ಹೈದರಾಬಾದ್, ಅ. 3: ಚಿಕಿತ್ಸೆ ನೀಡಲು ಬಂದ ವೈದ್ಯೆಗೆ ರೋಗಿಯೊಬ್ಬ ಕಪಾಳಮೋಕ್ಷ ಮಾಡಿ, ಆಸ್ಪತ್ರೆ ಸಿಬ್ಬಂದಿ ಮೇಲೂ ದಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೆಲಂಗಾಣದ ಯಾದಾದ್ರಿ-ಭುವನಗಿರಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ವೈದ್ಯೆಯ ಸ್ಟೆತೊಸ್ಕೋಪ್ ಕಸಿದುಕೊಂಡು ಪರಾರಿಯಾದ ರೋಗಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ.
ಪೋಚಂಪಲ್ಲಿಯ ಮಹಮಯ್ಯಾ ಕಾಲೋನಿಯ ನಿವಾಸಿ ದುದ್ಯಾಲ ವೆಂಕಟ ತಿರುಪತಿ ಎಂಬಾತ ಆಸ್ಪತ್ರೆಗೆ ಕಾಲಿನ ಗಾಯದ ಚಿಕಿತ್ಸೆಗೆ ಬಂದಿದ್ದ, ಈ ವೇಳೆ ಮಹಿಳಾ ವೈದ್ಯರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾನೆ. ಆಸ್ಪತ್ರೆಯ ಸಿಬ್ಬಂದಿ ಆತನ ಗಾಯಕ್ಕೆ ಡ್ರೆಸ್ಸಿಂಗ್ ಮಾಡಿ ಚಿಕಿತ್ಸೆ ಪೂರ್ಣಗೊಳಿಸಿದ ತಕ್ಷಣವೇ ಆತ ವಿಚಿತ್ರವಾಗಿ ಹಿಂಸಾತ್ಮಕವಾಗಿ ವರ್ತಿಸಲು ಶುರು ಮಾಡಿದ್ದಾನೆ ಎನ್ನಲಾಗಿದೆ.
ವೈದ್ಯೆಯ ಮೇಲೆ ದಾಳಿ ನಡೆಸಿದ ರೋಗಿ:
ವೈದ್ಯೆಗೆ ಕಪಾಳಮೋಕ್ಷ, ಕಂಪ್ಯೂಟರ್ ಧ್ವಂಸ
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆತ ಡ್ಯೂಟಿಯಲ್ಲಿದ್ದ ವೈದ್ಯೆ ಡಾ. ಕೆ. ಶ್ವೇತಾ ಅವರ ಮೇಲೆ ದಾಳಿ ನಡೆಸಿ ಕಪಾಳಮೋಕ್ಷ ಮಾಡಿದ್ದಾನೆ. ಅಷ್ಟೇ ಅಲ್ಲದೆ, ವೈದ್ಯೆಯ ಕೊರಳಲ್ಲಿದ್ದ ಸ್ಟೆತೊಸ್ಕೋಪ್ ಬಲವಂತವಾಗಿ ಕಸಿದುಕೊಂಡಿದ್ದಾನೆ. ತಡೆಯಲು ಬಂದ ಇಬ್ಬರು ಮಹಿಳಾ ಸಿಬ್ಬಂದಿ ಸೇರಿ ಮೂವರು ಆಸ್ಪತ್ರೆ ನೌಕರರ ಮೇಲೆಯೂ ಆತ ಹಲ್ಲೆ ನಡೆಸಿದ್ದು, ಆರೋಗ್ಯ ಕೇಂದ್ರದಲ್ಲಿದ್ದ ಕಂಪ್ಯೂಟರ್ ಧ್ವಂಸಗೊಳಿಸಿದ್ದಾನೆ.
ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ 22 ವರ್ಷದ ಯುವಕ
ಘಟನೆಯ ನಂತರ ಆರೋಪಿ ನೇರವಾಗಿ ಪೋಚಂಪಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದನು. ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಆಸ್ಪತ್ರೆ ಸಿಬ್ಬಂದಿ, ಆರೋಪಿ ಈಗಾಗಲೇ ಅಲ್ಲಿರುವುದನ್ನು ಕಂಡು ಅಚ್ಚರಿಗೊಂಡಲು. ಆರೋಪಿ ಮಾನಸಿಕ ಅಸ್ವಸ್ಥ ಎಂದು ಹೇಳಿ ಪೊಲೀಸರು ಪ್ರಕರಣವನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ ಎಂದು ಆರೋಪಿಸಿದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ಕಪ್ಪು ಪಟ್ಟಿ ಧರಿಸಿ ಕರ್ತವ್ಯ ಬಹಿಷ್ಕರಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ಸಂಘಟನೆಗಳು ಸರ್ಕಾರವು ಗ್ರಾಮೀಣ ಪ್ರದೇಶದ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿವೆ. ಪ್ರಸ್ತುತ ಪೋಚಂಪಲ್ಲಿ ಪೊಲೀಸರು ಸಂತ್ರಸ್ತ ಸಿಬ್ಬಂದಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.