ಕ್ವಾಡ್ ನಾಯಕರ ಫೋಟೊ ಸೆಷನ್ ವೇಳೆ ನೆಲದಲ್ಲಿ ಬಿದ್ದಿದ್ದ ಭಾರತದ ಬಾವುಟ ಹೆಕ್ಕಿದ ನರೇಂದ್ರ ಮೋದಿ; ಭಾರತೀಯರ ಮನಗೆದ್ದ ವೈರಲ್ ವಿಡಿಯೊ ಇಲ್ಲಿದೆ
PM Modi picks up Indian flag: ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ ಕ್ವಾಡ್ ನಾಯಕರ ಫೋಟೊ ಸೆಷನ್ ವೇಳೆ ನೆಲದ ಮೇಲೆ ಬಿದ್ದಿದ್ದ ಭಾರತದ ತ್ರಿವರ್ಣ ಧ್ವಜ ಹೊಂದಿದ್ದ ಕಾಗದದ ಚೂರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೆಕ್ಕಿ ಜೇಬಿಗೆ ಹಾಕಿಕೊಂಡಿದ್ದಾರೆ. ಸದ್ಯ ಈ ವಿಡಿಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
-
ಮನಿಲಾ, ನ. 17: ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಳ ನಡೆ-ನುಡಿಯಿಂದ ಆಗಾಗ ಗಮನ ಸೆಳೆಯುತ್ತಾರೆ. ಹಿಂದೆ ಸ್ವತಃ ಕಸ ಗುಡಿಸುವ ಮೂಲಕ ಸುದ್ದಿಯಾಗಿದ್ದ ಅವರು ಇದೀಗ ಮತ್ತೊಮ್ಮೆ ಭಾರತೀಯರ ಮನ ಗೆದ್ದಿದ್ದಾರೆ. ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ ಕ್ವಾಡ್ ನಾಯಕರ ಫೋಟೊ ಸೆಷನ್ ವೇಳೆ ನೆಲದ ಮೇಲೆ ಬಿದ್ದಿದ್ದ ಭಾರತದ ತ್ರಿವರ್ಣ ಧ್ವಜ ಹೊಂದಿದ್ದ ಕಾಗದದ ಚೂರನ್ನು ಸ್ವತಃ ಅವರೇ ಹೆಕ್ಕಿ ಜೇಬಿಗೆ ಹಾಕಿಕೊಂಡಿದ್ದಾರೆ. ಆ ಮೂಲಕ ದೇಶಪ್ರೇಮ ತಮ್ಮ ಮಾತಿಗೆ ಮಾತ್ರ ಸೀಮಿತವನ್ನ ಎನ್ನುವ ಸಂದೇಶ ಸಾರಿದ್ದಾರೆ. ಸದ್ಯ ಈ ವಿಡಿಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಕ್ವಾಡ್ ನಾಯಕರ ಫೋಟೊ ಸೆಷನ್‌ಗಾಗಿ ಮೋದಿ ಆಗಮಿಸಿದ ವೇಳೆ ಅವರಿಗೆ ನೆಲದ ಮೇಲೆ ಭಾರತದ ಧ್ವಜವಿದ್ದ ಕಾಗದದ ಚೂರು ಬಿದ್ದಿರುವುದು ಕಾಣಿಸಿತು. ಒಂದುಕ್ಷಣವೂ ಹಿಂದೆ ಮುಂದೆ ನೋಡದ ಅವರು ಅದನ್ನು ತೆಗೆದು ಜೇಬಿಗಿಳಿಸಿದರು. ʼʼನಾನು ಬಾವುಟವನ್ನು ನೆಲದ ಮೇಲೆ ಬಿಡುವುದಿಲ್ಲʼʼ ಎಂದು ಅವರು ಈ ವೇಳೆ ತಿಳಿಸಿದರು. ಅಲ್ಲೇ ಇದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದಕ್ಕೆ ಪ್ರತಿಕ್ರಿಯಿಸಿ, ʼʼಅದನ್ನು ಇಟ್ಕೋಳಿʼʼ ಎಂದರು.
ನೆಲದ ಮೇಲೆ ಬಿದ್ದ ಬಾವುಟ ಹೆಕ್ಕಿದ ಮೋದಿ:
What a MOMENT! 🇮🇳 PM Modi spotted the Indian flag lying on the floor during the Quad family photo and immediately picked it up. “I cannot leave the flag on the floor,” he said. President Trump responded, “Keep it.”😀 https://t.co/GS5aIxh24r
— The Analyzer (News Updates🗞️) (@Indian_Analyzer) November 17, 2026
ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಮೋದಿ ಅವರ ಈ ನಡೆಗೆ ನೆಟ್ಟಿಗರು ಬಹುಪರಾಕ್ ಎಂದಿದ್ದಾರೆ. ʼʼನರೇಂದ್ರ ಮೋದಿ ಅವರ ಬಗ್ಗೆ ಹೆಮ್ಮೆಯಾಗುತ್ತಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಮೋದಿ ಅವರಿಗೆ ದೇಶದ ಬಾವುಟದ ಮೇಲೆ ಅಪಾರ ಗೌರವವಿದೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ʼʼನನ್ನ ಪ್ರಧಾನಿ ನನ್ನ ಹೆಮ್ಮೆʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಸದ್ಯ ಸದ್ದು ಮಾಡುತ್ತಿದೆ.
ದಾರಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ
2025ರ ಜನವರಿ 26ರಂದು ನಡೆದ 76ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರ ರಾಜಧಾನಿ ದಿಲ್ಲಿಯ ಕರ್ತವ್ಯ ಪಥದಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕುವ ಮೂಲಕ ಮೋದಿ ನೆಟ್ಟಿಗರ ಗಮನ ಸೆಳೆದಿದ್ದರು. ಆ ಮೂಲಕ ಸ್ವಚ್ಛ ಭಾರತದ ಬಗ್ಗೆ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದ್ದರು. ಕರ್ತವ್ಯ ಪಥದಲ್ಲಿ ಪ್ರೋಟೋಕಾಲ್ ಪ್ರಕಾರ ಪ್ರಧಾನಿ ಮೋದಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದರು. ಈ ವೇಳೆ ಅವರು ಕೆಳಗೆ ಬಿದ್ದಿದ್ದ ಕಸವನ್ನು ಗಮನಿಸಿ ಅದನ್ನು ಹೆಕ್ಕಿ ಪಕ್ಕದಲ್ಲೇ ಇದ್ದ ಭದ್ರತಾ ಸಿಬ್ಬಂದಿಗೆ ನೀಡಿದ್ದರು. ಈ ವಿಡಿಯೊ ಕೂಡ ಸಾಕಷ್ಟು ವೈರಲ್ ಆಗಿತ್ತು.
ಈ ವಿಡಿಯೊ ವೀಕ್ಷಿಸಿದ ಹಲವರು ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ್ದು ಮಾತ್ರವಲ್ಲದೆ ಸ್ವತಃ ಅವರೇ ಅದನ್ನು ಜಾರಿಗೆ ತರುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದರು. 2014ರಲ್ಲಿ ಮೋದಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿ ದೇಶವನ್ನು ಶುಚಿಯಾಗಿರಿಸುವ ಮಹತ್ವವನ್ನು ಸಾರಿ ಹೇಳಿದ್ದಾರೆ. ಅಲ್ಲದೆ ಈ ಅಭಿಯಾನದಲ್ಲಿ ಅವರೂ ಸಕ್ರಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.