Divorce Case: ಬಿಂದಿಗಾಗಿ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ ಪತ್ನಿ!
ಪ್ರತಿದಿನ ವಿಭಿನ್ನ ಡಿಸೈನ್ ಬಿಂದಿ ಧರಿಸಬೇಕೆಂಬ ಪತ್ನಿಯ ಆಸೆಯನ್ನು ಪತಿ ಪೂರೈಸಲು ನಿರಾಕರಿಸಿದ್ದಕ್ಕೆ ಪತ್ನಿ ಡಿವೋರ್ಸ್(Divorce Case) ಕೇಳಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ದಂಪತಿಯನ್ನು ಫ್ಯಾಮಿಲಿ ಕೌನ್ಸಲಿಂಗ್ ಸೆಂಟರ್‌ಗೆ ಕಳುಹಿಸಿದ್ದಾರೆ. ಸದ್ಯಕ್ಕೆ ಸಲಹೆಗಾರರು ಈ ವಿಷಯವನ್ನು ಇತ್ಯರ್ಥಪಡಿಸಿದ್ದಾರೆ ಎನ್ನಲಾಗಿದೆ.

Divorce case

ಲಖನೌ: ಕೆಲವರಿಗೆ ಉಡುಪಿಗೆ ತಕ್ಕ ಹಾಗೇ ಬಿಂದಿ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಇನ್ನು ಕೆಲವರಿಗೆ ಸ್ಟೈಲಿಶ್ ಆದ ಬಿಂದಿ ಹಾಕಿಕೊಳ್ಳುವ ಆಸೆ ಇರುತ್ತದೆ. ಇಲ್ಲೊಬ್ಬಳು ಹೆಂಡತಿ ಬಿಂದಿಗಾಗಿ ಗಂಡನಿಗೆ ಪೀಡಿಸಿದ ಘಟನೆಯೊಂದು ನಡೆದಿದೆ. ಪ್ರತಿದಿನ ವಿಭಿನ್ನ ಬಿಂದಿಗಳನ್ನು ಇಟ್ಟುಕೊಳ್ಳಬೇಕು ಎಂಬ ಆಸೆ ಹೊತ್ತ ಹೆಂಡತಿ ಗಂಡ ಬಿಂದಿ ತಂದುಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟಾಗಿ ಕೊನೆಗೆ ಡಿವೋರ್ಸ್ ಕೇಳಿದ್ದಾಳಂತೆ. ಅರೆ... ಇದೇನು? ಚಿನ್ನ ಅಥವಾ ಆಸ್ತಿಗಾಗಿ ಕೆಲವರು ಗಂಡನ ಜೀವ ತಿನ್ನುತ್ತಾರೆ ಇವಳದ್ದೇನು ಬಿಂದಿ ಬಯಕೆ...? ಎಂದುಕೊಳ್ಳುತ್ತಿದ್ದೀರಾ...? ಈಕೆಯ ಬಿಂದಿ ಪುರಾಣದ ಮಾಹಿತಿ ಇಲ್ಲಿದೆ ನೋಡಿ. ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿದೆ.
ವರದಿಗಳ ಪ್ರಕಾರ, ಹಣಕಾಸಿನ ಸಮಸ್ಯೆಯಿಂದ ಬಿಂದಿ ತಂದುಕೊಡುವುದಕ್ಕೆ ಗಂಡ ಆಗಲ್ಲ ಎಂದು ಹೇಳಿದ್ದಾನಂತೆ. ಆದರೆ ಮಹಿಳೆ ಮಾತ್ರ ಗಂಡನ ಕಷ್ಟ ಅರ್ಥ ಮಾಡಿಕೊಳ್ಳದೇ ಹೊಸ ಹೊಸ ಬಿಂದಿ ಬೇಕೆಂದು ಒತ್ತಾಯಿಸಿದ್ದಾಳೆ. ಇದರಿಂದ ಗಂಡ ಕೂಡ ಬೇಸತ್ತಿದ್ದ. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯವು ಎಷ್ಟರ ಮಟ್ಟಿಗೆ ಉಲ್ಬಣಗೊಂಡಿತೆಂದರೆ, ಈ ಬಿಂದಿ ವಿಚಾರಕ್ಕೆ ಮಹಿಳೆ ಗಂಡನ ಮನೆಯನ್ನು ಬಿಟ್ಟು ತನ್ನ ತಾಯಿಯ ಮನೆಗೆ ಹೋಗಿದ್ದಾಳಂತೆ. ಹಾಗೇ ಗಂಡನಿಗೆ ಡಿವೋರ್ಸ್ ನೀಡಲು ರೆಡಿಯಾಗಿದ್ದಾಳೆ.
