ಕಾರಿನೊಳಗೆ ಲಾಕ್ ಆಗಿ ನರಳುತ್ತಿದ್ದ ಸಾಕು ನಾಯಿಯನ್ನು ರಕ್ಷಿಸಿದ ಸ್ಥಳೀಯರು
Viral News: ಕಾರಿನೊಳಗೆ ನಾಯಿಯೊಂದು ಗಂಟೆಗಟ್ಟಲೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಅಸ್ಸಾಂನ ಗುವಹಾಟಿಯ ದಿಸ್ಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಘಟನೆ ವೈರಲ್ ಆಗಿದೆ.
ಕಾರಿನೊಳಗೆ ನಾಯಿಯನ್ನು ಲಾಕ್ ಮಾಡಿದ ಮಾಲಕ -
ದಿಸ್‌ಪುರ, ಜೂ. 3: ಇತ್ತೀಚೆಗೆ ಸಾಕುಪ್ರಾಣಿಗಳನ್ನು ಹಿಂಸಿಸುವ ಅನೇಕ ವಿಡಿಯೊಗಳು ವೈರಲ್ (Viral News) ಆಗಿವೆ. ಬೈಕ್‌ನ ಹಿಂದೆ ನಾಯಿಯನ್ನು ಕಟ್ಟಿ ಎಳೆದೊಯ್ಯುವುದು, ಮರಕ್ಕೆ ಕಟ್ಟಿ ಹೊಡೆಯುವುದು ಹೀಗೆ ಅನೇಕ ಕೃತ್ಯ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡು ವೈರಲ್ ಆಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಕಾರಿನೊಳಗೆ ನಾಯಿಯೊಂದು ಗಂಟೆಗಟ್ಟಲೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ರಕ್ಷಿಸಿದ್ದಾರೆ. ಅಸ್ಸಾಂನ ಗುವಾಹಟಿಯ ದಿಸ್‌ಪುರದಲ್ಲಿಈ ಘಟನೆ ನಡೆದಿದೆ.
ಕಡು ಬಿಸಿಲಿನ ನಡುವೆ ನಾಯಿಯೊಂದು ಲಾಕ್ ಮಾಡಿದ ಕಾರಿನೊಳಗೆ ಹಲವು ಗಂಟೆಯವರೆಗೆ ಸಿಲುಕಿಕೊಂಡಿದೆ. ಉಸಿರುಗಟ್ಟುವ ವಾತಾವರಣದ ನಡುವೆ ನಾಯಿ ಹೊರ ಬರಲು ಪ್ರಯತ್ನಿಸುತ್ತಲೇ ಇತ್ತು. ನಾಯಿ ತೀವ್ರವಾಗಿ ನರಳುತ್ತಿರುವುದನ್ನು ಅಲ್ಲಿನ ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಶ್ವಾನದ ಸ್ಥಿತಿಯನ್ನು ಕಂಡು ತಕ್ಷಣವೇ ಕಾರಿನ ಬಳಿ ಜಮಾಯಿಸಿದ್ದಾರೆ.
ವೈರಲ್ ಪೋಸ್ಟ್:
ಸ್ಥಳೀಯ ನಿವಾಸಿಗಳ ಪ್ರಕಾರ, ಬೆಳಗ್ಗೆಯಿಂದ ನಾಯಿಯನ್ನು ಲಾಕ್ ಮಾಡಲಾದ ಕಾರಿನೊಳಗೆ ಬಿಡಲಾಗಿತ್ತು ಎಂದು ವರದಿಯಾಗಿದೆ. ದಿನವಿಡೀ ತಾಪಮಾನ ಹೆಚ್ಚಾದ ಕಾರಣ ನಾಯಿಗೆ ಉಸಿರಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಉಸಿರಾಡಲು ಕಷ್ಟಪಟ್ಟು ನರಳಾಡುತ್ತಿತ್ತು. ತೊಂದರೆಯಲ್ಲಿರುವ ಅದನ್ನು ನೋಡಿದ ಸ್ಥಳೀಯರು ಆತಂಕಗೊಂಡಿದ್ದಾರೆ.
ಹಲವು ಗಂಟೆಗಳ ಕಾಲ ವಾಹನದೊಳಗೆ ಇದ್ದ ನಂತರ ನಾಯಿಯನ್ನು ಅಂತಿಮವಾಗಿ ಮಧ್ಯಾಹ್ನ 1:30ರ ಸುಮಾರಿಗೆ ರಕ್ಷಿಸಲಾಯಿತು. ಅದನ್ನು ಕಾರಿನಿಂದ ಸುರಕ್ಷಿತವಾಗಿ ಹೊರತರಲು ಸ್ಥಳೀಯ ನಿವಾಸಿಗಳು ಮತ್ತು ಪ್ರಾಣಿ ಕಲ್ಯಾಣ ಸ್ವಯಂಸೇವಕರು ಒಟ್ಟುಗೂಡಿದ್ದರು. ನಂತರ ಶ್ವಾನವನ್ನು ಸ್ವಯಂಸೇವಕ ಸಂಸ್ಥೆಯೊಂದರ ವಶಕ್ಕೆ ಒಪ್ಪಿಸಲಾಗಿದ್ದು, ಸದ್ಯ ಅದಕ್ಕೆ ಅಗತ್ಯ ಆರೈಕೆ ನೀಡಲಾಗಿದೆ.
ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸ್ಥಳೀಯ ನಿವಾಸಿಗಳಲ್ಲಿ ಜವಾಬ್ದಾರಿಯುತ ಸಾಕುಪ್ರಾಣಿ ಮಾಲಕತ್ವದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಮೂಕ ಜೀವವನ್ನು ಕಾರಿನೊಳಗೆ ಕೂಡಿ ಹಾಕಿದ ಮಾಲಕರನ್ನೂ ಇದೇ ರೀತಿ ಮಾಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.