ಈಜಿಪ್ಟ್: ರಿಯಾಕ್ಷನ್ ಕ್ವೀನ್, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಇಂಟರ್‌ನೆಟ್‌ನಲ್ಲಿ ತಮ್ಮ ಹವಾ ಸೃಷ್ಟಿಸಿದ್ದು, ಮತ್ತೊಮ್ಮೆ ಸೆನ್ಸೇಶನ್ ನೆಚ್ಚಿನ ತಾರೆಯಾಗಿ ಹೊರಹೊಮ್ಮಿದ್ದಾರೆ. ಈ ಬಾರಿ ಈಜಿಪ್ಟ್(Egypt)ನ ಶರ್ಮ್ ಎಲ್-ಶೇಖ್(Sharm-al Sheikh)ನಲ್ಲಿ ನಡೆದ ಗಾಜಾ ಶಾಂತಿ ಶೃಂಗಸಭೆ(Gaza Peace Summit)ಯಲ್ಲಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಮೆಲೋನಿಯವರ ಆ್ಯಕ್ಷನ್‌ಗಳು ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ಭಾರಿ ವೈರಲ್ ಆಗಿವೆ.
ಇಸ್ರೇಲ್-ಹಮಾಸ್ (Israel-Hamas) ನಡುವಿನ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಕೈಗೊಂಡ ಪ್ರಯತ್ನಗಳು ಫಲ ನೀಡಿದ್ದು, ಗಾಜಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ 2 ವರ್ಷಗಳ ಸಂಘರ್ಷಕ್ಕೆ ತೆರೆ ಬಿದ್ದಿದೆ.
ಈ ವೇಳೆ ಮಾತನಾಡಿದ ಪಾಕಿಸ್ತಾನ (Pakistan) ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif), "ಡೊನಾಲ್ಡ್ ಟ್ರಂಪ್‌ರನ್ನು ಇಂದು ನಾನು ಮತ್ತೊಮ್ಮೆ ನೋಬೆಲ್ ಶಾಂತಿ ಪ್ರಶಸ್ತಿ(Nobel Peace Prize)ಗೆ ನಾಮನಿರ್ದೇಶನ ಮಾಡುತ್ತಿದ್ದೇನೆ," ಎಂದರು. ಷರೀಫ್‌ರವರ ಮಾತುಗಳಿಗೆ ವಿಶ್ವನಾಯಕರಿಂದ ಚಪ್ಪಾಳೆಗಳ ಸುರಿಮಳೆಯಾಗುತ್ತಿದ್ದರೆ, ಅಲ್ಲೇ ಹಿಂದುಗಡೆ ನಿಂತಿದ್ದ ಮೆಲೋನಿಯವರ ಮುಖದಲ್ಲಿನ ರಿಯಾಕ್ಷನ್‌ಗಳು, ಕೆಲವೇ ಗಂಟೆಗಳಲ್ಲಿ ಮೀಮ್‌ಗಳಾಗಿ ಹರಿದಾಡಿದವು.
