Viral Video: ರೈಲಿನ ಛಾವಣಿ ಮೇಲೆ ಕುಳಿತು 180 ಕಿ.ಮೀ. ಪ್ರಯಾಣಿಸಿದ ಮರಿ ಕೋತಿ; ಅಷ್ಟಕ್ಕೂ ಆಗಿದ್ದೇನು?
Viral Video: ಬಿಲಾಸ್ಪುರಕ್ಕೆ ತೆರಳುತ್ತಿದ್ದ ಛತ್ತೀಸ್‍ಗಢ ಎಕ್ಸ್‌ಪ್ರೆಸ್ ರೈಲಿನ ಛಾವಣಿ ಮೇಲೆ ಕುಳಿತು ಕೋತಿ ಮರಿಯೊಂದು ಆಗ್ರಾದಿಂದ ದಾಬ್ರಾಗೆ 180 ಕಿ.ಮೀ. ಪ್ರಯಾಣಿಸಿದೆ. ನಂತರ ಅದನ್ನು ಮಧ್ಯಪ್ರದೇಶದ ದಾಬ್ರಾದಲ್ಲಿ ರಕ್ಷಿಸಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಭೋಪಾಲ್: ಇತ್ತೀಚೆಗೆ ಬಿಲಾಸ್ಪುರಕ್ಕೆ ತೆರಳುತ್ತಿದ್ದ ಛತ್ತೀಸ್‍ಗಢ ಎಕ್ಸ್‌ಪ್ರೆಸ್ ರೈಲಿನ ಛಾವಣಿ ಮೇಲೆ ಹತ್ತಿದ ಕೋತಿ ಮರಿಯೊಂದು ಆಗ್ರಾದಿಂದ ದಾಬ್ರಾಗೆ ಪ್ರಯಾಣ ಬೆಳೆಸಿದೆ. ರೈಲಿನ ಎಸಿ ಬೋಗಿ ಎಚ್1ರ ಛಾವಣಿಯ ಮೇಲೆ ಕುಳಿತು ಕೋತಿ ಬರೋಬ್ಬರಿ 180 ಕಿ.ಮೀ. ಪ್ರಯಾಣಿಸಿದೆ. ನಂತರ ಅದನ್ನು ಮಧ್ಯಪ್ರದೇಶದ ದಾಬ್ರಾದಲ್ಲಿ ರಕ್ಷಿಸಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಮಾಹಿತಿಯ ಪ್ರಕಾರ, ಛತ್ತೀಸ್‍ಗಢ ಎಕ್ಸ್‌ಪ್ರೆಸ್ ಆಗ್ರಾದ ರಾಜಾ ಕಿ ಮಂಡಿ ಮೂಲಕ ಹಾದುಹೋಗುವಾಗ ಕೋತಿ ಮೊದಲು ಎಚ್ -1 ಬೋಗಿಯ ಛಾವಣಿಯ ಮೇಲೆ ಜಿಗಿಯುವುದು ಕಂಡುಬಂದಿದೆ. ಕೋತಿ ತಪ್ಪಿಸಿಕೊಳ್ಳುವ ವೇಳೆ ಅದಕ್ಕೆ ವಿದ್ಯುತ್ ಶಾಕ್ ತಗುಲಿ ಗಾಯಗೊಂಡಿತು. ಕೋತಿಯನ್ನು ಅಲ್ಲಿಂದ ರಕ್ಷಿಸುವುದಕ್ಕಾಗಿ ರೈಲನ್ನು ಆಗ್ರಾ ಕಂಟೋನ್ಮೆಂಟ್, ಧೌಲ್ಪುರ್, ಮುರಾನ್, ಬನ್ಮೋರ್, ಗ್ವಾಲಿಯರ್ ಮತ್ತು ದಬೇರಾ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿತ್ತು.
ನಂತರ ಗ್ವಾಲಿಯರ್ ರೈಲ್ವೆ ನಿಲ್ದಾಣದಲ್ಲಿ, ಅರಣ್ಯ ಇಲಾಖೆಯ ತಂಡವನ್ನು ಕರೆಸಲಾಯಿತು. ಕೋತಿ ಕಾಣಿಸದ ಕಾರಣ ಸುಮಾರು 10 ನಿಮಿಷಗಳ ಹುಡುಕಾಟದ ನಂತರ, ಕೋತಿ ಎಚ್ -1 ಬೋಗಿಯ ಜೋಡಣೆಗಳ ನಡುವೆ ಅಡಗಿಕೊಂಡಿರುವುದು ಕಂಡುಬಂದಿದೆ. ಅಂತಿಮವಾಗಿ, ಕೋತಿಯನ್ನು ದಬೇರಾದಲ್ಲಿ ರಕ್ಷಿಸಲಾಯಿತು.
