ವಾರದಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆ; ಬಹಿರಂಗವಾಗಿ ಕ್ಷಮೆಯಾಚಿಸಿದ ಇಂಡಿಗೋ ಪೈಲೆಟ್
ಇಂಡಿಗೋ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಟಿಕಟ್ ಬುಕ್ ಮಾಡಿದ್ದ ಸಾವಿರಾರು ಪ್ರಯಾಣಿಕರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ವಿಮಾನಗಳ ರದ್ದು ಮತ್ತು ವಿಳಂಬದ ಮಧ್ಯೆ ಪ್ರಯಾಣಿಕರು ಏರ್‌ಪೋರ್ಟ್‌ನಲ್ಲೇ ದಿನ ಕಳೆದಿದ್ದು ಇದೆ. ಇದೀಗ ಈ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ. ಈಗಾಗಲೇ ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ತಮ್ಮಿಂದ ಉಂಟಾದ ಪ್ರಮಾದಕ್ಕೆ ಕ್ಷಮೆಯಾಚಿಸಿದೆ. ಇದರ ಬೆನ್ನಲ್ಲೇ ಇಂಡಿಗೋ ವಿಮಾನದ ಪೈಲಟ್ ಒಬ್ಬರು ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಡಿ. 9: ದೇಶದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆ ಎಂದು ಖ್ಯಾತಿ ಪಡೆದ ಇಂಡಿಗೋ ಸಂಸ್ಥೆ ಇತ್ತೀಚಿನ ಕೆಲವು ದಿನಗಳಿಂದ ಬಿಕ್ಕಟ್ಟಿನ ಸಮಸ್ಯೆ ಎದುರಿಸುತ್ತಿದೆ. ಪ್ರವಾಸ, ಶಿಕ್ಷಣ, ಉದ್ಯೋಗ, ಇತರ ಕಾರ್ಯಕ್ರಮಕ್ಕಾಗಿ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಟಿಕಟ್ ಬುಕ್ ಮಾಡಿದ್ದ ಸಾವಿರಾರು ಪ್ರಯಾಣಿಕರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದ ಮಧ್ಯೆ ಪ್ರಯಾಣಿಕರು ವಾಪಾಸು ಹೋಗಲಾಗದೆ ಏರ್‌ಪೋರ್ಟ್‌ನಲ್ಲಿಯೇ ದಿನ ಕಳೆದಿದ್ದು ಇದೆ. ಇದೀಗ ಈ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ. ಈಗಾಗಲೇ ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ತಮ್ಮಿಂದ ಉಂಟಾದ ಪ್ರಮಾದಕ್ಕೆ ಕ್ಷಮೆ ಯಾಚಿಸಿದೆ. ಇದರ ಬೆನ್ನಲ್ಲೇ ಇಂಡಿಗೋ ವಿಮಾನದ ಪೈಲಟ್ ಒಬ್ಬರು ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೊ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ.
ವಿಮಾನಯಾನ ಸಂಸ್ಥೆಯು ಎಲ್ಲ ಅಡೆತಡೆಗಳ ಹೊರತಾಗಿಯೂ ಪೈಲಟ್ ಮಾತ್ರ ಹೃತ್ಪೂರ್ವಕ ಕ್ಷಮೆಯಾಚಿಸಿದ್ದ ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಕ್ಯಾಪ್ಟನ್ ಪ್ರದೀಪ್ ಕೃಷ್ಣನ್ (Captain Pradeep Krishnan) ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಅವರು ವಿಮಾನದ ಮುಂಭಾಗದಲ್ಲಿ ನಿಂತು ಪ್ರಯಾಣಿಕರನ್ನು ತಮಿಳು ಭಾಷೆಯಲ್ಲಿ ಮಾತನಾಡಿಸಿ ಕ್ಷಮೆ ಕೇಳುವುದನ್ನು ಕಾಣಬಹುದು.
