Viral Video: ನಿನ್ನಂಥ ಹಲವರನ್ನು ಇಟ್ಕೊಂಡಿದ್ದೇನೆ... ಮಹಿಳೆಗೆ ಉಬರ್ ಚಾಲಕ ಬೆದರಿಕೆ, ಹಲ್ಲೆಗೆ ಯತ್ನ!
Uber Driver Tries to Hit Women: ಮಹಿಳೆಯೊಬ್ಬರು ಟ್ರಾಫಿಕ್ ತಪ್ಪಿಸಲು ಬೇರೆ ಮಾರ್ಗವನ್ನು ತೆಗೆದುಕೊಳ್ಳುವಂತೆ ಚಾಲಕನನ್ನು ಕೇಳಿಕೊಂಡರು. ಇದಕ್ಕೆ ಚಾಲಕ ನಿರಾಕರಿಸಿದ್ದಲ್ಲದೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆಯರಿಗೆ ಪೈಪ್‍ನಿಂದ ಹೊಡೆಯಲು ಮುಂದಾದ ವಿಡಿಯೊ ವೈರಲ್ ಆಗಿದೆ.

-

ನೋಯ್ಡಾ: ನಿಯಮಿತವಾಗಿ ಉಬರ್ ಸವಾರಿ (Uber ride) ಮಾಡುತ್ತಿದ್ದ 5 ಮಹಿಳೆಯರಿಗೆ ಭಯಾನಕ ಅನುಭವವಾದ ಘಟನೆ ನೋಯ್ಡಾದಲ್ಲಿ (Noida) ನಡೆದಿದೆ. ಉಬರ್ ಚಾಲಕ ಆಕ್ರಮಣಕಾರಿಯಾಗಿ ವರ್ತಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬೊಟಾನಿಕಲ್ ಗಾರ್ಡನ್‌ನಿಂದ ತಮ್ಮ ಕಚೇರಿಗೆ ಕ್ಯಾಬ್ ಬುಕ್ ಮಾಡಿದ್ದ ಮಹಿಳೆಯರು, ಬೇರೆ ಮಾರ್ಗ ತೆಗೆದುಕೊಳ್ಳಿ ಎಂದು ಹೇಳಿದಾಗ ಈ ಘಟನೆ ಸಂಭವಿಸಿದೆ.
ಸವಾರಿಯ ಸಮಯದಲ್ಲಿ, ಮಹಿಳೆಯೊಬ್ಬರು ಟ್ರಾಫಿಕ್ ತಪ್ಪಿಸಲು ಬೇರೆ ಮಾರ್ಗವನ್ನು ತೆಗೆದುಕೊಳ್ಳುವಂತೆ ಚಾಲಕನನ್ನು ಕೇಳಿಕೊಂಡರು. ಇದನ್ನು ಚಾಲಕ ನಿರಾಕರಿಸಿದನು. ಅಲ್ಲದೆ ಅವಹೇಳನಕಾರಿ ಮಾತುಗಳನ್ನಾಡಲು ಪ್ರಾರಂಭಿಸಿದನು ಎಂದು ವರದಿಯಾಗಿದೆ. ಮಹಿಳೆ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಅವನು ಹಣಕ್ಕೆ ಬೇಡಿಕೆ ಇಟ್ಟನು. ಹಣ ಕೊಡುವುದಕ್ಕೆ ನಿರಾಕರಿಸಿದ್ದಕ್ಕೆ ಕಾರನ್ನು ನಿಲ್ಲಿಸಿದ ಚಾಲಕ, ಕಾರಿನಿಂದ ಇಳಿದು ಡಿಕ್ಕಿ ತೆರೆದು ಪೈಪ್‌ನಿಂದ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆಯಿಂದ ಮಹಿಳೆಯರು ಭಯಭೀತರಾದರು ಮತ್ತು ಆಘಾತಗೊಂಡಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಚಾಲಕ ಬ್ರಜೇಶ್ ಕುಮಾರ್‌ನನ್ನು ಬಂಧಿಸಲಾಯಿತು. ಹಾಗೆಯೇ ಆತನ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ (Viral Video). ವಿಡಿಯೊ ನೋಡಿದ ನೆಟ್ಟಿಗರು ಕೂಡ ಆಘಾತಕೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯೊಬ್ಬರು