ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಸ್ಪೇಸ್ ಸೆಲ್ಫಿ; ತನ್ನ9ನೇ ‘ಸ್ಪೇಸ್ ವಾಕ್’ನಲ್ಲಿ ‘ಅಲ್ಟಿಮೇಟ್ ಸೆಲ್ಫಿʼ ಕ್ಲಿಕ್ಕಿಸಿದ ಸುನೀತಾ ವಿಲಿಯಮ್ಸ್

ಭಾರತೀಯ ಮೂಲದ ನಾಸಾ ಗಗನ ಯಾತ್ರಿ ಸುನೀತಾ ವಿಲಿಯಮ್ಸ್ ಅವರು ತಮ್ಮ 9ನೇ ಬಾಹ್ಯಾಕಾಶ ನಡಿಗೆ ಸಂದರ್ಭದಲ್ಲಿ ಕ್ಕಿಕ್ಕಿಸಿರುವ ಸೆಲ್ಫೀಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದ್ರೆ ಏನಿದು ಸೆಲ್ಫೀ ಕಥೆ? ಈ ಸುದ್ದಿಯಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

8 ದಿನಗಳಿಗೆಂದು ಬಾಹ್ಯಾಕಾಶಕ್ಕೆ ತೆರಳಿದವರು 8 ತಿಂಗಳಿಂದ ಸಿಲುಕಿರುವ ಕಥೆಯೇ ರೋಚಕ

‘ಸ್ಪೇಸ್ ವಾಕ್’ನಲ್ಲಿ ‘ಅಲ್ಟಿಮೇಟ್ ಸೆಲ್ಫಿ’ ಕ್ಲಿಕ್ಕಿಸಿದ ಸುನೀತಾ ವಿಲಿಯಮ್ಸ್.

Profile Sushmitha Jain Feb 6, 2025 11:14 PM

ವಾಷಿಂಗ್ಟನ್: ಭಾರತೀಯ ಮೂಲದ ನಾಸಾ (NASA) ಗಗನ ಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಅವರು ಕಳೆದ ವರ್ಷದ ಜೂನ್‌ನಲ್ಲಿ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ (ISS)ಗೆ ಹೋದವರು ಕೆಲವೊಂದು ತಾಂತ್ರಿಕ ತೊಂದರೆಗಳ ಕಾರಣದಿಂದ ಭೂಮಿಗೆ ಮರಳಲಾಗದೆ ತನ್ನ ಸಹ ಗಗನ ಯಾತ್ರಿ ಬುಚ್ ವಿಲ್ಮೋರ್ (Butch Wilmore) ಅವರೊಂದಿಗೆ ಅಲ್ಲೇ ಉಳಿಯುವಂತಾಗಿದೆ. ಇತ್ತೀಚೆಗಷ್ಟೇ ಇವರಿಬ್ಬರು ಬಾಹ್ಯಾಕಾಶ ನಡಿಗೆ (space walk) ನಡೆಸುವ ಮೂಲಕ ಸುದ್ದಿಯಾಗಿದ್ದರು ಮತ್ತು ಈ ಸಂದರ್ಭದಲ್ಲಿ ವಿಲಿಯಮ್ಸ್ ತೆಗೆದಿದ್ದ ಸೆಲ್ಫಿ (Selfie) ಒಂದು ಸಿಕ್ಕಾಪಟ್ಟೆ ವೈರಲ್ (Viral News) ಆಗಿತ್ತು. ನಾಸಾ ಇದೀಗ ಈ ಸೆಲ್ಫಿಯನ್ನು ಬಿಡುಗಡೆಗೊಳಿಸಿದ್ದು, ಇದಕ್ಕೆ ‘ದಿ ಅಲ್ಟಿಮೇಟ್ ಸೆಲ್ಫೀ’ (The ultimate selfie) ಎಂದು ಹೆಸರಿಟ್ಟಿದೆ.