ವಿಡಿಯೊ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಅವರು, ʼʼನಮ್ಮಿಂದ ಉಂಟಾದ ಅನಾನುಕೂಲತೆ ಪರಿಸ್ಥಿತಿ ಬಗ್ಗೆ ನಾವು ವಿಷಾದಿಸುತ್ತೇವೆ. ಆದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ನೀವು ತಾಳ್ಮೆಯಿಂದ ವರ್ತಿಸಿದ್ದೀರಿ. ನಿಮ್ಮ ಊರಿಗೆ ಸುರಕ್ಷಿತವಾಗಿ ತಲುಪಿಸುವ ಸಲುವಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಕಳೆದ ಕೆಲವು ದಿನಗಳಿಂದ ನಮ್ಮ ವಿಮಾನಯಾನ ಸೇವೆಯಲ್ಲಿ ಬಹಳಷ್ಟು ಸಮಸ್ಯೆಗಳು ಆಗಿವೆ. ಈ ಬಗ್ಗೆ ನಮಗೂ ತುಂಬಾ ನೋವಿದೆʼʼ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ʼʼವಿಮಾನ ಯಾನ ಇಲ್ಲದರ ಬಗ್ಗೆ ಅನೇಕ ಕಡೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಆದರೆ ನಾವು ಯಾವುದೇ ತರನಾಗಿ ಮುಷ್ಕರ ಮಾಡಿಲ್ಲ ಎಂದು ಈ ಮೂಲಕ ದೃಢಪಡಿಸುತ್ತೇನೆ. ಕೊಯಮತ್ತೂರಿಗೆ ನಮ್ಮ ವಿಮಾನ ತುಂಬಾ ತಡವಾಗಿ ಹೋಗಿತ್ತು. ಆಗ ಕೂಡ ಪ್ರಯಾಣಿಕರು ತುಂಬಾ ತಾಳ್ಮೆಯಿಂದ ವರ್ತಿಸಿದ್ದರು. ಈಗ ನಮ್ಮ ತಂಡ ಈ ಎಲ್ಲ ತೆರನಾದ ಬಿಕ್ಕಟಿನಿಂದ ಸುಧಾರಿಸಿಕೊಳ್ಳುತ್ತಿದೆ. ನಮ್ಮಿಂದ ಉಂಟಾದ ತಪ್ಪಿಗೆ ಕ್ಷಮೆಯಾಚಿಸುತ್ತ ಶೀಘ್ರವೇ ನಿಮ್ಮ ಪ್ರೀತಿ ವಿಶ್ವಾಸ ಗಳಿಸುವ ಭರವಸೆ ನಮ್ಮಲ್ಲಿ ಸದಾ ಇದೆ. ಧನ್ಯವಾದಗಳುʼʼ ಎಂದು ಕ್ಯಾಪ್ಟನ್ ಕೃಷ್ಣನ್ ಅವರು ಹೇಳಿದ್ದಾರೆ. ಅವರ ಈ ಮಾತನ್ನು ಕೇಳಿದ್ದ ಪ್ರಯಾಣಿಕರು ಹೃತ್ಪೂರ್ವಕವಾಗಿ ಚಪ್ಪಾಳೆಯನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ
ಈ ವಿಡಿಯೊ ಬಗ್ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಂಡಿಗೋ ವಿಮಾನ ಸಂಸ್ಥೆಯ ಒತ್ತಡದ ಪರಿಸ್ಥಿತಿಯ ನಡುವೆಯೂ ಪೈಲಟ್‌ನ ವಿನಮ್ರತೆಯಿಂದ ನಡೆದುಕೊಂಡಿದ್ದು ನಿಜಕ್ಕೂ ಖುಷಿ ಎನಿಸುವಂತಿದೆ. ಇಂತಹ ಸಿಬಂದಿ ಬೆಂಬಲ ಇದ್ದರೆ ಎಲ್ಲ ರೀತಿಯ ಬಿಕ್ಕಟ್ಟನ್ನು ಅತ್ಯಂತ ಧೈರ್ಯವಾಗಿ ಎದುರಿಸಬಹುದು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಹೊಸದಾಗಿ ಜಾರಿಗೆ ತಂದ ನಿಯಮಗಳಿಂದಾಗಿ, ಸಿಬ್ಬಂದಿಯ ಕೊರತೆಯಿಂದಾಗಿ ದೇಶಾದ್ಯಂತ ವಿಮಾನ ಹಾರಾಟದ ಅಡಚಣೆ ಉಂಟಾಗಿದ್ದು ಇಂಡಿಗೋ ಭಾನುವಾರ 650ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿತು. ಸೋಮವಾರ 150ಕ್ಕೂ ಹೆಚ್ಚು ವಿಮಾನ ಕ್ಯಾನ್ಸಲ್ ಆಯ್ತು. ಪ್ರಯಾಣಿಕರಿಗೆ ಹೆಚ್ಚುವರಿ ವಿಳಂಬ ನಿರೀಕ್ಷಿಸುವಂತೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.