ಕೋತಿ ಪಯಣದ ವಿಡಿಯೊ ಇಲ್ಲಿದೆ ನೋಡಿ...
#WATCH | Baby Monkey Travels 176 KM From Agra To Dabra On Roof Of Chhattisgarh Express; Rescued#MPNews #MadhyaPradesh #viralvideo pic.twitter.com/0OWXg6T8GL
— Free Press Madhya Pradesh (@FreePressMP) March 18, 2025
ಕೋತಿಯಿಂದ ಉಂಟಾದ ಅನಿರೀಕ್ಷಿತ ಘಟನೆಯು ರೈಲಿನ ಪ್ರಯಾಣದಲ್ಲಿ ಸುಮಾರು 30 ನಿಮಿಷಗಳ ವಿಳಂಬಕ್ಕೆ ಕಾರಣವಾಯಿತು. ಕೋತಿಯನ್ನು ರಕ್ಷಣೆ ಮಾಡುವ ಪ್ರಯತ್ನದಲ್ಲಿ ಆರು ಬೇರೆ ಬೇರೆ ನಿಲ್ದಾಣಗಳಲ್ಲಿ ರೈಲನ್ನು ಪದೇ ಪದೇ ನಿಲ್ಲಿಸಿದ್ದರಿಂದ ಪ್ರಯಾಣದ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಯಿತು. ಇದರ ಪರಿಣಾಮವಾಗಿ, ರೈಲು ಆಗ್ರಾ ಕಂಟೋನ್ಮೆಂಟ್ ಅನ್ನು ಯೋಜಿಸಿದ್ದಕ್ಕಿಂತ 1 ಗಂಟೆ 8 ನಿಮಿಷ ತಡವಾಗಿ ತಲುಪಿತು ಮತ್ತು ಗ್ವಾಲಿಯರ್ ತಲುಪುವ ಹೊತ್ತಿಗೆ, 1 ಗಂಟೆ 38 ನಿಮಿಷಗಳ ಕಾಲ ವಿಳಂಬವಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಈ ಕೋತಿಗಳ ಕುಚೇಷ್ಟೆ ಒಂದೆರಡಲ್ಲ! ಕಪಿರಾಯನ ಕಾಟಕ್ಕೆ ಪ್ರವಾಸಿಗರು ಕಂಗಾಲು; ವಿಡಿಯೊ ಭಾರೀ ವೈರಲ್
ಕೋತಿಗಳಿಂದ ರೈಲಿನ ಪ್ರಯಾಣಕ್ಕೆ ತಡೆಯಾದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ, ಹೆತಂಪುರ್-ಧೌಲ್ಪುರ್ ನಡುವಿನ ಚಂಬಲ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲೆ ಎರಡು ಕೋತಿಗಳ ನಡುವಿನ ಜಗಳದಿಂದಾಗಿ ಓವರ್‌ಹೆಡ್ ಎಲೆಕ್ಟ್ರಿಕ್ (ಒಎಚ್ಇ) ಲೈನ್ ಟ್ರಿಪ್ ಆಗಿತ್ತು. ಜಗಳವಾಡುವಾಗ ಕೋತಿಗಳ ಗುಂಪು ಒಎಚ್ಇ ಲೈನ್ ಒಂದನ್ನು ಸ್ಪರ್ಶಿಸಿದ್ದವು. ಇದರಿಂದಾಗಿ ಸ್ಥಗಿತಗೊಂಡಿತ್ತು. ಪರಿಣಾಮವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್, ಮಹಾಕೌಶಲ್ ಎಕ್ಸ್‌ಪ್ರೆಸ್ ಮತ್ತು ಆಗ್ರಾ-ಝಾನ್ಸಿ ಪ್ಯಾಸೆಂಜರ್ ರೈಲುಗಳನ್ನು ನಿಲ್ಲಿಸಲಾಗಿತ್ತು. ಒಂದು ಗಂಟೆಯ ನಂತರ ರೈಲು ಸಂಚಾರವನ್ನು ಪುನರಾರಂಭಿಸಲಾಗಿತ್ತು.