ಹೀಗೆ ಬರೆದಿದ್ದಾರೆ, ನಾವು ನೋಯ್ಡಾದ ಬೊಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣದಿಂದ ಸೆಕ್ಟರ್ 128ಕ್ಕೆ ನಮ್ಮ ಕಚೇರಿಗೆ ಉಬರ್ ಕ್ಯಾಬ್ ಬುಕ್ ಮಾಡಿದಾಗ ಈ ಘಟನೆ ಸಂಭವಿಸಿದೆ. ವಾಹನ ಸಂಖ್ಯೆ UP 16 QT 4732, ಮತ್ತು ಚಾಲಕನ ಹೆಸರು ಬ್ರಜೇಶ್ ಎಂದು ಗುರುತಿಸಲಾಗಿದೆ. ನಾವು ನಮ್ಮ ಸಾಮಾನ್ಯ ಮಾರ್ಗವನ್ನು ಅನುಸರಿಸುತ್ತಿದ್ದೆವು. ನಾವು 5 ಮಂದಿ ಹೆಣ್ಮಕ್ಕಳು ಕಾರಿನಲ್ಲಿ ಕುಳಿತಿದ್ದೆವು. ನಾನು ಮುಂದಿನ ಸೀಟಿನಲ್ಲಿ ಕುಳಿತಿದ್ದೆ. ಭಾರಿ ಟ್ರಾಫಿಕ್ ಇದ್ದ ಕಾರಣ ನಾನು ಚಾಲಕನಿಗೆ ಯೂ-ಟರ್ನ್ ಬದಲಿಗೆ ಅಂಡರ್‌ಪಾಸ್ ತೆಗೆದುಕೊಳ್ಳಲು ಹೇಳಿದೆ. ಯೂಟರ್ನ್ ತೆಗೆದುಕೊಳ್ಳದಂತೆ ನಾವು ಅವನಿಗೆ ಹಲವು ಬಾರಿ ವಿನಂತಿಸಿದರೂ, ಆತ ಅದೇ ಮಾರ್ಗವನ್ನು ತೆಗೆದುಕೊಂಡನು ಎಂದು ಬರೆದಿದ್ದಾರೆ.
ಬೇಡ ಅಂದರೂ ಯಾಕೆ ಇದೆ ಮಾರ್ಗದಲ್ಲಿ ಹೋದಿರಿ? ಈಗ ನಾವು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತೇವೆ ಎಂದು ಅವನಿಗೆ ಹೇಳಿದ್ದಕ್ಕೆ ಆತ ಕೋಪಗೊಂಡಿದ್ದಾನೆ. ಇದ್ದಕ್ಕಿದ್ದಂತೆ ಚಾಲಕನು ಯಾವುದೇ ಪ್ರಚೋದನೆಯಿಲ್ಲದೆ, ತುಂಬಾ ಅಸಭ್ಯವಾಗಿ ಮಾತನಾಡಲು ಪ್ರಾರಂಭಿಸಿದನು. ಸುಮ್ಮನೆ ಕುಳಿತುಕೊಳ್ಳಿ, ಮ್ಯಾಪ್‍ನಲ್ಲಿ ತೋರಿಸಿದಂತೆ ತಾನು ನಿಮ್ಮನ್ನು ಕರೆದೊಯ್ಯುತ್ತೇನೆ ಎಂದು ಹೇಳಿದ್ದಾನೆ. ಅದನ್ನೇ ಸ್ವಲ್ಪ ನಯವಾಗಿ ಮಾತನಾಡುವಂತೆ ಮಹಿಳೆಯರು ಕೇಳಿಕೊಂಡಿದ್ದಕ್ಕೆ, ಮತ್ತಷ್ಟು ಕೋಪಗೊಂಡಿದ್ದಾನೆ. ಏನು ಮಾಡಬೇಕೆಂದು ಹೇಳಲು ನೀವು ಯಾರು? ನಿಮ್ಮಂತಹ ಹತ್ತು ಮಹಿಳೆಯರು ನನಗಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ನಾನು 12 ರಿಂದ 13 ಕಾರುಗಳನ್ನು ಓಡಿಸುತ್ತೇನೆ ಎಂದು ಹೇಳಲು ಪ್ರಾರಂಭಿಸಿದನು. ಅಷ್ಟೇ ಅಲ್ಲ ಆತ ನಮ್ಮನ್ನು ನಿಂದಿಸುತ್ತಲೇ ಇದ್ದನು ಎಂದು ಮಹಿಳೆ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Viral Video: ಇದು ಅಜ್ಜಿಯರಿಗಾಗಿಯೇ ಇರೋ ಶಾಲೆ! 60-90 ವರ್ಷದ ಮಹಿಳೆಯರಿಗೆ ಕಲಿಯಲು ಎರಡನೇ ಅವಕಾಶ