ವಾಷಿಂಗ್ಟನ್, ಜ. 3: ಕುಡಿತದ ಚಟ ಇರುವವರು ಮದ್ಯದ ಅಮಲಿನಲ್ಲಿ ತಾವು ಏನು ಮಾಡಿದರೂ ಅದು ತಮ್ಮ ಅರಿವಿಗೆ ಬಾರದಂತೆ ಇರುತ್ತದೆ. ಕುಡಿದಾಗ ತಮ್ಮ ಬಳಿ ಇದ್ದ ಹಣ , ಚಿನ್ನಾಭರಣ ದಾನ ಮಾಡಿದವರು ಇದ್ದಾರೆ. ಇನ್ನು ಕೆಲವರು ಬೇರೆ ಅವರ ವಸ್ತುಗಳನ್ನು ಕದಿಯುವುದು, ಅಸಭ್ಯ ವಾಗಿ ನಡೆದುಕೊಳ್ಳುವುದನ್ನು ಮಾಡುತ್ತಾರೆ. ಅಂತೆಯೇ ನ್ಯೂಜೆರ್ಸಿಯ ವಿಂಟೇಜ್ ಗಿಟಾರ್ ಅಂಗಡಿಯಲ್ಲಿ ದುಬಾರಿ ಮೊತ್ತದ ಗಿಟಾರ್ ಕಳ್ಳತನ ಮಾಡಿದ್ದ ವ್ಯಕ್ತಿಯೊಬ್ಬರು ಸ್ವಲ್ಪ ದಿನದ ಬಳಿಕ ಮತ್ತೆ ಅದನ್ನು ಅಂಗಡಿ ಮಾಲಿಕನಿಗೆ ಹಿಂದಿರುಗಿಸಿದ ವಿಚಿತ್ರ ಘಟನೆ ನಡೆದಿದೆ. ಆತನು ಎರಡು ಮ್ಯಾಂಡೋಲಿನ್ ಗಿಟಾರ್ ಕದ್ದಿದ್ದು ಕೆಲವು ದಿನಗಳ ನಂತರ ಆ ವಾದ್ಯಗಳನ್ನು ಅಂಗಡಿಯ ಹೊರಗೆ ಇಟ್ಟು ಕದ್ದಿದ್ದಕ್ಕೆ ಅಂಗಡಿ ಮಾಲಿಕನಿಗೆ ಕ್ಷಮೆಯಾಚಿಸಿ ಪತ್ರ ಒಂದನ್ನು ಬರೆದಿದ್ದಾನೆ. ವಸ್ತು ಕಳವಾಗುತ್ತಿದ್ದಂತೆ ಅಂಗಡಿ ಮಾಲಿಕನು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ವಸ್ತು ಪತ್ತೆಯಾಗಿದ್ದರೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಅಮೆರಿಕದ ನ್ಯೂಜೆರ್ಸಿಯ ವಿಂಟೇಜ್ ವಾದ್ಯಗಳ ಅಂಗಡಿಯಲ್ಲಿ ವಿಚಿತ್ರ ರೀತಿಯ ಕಳ್ಳತನದ ಪ್ರಕರಣ ನಡೆದಿದೆ. ಕಳವು ಮಾಡಿದ ವ್ಯಕ್ತಿಯೇ ವಸ್ತುಗಳನ್ನು ಸಿನಿಮೀಯ ರೀತಿಯಲ್ಲಿ ಮತ್ತೆ ಹಿಂದಿರುಗಿಸಿದ್ದಾನೆ. ಸುಮಾರು 7,750 ಡಾಲರ್ ಮೌಲ್ಯದ ಎರಡು ಮ್ಯಾಂಡೋಲಿನ್ ಅನ್ನು ಕದಿಯಲಾಗಿದೆ. ದುಬಾರಿ ಮೌಲ್ಯದ ಅಂಗಡಿಯ ವಾದ್ಯ ಕಳುವಾದ ಕೂಡಲೇ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಳೆದ ಕೆಲವು ದಿನದಿಂದ ತನಿಖೆ ಮಾಡಲಾಗಿದ್ದರೂ ಕಳ್ಳ ಪತ್ತೆ ಮಾಡಲಾಗಲಿಲ್ಲ.
