ಮಹಾರಾಷ್ಟ್ರ: ಹಠಾತ್ ಆಗಿ ಸುರಿದ ಭಾರಿ ಮಳೆಯ ಕಾರಣದಿಂದ ಗಣೇಶನ ವಿಗ್ರಹವೊಂದು (Ganesha ido) ಕೆಳಗೆ ಬಿದ್ದು ನಾಶವಾದ ಘಟನೆ ಮಹಾರಾಷ್ಟ್ರದಲ್ಲಿ (Maharastra) ನಡೆದಿದೆ. ಹಲವಾರು ಮಂದಿ ಇದರ ಅಡಿಯಲ್ಲಿ ಸಿಲುಕೊಂಡರು. ಅದೃಷ್ಟವಶಾತ್ ಯಾರಿಗೂ ಹೆಚ್ಚಿನ ಗಾಯವಾಗಿಲ್ಲ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral video) ಆಗಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರದಿಂದ ಆರಂಭವಾಗಲಿರುವ ಗಣೇಶೋತ್ಸವದ (Ganesh chaturthi 2026) ಅಂಗವಾಗಿ ಪಂಡಾಲ್‌ಗೆ ಕೊಂಡೊಯ್ಯುತ್ತಿದ್ದಾಗ ಗಣೇಶ ಮೂರ್ತಿ ಭಕ್ತರ ಮೇಲೆಯೇ ಬಿದ್ದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಘಟನೆಯ ವಿಡಿಯೊದಲ್ಲಿ ಮಳೆಯ ನಡುವೆ ಗಣೇಶ ಮೂರ್ತಿ ಪತನವಾಗುತ್ತಿರುವುದು, ಅದರ ಕೆಳಗೆ ಹಲವರು ಸಿಲುಕಿರುವುದನ್ನು ಕಾಣಬಹುದಾಗಿದೆ. ಮೂರ್ತಿ ಬೀಳುವ ಕ್ಷಣಗಳಲ್ಲಿ ಹಲವಾರು ಮಂದಿ ಮೂರ್ತಿಯನ್ನು ಮುಚ್ಚಿ ರಕ್ಷಿಸಲು ಪ್ರಯತ್ನಿಸುತ್ತಿರುವುದು ಕೂಡ ಇದರಲ್ಲಿ ಸೆರೆಯಾಗಿದೆ.
ಪಾಲ್ಘರ್ ಜಿಲ್ಲೆಯ ನಲಸೋಪರ ಪಶ್ಚಿಮದಲ್ಲಿ ಶನಿವಾರ ಸಂಜೆ ಗಣೇಶೋತ್ಸವ ಮಂಡಳಿಯ ಸದಸ್ಯರು ಹಬ್ಬದ ಅಂಗವಾಗಿ ಕಲಾವಿದರ ಕಾರ್ಯಾಗಾರದಿಂದ ತಮ್ಮ ಪಂಡಾಲ್‌ಗೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತರುತ್ತಿದ್ದರು. ಈ ಸಂದರ್ಭದಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆ ಪ್ರಾರಂಭವಾಗಿದೆ.
ಈ ಸಂದರ್ಭದಲ್ಲಿ ಮಂಡಳಿಯವರು ಕೂಡಲೇ ಮೂರ್ತಿಯ ಸುತ್ತ ಸೇರಿ ಪ್ಲಾಸ್ಟಿಕ್ ಟಾರ್ಪಾಲಿನ್‌ನಿಂದ ಅದನ್ನು ಮುಚ್ಚಲು ಪ್ರಯತ್ನಿಸಿದರು. ಆದರೆ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದ ಟ್ರಾಲಿ ಅಸ್ಥಿರಗೊಂಡು ಮೂರ್ತಿ ಓರೆಯಾಗಿ ಕೆಳಗೆ ಬಿದ್ದಿತು. ಇದರಿಂದ ಜನರು ಆತಂಕಗೊಂಡರು. ನಾಲ್ಕರಿಂದ ಐದು ಮಂದಿ ಅದರ ಅಡಿಯಲ್ಲಿ ಸಿಲುಕಿಕೊಂಡರು. ಅದೃಷ್ಟವಶಾತ್ ಯಾರಿಗೂ ಹೆಚ್ಚಿನ ಗಾಯವಾಗಿಲ್ಲ. ಸ್ಥಳೀಯರು ತಕ್ಷಣವೇ ಧಾವಿಸಿ ಮೂರ್ತಿಯ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಿದರು.
ಇನ್ನೊಂದು ಘಟನೆಯಲ್ಲಿ ಶನಿವಾರ ಠಾಣೆ ಜಿಲ್ಲೆಯ ಭಯಂದರ್ ಪ್ರದೇಶದಲ್ಲಿ ಗಣೇಶ ಮೂರ್ತಿಯೊಂದು ಬಿದ್ದಿದೆ. ನವ್‌ಘರ್‌ನಿಂದ ಭಯಂದರ್ ಪಶ್ಚಿಮದಲ್ಲಿರುವ 'ಶೀತಲ್ ಛಾಯಾ ಮಿತ್ರ ಮಂಡಲ'ದ ಪಂಡಾಲ್‌ಗೆ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾಗ 'ಗೋಲ್ಡನ್ ನೆಸ್ಟ್ ಚೌಕ್' ಬಳಿ ಸಮತೋಲನ ತಪ್ಪಿ ಕೆಳಗೆ ಬಿದ್ದು ಹಾನಿಯಾಗಿದೆ. ಇದರಿಂದ ಒಬ್ಬ ಯುವಕ ಗಾಯಗೊಂಡಿದ್ದಾನೆ.