ಇದಪ್ಪ ಸಾಧನೆ ಅಂದ್ರೆ: ಜೊಹೊನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯುವಕ ಈಗ ಅದೇ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್
Viral News: ಚೆನ್ನೈ ಮೂಲದ ಜೊಹೊ ಸಾಫ್ಟ್‌ವೇರ್ ಕಂಪನಿಗೆ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿಕೊಂಡ ವ್ಯಕ್ತಿಯೊಬ್ಬರು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ನೇಮಕವಾಗಿದ್ದಾರೆ. ಯಾವುದೇ ಕಾಲೇಜು ಪದವಿ ಪಡೆಯದೇ ಇದ್ದರೂ ಅವರು ಯಶಸ್ಸಿನ ಪ್ರಯಾಣ ಹೇಗಿತ್ತು ಎನ್ನುವುದನ್ನು ಅವರು ಲಿಂಕ್ಡ್‌ಇನ್‌ನಲ್ಲಿ ಹೇಳಿಕೊಂಡಿದ್ದು, ಇದು ಈಗ ಭಾರಿ ವೈರಲ್ ಆಗಿದೆ.

-

ಚೆನ್ನೈ: ಸೆಕ್ಯೂರಿಟಿ ಗಾರ್ಡ್ (security guard) ಆಗಿದ್ದ ವ್ಯಕ್ತಿಯೊಬ್ಬರು ಸಾಫ್ಟ್‌ವೇರ್ ಎಂಜಿನಿಯರ್ (software development engineer) ಆದ ಕಥೆಯಿದು. 2013ರಲ್ಲಿ 1,000 ರೂ. ಹಿಡಿದುಕೊಂಡು ಮನೆ ಬಿಟ್ಟು ಹೋಗಿದ್ದ ಯುವಕ ಜೊಹೊನಲ್ಲಿ (Zoho) ಸೆಕ್ಯುರಿಟಿ ಗಾರ್ಡ್ ಆಗಿ ನೇಮಕಗೊಂಡ ಬಳಿಕ ಟೆಕ್ಕಿಯೊಬ್ಬರು ಅವರನ್ನು ಗುರುತಿಸಿದರು. ಬಳಿಕ ಕಾಲೇಜು ಪದವಿ ಪಡೆಯದೇ ಇದ್ದರೂ ಅವರು ಯಶಸ್ಸಿನತ್ತ ತಮ್ಮ ಪ್ರಯಾಣವನ್ನು ಆರಂಭಿಸಿದರು. ಈ ಕುರಿತು ಅವರು ಲಿಂಕ್ಡ್‌ಇನ್‌ನಲ್ಲಿ (LinkedIn post) ಹೇಳಿಕೊಂಡಿದ್ದಾರೆ. ಇದು ಈಗ ಭಾರಿ ವೈರಲ್ (Viral News) ಆಗಿದೆ.
ಜೊಹೊದಲ್ಲಿ ಒಂದು ಕಾಲದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಬ್ದುಲ್ ಅಲಿಮ್ ಈಗ ಅಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಹಿರಿಯ ಉದ್ಯೋಗಿಯಾಗಿದ್ದ ಟೆಕ್ಕಿಯೊಬ್ಬರು ಅವರನ್ನು ಗುರುತಿಸಿ ಅವರಲ್ಲಿದ್ದ ಕೌಶಲಕ್ಕೆ ವೇದಿಕೆ ಒದಗಿಸಿದ್ದಾರೆ. ಅಬ್ದುಲ್ ಅಲಿಮ್ ಅವರ ಯಶಸ್ಸಿನ ಪ್ರಯಾಣ ಈಗ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ತಮಿಳುನಾಡು ಮೂಲದ ಅಬ್ದುಲ್ ಅಲಿಮ್ 2013ರಲ್ಲಿ ಕೇವಲ 1,000 ರೂ.ಗಳೊಂದಿಗೆ ಮನೆ ಬಿಟ್ಟಿದ್ದರು. ಇದರಲ್ಲಿ ರೈಲು ಟಿಕೆಟ್‌ಗಾಗಿ 800 ರೂ. ಖರ್ಚು ಮಾಡಿದ್ದರು. ಯಾವುದೇ ಕೆಲಸವಿಲ್ಲದೆ, ಎಲ್ಲಿಯೂ ಹೋಗಲು ಸಾಧ್ಯವಾಗದೆ ಅವರು ಜೊಹೊ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದರು. ಇದಕ್ಕೂ ಮೊದಲು ಅವರು ಸುಮಾರು ಎರಡು ತಿಂಗಳ ಕಾಲ ಬೀದಿಯಲ್ಲಿ ರಾತ್ರಿಗಳನ್ನು ಕಳೆದಿದ್ದರು.
ಸೆಕ್ಯುರಿಟಿ ಗಾರ್ಡ್ ಆಗಿ ವೃತ್ತಿಜೀವನ ಪ್ರಾರಂಭಿಸಿದ ಅಲಿಮ್ ದೃಢನಿಶ್ಚಯ ಮತ್ತು ಸ್ವಯಂ ಕಲಿಕೆಯ ಮೂಲಕ ಅದೇ ಕಂಪನಿಯಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ ಎಂಜಿನಿಯರ್ ಆಗಿ ಆಯ್ಕೆಯಾದರು. ಇವರು ಯಾವುದೇ ಕಾಲೇಜು ಪದವಿ ಪಡೆಯದೇ ಇದ್ದರೂ ಕಷ್ಟದಿಂದ ಯಶಸ್ಸಿನತ್ತ ಜೀವನದತ್ತ ಪ್ರಯಾಣ ಆರಂಭಿಸಿರುವುದಾಗಿ ಲಿಂಕ್ಡ್‌ಇನ್‌ನಲ್ಲಿ ತಿಳಿಸಿದ್ದಾರೆ.
ಅಲಿಮ್ 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರನ್ನು ಗುರುತಿಸಿದ್ದು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಜೊಹೊನ ಹಿರಿಯ ಉದ್ಯೋಗಿ ಶಿಬು ಅಲೆಕ್ಸಿಸ್. ಅಲಿಮ್ ಅವರಲ್ಲಿದ್ದ ಕಲಿಕೆಯ ಉತ್ಸಾಹವನ್ನು ಗಮನಿಸಿದ ಅಲೆಕ್ಸಿಸ್ ಅವರಿಗೆ ಮಾರ್ಗದರ್ಶನ ನೀಡಲು ಮುಂದಾದರು. ಕೇವಲ ಎಂಟು ತಿಂಗಳ ಅವಧಿಯಲ್ಲಿ ಪ್ರೋಗ್ರಾಮಿಂಗ್ ಕಲಿಸಿದರು. ಕೊನೆಗೆ ಅವರು ಬಳಕೆದಾರರ ಇನ್‌ಪುಟ್ ಅನ್ನು ದೃಶ್ಯೀಕರಿಸುವ ಸರಳ ಅಪ್ಲಿಕೇಶನ್ ಅನ್ನು ತಯಾರಿಸಿದರು. ಇದನ್ನು ಅಲೆಕ್ಸಿಸ್ ಜೊಹೊ ವ್ಯವಸ್ಥಾಪಕರಿಗೆ ತೋರಿಸಿದರು.
ಇದರಿಂದ ಪ್ರಭಾವಿತರಾದ ವ್ಯವಸ್ಥಾಪಕರು ಅಲಿಮ್ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಿ, ಪದವಿ ಇಲ್ಲದಿದ್ದರೂ ಜೊಹೊನಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಎಂಜಿನಿಯರ್ ಆಗಿ ನೇಮಕಗೊಳಿಸಿದರು. ಅವರು ಕಳೆದ ಎಂಟು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ಸಾಫ್ಟ್‌ವೇರ್ ಅಭಿವೃದ್ಧಿ ಎಂಜಿನಿಯರ್ ಆಗಿದ್ದಾರೆ. ಈ ಕುರಿತು ಅಲಿಮ್ ತಮ್ಮ ಮಾರ್ಗದರ್ಶಕ ಮತ್ತು ಕಂಪನಿಗೆ ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: Donald Trump: ಜನರ ಜೀವ ಕಾಪಾಡುವುದೇ ಅವರ ಗುರಿ; ನೊಬೆಲ್ ಕೈತಪ್ಪಿದ ಬಳಿಕ ಶ್ವೇತ ಭವನ ಹೇಳಿದ್ದೇನು?
ಸಾಮಾಜಿಕ ಮಾಧ್ಯಮ ಬಳಕೆದಾರರು ಅಬ್ದುಲ್ ಅಲಿಮ್ ಅವರ ಸ್ಪೂರ್ತಿದಾಯಕ ಪ್ರಯಾಣಕ್ಕಾಗಿ ಅಭಿನಂದಿಸಿದ್ದಾರೆ ಮತ್ತು ಜೋಹೋದಲ್ಲಿ ಅವರ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ. ಚೆನ್ನೈ ಮೂಲದ ಜಾಗತಿಕ ಸಾಫ್ಟ್‌ವೇರ್ ಕಂಪನಿಯಾಗಿರುವ ಜೋಹೋ ಸಿಆರ್‌ಎಂ, ಇಮೇಲ್, ಹಣಕಾಸಿಗೆ ಸಂಬಂಧಿಸಿದ ಕ್ಲೌಡ್-ಆಧಾರಿತ ಸೇವೆ ಒದಗಿಸುತ್ತಿದೆ. 1996ರಲ್ಲಿ ಶ್ರೀಧರ್ ವೆಂಬು ಇದನ್ನು ಸ್ಥಾಪಿಸಿದ್ದರು.