ಆರು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿ ಅಂತಿಮವಾಗಿ ಪತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾಳೆ. ಆಗ್ರಾದ ಜಗ್ನೇರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ದಂಪತಿ ನಡುವಿನ ಬಿಂದಿ ವಿವಾದವನ್ನು ಪರಿಹರಿಸಲು ಪೊಲೀಸರು ದಂಪತಿಯನ್ನು ಹತ್ತಿರದ ಫ್ಯಾಮಿಲಿ ಕೌನ್ಸಲಿಂಗ್ ಸೆಂಟರ್‌ಗೆ ಕಳುಹಿಸಿದ್ದಾರಂತೆ.
ನಡೆದಿದ್ದೇನು?
ಪತಿ ಶುರುವಿನಲ್ಲಿ ಒಂದು ವಾರಕ್ಕಾಗಿ ಅವಳಿಗೆ ಕೇವಲ ಏಳು ಬಿಂದಿಗಳನ್ನು ನೀಡುತ್ತಿದ್ದನಂತೆ. ಆದರೆ ಬಿಂದಿಗಳು ಆಗಾಗ್ಗೆ ಬೀಳುತ್ತವೆ ಎಂದು ಪತ್ನಿ ಖ್ಯಾತೆ ತೆಗೆದಾಗ 30ರಿಂದ35 ಬಿಂದಿಗಳನ್ನು ನೀಡಿದ್ದಾನಂತೆ.ಅದು ಅಲ್ಲದೇ, ಪತ್ನಿಯ ಬಿಂದಿ ಮೋಹದ ಬಗ್ಗೆ ಪತಿ ಸಿಕ್ಕಾಪಟ್ಟೆ ಕಳವಳಗೊಂಡಿದ್ದನಂತೆ.
ಕೌನ್ಸಲಿಂಗ್‌ನಿಂದ ಇಬ್ಬರೂ ರಾಜಿ ಮಾಡಿಕೊಂಡು ಸದ್ಯಕ್ಕೆ, ಇಬ್ಬರೂ ತಮ್ಮ ಸಂಸಾರವನ್ನು ಉಳಿಸಿಕೊಂಡಿದ್ದಾರೆ. ಹಾಗೇ ಮುಂದೆಂದೂ ಇಂತಹ ತಪ್ಪುಗಳು ಆಗದಂತೆ ಖುಷಿಯಾಗಿ ಜೀವನ ನಡೆಸುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Physical Abuse: ಸಲಿಂಗ ದಂಪತಿಗೆ 100 ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್; ಏನಿದು ಕೇಸ್?
ಇಂತಹ ಪ್ರಕರಣ ವರದಿಯಾಗುತ್ತಿರುವುದು ಇದೇ ಮೊದಲಲ್ಲ.ಈ ಹಿಂದೆ, ಪತಿ ತನಗೆ ಮೊಮೊಸ್ ತರಲು ಮರೆತಿದ್ದರಿಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಈ ಭಿನ್ನಾಭಿಪ್ರಾಯವನ್ನು ಅವರು ಕೌನ್ಸಿಲಿಂಗ್ ಮೂಲಕ ಪರಿಹರಿಸಿದ್ದಾರೆ. ನಂತರ ಪ್ರತಿ ವಾರ ಎರಡು ಬಾರಿ ತನ್ನ ಹೆಂಡತಿಗೆ ಮೊಮೊಸ್ ನೀಡುವುದಾಗಿ ಪತಿ ಭರವಸೆ ನೀಡಿದ್ದಾನೆ ಎಂದು ತಿಳಿದುಬಂದಿದೆ.