ಸಾರ್ವಜನಿಕರ ಮುಂದೆ ಗದರಿಸಿದ್ದಕ್ಕೆ ಠಾಣೆ ಮೆಟ್ಟಿಲೇರಿದ ಹದಿಹರೆಯದ ಬಾಲಕ; ಮಂಡಿಯೂರಿ ಕ್ಷಮೆಯಾಚಿಸಿದ ತಂದೆ
Viral News: ಸಾರ್ವಜನಿಕ ಸ್ಥಳದಲ್ಲಿ ಗದರಿಸಿದ ಘಟನೆ ಮನಸ್ಸಿಗೆ ನೋವು ತಂದ ಹಿನ್ನೆಲೆಯಲ್ಲಿ ಹದಿಹರೆಯದ ಬಾಲಕನೊಬ್ಬ ತಂದೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನಂತರ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತಂದೆ, ತನ್ನ ಪುತ್ರನ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ.
ಎಐ ರಚಿತ ಚಿತ್ರ -
ಲಖನೌ, ಡಿ. 24: ತಂದೆಯ ವಿರುದ್ಧವೇ ಪೊಲೀಸರಿಗೆ (Police) ಹದಿಹರೆಯದ ಬಾಲಕನೊಬ್ಬ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಡಿಯೋರಿಯಾದಲ್ಲಿ ವರದಿಯಾಗಿದೆ. 11ನೇ ತರಗತಿಯಲ್ಲಿ ಓದುತ್ತಿರುವ ಹದಿಹರೆಯದ ಬಾಲಕ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ತಂದೆಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾನೆ (Viral News). ಡಿಯೋರಿಯಾ ನಗರದ ಸದರ್ ಕೊತ್ವಾಲಿ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ವರದಿಯ ಪ್ರಕಾರ, ತಂದೆ ತನಗೆ ಹೊಡೆದಿದ್ದಾರೆಂದು ಪೊಲೀಸರಿಗೆ ಆತ ತಿಳಿಸಿದ್ದಾನೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾನೆ.
ಆ ಹುಡುಗ ತನ್ನ ಹೆತ್ತವರಿಗೆ ಒಬ್ಬನೇ ಮಗನಾಗಿದ್ದು, ಪೋಷಕರೊಂದಿಗೆ ಉಮಾನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ. ಅವನ ತಂದೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ 19ರಂದು ತಂದೆ ತನ್ನ ಮಗನನ್ನು ಸ್ಥಳೀಯರ ಮುಂದೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಗದರಿಸಿದ್ದರು. ಸಾರ್ವಜನಿಕರ ಮುಂದೆ ಗದರಿಸಿದ್ದರಿಂದ ಹದಿಹರೆಯದ ಬಾಲಕ ಬೇಸರಗೊಂಡಿದ್ದ. ಹೀಗಾಗಿ ತನಗೆ ಅವಮಾನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಅಂದು ಕೋಟಿ ವ್ಯವಹಾರ ನಡೆಸಿದ್ದ ಉದ್ಯಮಿ ಇಂದು ಡ್ರೈವರ್
ಹದಿಹರೆಯದ ಬಾಲಕ ತನ್ನ ತಂದೆಯ ವಿರುದ್ಧ ಪ್ರಕರಣ ದಾಖಲಿಸಲೇಬೇಕೆಂದು ಪಟ್ಟು ಹಿಡಿದಿದ್ದ. ಆತನ ವರಸೆ ಗಮನಿಸಿ ಪೊಲೀಸರು ಅಚ್ಚರಿಗೊಂಡಿದ್ದರು. ಆರೋಪದ ಗಂಭೀರತೆಯನ್ನು ಮನಗಂಡ ಪೊಲೀಸರು, ಬಾಲಕನ ತಂದೆಯನ್ನು ಸಂಪರ್ಕಿಸಿ ಠಾಣೆಗೆ ಬರುವಂತೆ ಹೇಳಿದರು. ಪೊಲೀಸ್ ಠಾಣೆಗೆ ಆಗಮಿಸಿದ ತಂದೆ, ಘಟನೆಯ ಹಿನ್ನೆಲೆಯನ್ನು ಅಧಿಕಾರಿಗಳಿಗೆ ವಿವರಿಸಿದರು. ಅವರು ತಮ್ಮ ಮಗನೊಂದಿಗೆ ಮಾತನಾಡಿ ಮನೆಗೆ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದರು.
