Viral Video: ನಮಗೇನೂ ಮಾಡಬೇಡಿ.. ಸೈನಿಕರನ್ನು ಉಗ್ರರೆಂದು ಭಾವಿಸಿ ಪ್ರಾಣ ಭಿಕ್ಷೆ ಬೇಡಿದ ಮಹಿಳೆ
ಪಹಲ್ಗಾಮ್‌ನ ಬೈಸರನ್ ನಲ್ಲಿ ನಡೆದ ಉಗ್ರರ ದಾಳಿಯ ಬಳಿಕದ ವೈರಲ್ (Viral Video) ಆಗಿರುವ ಈ ವಿಡಿಯೋದಲ್ಲಿ ದಾಳಿ ನಡೆದ ಸ್ಥಳದಲ್ಲಿ ಭಯಭೀತರಾದ ಬದುಕುಳಿದವರನ್ನು ಭಾರತೀಯ ಸೇನೆಯು ಸಮಾಧಾನಪಡಿಸುತ್ತಿರುವುದನ್ನು ಕಾಣಬಹುದು. ಸೈನಿಕರು ಭಯಭೀತರಾದ ಪ್ರವಾಸಿಗರ ರಕ್ಷಣೆಗಾಗಿ ತೆರಳಿದಾಗ ಕೆಲವರು ಭಯದಿಂದ ಕಿರುಚುತ್ತಾ ಹಿಂದೆ ಸರಿಯುತ್ತಿರುವುದನ್ನು ನೋಡಬಹುದು. ಸೈನಿಕರನ್ನು ಉಗ್ರಗಾಮಿಗಳೆಂದು ಭಾವಿಸಿ ಕೆಲವರು ಅವರಿಂದ ಪ್ರಾಣಭಿಕ್ಷೆಯನ್ನು ಬೇಡುತ್ತಿರುವ ಈ ದೃಶ್ಯವೂ ಇದರಲ್ಲಿದೆ.


ಪಹಲ್ಗಾಮ್: ದಕ್ಷಿಣ ಕಾಶ್ಮೀರದ (South Kashmir) ಪಹಲ್ಗಾಮ್‌ನ (Pahalgam) ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ( Terrorists Attack) ಭಯಭೀತರಾಗಿರುವ ಪ್ರವಾಸಿಗರನ್ನು ರಕ್ಷಿಸಲು ತೆರಳಿದ ಭಾರತೀಯ ಸೈನಿಕರನ್ನು (Indian army) ಉಗ್ರರೆಂದು ಭಾವಿಸಿ ಮಹಿಳೆಯರು ಪ್ರಾಣಭಿಕ್ಷೆ ಬೇಡಿದ ಹೃದಯವಿದ್ರಾವಕ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ಉಗ್ರಗಾಮಿ ದಾಳಿಯಿಂದ ಬದುಕುಳಿದ ಭಯಭೀತರಿಗೆ ಭಾರತೀಯ ಸೇನಾ ಸಿಬ್ಬಂದಿ ಸಾಂತ್ವನ ಹೇಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಸುಮಾರು 26 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಉಗ್ರರ ದಾಳಿಯಿಂದ ಪಾರಾಗಿರುವ ಪ್ರವಾಸಿಗರನ್ನು ರಕ್ಷಿಸಲು ತಕ್ಷಣ ಭಾರತೀಯ ಸೇನೆ ಧಾವಿಸಿದ್ದು, ಇವರ ಮುಂದೆ ಭಯಭೀತರಾಗಿರುವವರು ಪ್ರಾಣ ಭಿಕ್ಷೆ ಬೇಡುತ್ತಿದ್ದರು. ಕೆಲವರು ಇವರನ್ನು ಉಗ್ರರೆಂದು ಭಾವಿಸಿ ನಮ್ಮ ಮಕ್ಕಳಿಗೆ ಏನೂ ಮಾಡಬೇಡಿ ಎಂದು ಅಂಗಲಾಚುತ್ತಿದ್ದರು. ಉಗ್ರರ ದಾಳಿಯಿಂದ ಭಯಭೀತರಾಗಿರುವವರಿಗೆ ಭಾರತೀಯ ಸೇನೆ ಸಾಂತ್ವನ ಹೇಳುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಭಾರತೀಯ ಸೇನಾ ಸಿಬ್ಬಂದಿ, ನಿಮ್ಮನ್ನು ರಕ್ಷಿಸಲು ನಾವು ಬಂದಿದ್ದೇವೆ. ನಾವು ಏನೂ ಮಾಡುವುದಿಲ್ಲ ಎಂದು ಹೇಳುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಉಗ್ರರ ದಾಳಿಯನ್ನು ಕಣ್ಣಾರೆ ಕಂಡಿರುವ ಕೆಲವರು ಘಟನೆ ಬಗ್ಗೆ ಹೇಳುವುದು ಹೀಗೆ.. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹುಲ್ಲುಗಾವಲು ಬೈಸರನ್‌ನಲ್ಲಿ ನಾಲ್ವರು ಉಗ್ರರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಇದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಈ ವರ್ಷ ಪ್ರವಾಸಿಗರ ಮೇಲೆ ನಡೆದ ಮೊದಲ ದಾಳಿ ಇದಾಗಿದೆ. ಈ ರೀತಿಯ ಕೊನೆಯ ಘಟನೆ 2024ರ ಮೇ ತಿಂಗಳಲ್ಲಿ ಪಹಲ್ಗಾಮ್‌ನಲ್ಲಿ ನಡೆದಿತ್ತು. ಅಲ್ಲಿ ಇಬ್ಬರು ಪ್ರವಾಸಿಗರು ಗಾಯಗೊಂಡಿದ್ದರು.
कितना ख़ौफ़नाक मंज़र था!#PahalgamTerroristAttack
— Dr. B L Bairwa MS, FACS (@Lap_surgeon) April 23, 2025
pic.twitter.com/tUQLgGIW0N
ಇದೀಗ ವೈರಲ್ ಆಗಿರುವ ಪಹಲ್ಗಾಮ್‌ನ ಬೈಸರನ್ ನಲ್ಲಿ ನಡೆದ ಉಗ್ರರ ದಾಳಿಯ ಬಳಿಕದ ಈ ವಿಡಿಯೋದಲ್ಲಿ ದಾಳಿ ನಡೆದ ಸ್ಥಳದಲ್ಲಿ ಭಯಭೀತರಾದ ಬದುಕುಳಿದವರನ್ನು ಭಾರತೀಯ ಸೇನೆಯು ಸಮಾಧಾನಪಡಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಭಾರತೀಯ ಸೇನಾ ಸಿಬ್ಬಂದಿಗೆ ಉಗ್ರರು ಹತ್ತು ವಿಭಿನ್ನ ದಿಕ್ಕುಗಳಿಂದ ಗುಂಡು ಹಾರಿಸಿದ್ದಾರೆ ಎಂದು ಹೇಳುವುದನ್ನು ಕೇಳಬಹುದು. ಸೈನಿಕರು ಭಯಭೀತರಾದ ಪ್ರವಾಸಿಗರ ರಕ್ಷಣೆಗಾಗಿ ತೆರಳಿದಾಗ ಕೆಲವರು ಭಯದಿಂದ ಕಿರುಚುತ್ತಾ ಹಿಂದೆ ಸರಿಯುತ್ತಿರುವುದನ್ನು ನೋಡಬಹುದು. ಸೈನಿಕರನ್ನು ಉಗ್ರಗಾಮಿಗಳೆಂದು ಭಾವಿಸಿ ಕೆಲವರು ಅವರಿಂದ ಪ್ರಾಣಭಿಕ್ಷೆಯನ್ನು ಬೇಡುತ್ತಿರುವ ಈ ದೃಶ್ಯ ಎಂತವರ ಮನವನ್ನು ಕಲಕದೆ ಇರಲಾರದು. ಭಾರತೀಯ ಸೈನಿಕರು ಸಂತ್ರಸ್ತರಿಗೆ ಧೈರ್ಯ ತುಂಬುತ್ತ ಅವರ ರಕ್ಷಣೆ ಕಾರ್ಯ ನಡೆಸಿದರು.
ಇದನ್ನೂ ಓದಿ: Pahalgam Terror Attack: ಹಿಂತಿರುಗಿ ನೋಡದೆ ಓಡಿದೆವು- ಭಯೋತ್ಪಾದಕ ದಾಳಿಯಿಂದ ಪಾರಾದ ಮಹಾರಾಷ್ಟ್ರ ದಂಪತಿ
ಈ ಸಂದರ್ಭದಲ್ಲಿ ಒಬ್ಬ ಮಹಿಳೆ ದಾಳಿಯ ಸಮಯದಲ್ಲಿ ತನ್ನ ಪತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳುವುದನ್ನು ಕೂಡ ಕೇಳಬಹುದು. ದಾಳಿಯ ಪ್ರಾಥಮಿಕ ತನಿಖೆಯಲ್ಲಿ ಬೈಸರನ್ ಹುಲ್ಲುಗಾವಲಿನಲ್ಲಿ ನಾಲ್ವರು ಭಯೋತ್ಪಾದಕರು ಅಮೆರಿಕನ್ ನಿರ್ಮಿತ ಎಂ4 ಕಾರ್ಬೈನ್‌ಗಳು ಮತ್ತು ಎಕೆ -47 ರೈಫಲ್‌ಗಳನ್ನು ಬಳಸಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಇಲ್ಲಿಯವರೆಗೆ ಸ್ಥಳದಿಂದ 50 ರಿಂದ 70 ಬಳಸಲಾದ ಗುಂಡುಗಳ ಕವಚಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಕೋರರಲ್ಲಿ ಇಬ್ಬರನ್ನು ಗುರುತಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ.