ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿವಿ ಇಲ್ಲ, ಫೋನ್ ಇಲ್ಲ: 42 ದಿನಗಳವರೆಗೆ ಸಂಪೂರ್ಣ ಮೌನವಾಗಲಿದೆ ಈ 9 ಹಳ್ಳಿಗಳು; ಕಾರಣವೇನು?

Manali Rituals: ಹಿಮಾಚಲ ಪ್ರದೇಶದ ಮನಾಲಿಯ ಒಂಭತ್ತು ಹಳ್ಳಿಗಳಲ್ಲಿ 42 ದಿನ ಸಂಪೂರ್ಣ ಮೌನ ವೃತ ಪಾಲಿಸಲಾಗುತ್ತಿದೆ. ಈ ಸಮಯದಲ್ಲಿ ಟಿವಿ, ಮೊಬೈಲ್ ಫೋನ್ ಮತ್ತು ಇತರ ಶಬ್ಧಮೂಲಗಳನ್ನು ನಿಷೇಧಿಸಲಾಗಿದೆ. ಸ್ಥಳೀಯ ದೇವತೆಗಳ ಆದೇಶ ಮತ್ತು ಪ್ರಾಚೀನ ಪರಂಪರೆಯನ್ನು ಮುಂದುವರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

42 ದಿನದವರೆಗೆ ಸಂಪೂರ್ಣ ಮೌನಕ್ಕೆ ಜಾರಿವೆ ಈ 9 ಹಳ್ಳಿಗಳು (ಸಂಗ್ರಹ ಚಿತ್ರ)

ಶಿಮ್ಲಾ, ಜ. 14: ಟಿವಿ ಮತ್ತು ಮೊಬೈಲ್ ಫೋನ್‌ಗಳೇ ಪ್ರಾಬಲ್ಯ ಹೊಂದಿರುವ ಈ ಯುಗದಲ್ಲಿ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಅಪರೂಪದ ಸಂಪ್ರದಾಯವೊಂದು (Manali Rituals) ಮತ್ತೆ ಮುಂಚೂಣಿಗೆ ಬಂದಿದೆ. ಈ ಪ್ರದೇಶದ 9 ಗ್ರಾಮಗಳಲ್ಲಿ ಮುಂದಿನ 42 ದಿನಗಳವರೆಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೆ ಬರಲಿದ್ದು, ತಂತ್ರಜ್ಞಾನದ ಆಕರ್ಷಣೆಗಳನ್ನೆಲ್ಲ ತಾತ್ಕಾಲಿಕವಾಗಿ ತಡೆಯುವ ಮೂಲಕ, ನಾಡಿನ ಶಾಂತಿ, ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಉಳಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರಲ್ಲಿ ಕೇಳಿಕೊಳ್ಳಲಾಗಿದೆ.

ಈ ಅವಧಿಯ ಮೊದಲ 9 ದಿನಗಳವರೆಗೆ, ನಿವಾಸಿಗಳು ದೂರದರ್ಶನ ನೋಡುವುದಿಲ್ಲ, ದೇವಾಲಯದ ಪ್ರಾರ್ಥನೆಗಳು ಸ್ಥಗಿತಗೊಂಡಿರುತ್ತವೆ ಮತ್ತು ಮೊಬೈಲ್ ಫೋನ್ ರಿಂಗ್‌ಟೋನ್‌ಗಳು ಕೇಳಿಸುವುದಿಲ್ಲ. ಕೃಷಿ ಕೆಲಸಗಳನ್ನು ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜನರು ನಿಯಮಗಳನ್ನು ಪಾಲಿಸುವ ಸಲುವಾಗಿ ತಮ್ಮ ಟಿವಿಗಳನ್ನು ಆಫ್ ಮಾಡಿ ತಮ್ಮ ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಮೋಡ್‌ನಲ್ಲಿ ಇರಿಸಿದ್ದಾರೆ.

ಮಕರ ಸಂಕ್ರಾಂತಿಯಂದು ಎಳ್ಳನ್ನೇ ಏಕೆ ಹಂಚುತ್ತಾರೆ? ಇದರ ಹಿಂದಿರುವ ಪೌರಾಣಿಕ ಕಥೆ ಗೊತ್ತೆ?

ಉಜಿ ಕಣಿವೆಯ ಸ್ಥಳೀಯ ದೇವತೆಗಳು ಹೊರಡಿಸಿದ ಆದೇಶಗಳು

ಸ್ಥಳೀಯ ದೇವತೆಗಳು ಹೊರಡಿಸಿದ್ದಾರೆಂದು ನಂಬಲಾದ ನಿರ್ದೇಶನಗಳನ್ನು ಅನುಸರಿಸಿ ಮನಾಲಿಯ ಉಜಿ ಕಣಿವೆಯಾದ್ಯಂತ ಈ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಗೌಶಾಲ್ ಗ್ರಾಮವನ್ನು ಹೊರತುಪಡಿಸಿ, ಇತರ 8 ಗ್ರಾಮಗಳು ಈ ಪ್ರಾಚೀನ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮುಂದುವರಿಸುತ್ತಿವೆ.

