ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಸಾಕ್ಷ್ಯ ನಾಶಕ್ಕೆ ಖಾಸಗಿ ಅಂಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಎರಚಿದ ಪಾಪಿ; ಹೃದಯಾಘಾತದಿಂದ ಪ್ರಾಣಬಿಟ್ಟ ಕಂದಮ್ಮ

Chhattisgarh Horror: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಸಾಕ್ಷ್ಯ ನಾಶಕ್ಕೆ ಆಕೆಯ ಖಾಸಗಿ ಅಂಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಎರಚಿದ ಪಾಪಿಗೆ ಛತ್ತೀಗಢದ ದುರ್ಗ ಜಿಲ್ಲೆಯ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ ಗಲ್ಲು ಸಿಕ್ಷೆ ವಿಧಿಸಿದೆ. ಘಟನೆ ನಡೆದು 17 ತಿಂಗಳಲ್ಲೇ ಮಹತ್ವದ ತೀರ್ಪು ಹೊರ ಬಿದ್ದಿದೆ.

6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಗಲ್ಲು ಶಿಕ್ಷೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Sep 12, 2026 6:35 PM

ರಾಯ್‌ಪುರ, ಸೆ. 12: ನರರೂಪದ ರಾಕ್ಷಸ ಎನ್ನುವ ಪದವನ್ನು ನೀವು ಕೇಳಿರಬಹುದು. ಮಾನವೀಯತೆಯನ್ನೇ ಮರೆತು ಅಮಾನುಷವಾಗಿ ನಡೆದುಕೊಳ್ಳುವವರನ್ನು ಹೀಗೆ ಕರೆಯಲಾಗುತ್ತದೆ. ಅಂತಹ ನರರೂಪದ ರಾಕ್ಷಸನ ಕುರಿತ ಸುದ್ದಿ ಇದು. ಸೋದರ ಸೊಸೆ ಎನ್ನುವುದನ್ನೂ ನೋಡದೆ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಸಾಕ್ಷ್ಯ ನಾಶಕ್ಕೆ ಆಕೆಯ ಖಾಸಗಿ ಅಂಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಎರಚಿದ ಪಾಪಿ ಈತ (Chhattisgarh Horror). ಈತನ ಹಿಂದೆ ತಾಳಲಾರದೆ ಬಾಲಕಿ ಮೃತಪಟ್ಟಿದ್ದು, ಇದೀಗ ಆತನಿಗೆ ಮರಣ ದಂಡನೆ ವಿಧಿಸಲಾಗಿದೆ. ಘಟನೆ ನಡೆದು 17 ತಿಂಗಳಲ್ಲೇ ಮಹತ್ವದ ತೀರ್ಪು ನೀಡುವ ಮೂಲಕ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ ಮಾದರಿ ಎನಿಸಿಕೊಂಡಿದೆ.

ಛತ್ತೀಸ್‌ಗಢದ ದುರ್ಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 6ರ ಹರೆಯದ ಹಸುಳೆಯ ಮೇಲೆ ಅತ್ಯಾಚಾರ ಎಸಗಿ ಕೊಂದ 24 ವರ್ಷದ ಕಾಮುಕ ಸೋಮೇಶ್‌ ಯಾದವ್‌ಗೆ ಮರಣ ದಂಡನೆ ವಿಧಿಸಿ ದುರ್ಗ ಜಿಲ್ಲೆಯ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಅತ್ಯಂತ ಗಂಭೀರ ಪ್ರಕರಣವೆಂದು ಪರಿಗಣಿಸಿದ ಹಿನ್ನೆಲೆಯಲ್ಲಿ 17 ತಿಂಗಳಲ್ಲೇ ಈ ಆದೇಶ ಹೊರಬಿದ್ದಿದೆ. ಅಡಿಷನಲ್‌ ಸೆಷನ್ಸ್‌ ಜಡ್ಜ್‌ ಅನಿಶ್‌ ದುಬೆ ಈ ಪ್ರಕರಣವನ್ನು ʼಅತ್ಯಂತ ವಿರಳ ಕೇಸ್‌ʼ ಎಂದು ಕರೆದು ಸೋಮೇಶ್‌ ಯಾದವ್‌ನನ್ನು ಗಲ್ಲಿಗೇರಿಸುವ ತೀರ್ಪು ನೀಡಿದರು ಎಂದು ಮೂಲಗಳು ತಿಳಿಸಿವೆ.

ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ ಪಾಪಿ

ಪ್ರಕರಣದ ಹಿನ್ನೆಲೆ

ಈ ಘಟನೆ ನಡೆದಿದ್ದು ಸುಮಾರು 17 ತಿಂಗಳ ಹಿಂದೆ ಅಂದರೆ 2025ರ ಏಪ್ರಿಲ್‌ನಲ್ಲಿ. ಚೈತ್ರ ನವರಾತ್ರಿಯಂದು ಆಚರಿಸುವ ಕನ್ಯಾ ಪೂಜೆವಾಗಿ ಬಾಲಕಿ ಓಂ ನಗರ್‌ ಉರ್ಲಾದಲ್ಲಿರುವ ಅರ್ಜಿ ಮನೆಗೆ ತೆರಳಿದ್ದಳು. ಆದರೆ ಸಂಜೆಯಾದರೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟದಲ್ಲಿ ತೊಡಗಿದರು. ಆಕೆ ಹೋಗಿರಬಹುದಾದ ಎಲ್ಲ ಕಡೆ ನೋಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮನೆಯವರು ಮೋಹನ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು. ಬಳಿಕ ಪೊಲೀಸರ ಹುಡುಕಾಟದ ವೇಳೆ ಸೋಮೇಶ್‌ ಮನೆ ಸಮೀಪ ನಿಲ್ಲಿಸಿದ್ದ ಕಾರ್‌ ಒಳಗೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು.

ಬಾಲಕಿಯ ಮುಖದಲ್ಲಿ ಗಾಯ ಕಂಡುಬಂದಿದ್ದರೆ, ತುಟಿ ರಕ್ತಸಿಕ್ತವಾಗಿತ್ತು. ವಿಧಿ ವಿಜ್ಞಾನ ಮತ್ತು ಡಿಎನ್‌ಎ ಪರೀಕ್ಷೆಯಲ್ಲಿ ಸೋಮೇಶ್‌ ಯಾದವ್‌ನಿಂದ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತು. ಲೈಂಗಿಕ ದೌರ್ಜನ್ಯದ ವೇಳೆ ನಡೆದ ನೋವಿನಿಂದ ಬಾಲಕಿ ನರಳಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದು ಪರಿಶೀಲನೆ ವೇಳೆ ಗೊತ್ತಾಯಿತು.

ಕೂಡಲೇ ಪೊಲೀಸರು ಸೋಮೇಶ್‌ ಯಾದವ್‌ನನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ಸಾಕ್ಷ್ಯ ನಾಶಕ್ಕೆ, ರಕ್ತದ ಕಲೆ ಕಾಣಿಸದಿರಲು ಬಾಲಕಿಯ ಖಾಸಗಿ ಭಾಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಸುರಿದಿರುವುದನ್ನು ಒಪ್ಪಿಕೊಂಡಿದ್ದಾನೆ. ತನಿಖೆಯ ದಾರಿ ತಪ್ಪಿಸಲು ಬಾಲಕಿಯ ಮೃತದೇಹವನ್ನು ನೆರೆ ಮನೆಯವನ ಕಾರಿನಲ್ಲಿ ಇರಿಸಿದ್ದಾಗಿಯೂ ಹೇಳಿದ್ದಾನೆ. ಸಾಕ್ಷಿಗಳ ಹೇಳಿಕೆ, ವೈಜ್ಞಾನಿಕ ಪರಿಶೀಲನೆಗಳ ಬಳಿಕ ಸೋಮೇಶ್‌ ಯಾದವ್‌ಗೆ ಇದೀಗ ಕೋರ್ಟ್‌ ಗಲ್ಲು ಶಿಕ್ಷೆ ನೀಡಿದೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.