Narayan Yaji Column: ಭಯೋತ್ಪಾದನೆಯ ಕರಾಳ ಕೃತ್ಯಕ್ಕೆ ಒಂದು ಸಾಕ್ಷಿ
ಮಾನವೀಯತೆಯ ಯಾವ ಅಂಶವನ್ನೂ ಹುಡುಕಲಾಗದ ಭಯೋತ್ಪಾದಕರು ಅಮಾಯಕ ನಾಗರಿಕರ ಮೇಲೆ ಅಂದು ನಡೆಸಿದ ಹಿಂಸೆಯು ಮನಸ್ಸನ್ನು ಕಲಕುತ್ತದೆ. ಗಾಜಾ ಗಡಿಗೆ ಸಮೀಪ ನಡೆದ ಯುವಕರ ಸಂಗೀತ ಮಹೋತ್ಸವ (ಫೆಸ್ಟಿವಲ್) ನಡೆದ ಜಾಗವನ್ನು ಗುರಿಯಾಗಿಸಿಕೊಂಡು 2023ರ ಅಕ್ಟೋಬರ್ ೭ರ ಬೆಳಗಿನ ಜಾವ, ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿಯನ್ನು ನಡೆಸಿದರು.
-
ನಾರಾಯಣ ಯಾಜಿ
ಎರಡು ವರ್ಷಗಳ ಹಿಂದೆ ಅಕ್ಟೋಬರ್ ತಿಂಗಳಿನಲ್ಲಿ, ಇಸ್ರೇಲಿನ ನಾಗರಿಕರ ಮೇಲೆ ಭಯೋ ತ್ಪಾದಕರು ಗುಂಡಿನ ಮಳೆ ಗೆರೆದು, ಸಾವಿರಕ್ಕೂ ಅಧಿಕ ಜನರನ್ನು ಸಾಯಿಸಿದರು. ಆ ವಿವರ ಗಳು ಈ ಕೃತಿಯಲ್ಲಿದೆ. ಯೇರ್ ಅಗಮೋನ್ ಮತ್ತು ಓರಿಯಾ ಮೇವೊರೊಚ್ ಅವರ ‘ಒನ್ ಡೇ ಇನ ಅಕ್ಟೋಬರ್’ ಎನ್ನುವ ಇಂಗ್ಲಿಷ್ ಕೃತಿಯನ್ನು ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ವಿಶ್ವೇಶ್ವರ ಭಟ್ಟರು ಬರಹ ಎಂದರೆ ಅಕ್ಷರಗಳು ನಲಿದಾಡುತ್ತವೆ. ಅದನ್ನು ಓದುವಾಗ ಮನಸ್ಸಿನಲ್ಲಿ ಮೂಲೆಯಲ್ಲಿ ಯಾವುದಾದರೂ ಸಂದೇಹಗಳಿದ್ದರೆ ತಕ್ಷಣ ಪರಿಹಾರ ಸಿಗುತ್ತದೆ. ನಿರಂತರವಾಗಿ ಬರೆಯುವ ಅವರ ಅಂಕಣಕ್ಕಾಗಿಯೇ ಕಾಯುತ್ತಿರುತ್ತೇವೆ. ಆದರೆ ಅವರ 103ನೆಯ ಕೃತಿ ‘ಬದುಕುಳಿ ದವರು ಕಂಡಂತೆ’ ಓದಿದಾಗ ಒಮ್ಮೆಲೇ ಮನಸ್ಸು ಭಾರವಾಗಿಬಿಡುತ್ತದೆ.
ಮಾನವೀಯತೆಯ ಯಾವ ಅಂಶವನ್ನೂ ಹುಡುಕಲಾಗದ ಭಯೋತ್ಪಾದಕರು ಅಮಾಯಕ ನಾಗರಿಕರ ಮೇಲೆ ಅಂದು ನಡೆಸಿದ ಹಿಂಸೆಯು ಮನಸ್ಸನ್ನು ಕಲಕುತ್ತದೆ. ಗಾಜಾ ಗಡಿಗೆ ಸಮೀಪ ನಡೆದ ಯುವಕರ ಸಂಗೀತ ಮಹೋತ್ಸವ (ಫೆಸ್ಟಿವಲ್) ನಡೆದ ಜಾಗವನ್ನು ಗುರಿಯಾಗಿಸಿಕೊಂಡು 2023ರ ಅಕ್ಟೋಬರ್ ೭ರ ಬೆಳಗಿನ ಜಾವ, ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿ ಯನ್ನು ನಡೆಸಿದರು.
ಮೊದಲು ಆಕಾಶದಲ್ಲಿ ರಾಕೆಟ್ ಗಳನ್ನು ಸಿಡಿಸಿ, ನಂತರ ಭೂಮಿಯಿಂದ ವಾಹನಗಳಲ್ಲಿ, ಬೈಕ್ಗ ಳಲ್ಲಿ ಹಾಗು ಪ್ಯಾರಾಗ್ಲೈಡರ್‌ಗಳ ಮೂಲಕ ಬಂದ ಉಗ್ರರು ಜನರ ಮೇಲೆ ಗುಂಡಿನ ದಾಳಿ ಆರಂಭಿಸಿದರು.