ʼʼನಾಸಾ ಗಗನ ಯಾತ್ರಿಗಳಾದ ಸುನಿ ವಿಲಿಯಮ್ಸ್ ಈ ಸೆಲ್ಫಿಯನ್ನು ಜ. 20ರಂದು ತೆಗೆದಿದ್ದು, ಈ ಸಂದರ್ಭದಲ್ಲಿ ಐ.ಎಸ್.ಎಸ್. ಪೆಸಿಫಿಕ್ ಸಮುದ್ರದಿಂದ 263 ಮೈಲು (423 ಕಿ.ಮೀ)ಗಳಷ್ಟು ಎತ್ತರದ ಕಕ್ಷೆಯಲ್ಲಿತ್ತು. ಇದು ವಿಲಿಯಮ್ಸ್ ಅವರ 9ನೇ ಬಾಹ್ಯಾಕಾಶ ನಡಿಗೆ ಸಂದರ್ಭದಲ್ಲಿ ಕ್ಲಿಕ್ಕಿಸಲ್ಪಟ್ಟ ಫೋಟೊ. ಇವರು ಮತ್ತು ಇವರ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅಂತರಿಕ್ಷ ನಿಲ್ದಾಣದ ಹೊರಭಾಗದ ಹಾರ್ಡ್ ವೇರನ್ನು ತೆಗೆದುಹಾಕಿ, ಆ ಜೀವ ರಕ್ಷಕ ವ್ಯವಸ್ಥೆಯ ಭಾಗದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಇದನ್ನು ತಪಾಸಣೆಗಾಗಿ ಬಳಸಿಕೊಳ್ಳಲಾಗುವುದುʼʼ ಎಂದು ನಾಸಾ ಬರೆದುಕೊಂಡಿದೆ.

ಅಂತರಿಕ್ಷ ನಿಲ್ದಾಣವು ಮೈಕ್ರೋ ಆರ್ಗಾನಿಸಂಗಳನ್ನು ಹೊರಗಡೆವುತ್ತದೆಯೋ ಎಂಬುದನ್ನು ಕಂಡುಕೊಳ್ಳಲು ಈ ಮಾದರಿಗಳು ಸಹಕಾರಿಯಾಗಿವೆ. ಮಾತ್ರವಲ್ಲದೇ ಇವುಗಳು ಎಷ್ಟು ಪ್ರಮಾಣದಲ್ಲಿ, ಎಷ್ಟು ದೂರ ಸಂಚರಿಸಬಲ್ಲುದು ಎಂಬುದನ್ನು ಕಂಡುಕೊಳ್ಳಬೇಕಾಗಿದೆ ಎಂದು ನಾಸಾ ವಿವರಣೆ ನೀಡಿದೆ. ʼʼಈ ಮೈಕ್ರೋ ಆರ್ಗಾನಿಸಂಗಳು ಕಠಿಣ ಅಂತರಿಕ್ಷ ವಾತಾವರಣದಲ್ಲೂ ಉಳಿಯಬಹುದೇ ಮತ್ತು ಚಂದ್ರ ಹಾಗೂ ಮಂಗಳ ಗ್ರಹಗಳ ಜಾಗಗಳಲ್ಲಿ ಇವುಗಳ ಕಾರ್ಯಶೈಲಿಯನ್ನು ಪರಿಶೀಲಿಸುವುದೂ ಸಹ ಇದರ ಉದ್ದೇಶʼʼ ಎಂದಿದೆ.

ಇದನ್ನೂ ಓದಿ: Viral Video: ಜೀಪಿನ ಮೇಲೆ ಕುಳಿತು ರಸ್ತೆಯಲ್ಲಿ ಸಂಚರಿಸಿದ ಸಿಂಹ! ಅಚ್ಚರಿಯ ವಿಡಿಯೊ ನೀವೂ ನೋಡಿ

ತನ್ನ 9ನೇ ಬಾಹ್ಯಾಕಾಶ ನಡಿಗೆಯ ಮೂಲಕ ಗಗನ ಯಾತ್ರಿ ಸುನೀತಾ ವಿಲಿಯಮ್ಸ್ ಅವರು ಮಹಿಳಾ ಗಗನ ಯಾತ್ರಿಯೊಬ್ಬರು ಅತೀ ಹೆಚ್ಚು ಬಾಹ್ಯಾಕಾಶ ನಡಿಗೆ ಮಾಡಿದ ಖ್ಯಾತಿಗೆ ಪಾತ್ರರಾದರು. ಈ ಹಿಂದೆ ಸಾಸಾದ ಗಗನ ಯಾತ್ರಿ ಪೆಗ್ಗಿ ವಿಟ್ಸನ್ ಹೆಸರಿನಲ್ಲಿ ಈ ದಾಖಲೆ ಇತ್ತು. ನಾಸಾದ ಸರ್ವಕಾಲೀನ ಬಾಹ್ಯಾಕಾಶ ನಡಿಗೆಯಲ್ಲಿ ಸುನೀತಾ ಹೆಸರು ನಾಲ್ಕನೆಯ ಸ್ಥಾನದಲ್ಲಿದೆ. ಇವರು ಈಗಾಗಲೇ 62 ಗಂಟೆ 6 ನಿಮಿಷಗಳ ಬಾಹ್ಯಾಕಾಶ ನಡಿಗೆಯ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ.

ʼʼಗಗನ ಯಾತ್ರಿ ಸುನಿ ವಿಲಿಯಮ್ಸ್ ಅವರ ತೋಳುಗಳು ಮತ್ತು ಕೈಗಳು, ಮತ್ತು ಆಕೆ ಹಿಡಿದುಕೊಂಡಿರುವ ಕೆಮರಾವು ಸ್ಪೇಸ್ ಸೂಟ್ ಹೆಲ್ಮೆಟ್‌ನ ಮಿಂಚುವ ಭಾಗವನ್ನು ಪ್ರತಿಫಲಿಸುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಒಂದು ಭಾಗವನ್ನೂ ಮತ್ತು ಆಕಾಶದ ಕತ್ತಲೆಯ ಭಾಗವನ್ನೂ ಸಹ ನೀವು ಕಾಣಬಹುದಾಗಿದೆ. ಮಾತ್ರವಲ್ಲದೇ ನಮ್ಮ ಎಡಭಾಗದಲ್ಲಿ ಕಾಣುತ್ತಿರುವುದು ಪೆಸಿಫಿಕ್ ಸಮುದ್ರವಾಗಿದೆ. ವಿಲಿಯಮ್ಸ್ ಅವರ ಹೆಲ್ಮೆಟ್ ಸುತ್ತ ನೋಡುವುದಾದರೆ, ಆಕೆಯ ಸ್ಪೇಸ್ ಸೂಟ್ ನ ಇತರೇ ಭಾಗಗಳನ್ನು ಕಾಣಬಹುದು ಮತ್ತು ಬಲಭಾಗದಲ್ಲಿ ಸ್ವಲ್ಪ ಆಕಾಶವನ್ನು ಕಾಣಬಹುದುʼʼ ಎಂದು ನಾಸಾ ಈ ವಿಶೇಷ ಸೆಲ್ಫಿ ಕುರಿತು ವಿವರಣೆಯನ್ನು ನೀಡಿದೆ.

ಈ ಇಬ್ಬರೂ ಗಗನ ಯಾತ್ರಿಗಳು ಕೇವಲ 8 ದಿನದ ಗಗನ ಯಾತ್ರೆಗೆಂದು 2024ರ ಜೂನ್‌ನಲ್ಲಿ ಬೋಯಿಂಗ್ ನ ಸ್ಟಾರ್ ಲೈನರ್ ಗಗನ ನೌಕೆಯಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಆದರೆ ಅವರು ತೆರಳಿದ್ದ ಬೋಯಿಂಗ್ ಸ್ಟಾರ್ ಲೈನರ್ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ಅವರಿಬ್ಬರೂ ಕಳೆದ 8 ತಿಂಗಳಿಂದ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಇತ್ತೀಚೆಗಷ್ಟೇ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರಿಗೆ ಸೂಚನೆಯನ್ನು ನೀಡಿ ಈ ಇಬ್ಬರು ಗಗನ ಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆ ತರುವಂತೆ ತಿಳಿಸಿದ್ದಾರೆ.