ಮುಂಬೈ: ಆಟೋ ಚಾಲಕರು(Auto Driver) ಸಾಮಾನ್ಯವಾಗಿ ದಿನಕ್ಕೆ 200-300ರೂ ದುಡಿಯುತ್ತಾರೆ. ಹೆಚ್ಚೆಂದರೆ ದಿನಕ್ಕೆ 1000ರೂ ದುಡಿಯಬಹುದು. ಆದರೆ ಮುಂಬೈನಲ್ಲಿ ಒಬ್ಬ ಆಟೋ ಚಾಲಕನೊಬ್ಬ ಆಟೋ ಓಡಿಸದೆ ತಿಂಗಳಿಗೆ 5 ರಿಂದ 8 ಲಕ್ಷ ರೂ. ಸಂಪಾದಿಸುತ್ತಾನಂತೆ. ಅರೇ...ಆಟೋ ಓಡಿಸದೇ ಇಷ್ಟೆಲ್ಲಾ ದುಡಿಯುವುದಕ್ಕೆ ಹೇಗೆ ಆಗುತ್ತೆ ಎಂಬ ಅನುಮಾನ ನಿಮಗೂ ಕಾಡ್ತಿದೆಯಾ...? ಇಲ್ಲಿದೆ ನೋಡಿ ಅವನ ಈ ದುಡಿಮೆಯ ಸಿಕ್ರೆಟ್! ಈತ ಯುಎಸ್ ಕಾನ್ಸುಲೇಟ್ ಬಳಿ ಆಟೋರಿಕ್ಷಾ ಪಾರ್ಕ್ ಮಾಡಿ ವೀಸಾ ಅರ್ಜಿದಾರರಿಗೆ ಬ್ಯಾಗ್ ಇಡುವ ಸೌಲಭ್ಯ ನೀಡುವ ಮೂಲಕ ತಿಂಗಳಿಗೆ ಲಕ್ಷಗಟ್ಟಲೆ ದುಡಿಯುತ್ತಾನಂತೆ. ಆಟೋಚಾಲಕನ ಈ ಬುದ್ಧಿವಂತಿಕೆ ಲೆನ್ಸ್‌ಕಾರ್ಟ್‌ನ ಪ್ರೊಡಕ್ಟ್ ಲೀಡರ್ ರಾಹುಲ್ ರೂಪಾನಿ ಅವರ ಗಮನ ಸೆಳೆದಿದ್ದು, ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ವೀಸಾ ಉದ್ದೇಶಕ್ಕಾಗಿ ದೆಹಲಿಯ ಅಮೆರಿಕ ಕಾನ್ಸುಲೇಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರೂಪಾನಿ ತಮ್ಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ವೀಸಾ ಅಪಾಯಿಂಟ್‌ಮೆಂಟ್‌ಗಾಗಿ ಯುಎಸ್ ಕಾನ್ಸುಲೇಟ್‌ನ ಹೊರಗೆ ನಿಂತಿದ್ದಾಗ ಸೆಕ್ಯುರಿಟಿ ಗಾರ್ಡ್ ಅವರ ಬ್ಯಾಗ್ ಅನ್ನು ಒಳಗೆ ಕೊಂಡೊಯ್ಯಲು ಬಿಡಲಿಲ್ಲವಂತೆ! ಆದರೆ ಅಲ್ಲಿ ಬ್ಯಾಗ್ ಇಡಲು ಯಾವುದೇ ಸೌಲಭ್ಯವಿರಲಿಲ್ಲವಂತೆ . ಹೀಗಾಗಿ ಅವರು ದಾರಿ ಕಾಣದೆ ಫುಟ್‌ಪಾತ್‌ನಲ್ಲಿ ನಿಂತಿದ್ದಾಗ, ಒಬ್ಬ ಆಟೋ ಚಾಲಕ ಇವರತ್ತ ಕೈ ಬೀಸುತ್ತಾ, "ಸರ್, ತನಗೆ ಬ್ಯಾಗ್ ನೀಡಿ. ತಾನು ಅದನ್ನು ಸೇಫಾಗಿ ಇಡುತ್ತೇನೆ.