ಹಬ್ಬಕ್ಕೆ ಬಂದಿದ್ದ ಸಾವಿರಾರು ಯುವಕರು ಭೀತಿಯಿಂದ ಓಡಿದರೂ, ಊರು, ರಸ್ತೆ, ಕಾಡು ಎಲ್ಲೆಡೆ ಉಗ್ರರು ಅಟ್ಟಹಾಸ ನಡೆಸಿದರು. ಗುಂಡಿನ ದಾಳಿ ತಪ್ಪಿಸಿಕೊಳ್ಳಲೆಂದು, ಭಯದಿಂದ ಅಡಗಿದ್ದವರ ಮೇಲೂ ದಾಳಿ ನಡೆಯಿತು, ಹಲವರನ್ನು ಅಪಹರಿಸಲಾಯಿತು. ಆ ದಿನದ ಘಟನೆಗಳನ್ನು ಜಗತ್ತು ನೋಡಿದ್ದು ಸುದ್ದಿಗಳ ಮೂಲಕ. ವಾಸ್ತವದ ಚಿತ್ರಣ ಮತ್ತು ಆದಿನದ ಹಿಂದೆ ನಿಂತಿದ್ದ ವಾಸ್ತವದ ಚಿತ್ರಣ ಏನೆಂಬುದು ನಮಗೆ ತಿಳಿಯಲೇ ಬಂದಿಲ್ಲ.
ಇದನ್ನೂ ಓದಿ: Narayana Yaji Column: ಭೌಮಸ್ವರ್ಗದಲ್ಲಿ ಸೀತೆಯನ್ನು ಹುಡುಕುವ ಚಿಂತೆ
‘ಒನ್ ಡೇ ಇನ್ ಅಕ್ಟೋಬರ್’ ಎನ್ನುವ ಇಂಗ್ಲಿಷ್ ಕೃತಿಯು (ಮೂಲ ಯೇರ್ ಅಗಮೋನ್, ಓರಿಯಾ ಮೇವೊರೊಚ್) ೩೪ ನೊಂದ ಕುಟುಂಬದ ವಿಷಯಗಳನ್ನು ಒಟ್ಟುಗೂಡಿಸಿ ಜಗತ್ತಿಗೆ ಕರಾಳ ರಾತ್ರಿ ಯ ಸಾಕ್ಷ್ಯವನ್ನು ನೀಡಿತ್ತು. ಅದನ್ನು ವಿಶ್ವೇಶ್ವರ ಭಟ್ಟರು ಕನ್ನಡಕ್ಕೆ ‘ಬದುಕುಳಿದವರು ಕಂಡಂತೆ" ಎಂಬ ಹೆಸರಿನಲ್ಲಿ ತಂದಿದ್ದಾರೆ. ಈ ಅನುವಾದ ಕೇವಲ ಭಾಷಾಂತರವಲ್ಲ; ಇದು ನೋವಿಗೆ ಸ್ಪಂದಿಸಿದ ಸಹೃದಯ ಸಾಹಿತಿಯ ಜವಾಬ್ದಾರಿ.
ಸಾಯುವ ಗೂಡಿಗೆ ಹೋಗಿ ಅದೃಷ್ಟ ಮತ್ತು ಧೈರ್ಯ ಎರಡರ ಕಾರಣಗಳಿಂದ ಬದುಕಿದವರ ಅನುಭವ ಇಲ್ಲಿದೆ. ಇದನ್ನು ಓದುವಾಗ, ಓದಲಾರದೇ ಮೌನವಾಗಿ ಅತ್ತಿದ್ದೇನೆ. ಶೇಲಿ ಅಟಾರಿಯಾಳ ಗಂಡ ಯಹವ್ ತನ್ನ ಹೆಂಡತಿ ಮತ್ತು ಹಸುಗೂಸು ಶಾಯಾಳನ್ನು ಉಳಿಸಲು ತನ್ನನ್ನೇ ಬಲಿದಾನ ಮಾಡಿಕೊಂಡ “ನೀನು ಬಾಗಿಲು ಹಿಡ್ಕೋ; ನಾನು ಮಗುವನ್ನು ಹಿಡ್ಕೋತೀನಿ" ಎನ್ನುವ ಮೊದಲ ಘಟನೆಯಿಂದ ಹಿಡಿದು ಕೊನೆಯ “ನನ್ನ ಅಪ್ಪ ನಿಜವಾಗಿಯೂ ಸ್ಟ್ರಾಂಗೆಸ್ಟ್" ವರೆಗೂ ದುರಂತಗಳು ಏಕಪ್ರಕಾರವಾಗಿ ಹರಡಿಕೊಂಡಿವೆ.
