ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸಹಪಾಠಿಯಿಂದಲೇ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿ

Viral News: ಸರ್ಕಾರಿ ಬಾಲಕಿಯರ ಶಾಲೆಯ ಶಿಕ್ಷಕಿಯೊಬ್ಬರು ಒಂದು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರೆಲ್ಲಾ ತಪ್ಪು ಉತ್ತರ ನೀಡಿದ್ದಾರೋ, ಅವರಿಗೆಲ್ಲಾ ಅದೇ ತರಗತಿಯ ಕ್ಲಾಸ್‌ ಲೀಡರ್‌ ಕೈಯಿಂದ ಕಪಾಳಮೋಕ್ಷ ಮಾಡಿಸಿದ್ದಾರೆ. ಪರಿಣಾಮ ಈಗ ಆ ಶಿಕ್ಷಕಿಯ ಮೇಲೆ ಪ್ರಕರಣ ದಾಖಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಚರ್ಚೆಯಾಗುತ್ತಿದೆ.

ಶಿಮ್ಲಾ: ಶಾಲೆಗಳು ಮಕ್ಕಳಿಗೆ ಕೇವಲ ಪಾಠವನ್ನಷ್ಟೇ ಅಲ್ಲದೆ ಜೀವನದ ಮೌಲ್ಯಗಳನ್ನು ಹೇಳಿಕೊಡುವ ಗುರುಕುಲಗಳಾಗಿರುತ್ತವೆ. ಶಿಕ್ಷಕರು ಶಾಲೆಯಲ್ಲಿ ಮಕ್ಕಳನ್ನು ನಡೆಸಿಕೊಳ್ಳುವ ರೀತಿ ಆ ಮಕ್ಕಳ ಜೀವನದ ಮೇಲೆ ಅತಿಯಾದ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಕೆಲ ಶಿಕ್ಷಕರು ತೋರುವ ಮೃಗೀಯ ವರ್ತನೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರಿದ ಉದಾಹಣೆಗಳಿವೆ. ಇಂತಹುದೇ ಒಂದು ಆಘಾತಕಾರಿ ಘಟನೆ ಹಿಮಾಚಲ ಪ್ರದೇಶ(Himachal Pradesh)ದ ಶಿಮ್ಲಾ (Shimla)ದಲ್ಲಿ ನಡೆದಿದ್ದು, ಈಗ ಭಾರಿ ಟೀಕೆಗೆ ಒಳಗಾಗಿದೆ. ಶಿಕ್ಷಕಿ ಮಾಡಿದ ಕೆಲಸ ಸ್ವಲ್ಪವೂ ಒಪ್ಪುವಂತದ್ದಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲೂ ಭಾರೀ ಸದ್ದು(Viral News) ಮಾಡುತ್ತಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಸರ್ಕಾರಿ ಬಾಲಕಿಯರ ಶಾಲೆಯ ಶಿಕ್ಷಕಿಯೊಬ್ಬರು ಒಂದು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರೆಲ್ಲಾ ತಪ್ಪು ಉತ್ತರ ನೀಡಿದ್ದಾರೋ, ಅವರಿಗೆಲ್ಲಾ ಅದೇ ತರಗತಿಯ ಕ್ಲಾಸ್‌ ಲೀಡರ್‌ ಕೈಯಿಂದ ಕಪಾಳಮೋಕ್ಷಮಾಡಿಸಿದ್ದಾರೆ. ಅವರು ಯಾರೂ ಬೆಳೆದು ನಿಂತ ಮಕ್ಕಳಲ್ಲ. ಆ ಮಕ್ಕಳ ವಯಸ್ಸು ಕೇವಲ ಹತ್ತು ವರ್ಷ. ಈ ಪ್ರಾಯದಲ್ಲಿಯೇ ಮಕ್ಕಳಿಂದಲೇ ಮಕ್ಕಳಿಗೆ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿ ಮೇಲೆ ಈಗ ಪ್ರಕರಣ ದಾಖಲಾಗಿದೆ.

