ಮುಂಬೈ: ವಿಆರ್‌ಎಲ್ ಟ್ರಾವೆಲ್ಸ್ (VRL) ಬಸ್ ಚಾಲಕನೊಬ್ಬ ಗಂಟೆಗೆ ಸುಮಾರು 80 ಕಿಲೋಮೀಟರ್ ವೇಗದಲ್ಲಿ ಚಾಲನೆ ಮಾಡುತ್ತಾ ತನ್ನ ಮೊಬೈಲ್ ಫೋನ್‌ನಲ್ಲಿ ಬಿಗ್ ಬಾಸ್ (Bigg Boss) ವೀಕ್ಷಿಸುತ್ತಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಮುಂಬೈನಿಂದ ಹೈದರಾಬಾದ್‌ಗೆ ಪ್ರಯಾಣದ ಸಮಯದಲ್ಲಿ ಬೆಳಗಿನ ಜಾವ 2:50ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇದು ನೆಟ್ಟಿಗರಲ್ಲಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿದೆ. ದೂರ ಪ್ರಯಾಣದ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ಶಿಸ್ತಿನ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವೈರಲ್ ಆಗಿರುವ ಈ ವಿಡಿಯೊದಲ್ಲಿ, ಚಾಲಕ ತನ್ನ ಫೋನ್ ಅನ್ನು ಸ್ಟೇರಿಂಗ್ ವ್ಹೀಲ್ ಕೆಳಗೆ ಇಟ್ಟುಕೊಂಡಿದ್ದಾನೆ. ಸಮಯ ಮಧ್ಯರಾತ್ರಿಯಾಗಿತ್ತು. ಹೆದ್ದಾರಿಯಲ್ಲಿ ವೇಗವಾಗಿ ಬಸ್ ಚಲಿಸುವಾಗ ಜನಪ್ರಿಯ ಟಿವಿ ಕಾರ್ಯಕ್ರಮವನ್ನು ಆತ ವೀಕ್ಷಿಸುತ್ತಾ ವಾಹನ ಚಲಾಯಿಸುತ್ತಿರುವುದನ್ನು ಕಾಣಬಹುದು. ಅಜಾಗರೂಕತೆಯಿಂದ ಗಾಬರಿಗೊಂಡ ಪ್ರಯಾಣಿಕನೊಬ್ಬ ಈ ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. VRL ಟ್ರಾವೆಲ್ಸ್‌ಗೆ ಈ ವಿಡಿಯೊವನ್ನು ಟ್ಯಾಗ್ ಮಾಡಿದ್ದಾರೆ. ಕಂಪನಿಯು ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ಆಂತರಿಕ ವಿಚಾರಣೆ ನಡೆಸಿ, ಚಾಲಕನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ದೃಢಪಡಿಸಿದೆ.
ಇದನ್ನೂ ಓದಿ: Viral Video: ಬೀದಿನಾಯಿಗಳ ಡೆಡ್ಲಿ ಅಟ್ಯಾಕ್‌ಗೆ ಪ್ರಾಣಪಕ್ಷಿಯೇ ಹಾರಿಹೋಯ್ತು! ಶಾಕಿಂಗ್ ವಿಡಿಯೊ ಫುಲ್ ವೈರಲ್
ಪ್ರತಿಕ್ರಿಯೆಯ ನಂತರ, ವಿಆರ್‌ಎಲ್ ಟ್ರಾವೆಲ್ಸ್ ಅನ್ನು ನಿರ್ವಹಿಸುವ ವಿಜಯಾನಂದ್ ಟ್ರಾವೆಲ್ಸ್, ಘಟನೆಗೆ ಕ್ಷಮೆಯಾಚಿಸುತ್ತಾ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿತು. ಅಕ್ಟೋಬರ್ 27ರಂದು ಮುಂಬೈನಿಂದ ಹೈದರಾಬಾದ್‌ಗೆ ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ಅನುಭವಿಸಿದ ಅನಾನುಕೂಲತೆ, ಭಯ ಮತ್ತು ಯಾತನೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಪ್ರಯಾಣಿಕರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಾವು ಅಂತಹ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಡಿಯೊ ವೀಕ್ಷಿಸಿ:
ಕಂಪನಿಯು ನಿರ್ಲಕ್ಷ್ಯಕ್ಕೆ ಶೂನ್ಯ ಸಹಿಷ್ಣುತಾ ನೀತಿಯನ್ನು ಕಾಯ್ದುಕೊಳ್ಳುವುದಾಗಿಯೂ, ಸಂಬಂಧಪಟ್ಟ ಚಾಲಕನನ್ನು ಅವರ ನಿರ್ಲಕ್ಷ್ಯದ ವರ್ತನೆಯಿಂದಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.
ಈ ಸುದ್ದಿಯನ್ನೂ ಓದಿ: Bigg Boss: ಬಿಗ್ ಬಾಸ್‌ಗೆ ಹೋಗಿ ತಪ್ಪು ಮಾಡಿದೆ, ಬಹಳ ಹಿಂಸೆ ಅನುಭವಿಸಿದೆ! ಹೀಗ್ಯಾಕೆ ಅಂದ್ರು ಖ್ಯಾತ ನಿರೂಪಕಿ?
ಪ್ರಯಾಣಿಕರಿಗೆ ಧೈರ್ಯ ತುಂಬುತ್ತಾ, ಕಂಪನಿಯು 1,300 ಕ್ಕೂ ಹೆಚ್ಚು ಪ್ರಯಾಣ ಚಾಲಕರು ಮತ್ತು 10,000 ಲಾಜಿಸ್ಟಿಕ್ಸ್ ಚಾಲಕರೊಂದಿಗೆ, ನಿಯಮಿತ ಸುರಕ್ಷತಾ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಒತ್ತಿ ಹೇಳಿದೆ. ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ಕಟ್ಟುನಿಟ್ಟಿನ ಸೂಚನೆಗಳನ್ನು ಬಲಪಡಿಸಲಾಗಿದೆ ಎಂದು ಅದು ಭರವಸೆ ನೀಡಿದೆ.
ಈ ಘಟನೆಯು ರಸ್ತೆ ಸುರಕ್ಷತೆ ಮತ್ತು ಪ್ರಯಾಣಿಕರ ಸುರಕ್ಷತಾ ಕಾಳಜಿಯ ಬಗ್ಗೆ ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹ ಜೀವಕ್ಕೆ ಅಪಾಯಕಾರಿ ನಿರ್ಲಕ್ಷ್ಯವನ್ನು ತಡೆಗಟ್ಟಲು ಸಾರಿಗೆ ನಿರ್ವಾಹಕರ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಜಾರಿಗೆ ತರುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.