ಇಸ್ರೇಲ್ ಹುಟ್ಟಿನಿಂದಲೇ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವುದು ಯಾಕೆ ಎನ್ನುವುದರ ಒಂದು ಸಣ್ಣ ಉದಾಹರಣೆ ಈ ಕೃತಿಯಲ್ಲಿದೆ. ವಿಶ್ವೇಶ್ವರ ಭಟ್ಟರು ಹೇಳುವಂತೆ ‘ಇದು ಹತ್ಯಾಕಾಂಡದ ಡೈರಿ’. ಶೇಲಿಯ ಬದುಕಿನಲ್ಲಿ ಯವವ್ ಇಲ್ಲ. ಆದರೆ ಆತನ ಕೊನೆಯ ಮಾತಿನಂತೆ ಮಗು ಶಾಯಾಳಿಗಾಗಿ ಆಕೆ ಬದುಕಿರುವ ನಿರ್ಧಾರ ಮಾಡಿದ್ದಾಳೆ.
ಜಾಗತಿಕವಾಗಿ ಇಸ್ರೇಲಿಗರನ್ನು ದೂಷಿಸುವ, ಭಯೋತ್ಪಾದಕರಿಗೆ ಕರುಣೆ ತೋರುವ ತಥಾಕಥಿತ ಲಿಬರಲ್‌ಗಳ ಎದುರು ತೆರೆದಿಟ್ಟ ಸಾಕ್ಷಿಯಾಗಿದೆ ಈ ಕೃತಿ. ಅದನ್ನೇ ವಿಶ್ವೇಶ್ವರ ಭಟ್ಟರು ಕನ್ನಡಕ್ಕೆ “ಬದುಕುಳಿದವರು ಕಂಡಂತೆ" ಎಂಬ ಹೆಸರಿನಲ್ಲಿ ತಂದಿದ್ದಾರೆ.
ನೋವಿಗೆ ಒಂದು ಧ್ವನಿ: ಈ ಅನುವಾದ ಕೇವಲ ಭಾಷಾಂತರವಲ್ಲ; ಇದು ನೋವಿಗೆ ಕನ್ನಡದ ಧ್ವನಿ ಕೊಡುವ ಕಲೆ. ಸಾವಿನ ದವಡೆಗೆ ಹೋಗಿಯೂ ಪಾರಾದವರ ಆದರೆ ಜೀವಮಾನವಿಡೀ ಆ ನೋವನ್ನು ನುಂಗಿ ಬದುಕುವ ಅನಿವಾರ್ಯತೆಯನ್ನು ಇಲ್ಲಿ ಕಾಣಬಹುದು. ಈಡನ್ ಎನ್ನುವ ೧೯ರ ಹುಡುಗಿ ನಿರಂತರವಾಗಿ ಒಂಬತ್ತು ತಾಸುಗಳ ಕಾಲ ಸೀಮಿತ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡುತ್ತಾ ಅಸುನೀಗಿದ್ದನ್ನು ವಿವರಿಸುವುದು ಅವಳ ತಾಯಿ ಇನ್ಬಾರ್.
ಇಸ್ರೇಲಿನಲ್ಲಿ ಸೇನಾ ಸೇವೆ ಎಲ್ಲಾ ನಾಗರಿಕರಿಗೂ ಕಡ್ಡಾಯ. ಈಡನ್ ಅಲೋನ್ ಲೆವಿ ಯಾವ ಬೇಸರವಿಲ್ಲದೇ ಸೇನೆಯಲ್ಲಿ ಮುಂದುವರಿಯುತ್ತಾಳೆ. ಎಲ್ಲರೂ ಆಕೆಯನ್ನು ಅದ್ಭುತ ವ್ಯಕ್ತಿ ಎಂದು ಹೊಗಳುತ್ತಿದ್ದರೆ ಅವಳು ಮಾತ್ರ ಅದರ ಪರಿವೆಯಿಲ್ಲದೇ ಸೇನೆಗೆ ತನ್ನನ್ನು ಸಮರ್ಪಿಸಿಕೊಂಡಿದ್ದಳು.
“ನಗುವ ಹುಡುಗಿ ನಗುತ್ತಲೇ ಹೋದಳು!" ಎನ್ನುವ ತಾಯಿಯ ನೋವಿಗೆ ಸಂತೈಸುವವರು ಯಾರು. ಅಮಿತ್ ಮಾನ್ ಸಹ ಕೇವಲ ೨೨ ರ ಹರೆಯದ ಇಸ್ರೇಲಿನಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಪ್ಯಾರಾಮೆಡಿಕ್ ಶಿಕ್ಷಕಿಯಾಗಿದ್ದಳು. ಆಕೆಯ ಪಾರ್ಟ್ನರ್ ಒಫಿರ್ ಭಯೋತ್ಪಾದಕರ ದಾಳಿಗೆ ಪ್ರಾರಂಭವಾದಾಗ ಕಿಬೂತ್ಸನ್ನು (ಕಿಬ್ಬುಟ್ಜ್ ಎನ್ನುವುದು ಸದಸ್ಯರು ಒಟ್ಟಾಗಿ ಕೆಲಸ ಮಾಡಿ, ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಸಾಮೂಹಿಕ ಜೀವನ ವ್ಯವಸ್ಥೆ) ