ಮಕರ ಸಂಕ್ರಾಂತಿಯಂದು ಎಳ್ಳನ್ನೇ ಏಕೆ ಹಂಚುತ್ತಾರೆ? ಇದರ ಹಿಂದಿರುವ ಪೌರಾಣಿಕ ಕಥೆ ಗೊತ್ತೆ?
ಮಕರ ಸಂಕ್ರಾಂತಿ ಹಬ್ಬ ಬಂದೇ ಬಿಟ್ಟಿತು. ಮಕರ ಸಂಕ್ರಾಂತಿ ಎಳ್ಳಿನ ಹಬ್ಬವೆಂದೇ ಖ್ಯಾತಿ. ಎಳ್ಳು ಆರೋಗ್ಯ ಪ್ರಯೋಜನವನನ್ನು ಕೊಡುವುದರ ಜತೆಗೆ ಇದರ ಬಳಕೆಯ ಹಿಂದೆ ಪೌರಾಣಿಕ ಕಥೆಯೂ ಇದೆ. ಅವು ಏನು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಸಂಗ್ರಹ ಚಿತ್ರ -
ಬೆಂಗಳೂರು, ಜ. 14: ಉತ್ತರಾಯಣದ (Uttarayana) ಆರಂಭವನ್ನು ಸೂಚಿಸುವ ಮಕರ ಸಂಕ್ರಾಂತಿಯನ್ನು (Makara sankranti) ಎಳ್ಳಿನ ಹಬ್ಬವೆಂದೇ ಕರೆಯಲಾಗುತ್ತದೆ. ಈ ದಿನ ಎಳ್ಳಿಗೆ (Thil) ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಎಳ್ಳನ್ನು ವಿವಿಧ ಧಾರ್ಮಿಕ ಆಚರಣೆಗಳಿಗೆ ಬಳಸಲಾಗುತ್ತದೆ ಹಾಗೂ ಎಳ್ಳಿನಿಂದ ಮಾಡಿದ ವಿವಿಧ ಖಾದ್ಯಗಳನ್ನು ತಯಾರಿಸಿ ಸವಿಯಲಾಗುತ್ತದೆ. ಮಕರ ಸಂಕ್ರಾಂತಿ (Makara Sankranti 2026) ಹಬ್ಬದಂದು ಎಳ್ಳನ್ನು ಯಾಕೆ ಬಳಸುತ್ತಾರೆ, ಇದರ ಹಿನ್ನೆಲೆ ಏನು ಎನ್ನುವ ಬಗ್ಗೆ ಇಲ್ಲಿದ ಎಮಾಹಿತಿ.
ಪುರಾಣದಲ್ಲಿ ಏನಿದೆ?
ಪುರಾಣಗಳಲ್ಲಿ ಬರುವ ಈ ಕಥೆಯು ಮಕರ ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಬಳಕೆಯ ಮಹತ್ವವನ್ನು ವಿವರಿಸುತ್ತದೆ. ತಾಯಿ ಛಾಯಾ ದೇವಿಯನ್ನು ಅವಮಾನಿಸಿದಕ್ಕೆ ಕೋಪಗೊಂಡ ಶನಿಯು ತಂದೆ ಸೂರ್ಯ ದೇವನಿಗೆ ಕುಷ್ಠ ರೋಗ ಬರುವಂತೆ ಶಾಪ ನೀಡುತ್ತಾನೆ. ಸೂರ್ಯ ದೇವನ ನೋವನ್ನು ನೋಡಿ ಆತನ ಮೊದಲ ಪತ್ನಿ ಸಂಧ್ಯಾ ದೇವಿಯ ಮಗನಾದ ಯಮರಾಜ ಕೂಡ ನೊಂದುಕೊಳ್ಳುತ್ತಾನೆ. ಇದರಿಂದ ಕೋಪಗೊಂಡ ಸೂರ್ಯದೇವ ಸಿಟ್ಟಿನಲ್ಲಿ ಶನಿಯ ಮನೆಯನ್ನು ಸುಟ್ಟು ಹಾಕುತ್ತಾನೆ. ಇದರಿಂದ ಶನಿ ದೇವ ಮತ್ತು ಆತನ ತಾಯಿ ಛಾಯಾ ಸಾಕಷ್ಟು ನೋವು ಅನುಭವಿಸುತ್ತಾರೆ. ಇದು ಕೂಡ ಯಮರಾಜನಿಗೆ ನೋವುಂಟು ಮಾಡುತ್ತದೆ. ಅವನು ಸೂರ್ಯ ದೇವನ ಬಳಿ ಬಂದು ಅವರ ಜೀವನವನ್ನು ಉದ್ಧರಿಸುವಂತೆ ಕೇಳುತ್ತಾನೆ.
ಈ ವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕಾ ಅಥವಾ 15ಕ್ಕಾ? ಉತ್ತರ ಇಲ್ಲಿದೆ
ಯಮನಿಂದ ಶಾಂತನಾದ ಸೂರ್ಯ ಶನಿಯ ಮನೆಗೆ ಹೋದಾಗ ಅಲ್ಲಿ ಎಲ್ಲವೂ ಸುಟ್ಟು ಹೋಗಿರುತ್ತದೆ. ಶನಿ ದೇವನ ಬಳಿ ಕೇವಲ ಕಪ್ಪು ಎಳ್ಳು ಉಳಿದಿರುತ್ತದೆ. ಅವನು ಅದನ್ನು ಸೂರ್ಯನಿಗೆ ಅರ್ಪಿಸುತ್ತಾನೆ. ಇದರಿಂದ ಪ್ರಸನ್ನನಾದ ಸೂರ್ಯದೇವನು ಶನಿ ದೇವ ತನ್ನ ಎರಡನೇ ಮನೆ ಮಕರ ರಾಶಿಗೆ ಬಂದಾಗ ಅವನ ಸಂಪತ್ತು ಹೆಚ್ಚಾಗುತ್ತದೆ ಎಂದು ಆಶೀರ್ವದಿಸುತ್ತಾನೆ. ಹೀಗಾಗಿ ಸೂರ್ಯ ಮತ್ತು ಶನಿ ದೇವನಿಗೆ ಎಳ್ಳು ತುಂಬಾ ಇಷ್ಟವೆಂದು ಪರಿಗಣಿಸಲಾಗಿದೆ. ಆದ್ದರಿಂದ ಮಕರ ಸಂಕ್ರಾಂತಿ ದಿನ ಸೂರ್ಯ ಮತ್ತು ಶನಿ ದೇವನಿಗೆ ಪ್ರಿಯವಾದ ಎಳ್ಳಿನೊಂದಿಗೆ ಹಬ್ಬವನ್ನು ಆಚರಿಸುವುದು ವಾಡಿಕೆ.
ಭಾರತದಲ್ಲಿ ಎಳ್ಳಿನ ಇತಿಹಾಸ
ಎಣ್ಣೆ ಕಾಳಾಗಿ ಬಳಸುವ ಎಳ್ಳನ್ನು ಅಡುಗೆ ಎಣ್ಣೆ, ದೇವರ ಕಾರ್ಯಗಳಿಗೆ ಪ್ರಮುಖವಾಗಿ ಬಳಸಲಾಗುತ್ತದೆ. ಭಾರತದಲ್ಲಿ ಇದರ ಬಳಕೆ ಕ್ರಿ.ಪೂ. 3,500-3,050ರ ಮಧ್ಯೆ ಇತ್ತು ಎನ್ನಲಾದ ಕುರುಹುಗಳಿವೆ. 5,500 ವರ್ಷಗಳ ಹಿಂದೆಯೇ ಎಳ್ಳನ್ನು ಭಾರತದಲ್ಲಿ ಬೆಳೆಯಲಾಗುತ್ತಿತ್ತು. ಸಿಂಧೂ ನಾಗರಿಕತೆಯ ಕಾಲದಲ್ಲಿ ಎಳ್ಳಿನ ವ್ಯಾಪಾರ ನಡೆಯುತ್ತಿತ್ತು. ಇವರು ಎಳ್ಳಿನಿಂದ ಎಣ್ಣೆ ತೆಗೆಯುತ್ತಿದ್ದರು ಎನ್ನುತ್ತಾರೆ ಇತಿಹಾಸ ತಜ್ಞರು.
ಹಬ್ಬದಲ್ಲಿ ಎಳ್ಳಿನ ಬಳಕೆ
ಮಕರ ಸಂಕ್ರಾಂತಿ ದಿನ ಎಳ್ಳನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳಿಗೆ ಬಳಸಲಾಗುತ್ತದೆ. ಮುಖ್ಯವಾಗಿ ಈ ದಿನ ಎಳ್ಳು ನೀರಿನಿಂದ ಸ್ನಾನ ಮಾಡಲಾಗುತ್ತದೆ. ಎಳ್ಳು ನೀರಿನಿಂದ ತರ್ಪಣ ಬಿಡಲಾಗುತ್ತದೆ/ ಗೋವಿಗೆ ಎಳ್ಳನ್ನು ದಾನವಾಗಿ ನೀಡಲಾಗುತ್ತದೆ. ಎಳ್ಳು, ಬೆಲ್ಲ, ಕೊಬ್ಬರಿಯನ್ನು ಹಂಚಿ `ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ’ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಲಾಗುತ್ತದೆ. ಮಕ್ಕಳ ಮೇಲೆ ಎಳ್ಳನ್ನು ಸುರಿಯುವುದರಿಂದ ಬಾಲಾರಿಷ್ಟ ನಾಶವಾಗುತ್ತದೆ ಎನ್ನುವ ನಂಬಿಕೆ ಇದೆ. ಈ ದಿನ ಎಳ್ಳೆಣ್ಣೆಯ ದೀಪವನ್ನು ಉರಿಸುವುದರಿಂದ ಆಯುಷ್ಯ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯು ಇದೆ.
ವಾಸ್ತು ಏನು ಹೇಳುತ್ತದೆ?
ಸಾಮಾನ್ಯವಾಗಿ ದಾನ ಮಾಡಲು, ಧಾರ್ಮಿಕ ವಿಧಿ ವಿಧಾನಗಳಲ್ಲಿ ಕಪ್ಪು ಎಳ್ಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಕಪ್ಪು ಎಳ್ಳು ನಕಾರಾತ್ಮಕ ಶಕ್ತಿಯನ್ನು ತಟಸ್ಥಗೊಳಿಸುವ ಮತ್ತು ಶನಿ ಗ್ರಹವನ್ನು ಶಾಂತಗೊಳಿಸುವ ಶಕ್ತಿಯನ್ನು ಹೊಂದಿದೆ ಎನ್ನುವ ನಂಬಿಕೆ. ಇದನ್ನು ಬಳಸುವುದರಿಂದ ಪೂರ್ವಜರ ಶಾಪ, ದುಷ್ಟ ಕಣ್ಣು, ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಸೋಮವಾರದಂದು ಏನು ಮಾಡಬೇಕು? ಏನು ಮಾಡಬಾರದು?
ಆರೋಗ್ಯ ಪ್ರಯೋಜನ
ಮಕರ ಸಂಕ್ರಾಂತಿಯಲ್ಲಿ ಬಳಸುವ ಎಳ್ಳು ಬೆಲ್ಲ ಸಾಕಷ್ಟು ಆರೋಗ್ಯ ಪ್ರಯೋಜನವನ್ನು ಕೂಡ ಒದಗಿಸುತ್ತದೆ. ಎಳ್ಳು ಮತ್ತು ಬೆಲ್ಲವು ಉಷ್ಣ ಗುಣ ಹೊಂದಿದ್ದು, ಇದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧಿಯಾಗಿರುವ ಎಳ್ಳು ಮೂಳೆ, ಸ್ನಾಯುಗಳ ಆರೋಗ್ಯ ಕಾಪಾಡುತ್ತದೆ. ನರ ಮತ್ತು ಹೃದಯ ಸಂಬಂಧಿ ತೊಂದರೆಗಳನ್ನು ದೂರ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ನಾರಿನಾಂಶವು ಕರುಳಿಗೆ ಉತ್ತಮ. ಪ್ರೋಟೀನ್ ಸ್ನಾಯುಗಳನ್ನು ಬಲಪಡಿಸಿ, ಹಾರ್ಮೋನ್ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ರಕ್ತಹೀನತೆಯನ್ನು ದೂರ ಮಾಡುತ್ತದೆ. ದೇಹದಲ್ಲಿ ಖನಿಜಾಂಶ ಮತ್ತು ಎಲೆಕ್ಟ್ರೋಲೈಟ್ಸ್ ನ್ನು ನಿಯಂತ್ರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.