲ್ಪ ಸಮಯದ ಮೊದಲು ಚಲಿಸುತ್ತಿರುವ ವ್ಯಾನ್‌ನಲ್ಲಿ ನಿಂತಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ನೋಡ ನೋಡುತ್ತಿದ್ದಂತೆ ಸಿಂಹವು ರಸ್ತೆಗೆ ಜಿಗಿದಿದೆ.
ಲಿಚ್ಟೆನ್‌ಬರ್ಗ್ ಪ್ರಾಣಿ ಆಸ್ಪತ್ರೆಯ ಡಾ. ಆಂಟನ್ ನೆಲ್ ಅವರನ್ನು ಒಳಗೊಂಡ ತಂಡವು ಅಂತಿಮವಾಗಿ ಸಿಂಹವನ್ನು ಸುರಕ್ಷಿತವಾಗಿ ಸೆರೆಹಿಡಿಯಿತು. ಸಿಂಹಕ್ಕೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತೋರುತ್ತಿದ್ದರೂ, ಈ ಘಟನೆಯು ದಕ್ಷಿಣ ಆಫ್ರಿಕಾದಲ್ಲಿ ಪರಭಕ್ಷಕ ಪ್ರಾಣಿಗಳ ವಾಣಿಜ್ಯ ಮಾರಾಟ ಮತ್ತು ಸಾಗಣೆಯಲ್ಲಿನ ಗಂಭೀರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ವಿಡಿಯೊ ವೀಕ್ಷಿಸಿ:
ದಕ್ಷಿಣ ಆಫ್ರಿಕಾದ ಫೋರ್ ಪಾವ್ಸ್ ಸಂಸ್ಥೆಯ ನಿರ್ದೇಶಕಿ ಫಿಯೋನಾ ಮೈಲ್ಸ್, ಘಟನೆಯ ಬಗ್ಗೆ ತಮಗೆ ತಿಳಿದಿದೆ ಎಂದು ದೃಢಪಡಿಸಿದರು. ಈ ಪ್ರಕರಣದ ಬಗ್ಗೆ ಮತ್ತು ವನ್ಯಜೀವಿ ಸಾಗಣೆ ನಿಯಮಗಳ ಅನುಸರಣೆಯ ಬಗ್ಗೆ ತನಿಖೆ ಆರಂಭಿಸುವ ಸರ್ಕಾರದ ತ್ವರಿತ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Viral News: 100 ಕ್ಕೂ ಹೆಚ್ಚು ಹೈ-ಪವರ್ ಅಯಸ್ಕಾಂತ ನುಂಗಿದ 13 ವರ್ಷದ ಬಾಲಕ
ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಿಂಹಗಳಂತಹ ಪರಭಕ್ಷಕ ಪ್ರಾಣಿಗಳನ್ನು ಸಾಗಿಸುವ ವೇಳೆ ಕಾನೂನು ಮತ್ತು ಕಲ್ಯಾಣ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂದು ಮೈಲ್ಸ್ ತಿಳಿಸಿದರು. ಮುಂದಾಗಬಹುದಾದ ಅಪಾಯಗಳನ್ನು ತಡೆಗಟ್ಟಬಹುದು ಮತ್ತು ಕಾಡು ಪ್ರಾಣಿಗಳನ್ನು ಗೌರವದಿಂದ ನಡೆಸಿಕೊಳ್ಳುವ ಬಗ್ಗೆ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಲಿಚ್ಟೆನ್‌ಬರ್ಗ್ ಮತ್ತು ಜೀರಸ್ಟ್ ನಡುವಿನ ರಸ್ತೆಯಲ್ಲಿ ಸಿಂಹ ತಪ್ಪಿಸಿಕೊಂಡ ನಂತರ ಸಹಾಯಕ್ಕಾಗಿ ಡಾ. ಆಂಟನ್ ನೆಲ್ ಅವರನ್ನು ಕರೆಯಲಾಯಿತು. ಅವರು ಸುಮಾರು ಸಂಜೆ 3 ಗಂಟೆ ವೇಳೆಗೆ ಆಗಮಿಸಿದರು. ಈ ವೇಳೆ ಸಿಂಹವು ಮರದ ಕೆಳಗೆ ಹುಲ್ಲಿನಲ್ಲಿ ಮಲಗಿರುವುದು ಕಂಡುಬಂದಿದೆ. ನಿದ್ರಾಜನಕ ಇಂಜೆಕ್ಷನ್ ನೀಡಿದ್ದರಿಂದ ಅದು ನಿದ್ದೆಯ ಅಮಲಿನಲ್ಲಿತ್ತು. ಸಿಂಹವು ಕೆಳಕ್ಕೆ ಬಿದ್ದ ನಂತರ ಸ್ವಲ್ಪ ದೂರ ನಡೆದುಕೊಂಡು ಹೋದಿದೆ. ನಂತರ ಅದು ಅಲ್ಲೇ ನಿದ್ದೆಗೆ ಜಾರಿದೆ. ಬಳಿಕ ಸಿಂಹವನ್ನು ಸುರಕ್ಷಿತವಾಗಿ ಸಾಗಿಸಲಾಯಿತು ಎಂದು ತಿಳಿದು ಬಂದಿದೆ.