ಇನ್ನೂ ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಎಕ್ಸ್ ಬಳಕೆದಾರನೊಬ್ಬ, "ಮೆಲೋನಿ ನಗದೇ ಇರಲು ಎಷ್ಟೊಂದು ಪ್ರಯತ್ನಿಸುತ್ತಿದ್ದಾರೆ," ಎಂದರೆ, ಮತ್ತೊಬ್ಬ, "ಮೆಲೋನಿ ಯಾರೂ ನಿರೀಕ್ಷಿಸದ ಟ್ವಿಸ್ಟ್ ನೋಡಿದಂತೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಶೆಹಬಾಜ್ ನೋಬೆಲ್‌ಗೆ ಟ್ರಂಪ್‌ರನ್ನು ನಾಮನಿರ್ದೇಶನ ಮಾಡುತ್ತಾರೆ ಎಂದರೆ, ಅದು ಪಾಕಿಸ್ತಾನದ ನಾವೀನ್ಯತೆಗೆ ಲೋಡ್ ಶೆಡ್ಡಿಂಗ್‌ಗೆ ಮಾಡಿದಂತೆ," ಎಂದು ಬರೆದಿದ್ದಾರೆ. ಪ್ರಮುಖ ರಾಜತಾಂತ್ರಿಕ ಕನ್ವಲ್ ಸಿಬಾಲ್ (Kanwal Sibal) ಅವರು ಈ ಒಪ್ಪಂದವನ್ನು "ಟ್ರಂಪ್ ಪ್ರೇರಿತ ಪಾಕಿಸ್ತಾನದ ಹಾಸ್ಯ ನಾಟಕ" ಎಂದಿದ್ದು, ಶೆಹಬಾಜ್ " ಪೈಪೋಟಿಯ ಮೂಲಕ ಟ್ರಂಪ್ ಬೂಟ್ ಪಾಲಿಶ್ ಮಾಡುತ್ತಿದ್ದಾರೆ" ಎಂದು ಟೀಕಿಸಿದ್ದಾರೆ. ಅಲ್ಲದೇ, ಶೆಹಬಾಜ್‌ರನ್ನು "ಪಾಕಿಸ್ತಾನದ ನೆಚ್ಚಿನ ಫೀಲ್ಡ್ ಮಾರ್ಷಲ್(favourite Field Marshal from Pakistan),"ಎಂದು ಅವಮಾನಿಸುವ ರೀತಿಯಲ್ಲಿ ಉಲ್ಲೇಖಿಸಿದ್ದು, ಇದರಿಂದ ಟ್ರಂಪ್ ಅವರಿಗೆ ನಾಗರಿಕ ಮುಖ್ಯಸ್ಥರಿಗಿಂತ ಮಿಲಿಟರಿ ನಾಯಕರ ಮೇಲೆಯೇ ಹೆಚ್ಚಿನ ನಂಬಿಕೆ ಇದ್ದಂತೆ ತೋರುತ್ತದೆ ಎಂದಿದ್ದಾರೆ.
ಇನ್ನು ಇದೇ ವೇಳೆ ಡೊನಾಲ್ಡ್ ಟ್ರಂಪ್, ಮೆಲೋನಿಯವರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. "ನಮ್ಮ ಜೊತೆ ಒಬ್ಬ ಮಹಿಳೆ ಇದ್ದಾರೆ, ಅಲ್ಲ ಅಲ್ಲ ಒಬ್ಬ ಯುವತಿ.. ಆಕೆ ಒಬ್ಬ ಸುಂದರ ಯುವತಿ. ಸುಂದರಿ ಎಂದು ಕರೆದರೆ ನಿಮಗೆ ಬೇಸರವಿಲ್ಲ ತಾನೆ? ಎಂದ ಅವರು, "ರಾಜಕೀಯ ವೇದಿಕೆಯಲ್ಲಿ ಇಂತಹ ಮಾತುಗಳು ವಿವಾದ ಸೃಷ್ಟಿಸಬಹುದು," ಎಂದಿದ್ದಾರೆ. ಟ್ರಂಪ್ ಅವರ ಹೇಳಿಕೆಗಳು ಸಾಮಾನ್ಯವಾಗಿ ಸುದ್ದಿಯಾಗುತ್ತಲೇ ಇರುತ್ತವೆ. ಈ ಬಾರಿ ಗಾಜಾ ಶಾಂತಿ ಶೃಂಗಸಭೆಯಂತಹ ಪ್ರಮುಖ ರಾಜಕೀಯ ವೇದಿಕೆಯಲ್ಲಿ ಮೆಲೋನಿಯವರ ಕುರಿತಾದ ಈ ಮಾತುಗಳು ಕೇಳಿಬಂದಿರುವುದು ವಿಶೇಷ. ಮೆಲೋನಿ ಅವರು ಟ್ರಂಪ್ ಅವರ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಸುಂದರ ಯುವತಿ ಎನ್ನುತ್ತಲೇ ಮೆಲೋನಿ ಕಣ್ಣರಳಿಸಿದ್ದು ಗಮನ ಸೆಳೆದವು.