ನಾಗರ ಪಂಚಮಿಯಂದು ವಿಷಪೂರಿತ ಸರ್ಪವನ್ನು ಕುತ್ತಿಗೆಗೆ ಸುತ್ತಿ ರೀಲ್ಸ್ ಮಾಡಿದ ಯುವಕನ ಅವಸ್ಥೆ ನೋಡಿ
Snake bites: ಯುವಕ ತನ್ನ ಕುತ್ತಿಗೆಗೆ ಹಾವನ್ನು ಹಾಕಿಕೊಂಡು ಇನ್‌ಸ್ಟಾಗ್ರಾಮ್ ರೀಲ್ಸ್ ಚಿತ್ರೀಕರಿಸುತ್ತಿದ್ದಾಗ ಅದು ಅವನನ್ನು ಕಚ್ಚಿದೆ. ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕುತ್ತಿಗೆಗೆ ಹಾವನ್ನು ಇಟ್ಟುಕೊಂಡಿರುವ ಯುವಕನ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.


ಲಖನೌ: ನಾಗರ ಪಂಚಮಿ (Nag Panchami)ಯ ಸಂದರ್ಭದಲ್ಲಿ 23 ವರ್ಷದ ಯುವಕನಿಗೆ ಹಾವು ಕಚ್ಚಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಯುವಕ ತನ್ನ ಕುತ್ತಿಗೆಗೆ ಹಾವನ್ನು ಹಾಕಿಕೊಂಡು ಇನ್‌ಸ್ಟಾಗ್ರಾಮ್ ರೀಲ್ ಚಿತ್ರೀಕರಿಸುತ್ತಿದ್ದಾಗ, ವಿಷಪೂರಿತ ನಾಗರಹಾವು ಅವನನ್ನು ಕಚ್ಚಿದೆ. ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕುತ್ತಿಗೆಗೆ ಹಾವನ್ನು ಇಟ್ಟುಕೊಂಡಿರುವ ಆತನ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ.
ಉತ್ತರ ಪ್ರದೇಶದ ಔರೈಯಾ ಪೊಲೀಸ್ ಠಾಣೆ ವ್ಯಾಪ್ತಿಯ ದಯಾಳ್‌ಪುರ-ಭಿಖಾಮಪುರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅಮಿತ್ ರಜಪೂತ್ (23) ಹಾವಿನಿಂದ ಕಚ್ಚಿಸಿಕೊಂಡ ಯುವಕ. ವೈರಲ್ ಆಗಿರುವ ವಿಡಿಯೊದಲ್ಲಿ ಯುವಕ ಹಾವಾಡಿಗನಿಂದ ಹಾವನ್ನು ತೆಗೆದುಕೊಂಡು ತನ್ನ ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. ರೀಲ್ಸ್ ಮಾಡಿದ ಬಳಿಕ ಯುವಕ ಹಾವಾಡಿಗನಿಗೆ ಹಿಂತಿರುಗಿಸಲು ಮುಂದಾದಾಗ ಹಾವು ಕಚ್ಚಿದೆ.
ನಾಗ ಪಂಚಮಿಯ ಸಂದರ್ಭದಲ್ಲಿ ಹಾವಾಡಿಗನೊಬ್ಬ ಆ ಪ್ರದೇಶಕ್ಕೆ ಬಂದಿದ್ದಾನೆ. ಅಮಿತ್ ರಜಪೂತ್ ರೀಲ್ಸ್‌ಗೆ ಮಾಡುವ ಉದ್ದೇಶದಿಂದ ಹಾವನ್ನು ಎತ್ತಿಕೊಂಡು ತನ್ನ ಕುತ್ತಿಗೆಗೆ ಹಾಕಿಕೊಂಡಿದ್ದಾನೆ. ಒಂದು ಕೈಯನ್ನು ಬಾಲದ ಹತ್ತಿರ ಹಾಗೂ ಇನ್ನೊಂದು ಕೈಯನ್ನು ಅದರ ಹೆಡೆಯ ಬಳಿ ಹಿಡಿದುಕೊಂಡಿದ್ದಾನೆ. ರೀಲ್ಸ್ ಮಾಡಿದ ಬಳಿಕ ಹಾವಾಡಿಗನಿಗೆ ಹಾವು ಹಿಂದಿರುಗಿಸಲು ಮುಂದಾಗಿದ್ದಾನೆ. ಅದರ ಹೆಡೆಯಿಂದ ಕೈಯನ್ನು ಬಿಡಿಸಿದಾಕ್ಷಣ ಅದು ಕಚ್ಚಿದೆ.
ವಿಡಿಯೊ ವೀಕ್ಷಿಸಿ:
#Auraiya : फन पकड़ते ही सांप ने युवक को डसा
— News1India (@News1IndiaTweet) July 30, 2025
रील बनाने के चक्कर में युवक ने डाली जोखिम में जान
नाग पंचमी पर गले में नाग डालकर बना रहा था वीडियो
जिला संयुक्त अस्पताल में कराया गया भर्ती
औरैया कोतवाली क्षेत्र के दयालपुर भीखमपुर गांव घटना#SnakeBite #ReelsTrend #DangerousStunt… pic.twitter.com/Mf2PYRDMGR
ಆಸ್ಪತ್ರೆಗೆ ದಾಖಲು
ಘಟನೆಯ ನಂತರ ಯುವಕನ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿತು. ಆತನಿಗೆ ತಲೆತಿರುಗುವಿಕೆ ಮತ್ತು ಮೂರ್ಛೆ ಹೋದಂತೆ ಭಾಸವಾಗುತ್ತಿತ್ತು. ಸ್ಥಳದಲ್ಲಿದ್ದ ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಘಟನೆ ನಡೆದ ನಂತರ ಹಾವಾಡಿಗ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಅಮಿತ್, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಮಿತ್ ಹೇಳಿಕೆ
“ನಾಗರ ಪಂಚಮಿಯಾಗಿದ್ದರಿಂದ ಎಲ್ಲರೂ ಹಾವಿನ ದರ್ಶನ ಪಡೆಯುತ್ತಿದ್ದರು. ನಾನು ಕೂಡ ನಾಗಪಂಚಮಿ ದಿನ ಅದನ್ನು ಮುಟ್ಟಬೇಕೆಂದು ಭಾವಿಸಿದೆ. ಎಲ್ಲರೂ ಅದನ್ನು ಮುಟ್ಟುವುದನ್ನು ನೋಡಿದಾಗ, ನಾನು ಸಹ ಹಾಗೆ ಮಾಡುತ್ತೇನೆ ಎಂದು ಭಾವಿಸಿದೆ. ನಾನು ಹಾವನ್ನು ಹಿಡಿದುಕೊಂಡೆ, ಅದು ಸಾಕು ಹಾವು ಎಂದು ಭಾವಿಸಿದೆ. ಆದರೆ ಇದ್ದಕ್ಕಿದ್ದಂತೆ ಅದು ನನ್ನನ್ನು ಕಚ್ಚಿತು” ಎಂದು ಹೇಳಿದ್ದಾನೆ.