ದೂರುದಾರರ ಪ್ರಕಾರ, ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ತರಗತಿಯಲ್ಲಿ ಸಂಸ್ಕೃತ ಪಾಠ ಮಾಡುತ್ತಿದ್ದ ಶಿಕ್ಷಕಿ ಬಂದು, ಮಕ್ಕಳಿಗೆ ಕೆಲವು ಸಂಸ್ಕೃತ ಪದಗಳ ಅರ್ಥಗಳನ್ನು ಕೇಳಿದ್ದಾರೆ. ಅದರೊಂದಿಗೆ, ಸಂಸ್ಕೃತ ಪಠ್ಯವನ್ನು ಕಂಠಪಾಠ ಮಾಡಲೂ ನಿರ್ದೇಶಿಸಿದ್ದಾರೆ. ಯಾರೆಲ್ಲಾ ತಪ್ಪು ಉತ್ತರ ನೀಡಿದ್ದಾರೋ, ಅವರಿಗೆಲ್ಲಾ ಕ್ಲಾಸ್‌ ಲೀಡರ್‌ ಕೈಯಿಂದ ಕಪಾಳ ಮೋಕ್ಷ ಮಾಡಿಸಿದ್ದಾರೆ. ಆದರೆ, ತನ್ನದೇ ಸಹಪಾಠಿಗಳಿಗೆ ಜೋರಾಗಿ ಹೊಡೆಯಲು ಹಿಂಜರಿದ ಕ್ಲಾಸ್‌ ಲೀಡರ್‌, ನೆಪ ಮಾತ್ರಕ್ಕೆ ಮೆಲ್ಲಗೆ ಹೊಡೆದಿದ್ದಾಳೆ.

ಇದರಿಂದ ಸಿಟ್ಟಿಗೆದ್ದ ಶಿಕ್ಷಕಿ, “ಕ್ಲಾಸ್‌ ಲೀಡರ್‌ ಆದ ನಿನಗೆ ಸರಿಯಾಗಿ ಹೊಡೆಯಲೂ ಬರುವುದಿಲ್ಲವಾದರೆ, ಹೊಡೆಯುವುದು ಹೇಗೆ ಎಂದು ಮೊದಲು ಕಲಿಯಬೇಕು” ಎಂದು ಕ್ಲಾಸ್‌ ಲೀಡರ್‌ಗೆ ಜೋರಾಗಿ ಹೊಡೆದಿದ್ದಾರೆ. ಇದರ ನಂತರ ಸರಿಯಾದ ಉತ್ತರ ನೀಡಿದ ಮತ್ತಿಬ್ಬರು ವಿದ್ಯಾರ್ಥಿನಿಯರಿಗೂ ಆಕೆ ಹೊಡೆದಿದ್ದು, ಈಗ ದೇಶದಾದ್ಯಂತ ಸುದ್ದಿಯಾಗಿದೆ.

ಈ ಸುದ್ದಿಯನ್ನು ಓದಿ: ‌Viral Video: ಸ್ಕೂಟಿಗೆ ಡಿಕ್ಕಿ ಹೊಡೆದ ಎಸ್‌ಯುವಿ ಕಾರು; ಮುಂದೇನಾಯ್ತು...? ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಇಷ್ಟಕ್ಕೇ ನಿಲ್ಲಿಸದ ಶಿಕ್ಷಕಿ ಮಕ್ಕಳಿಗೆ ಬೆದರಿಕೆಯನ್ನೂ ಹಾಕಿದ್ದಾರೆ. “ನೀವು ಮನೆಗೆ ಹೋಗಿ ಅಪ್ಪ-ಅಮ್ಮನ ಹತ್ತಿರ ಏನು ಬೇಕಾದರೂ ಹೇಳಿ. ನನಗೆ ಯಾರ ಭಯವೂ ಇಲ್ಲ. ನನ್ನನ್ನು ಯಾರೂ ಏನೂ ಮಾಡಲಾಗುವುದಿಲ್ಲ” ಎಂದು ಹೊಡೆತ ತಿಂದ ಮಕ್ಕಳ ಎದುರು ಹೇಳಿದ್ದಾರೆ.

ಈ ಮಾತುಗಳನ್ನು ಕೇಳಿದ ನಂತರ ಮನೆಗೆ ಹೋದ ಮಕ್ಕಳು ನಡೆದದ್ದೆಲ್ಲವನ್ನೂ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಮಂಗಳವಾರ ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿಯ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಶಿಕ್ಷಕಿ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ದರಾಗದೇ ಇದ್ದಾಗ ತಾಳ್ಮೆ ಕಳೆದುಕೊಂಡ ಪೋಷಕರು ಆಕೆಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈಗ 10 ವರ್ಷದ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 115 (2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015ರ ಸೆಕ್ಷನ್ 75 (ಮಕ್ಕಳ ಮೇಲಿನ ಕ್ರೌರ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.