ಆದರೆ ಸ್ವಲ್ಪ ದಿನಗಳ ನಂತರ ಕದ್ದ ವಸ್ತುಗಳು ಸದ್ದಿಲ್ಲದೆ ಹಿಂತಿರುಗಿಸಲಾಗಿದ್ದು, ಕುಡಿತದ ಅಮಲಿನಲ್ಲಿ ಈ ಕೃತ್ಯ ಮಾಡಿದ್ದಾಗಿ ವ್ಯಕ್ತಿಯು ತನ್ನ ಕೈ ಬರಹದ ಮೂಲಕ ಕ್ಷಮೆಯಾಚಿಸಿದ್ದಾನೆ. ವಾದ್ಯಗಳನ್ನು ಎರಡು ಶಾಪಿಂಗ್ ಬ್ಯಾಗ್‌ಗಳಲ್ಲಿ ಇಟ್ಟು ಅದನ್ನು ಅಂಗಡಿಯ ಮುಂಭಾಗದ ಬಾಗಿಲಿನ ಹೊರಗೆ ಇಟ್ಟಿದ್ದಾನೆ. ಅವುಗಳ ಪಕ್ಕದಲ್ಲಿ ಒಂದು ಕೈಬರಹದ ಲೇಟರ್ ಕೂಡ ಪತ್ತೆಯಾಗಿದೆ. ಅದರಲ್ಲಿ ʼʼಕ್ಷಮಿಸಿ, ನಾನು ಕುಡಿದು ಹೀಗೆ ಮಾಡಿದ್ದೇನೆ. ನನಗೆ ಕದಿಯುವ ಉದ್ದೇಶ ಇರಲಿಲ್ಲ, ನೀವು ಒಳ್ಳೆಯ ವ್ಯಕ್ತಿ...ದಯವಿಟ್ಟು ಕ್ಷಮಿಸಿಬಿಡಿ, ಕ್ರಿಸ್‌ಮಸ್‌ಗೆ ಶುಭಾಶಯಗಳುʼʼ ಎಂದು ಬರೆಯಲಾಗಿದೆ.
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ರಂಪಾಟ; ಮಾಡಿದ ಸಬ್ ಇನ್ಸ್‌ಪೆಕ್ಟರ್ ಬಂಧನ
ಪೋಸ್ಟ್ ಪ್ರಕಾರ, ಮ್ಯಾಂಡೋಲಿನ್‌ಗಳನ್ನು ಹಿಂತಿರುಗಿಸಿದ ವ್ಯಕ್ತಿಯು ವಾದ್ಯ ಮತ್ತು ಲೆಟರ್ ಇಟ್ಟ ಕೂಡಲೆ ಸ್ಥಳದಿಂದ ಪರಾರಿಯಾಗಿದ್ದಾನೆ. ಅಂಗಡಿಯ ಮಾಲಿಕನು ಹೊರಗೆ ಬಂದು ನೋಡಿದಾಗ ಆ ವ್ಯಕ್ತಿ ಬೀದಿಯಲ್ಲಿ ಓಡಿದ್ದನ್ನು ಕಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಆತನ ಬೆನ್ನಟ್ಟಲಾಯಿತು. ಆದರೆ ಆತ ಅದಾಗಲೇ ತುಂಬಾ ದೂರ ಹೋಗಿದ್ದ ಕಾರಣ ತಪ್ಪಿಸಿಕೊಂಡಿದ್ದಾನೆ.
ವ್ಯಕ್ತಿಯು ಕದ್ದ ವಾದ್ಯಗಳು ಬಝಿ ಲೆವಿನ್ ಅವರಿಗೆ ಸೇರಿದೆ. ಬಝಿ 1981ರಿಂದ ಗಿಟಾರ್ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಲೆವಿನ್, ಮ್ಯಾಂಡೋಲಿನ್‌ಗಳು ನನ್ನ ಕೈ ತಪ್ಪಿವೆ ಎಂದು ಭಾವಿಸಿದ್ದೆ. ಅವುಗಳನ್ನು ನಾನು ಮತ್ತೆ ಕಂಡಾಗ ನಿಜಕ್ಕೂ ಆಶ್ಚರ್ಯವಾಯಿತು. ನನಗೆ ನಂಬಲು ಸಾಧ್ಯವಾಗಲಿಲ್ಲ. ಮ್ಯಾಂಡೋಲಿನ್‌ಗಳ ಮೌಲ್ಯವು ಸುಮಾರು 3,500 ಡಾಲರ್ ಮತ್ತು 4,250 ಡಾಲರ್ ಅಷ್ಟಾಗಿದ್ದು, ಅವನ್ನು ಕಳೆದುಕೊಂಡಿದ್ದರೆ ಬಹಳ ನಷ್ಟವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.