ಜೈಪುರ: ಗುಜರಾತ್‌ನ ಪ್ರವಾಸಿಗರ ಗುಂಪೊಂದು ಹೋಟೆಲ್‌ವೊಂದರಲ್ಲಿ ಗಡದ್ದಾಗಿ ತಿಂದು 10,900 ರೂ. ಬಿಲ್ ಮಾಡಿದ್ದಾರೆ. ಆದರೆ ಹಣ ಪಾವತಿಸದೆ ಓಡಿಹೋಗಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. ಅಕ್ಟೋಬರ್ 25ರಂದು ರಾಜಸ್ಥಾನದ (Rajasthan) ಸಿಯಾವಾ ಗ್ರಾಮದ ಬಳಿಯ ಹ್ಯಾಪಿ ಡೇ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ (Viral Video) ಆಗಿದೆ.
ವರದಿಗಳ ಪ್ರಕಾರ, ಓರ್ವ ಮಹಿಳೆ ಸೇರಿ ಐದು ಜನರು ತಮ್ಮ ಪ್ರವಾಸದ ಸಮಯದಲ್ಲಿ ಊಟಕ್ಕಾಗಿ ಹೋಟೆಲ್‌ಗೆ ಆಗಮಿಸಿದರು. ಊಟ ಮಾಡಿದ ನಂತರ, ಅವರು ವಾಶ್‌ರೂಮ್‌ಗೆ ಹೋಗುವಂತೆ ನಟಿಸಿದರು. ಆದರೆ ವಾಶ್‍ರೂಮ್‍ಗೆ ಹೋಗದೆ ತಮ್ಮ ಕಾರನ್ನು ಹತ್ತಿ ಹಣ ನೀಡದೆ ಹೊರಟು ಹೋದರು. ಅವರು ಹೋದ ಕೂಡಲೇ, ಹೋಟೆಲ್ ಸಿಬ್ಬಂದಿ ಅವರನ್ನು ಬೆನ್ನಟ್ಟಿ, ಪೊಲೀಸರ ಸಹಾಯದಿಂದ ಗುಜರಾತ್ ಗಡಿಯ ಬಳಿ ಕಾರನ್ನು ನಿಲ್ಲಿಸಿದರು.
ಹೋಟೆಲ್ ಸಿಬ್ಬಂದಿಯು ಗುಂಪಿನ ಜತೆ ಮುಖಾಮುಖಿಯಾಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಒಬ್ಬ ವ್ಯಕ್ತಿಯು ಊಟ ಮಾಡಿದ ನಂತರ ಓಡಿಹೋದರು ಎಂದು ಆರೋಪಿಸುವುದನ್ನು ಕೇಳಬಹುದು. ಅವರು ಐಷಾರಾಮಿ ಕಾರನ್ನು ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದೂ ಕಂಡು ಬಂದಿದೆ.
ವಿಡಿಯೊವನ್ನು ಸೆರೆಹಿಡಿಯುತ್ತಿರುವ ವ್ಯಕ್ತಿ, ನೀವು ಊಟ ಮಾಡಿ ಹೋಟೆಲ್‌ನಿಂದ ಏಕೆ ಓಡಿಹೋದಿರಿ? ನೀವು 10,000 ರೂಪಾಯಿಗಳ ಬಿಲ್ ಮಾಡಿದ್ದೀರಿ. ಇಂತಹ ದುಬಾರಿ ಕಾರುಗಳನ್ನು ಓಡಿಸುತ್ತೀರಿ. ಆದರೆ, ಉಂಡ ಹಣಕ್ಕೆ ದುಡ್ಡು ನೀಡಲು ಆಗುವುದಿಲ್ಲವೇ? ನೀವೆಲ್ಲರೂ ವಂಚಕರು, ಈ ಐಷಾರಾಮಿ ಕಾರುಗಳನ್ನು ಓಡಿಸಿ ನಂತರ ಓಡಿಹೋಗುತ್ತೀರಿ ಎಂದು ಸಿಟ್ಟಿನಲ್ಲಿ ಬೈದಿದ್ದಾನೆ.
ವಿಡಿಯೊ ವೀಕ್ಷಿಸಿ:
ಗುಜರಾತ್ ಈ ಪ್ರವಾಸಿಗರು ಹೋಟೆಲ್‌ನಲ್ಲಿ 10,900 ರೂ. ಬಿಲ್ ಮಾಡಿದ್ದಾರೆ. ಬಳಿಕ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ ಅಂಬಾಜಿ ರಸ್ತೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆನ್‌ಲೈನ್‌ನಲ್ಲಿ ಹಣ ವಸೂಲಿ ಮಾಡಲಾಗಿದೆ ಎಂಬ ಶೀರ್ಷಿಕೆಯೊಂದಿಗೆ Xನಲ್ಲಿ ವಿಡಿಯೊ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು, ಗುಜ್ಜುಗಳು ಲಾಭಕ್ಕಾಗಿ ತಮ್ಮ ತಂದೆಯನ್ನು ಸಹ ಬಿಡುವುದಿಲ್ಲ ಎಂದು ಬರೆದಿದ್ದಾರೆ. ʼಬಂಟಿ ಔರ್ ಬಬ್ಲಿʼ ಹಿಂದಿ ಚಿತ್ರದಿಂದ ಇವರು ಸ್ಫೂರ್ತಿ ಪಡೆದಿರಬಹುದು ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಮಗುವಿನ ತಂದೆಗೆ ಕಪಾಳಮೋಕ್ಷ ಮಾಡಿ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯೆ; ವಿಡಿಯೊ ವೈರಲ್
ಗುಜರಾತ್‌ನಲ್ಲಿ ನೋಂದಾಯಿಸಲಾದ ಕಾರು ಎಂದರೆ ಅವರು ಗುಜರಾತಿಗಳು ಎಂದರ್ಥವಲ್ಲ. ಅಲ್ಲದೆ, ಒಬ್ಬರ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಎಲ್ಲ ಸಮುದಾಯಗಳ ಜನರು ಒಳ್ಳೆಯವರು, ಕೆಟ್ಟವರು ಇರುತ್ತಾರೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ದ್ವೇಷವನ್ನು ರಾಜ್ಯ ಅಥವಾ ಭಾಷೆಯ ಹೆಸರಿನಲ್ಲಿ ಹರಡಲು ಬಿಡಬೇಡಿ. ದಯವಿಟ್ಟು ಸಂವೇದನಾಶೀಲರಾಗಿರಿ ಮತ್ತು ವರ್ತಿಸಿ. ಕೆಲವು ಜನರು ಸ್ವಭಾವತಃ ಕೆಟ್ಟವರು. ಅವರು ಭಾರತದಲ್ಲಿ ವಾಸಿಸುತ್ತಿರುವುದು ನಮ್ಮ ದುರದೃಷ್ಟ ಮತ್ತು ಅಂತಹ ಜನರು ಪ್ರತಿಯೊಂದು ರಾಜ್ಯದಲ್ಲೂ ಕಂಡುಬರುತ್ತಾರೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನು ಊಟ ಮಾಡಿ ಬಿಲ್ ಪಾವತಿಸದೆ ಪರಾರಿಯಾಗಿರುವ ಅವರ ಕೃತ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವರ ವಾಹನವು ಗುಜರಾತ್ ನಂಬರ್ ಪ್ಲೇಟ್ ಅನ್ನು ಹೊಂದಿರುವುದು ಕಂಡುಬಂದಿದೆ.