Divorce Case: ಮುಟ್ಟಾದಾಗ ವಾರದವರೆಗೆ ಸ್ನಾನ ಮಾಡಲು ಬಿಡದ ಅತ್ತೆ! ಬೇಸತ್ತು ಡಿವೋರ್ಸ್ ಕೊಟ್ಟ ಮಹಿಳೆ
ಋತುಸ್ರಾವದ ಬಗ್ಗೆ ಮೂಢನಂಬಿಕೆಗಳನ್ನು ಹೊಂದಿರುವ ಮನೆಗೆ ಮದುವೆಯಾಗಿ ಹೋದ ಮಹಿಳೆ ಪತಿಯ ಅತ್ಯಂತ ಸಂಪ್ರದಾಯವಾದಿ ಹೆತ್ತವರೊಂದಿಗೆ ವಾಸಿಸಲು ಸಾಧ್ಯವಾಗದೆ ಹಾಗೂ ಅವರ ಅಸಂಬದ್ಧತೆಯ ಮಾತನ್ನು ಸಹಿಸಲಾಗದೆ ತನ್ನ ವೈವಾಹಿಕ ಜೀವನವನ್ನು ಕೊನೆಗೊಳಿಸಲು(Divorce Case) ನಿರ್ಧರಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.
ಭೋಪಾಲ್: ಕೆಲವು ಕಡೆಗಳಲ್ಲಿ ಋತುಸ್ರಾವದ ಬಗ್ಗೆ ಒಂದಷ್ಟು ಮೂಢನಂಬಿಕೆಗಳಿವೆ. ಮಹಿಳೆಯರು ಮುಟ್ಟಾದಾಗ ಮನೆಯೊಳಗೆ ಬರದಂತೆ, ಯಾವುದೇ ವಸ್ತುಗಳನ್ನು ಮುಟ್ಟದಂತೆ ನಿರ್ಬಂಧ ಹಾಕುತ್ತಾರೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇಂತಹದೊಂದು ಪದ್ಧತಿ, ಆಚರಣೆ ಇರುವ ಮನೆಗೆ ಯುವತಿಯೊಬ್ಬಳು ಸೊಸೆಯಾಗಿ ಹೋಗಿದ್ದು, ಆದರೆ ಆಕೆಗೆ ಈ ನಿಷೇಧಗಳನ್ನು ಅನುಸರಿಸಲು ಸಾಧ್ಯವಾಗದೆ ಡಿವೋರ್ಸ್ ಮೊರೆ ಹೋಗಿದ್ದಾಳಂತೆ. ಋತುಚಕ್ರದ ಸಮಯದಲ್ಲಿ ಅವಳನ್ನು ಕೋಣೆಯೊಳಗೆ ಕುಳಿತುಕೊಳ್ಳಬೇಕು, ಒಂದು ವಾರದವರೆಗೆ ಸ್ನಾನ ಮಾಡುವ ಹಾಗೇ ಇಲ್ಲ ಎನ್ನುವಂತಹ ಮೂಢನಂಬಿಕೆಗಳನ್ನು ಅವಳ ಮೇಲೆ ಹೇರಿದ್ದಾರಂತೆ. ಇದರಿಂದ ಬೇಸತ್ತು ಆ ಮಹಿಳೆ ಪತಿಯಿಂದ ದೂರವಾಗಿದ್ದಾಳಂತೆ.
ಈ ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನವನ್ನು ಪಡೆದಿದ್ದಾರೆ. ಎರಡು ವರ್ಷದ ಹಿಂದಷ್ಟೇ ಇವರ ವಿವಾಹವಾಗಿತ್ತಂತೆ. ಗಂಡನ ಮನೆಯ ಸಂಪ್ರದಾಯದಿಂದ ಬೇಸತ್ತ ಮಹಿಳೆ ಇನ್ನು ಆ ಮನೆಯಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಗಂಡನಿಂದ ದೂರವಾಗಿದ್ದಾಳೆ.
ಆಗಿದ್ದೇನು?
ಸಂಪ್ರದಾಯಸ್ಥ ಮನೆಯ ಸೊಸೆಯಾದ ಮಹಿಳೆಗೆ ಋತಚಕ್ರದ ಸಮಯದಲ್ಲಿ ಅತ್ತೆ ಸಾಕಷ್ಟು ನಿರ್ಬಂದನೆಗಳನ್ನು ಹೇರಿದ್ದಾಳಂತೆ. ಋತುಚಕ್ರದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುವ ಹಾಗೇ ಇಲ್ಲ. ಕೋಣೆಯಿಂದ ಆಚೆ ಬರುವ ಹಾಗೇ ಇಲ್ಲ ಅದೂ ಅಲ್ಲದೇ, ಒಂದು ವಾರದವರೆಗೆ ಸ್ನಾನ ಕೂಡ ಮಾಡುವ ಹಾಗೇ ಇಲ್ಲ ಎಂದು ಕಟ್ಟಪ್ಪಣೆ ಮಾಡಿದ್ದಾಳಂತೆ. ಇದರಿಂದ ಶಾಕ್ ಆದ ಸೊಸೆ ಗಂಡನ ಬಳಿ ಇದರ ಬಗ್ಗೆ ದೂರಿದಾಗ ಆತ ಹೆಂಡತಿಯ ಮಾತಿಗೆ ಸೊಪ್ಪು ಹಾಕದೇ ತಾಯಿಯದ್ದೇ ಸರಿ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಹೋಗುವುದಕ್ಕೆ ಹೆಂಡತಿಗೆ ಒತ್ತಾಯಿಸಿದನಂತೆ.
ಅದೂ ಅಲ್ಲದೇ, ಸೊಸೆಯ ಮೇಲೆ ಯಾವುದೋ ದುಷ್ಟಶಕ್ತಿಯಿದೆ. ಅದಕ್ಕೆ ಆಕೆ ಹೊರಗಡೆ ಹೋದಾಗ ನಾಯಿಗಳು ಅವಳನ್ನು ಅಟ್ಟಿಸಿಕೊಂಡು ಬರುತ್ತವೆ ಎಂದು ಅತ್ತೆ-ಮಾವ ಆಕೆಯ ಮೇಲೆ ಗೂಬೆ ಕೂರಿಸಿದ್ದಾರಂತೆ. ಇದೆಲ್ಲರಿಂದ ಬೇಸತ್ತ ಸೊಸೆ ಮದುವೆಯಾದ ನಾಲ್ಕು ತಿಂಗಳ ನಂತರ ಗಂಡನ ಮನೆ ಬಿಟ್ಟು ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ.
ಈ ಸುದ್ದಿಯನ್ನೂ ಓದಿ: House Arrest: ಇವನ್ಯಾವ ಸೀಮೆ ವೈದ್ಯ? ಪತ್ನಿಯನ್ನು ಗೃಹ ಬಂಧನದಲ್ಲಿರಿಸಿ ಚಿತ್ರಹಿಂಸೆ ಕೊಟ್ಟ ಪಾಪಿ ಗಂಡ
ದಂಪತಿ ಭೋಪಾಲ್ ಜಿಲ್ಲಾ ಕುಟುಂಬ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (ಬಿ) ಅಡಿಯಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರಂತೆ.