ಪುತ್ರ ಶೇಕಡ 55ರಷ್ಟು ಅಂಕ ಗಳಿಸಿದ್ದಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕುಟುಂಬ; ಇನ್ನು ಡಿಸ್ಟಿಂಕ್ಷನ್ ಅಂಕ ಬಂದಿದ್ರೆ ಏನಾಗ್ತಿತ್ತು ಎಂದು ಕಾಲೆಳೆದ ನೆಟ್ಟಿಗರು
Viral Video: ಮುಂಬೈಯ ಕುಟುಂಬವೊಂದು ತಮ್ಮ ಮಗ ಕಡಿಮೆ ಅಂಕ ಪಡೆದರೂ ಸಂಭ್ರಮಿಸುವ ಮೂಲಕ ಜನರ ಹೃದಯ ಗೆದ್ದಿದೆ. ಮಗ ಪರೀಕ್ಷೆಯಲ್ಲಿ ಶೇಕಡ 55ರಷ್ಟು ಅಂಕಗಳನ್ನು ಗಳಿಸಿದರೂ ಅಂಕ ಪಟ್ಟಿ ಆಕಾರದ ಕೇಕ್ ತರಿಸಿ ಅದನ್ನು ಕಟ್ ಮಾಡುವ ಮೂಲಕ ಯಶಸ್ಸನ್ನು ಕೊಂಡಾಡಿದೆ. ಕಡಿಮೆ ಅಂಕ ಪಡೆದಿದ್ದರೂ ಪೋಷಕರು ಬೆಂಬಲ ವ್ಯಕ್ತಪಡಿಸಿರುವ ರೀತಿ ಅನೇಕರನ್ನು ಭಾವುಕರನ್ನಾಗಿಸಿತು.
ಕಡಿಮೆ ಅಂಕ ಗಳಿಸಿದರೂ ಕೇಕ್ ಕತ್ತರಿಸಿ ಸಂಭ್ರಮಿಸಿದ ಮುಂಬೈ ಕುಟುಂಬ -
ಮುಂಬೈ, ಮೇ 16: ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕೆಂದು ಬಯಸುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಇದು ತಾರಕಕ್ಕೇರಿದೆ. ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕೆಂದು ಪಾಲಕರು ಒತ್ತಡ ಹೇರುತ್ತಲೇ ಇರುತ್ತಾರೆ. ಆದರೆ ಮಹಾರಾಷ್ಟ್ರದ ಮುಂಬೈಯ ಕುಟುಂಬವೊಂದು ವಿಭಿನ್ನವಾಗಿ ಚಿಂತಿಸಿ ಮಾದರಿಯಾಗಿದೆ. ತಮ್ಮ ಮಗ ಕಡಿಮೆ ಅಂಕ ಪಡೆದರೂ ಸಂಭ್ರಮಿಸುವ ಮೂಲಕ ಜನರ ಹೃದಯ ಗೆದ್ದಿದೆ. ಮಗ ಪರೀಕ್ಷೆಯಲ್ಲಿ ಶೇಕಡ 55ರಷ್ಟು ಅಂಕ ಗಳಿಸಿದರೂ ಅಂಕಪಟ್ಟಿ ಆಕಾರದ ಕೇಕ್ ಕಟ್ಟಿಂಗ್ ಮಾಡುವ ಮೂಲಕ ಗಮನ ಸೆಳೆದಿದೆ. ಕಡಿಮೆ ಅಂಕ ಪಡೆದಿದ್ದರೂ ಪೋಷಕರು ಬೆಂಬಲ ವ್ಯಕ್ತ ಪಡಿಸಿರುವ ರೀತಿ ನೋಡಿ (Viral News) ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬೈಯ ಕುಟುಂಬವು ತಮ್ಮ ಮಗ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡ 55.20ರಷ್ಟು ಗಳಿಸಿದ ಅಂಕವನ್ನು ಕಂಡು ಸಂಭ್ರಮಿಸಿದೆ. ಮಗನ ಈ ಪ್ರಯತ್ನವನ್ನು ಪೋಷಕರು ಕೇಕ್ ಕತ್ತರಿಸಿ ಆಚರಿಸಿದ್ದಾರೆ. ಕೇವಲ ಅಂಕಗಳ ಗಮನ ಮೇಲೆ ಕೇಂದ್ರೀಕರಿಸುವ ಬದಲು, ಕುಟುಂಬವು ವಿದ್ಯಾರ್ಥಿಯ ಪ್ರಯತ್ನವನ್ನು ಚಪ್ಪಾಳೆ ತಟ್ಟಿ ವಿಶೇಷವಾಗಿ ಆಚರಿಸಿ ಸಂಭ್ರಮಿಸಿದೆ.
ವಿಡಿಯೊ ನೋಡಿ:
ಈ ಹೃದಯಸ್ಪರ್ಶಿ ಕ್ಷಣವು ಪರೀಕ್ಷೆಯ ಅಂಕಗಳಿಗಿಂತ ಪೋಷಕರ ಭಾವನಾತ್ಮಕ ಬೆಂಬಲವು ಹೆಚ್ಚು ಮುಖ್ಯ ಎಂಬುದನ್ನು ತಿಳಿಸಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಾವು ಓದುತ್ತಿರುವಾಗ ತಮ್ಮ ಕುಟುಂಬಗಳಿಂದ ಇದೇ ರೀತಿಯ ಪ್ರೋತ್ಸಾಹ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.
ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್ ಸಂಸದರು
ಈ ವಿಡಿಯೊವನ್ನು ಮುಂಬೈ ಮೂಲದ ಬಳಕೆದಾರ ರುಖ್ಸರ್ ಪಟೇಲ್ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ ಕುಟುಂಬ ಸದಸ್ಯರು ವಿದ್ಯಾರ್ಥಿಯ ಪರೀಕ್ಷಾ ಫಲಿತಾಂಶಗಳ ನಂತರ ಸ್ಪೆಷಲ್ ಕೇಕ್ ಸಿದ್ಧಪಡಿಸುತ್ತಾರೆ. ಈ ಕೇಕ್ ಮೇಲ್ನೋಟಕ್ಕೆ ಅಪ್ಪಟ ಅಂಕಪತ್ರದಂತೆಯೇ ಕಾಣುತ್ತಿತ್ತು. ವಿದ್ಯಾರ್ಥಿಗೆ ಇಂಗ್ಲಿಷ್‌ನಲ್ಲಿ 57, ಮರಾಠಿಯಲ್ಲಿ 44, ಹಿಂದಿಯಲ್ಲಿ 56, ಗಣಿತದಲ್ಲಿ 59 ಮತ್ತು ಸಮಾಜ ವಿಜ್ಞಾನದಲ್ಲಿ 44 ಅಂಕ ಬಂದಿದೆ. ಕೇಕ್‌ನಲ್ಲಿ ಉಲ್ಲೇಖಿಸಲಾದ ಒಟ್ಟು ಅಂಕಗಳು 500ರಲ್ಲಿ 276 (ಶೇಕಡ 55.20) ಬಂದಿತ್ತು.
ವಿದ್ಯಾರ್ಥಿಯು ರೂಮ್ ಒಳಗೆ ಪ್ರವೇಶಿಸುತ್ತಿದ್ದಂತೆ, ಕುಟುಂಬದ ಸದಸ್ಯರೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟುತ್ತ, ಹರ್ಷೋದ್ಗಾರ ಮಾಡಿ ಆತನನ್ನು ಸ್ವಾಗತಿಸಿದ್ದಾರೆ. ಕುಟುಂಬ ಸದಸ್ಯರು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ. ಈ ವಿಡಿಯೊಕ್ಕೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಕುಟುಂಬದ ನಡೆಗೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.