ಗ್ರಾಮಸ್ಥರ ಪ್ರಕಾರ, ಗೌತಮ ಋಷಿ, ಬಿಯಾಸ್ ಋಷಿ ಮತ್ತು ನಾಗ ದೇವತೆಗಳಿಂದ ಈ ಸೂಚನೆಗಳು ಬಂದಿವೆ. ಮಕರ ಸಂಕ್ರಾಂತಿಯ ನಂತರ, ಕಣಿವೆಯ ದೇವತೆಗಳು ಆಳವಾದ ಧ್ಯಾನಾವಸ್ಥೆಗೆ ಪ್ರವೇಶಿಸುತ್ತಾರೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಲು, ದೂರದರ್ಶನ, ರೇಡಿಯೊ, ಮೊಬೈಲ್ ಫೋನ್ ಸೇರಿದಂತೆ ಎಲ್ಲ ಆಧುನಿಕ ಶಬ್ಧಮೂಲಗಳನ್ನು 42 ದಿನಗಳ ಕಾಲ ನಿಷೇಧಿಸಲಾಗುತ್ತದೆ.

ಶತಮಾನಗಳಷ್ಟು ಹಳೆಯದಾದ ಸಂಪ್ರದಾಯ

ಈ ಸಂಪ್ರದಾಯವನ್ನು ಗೌಶಾಲ್, ಕೋಥಿ, ಸೋಲಾಂಗ್, ಪಲ್ಚನ್, ರುವಾದ್, ಕುಲಾಂಗ್, ಶಾನಾಗ್, ಬುರುವಾ ಮತ್ತು ಮಜ್ಹಚ್ ಗ್ರಾಮಗಳಲ್ಲಿ ಶತಮಾನಗಳಿಂದ ಆಚರಿಸಲಾಗುತ್ತಿದೆ. ಸ್ಥಳೀಯ ನಿವಾಸಿ ರಾಕೇಶ್ ಠಾಕೂರ್, ಈ ಪದ್ಧತಿಯನ್ನು ತಲೆಮಾರುಗಳಿಂದ ಗೌರವಿಸಲಾಗುತ್ತಿದೆ. ಗ್ರಾಮಸ್ಥರು ಮಾತ್ರವಲ್ಲದೆ ಭೇಟಿ ನೀಡುವ ಪ್ರವಾಸಿಗರು ಸಹ ಇದನ್ನು ಅನುಸರಿಸುತ್ತಿದ್ದಾರೆ. ಎಲ್ಲರೂ ಸ್ವಇಚ್ಛೆಯಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ಮನಾಲಿಯ ಸಿಮ್ಸಾದಲ್ಲಿರುವ ಕಾರ್ತಿಕ್ ಸ್ವಾಮಿ ದೇವಾಲಯದ ಬಾಗಿಲುಗಳನ್ನು ಬುಧವಾರ (ಜನವರಿ 14) ಮುಚ್ಚಲಾಗಿದೆ. ಸಿಮ್ಸಾ ಜತೆಗೆ, ಕನ್ಯಲ್, ಚಿಯಾಲ್, ಮಾಧಿ ಮತ್ತು ರಂಗ್ರಿ ಎಂಬ ನಾಲ್ಕು ಇತರ ಗ್ರಾಮಗಳು ಸಹ ದೇವರ ಆದೇಶವನ್ನು ಅನುಸರಿಸಿ ಶಬ್ಧದ ಮೇಲೆ ಸಂಪೂರ್ಣ ನಿಷೇಧ ಹೇರಿವೆ.

ಕೃಷಿ ಚಟುವಟಿಕೆಗಳೂ ಮೌನ

ಒಂದು ತಿಂಗಳ ಕಾಲ ದೊಡ್ಡ ಶಬ್ಧಗಳನ್ನು ನಿಷೇಧಿಸಲಾಗಿದೆ. ಜನರು ಮೃದುವಾಗಿ ಮಾತನಾಡಬೇಕು ಮತ್ತು ಎಲ್ಲ ಕೃಷಿ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ಕಾರ್ತಿಕ್ ಸ್ವಾಮಿ ದೇವಾಲಯದ ಅರ್ಚಕ ಮಕರ ಧ್ವಜ ಶರ್ಮಾ ಹೇಳಿದ್ದಾರೆ. ದೇವಾಲಯದ ಗಂಟೆಗಳನ್ನು ಬಾರಿಸದಂತೆ ಕಟ್ಟಲಾಗಿದೆ. ಫಗ್ಲಿ ಹಬ್ಬದ ಸಮಯದಲ್ಲಿ ದೇವಾಲಯದ ಬಾಗಿಲುಗಳು ಮತ್ತೆ ತೆರೆಯಲ್ಪಡುತ್ತವೆ ಎಂದು ಅವರು ಹೇಳಿದರು.

ಲಹೌಲ್-ಸ್ಪಿಟಿಯ ಅಟಲ್ ಸುರಂಗದ ಆಚೆ ಇರುವ ಸಿಸ್ಸು ಗ್ರಾಮದಲ್ಲೂ ಇದೇ ರೀತಿಯ ಸೂಚನೆಗಳನ್ನು ನೀಡಲಾಗಿದೆ. ಹಲ್ದಾ ಹಬ್ಬದ ಕಾರಣ, ಪ್ರವಾಸಿಗರು ಮತ್ತು ಹೊರಗಿನವರು ಗ್ರಾಮಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಈ ನಿರ್ಬಂಧಗಳು ಫೆಬ್ರವರಿ 28ರವರೆಗೆ ಜಾರಿಯಲ್ಲಿರುತ್ತವೆ.