5G ನೆಟ್‌ವರ್ಕ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾದ ಟೆಲಿಕಾಂ ಟೆಕ್ನಿಷಿಯನ್; ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ ಸಾರ್ವಜನಿಕರು
Viral Video: ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಗಳಿಂದ 5G ನೆಟ್‌ವರ್ಕ್ ತೊಂದರೆ ಎದುರಿಸುತ್ತಿರುವುದಾಗಿ ಆರೋಪಿಸಿದ ಸಾರ್ವಜನಿಕರು, ಸಮಸ್ಯೆ ಪರಿಶೀಲಿಸಲು ಬಂದಿದ್ದ ಟೆಲಿಕಾಂ ಟೆಕ್ನಿಷಿಯನ್‌ನ್ನು ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಉತ್ತರ ಪ್ರದೇಶದಲ್ಲಿ ಟೆಲಿಕಾಂ ಟೆಕ್ನಿಷಿಯನ್‌ನ್ನು ಟವರ್‌ಗೆ ಕಟ್ಟಿ ಹಾಕಿದ ಗ್ರಾಮಸ್ಥರು -
ಥಲಖನೌ, ಸೆ. 12: ಉತ್ತರ ಪ್ರದೇಶದ ಫತೇಪುರ್ (Fatehpur) ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಸುಮಾರು ಎರಡು ವರ್ಷಗಳಿಂದ 5G ನೆಟ್‌ವರ್ಕ್ (5G Network) ಸಮಸ್ಯೆ ಎದುರಿಸುತ್ತಿರುವುದಾಗಿ ಆರೋಪಿಸಿದ ಗ್ರಾಮಸ್ಥರು, ಸಮಸ್ಯೆ ಬಗೆಹರಿಸಲು ಗ್ರಾಮಕ್ಕೆ ಬಂದಿದ್ದ ಟೆಲಿಕಾಂ ಟೆಕ್ನಿಷಿಯನ್‌ನನ್ನು ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಫತೇಪುರ್ ಜಿಲ್ಲೆಯ ಬಿಂದ್ಕಿ ಪ್ರದೇಶದ ಹರದೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪಿಟಿಐ ವರದಿ ಪ್ರಕಾರ, ಟೆಲಿಕಾಂ ಟೆಕ್ನಿಷಿಯನ್ ಆದಿತ್ಯ ಭಾನ್ ಸಿಂಗ್ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಪರಿಶೀಲಿಸಲು ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಕೆಲ ಗ್ರಾಮಸ್ಥರು ಅವರನ್ನು ತಡೆದು, ಮೊಬೈಲ್ ಟವರ್‌ಗೆ ಕಟ್ಟಿ ಹಾಕಿದ್ದಾರೆ ಎನ್ನಲಾಗಿದೆ.
ಟೆಲಿಕಾಂ ಟೆಕ್ನಿಷಿಯನ್‌ನನ್ನು ಟವರ್‌ಗೆ ಕಟ್ಟಿ ಹಾಕಿದ ಗ್ರಾಮಸ್ಥರು:
Fatehpur villagers tie Jio employee to tower over poor 5G network💀😭 pic.twitter.com/dokrPZQaii
— Ghar Ke Kalesh (@gharkekalesh) September 11, 2026
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಟೆಕ್ನಿಷಿಯನ್ ಟವರ್‌ಗೆ ಕಟ್ಟಲ್ಪಟ್ಟಿದ್ದು, ಸುತ್ತಲೂ ಗ್ರಾಮಸ್ಥರು ನಿಂತಿರುವುದು ಕಂಡುಬಂದಿದೆ.
ಪುರಸಭೆ ಚುನಾವಣೆಯ ಮತದಾನದ ಬಳಿಕ ಬಿಜೆಪಿ ಅಭ್ಯರ್ಥಿ, ಪತಿ, ಮಗುವಿನೊಂದಿಗೆ ನಾಪತ್ತೆ
ಎರಡು ವರ್ಷಗಳಿಂದ 5G ಸಮಸ್ಯೆ
ಖಾಸಗಿ ಟೆಲಿಕಾಂ ಕಂಪನಿಯ ಟವರ್ ಅಳವಡಿಸಿದ್ದರೂ ಗ್ರಾಮದಲ್ಲಿ ಸುಮಾರು ಎರಡು ವರ್ಷಗಳಿಂದ ಮೊಬೈಲ್ ಸಂಪರ್ಕ, ವಿಶೇಷವಾಗಿ 5G ಸೇವೆ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿದ್ಯುತ್ ಇದ್ದ ಸಂದರ್ಭದಲ್ಲೂ ನೆಟ್‌ವರ್ಕ್ ಆಗಾಗ್ಗೆ ಕೈಕೊಡುತ್ತಿದ್ದು, ಕರೆ ಹಾಗೂ ಇಂಟರ್‌ನೆಟ್ ಸೇವೆಗೆ ತೊಂದರೆಯಾಗುತ್ತಿದೆ ಎಂದು ಅವರು ದೂರಿದ್ದಾರೆ. 5G ಸೇವೆಗಾಗಿ ಹಣ ಪಾವತಿಸುತ್ತಿದ್ದರೂ ಸಂಪರ್ಕದಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಹಿರಿಯ ಅಧಿಕಾರಿಗಳು ಬರುವವರೆಗೂ ಬಿಡಲ್ಲ ಎಂದ ಗ್ರಾಮಸ್ಥರು
ವೈರಲ್ ವಿಡಿಯೊದಲ್ಲಿ, ಕಂಪನಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಟೆಕ್ನಿಷಿಯನ್‌ನ್ನು ಬಿಡುಗಡೆ ಮಾಡುವುದಿಲ್ಲ ಎಂದು ಗ್ರಾಮಸ್ಥರೊಬ್ಬರು ಹೇಳುತ್ತಿರುವುದು ಕೇಳಿಬರುತ್ತದೆ. ಈ ಸಂಬಂಧ ಟೆಕ್ನಿಷಿಯನ್ ಆದಿತ್ಯ ಭಾನ್ ಸಿಂಗ್ ಅವರ ದೂರಿನ ಮೇರೆಗೆ ಅಪರಿಚಿತ ಗ್ರಾಮಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಳಿಕ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ರಾಹುಲ್ ಪಟೇಲ್ (28), ಸೂರಜ್ ಯಾದವ್ (21), ಅಲೋಕ್ ಪಟೇಲ್ (29), ಯೋಗೇಂದ್ರ ಪಟೇಲ್ (36), ಅಲೋಕ್ ಯಾದವ್ (31) ಹಾಗೂ ಸಚಿನ್ ಪಟೇಲ್ (30) ಎಂದು ಗುರುತಿಸಲಾಗಿದೆ. ಬಂಧಿತರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.