ಆದರೆ ಹದಿಹರೆಯದ ಬಾಲಕ ಹಿಂದೆ ಸರಿಯಲು ನಿರಾಕರಿಸಿದನೆಂದು ವರದಿಯಾಗಿದೆ. ತಂದೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆತ ಆಗ್ರಹಿಸುತ್ತಲೇ ಇದ್ದ. ಮೊದಲು ತನ್ನ ಮಾವನನ್ನು ಪೊಲೀಸ್ ಠಾಣೆಗೆ ಕರೆಸಬೇಕೆಂದು ಒತ್ತಾಯಿಸಿದ್ದ. ಆ ಮಾವ ಗ್ರಾಮದ ಮಾಜಿ ಮುಖ್ಯಸ್ಥರಾಗಿದ್ದು, ಅಲ್ಲೇ ಸಮೀಪದ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಘಟನೆಯಿಂದ ಪೊಲೀಸ್ ಠಾಣೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬಾಲಕನಿಗೆ ಸಮಾಧಾನ ಹೇಳಿದ್ದಾರೆ. ಆತನ ಮನವೊಲಿಸಲು ಒಂದು ಗಂಟೆಗೂ ಹೆಚ್ಚು ಕಾಲ ಪ್ರಯತ್ನಿಸಿದ್ದಾರೆ. ಆದರೆ ಆತ ತನ್ನ ನಿರ್ಧಾರದಲ್ಲಿ ಅಚಲವಾಗಿ ನಿಂತಿದ್ದಾನೆ. ತನ್ನ ತಂದೆಯೊಂದಿಗೆ ಹೋಗಲು ನಿರಾಕರಿಸಿದ್ದಾನೆ.
ಟಿಪ್ಸ್ ಕೊಡೋದ್ರಲ್ಲಿ ಬೆಂಗಳೂರೇ ನಂಬರ್ 1
ಮಗನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ತಂದೆ
ಸುಮಾರು ಒಂದು ಗಂಟೆ ಮನವೊಲಿಸಿದ ನಂತರವೂ ಮಗ ಮನೆಗೆ ಬರಲು ಒಪ್ಪದ ಕಾರಣ ತಂದೆ ಪೊಲೀಸ್ ಸಿಬ್ಬಂದಿ ಮುಂದೆಯೇ ಮಗನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದರು. ಕೊನೆಗೆ ತಂದೆಯ ಕ್ಷಮೆಯಾಚನೆಗೆ ಮಣಿದ ಬಾಲಕ, ಅವರನ್ನು ಕ್ಷಮಿಸಿ ಮನೆಗೆ ಮರಳಲು ಒಪ್ಪಿಕೊಂಡ. ಇಡೀ ಪ್ರಸಂಗವು ಸುಮಾರು ಒಂದೂವರೆಯಿಂದ ಎರಡು ಗಂಟೆಗಳ ಕಾಲ ನಡೆಯಿತು.
ಈ ಘಟನೆ ಬೆಳಕಿಗೆ ಬಂದ ನಂತರ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ನೆಟ್ಟಿಗರು ತಂದೆಯೆ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಕ್ಕೆ ನೆಟ್ಟಿಗರು ಬೇಸರಗೊಂಡಿದ್ದಾರೆ. ಮಕ್ಕಳಿಗೆ ಹೊಡೆಯುವುದು ತಪ್ಪು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಜೆನ್ ಝೀ ತಲೆಮಾರಿನ ಪ್ರಭಾವ ಇದು ಎಂದು ವ್ಯಂಗ್ಯವಾಡಿದರು.