ಕೇವಲ 1,000ರೂಪಾಯಿ" ಎಂದು ಹೇಳಿದ್ದಾನಂತೆ. ಮೊದಲು ಈ ಚಾರ್ಜ್ ತುಂಬಾ ದುಬಾರಿ ಎಂದೆನಿಸಿದರೂ,ತಮ್ಮ ಕೆಲಸ ಆಗಬೇಕಾಗಿರುವುದರಿಂದ ಸುಮ್ಮನಾಗಬೇಕಾಯಿತು ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಈ ಚಾಲಕ ಪ್ರತಿದಿನ ಕಾನ್ಸುಲೇಟ್ ಹೊರಗೆ ಕಾಯುತ್ತಾನಂತೆ ಮತ್ತು ತನ್ನ "ಬ್ಯಾಗ್ ಸ್ಟೋರೇಜ್" ಸೇವೆಯ ಅಗತ್ಯವಿರುವ ಸುಮಾರು 20-30 ಗ್ರಾಹಕರನ್ನು ಪ್ರತಿದಿನ ಹುಡುಕುತ್ತಾನಂತೆ. ಈ ಮೂಲಕ ಅವನು ಪ್ರತಿದಿನ 20,000 ರಿಂದ 30,000 ರೂ. ಗಳಿಸುತ್ತಾನೆ. ಇದು ಕಾರ್ಪೊರೇಟ್ ಜಗತ್ತಿನ ಹಿರಿಯ ವೃತ್ತಿಪರರ ಆದಾಯಕ್ಕಿಂತ ಹೆಚ್ಚಿನದಾಗಿದೆ. ಈ ಹಣ ಗಳಿಸಲು ಅವನು ಹೆಚ್ಚು ಸಮಯ ವಾಹನ ಓಡಿಸಬೇಕಾಗಿಲ್ಲ. ಮತ್ತು ಯಾವುದೇ ನೂಕು ನುಗ್ಗಲಿಲ್ಲ ಎಂದಿದ್ದಾರೆ ರೂಪಾನಿ.
ಆಟೋ ಚಾಲಕನು ತನ್ನ ಆಟೋದಲ್ಲಿ ಕಾನೂನುಬದ್ಧವಾಗಿ 30 ಬ್ಯಾಗ್‌ಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲದ ಕಾರಣ, ಅವನು ಹತ್ತಿರದ ಸಣ್ಣ ಲಾಕರ್ ಜಾಗವನ್ನು ಹೊಂದಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಂದಿಗೆ ಪಾಲುದಾರಿಕೆ ಹೊಂದಿದ್ದಾನೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಿದೇಶಿ ಯುವತಿಯ ಡೇಟಿಂಗ್ ಆಫರ್ ತಿರಸ್ಕರಿಸಿದ ಯುವಕ; ಕಾರಣವೇನು?
ಈ ಆಟೋ ಚಾಲಕ ಯಾವುದೇ ಪದವಿ ಇಲ್ಲದೆ, ಅಪ್ಲಿಕೇಶನ್ ಇಲ್ಲದೆ, ಹೂಡಿಕೆ ಮಾಡದೆ, ತಂತ್ರಜ್ಞಾನ ಬಳಸದೆ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಆಟೋ ಪಾರ್ಕ್ ಮಾಡಿ ಜನರ ನಂಬಿಕೆ, ವಿಶ್ವಾಸ ಗಳಿಸಿ ಪ್ರತಿದಿನ 20-30 ಸಾವಿರದಂತೆ ತಿಂಗಳಿಗೆ 5-8 ಲಕ್ಷ ರೂ. ಸಂಪಾದಿಸುತ್ತಾನಂತೆ.