ನವದೆಹಲಿ: ಧಂತೇರಸ್ ಹಬ್ಬದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಶುಭ ಶಕುನವೆಂದು ಪರಿಗಣಿಸಲಾಗಿದ್ದರೂ, ಚಿನ್ನದ (gold) ಬೆಲೆ ಗಗನಕ್ಕೇರುತ್ತಿರುವುದರಿಂದ ಅನೇಕ ಮಧ್ಯಮ ವರ್ಗದ ಭಾರತೀಯರಿಗೆ, ಇದೊಂದು ಕನಸಾಗಿಯೇ ಉಳಿದಿದೆ. ಇದೀಗ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಚಿನ್ನ ಖರೀದಿಸಿದ ವಿಚಾರದ ಬಗ್ಗೆ ಹಾಸ್ಯಮಯವಾಗಿ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್ (Viral Video) ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ವ್ಯಕ್ತಿಯು, 1.5 ಕೆಜಿ ಚಿನ್ನ ಖರೀದಿಸಿದೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ನಾವು ಧಂತೇರಸ್ ಮತ್ತು ದೀಪಾವಳಿ ಶಾಪಿಂಗ್ ಮಾಡಿ ಹಿಂತಿರುಗಿದ್ದೇವೆ. ನಮಗೆ 1.5 ಕೆಜಿ ಚಿನ್ನ ಸಿಕ್ಕಿದೆ. ಅದೂ ಬೇರೆ ಬೇರೆ ಅಂಗಡಿಗಳಿಂದ ಎಂದು ಆ ವ್ಯಕ್ತಿಯು ವಿಡಿಯೊದಲ್ಲಿ ಹೇಳಿದರು.
ಕಮಲೇಶ್ ಮೂರ್ತಿ ಎಂಬುವವರು ಆಭರಣ ಅಂಗಡಿಯ ಹೊರಗೆ ನಿಂತು 1.5 ಕೆ.ಜಿ ಚಿನ್ನ ಖರೀದಿಸಿದ್ದಾಗಿ ಹೇಳಿದರು. ನಮ್ಮಲ್ಲಿ 500 ಗ್ರಾಂ ಬ್ರಿಟಾನಿಯಾ ಗೋಲ್ಡ್, 500 ಗ್ರಾಂ ಟಾಟಾ ಟೀ ಗೋಲ್ಡ್ ಮತ್ತು ಫಾರ್ಚೂನ್ ಗೋಲ್ಡ್ ಸೂರ್ಯಕಾಂತಿ ಎಣ್ಣೆ ಖರೀದಿಸಿದ್ದಾಗಿ ಹಾಸ್ಯ ಮಾಡಿದ್ದಾರೆ. ಇದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಜನರ ಕೈಗೆಟಕದಂತೆ ಆಗಿದೆ. ಹೀಗಾಗಿ ಮೂರ್ತಿ ಅವರು ಈ ರೀತಿ ತಮಾಷೆ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
ಚಿನ್ನದ ಬೆಲೆ ಹೆಚ್ಚಾದರೂ ಕೂಡ ಹಳದಿ ಲೋಹವು, ದೇಶದಲ್ಲಿ ಹೆಚ್ಚು ಮಾರಾಟವಾಗುವ ಮತ್ತು ಖರೀದಿಸಲ್ಪಡುವ ವಸ್ತುವಾಗಿದೆ. ಭಾರತದಲ್ಲಿ ಮದುವೆಯಾಗಲಿರುವ ಹೆಣ್ಮಕ್ಕಳಿಗೆ ಚಿನ್ನ ಬೇಕೇ ಬೇಕು. ಹೀಗಾಗಿ ಚಿನ್ನದ ಬೇಡಿಕೆಯಂತೂ ಕುಸಿದಿಲ್ಲ. ಅಷ್ಟೇ ಅಲ್ಲ, ಹೂಡಿಕೆದಾರರು ಸಹ ಚಿನ್ನವನ್ನು ಖರೀದಿಸಿ ಸಂಗ್ರಹಿಸುತ್ತಿರುವುದರಿಂದ ಬಂಗಾರದ ಬೆಲೆ ಸದ್ಯಕ್ಕೆ ಕುಸಿಯುವ ಯಾವುದೇ ಲಕ್ಷಣಗಳಿಲ್ಲ.
ಸದ್ಯ ಧಂತೇರಸ್ ಮತ್ತು ದೀಪಾವಳಿಗಾಗಿ ಶಾಪಿಂಗ್ ಮಾಡಿರುವ ಕಮಲೇಶ್ ಮೂರ್ತಿ ಅವರು 1.5 ಕೆ.ಜಿ ಚಿನ್ನ ಖರೀದಿಸಿದೆ ಎಂಬ ತಮಾಷೆಯ ವಿಡಿಯೊ ನೆಟ್ಟಿಗರನ್ನು ರಂಜಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಮಾತುಗಳನ್ನು ಹಾಸ್ಯಮಯವಾಗಿ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡರು. ನಾನು 8 ಕೆ.ಜಿ ಚಿನ್ನವನ್ನು ಖರೀದಿಸಿದೆ. 5 ಲೀಟರ್ ಸಫೊಲಾ ಗೋಲ್ಡ್ ಆಯಿಲ್, 1 ಕೆ.ಜಿ ಚಕ್ರ ಟೀ ಗೋಲ್ಡ್, 2 ಕೆ.ಜಿ ನೆಸ್ಕಾಫೆ ಕಾಫಿ ಗೋಲ್ಡ್ ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದರು.
ನನಗೆ 5 ಕೆ.ಜಿ ಫಾರ್ಚೂನ್ ಗೋಲ್ಡ್ ಸಿಕ್ಕಿತು ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ತಮಾಷೆಯಾಗಿದ್ದರೂ, ಈ ವಿಡಿಯೊ ಇಂದು ಹೆಚ್ಚಿನ ಭಾರತೀಯರು ಚಿನ್ನವನ್ನು ಖರೀದಿಸಲು ಹೇಗೆ ಹೆಣಗಾಡುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿಶೇಷವಾಗಿ ಹಬ್ಬದ ಋತುವಿನಲ್ಲಿ, ಅವುಗಳ ಬೆಲೆಗಳು ಗಮನಾರ್ಹವಾಗಿ ಏರುತ್ತವೆ.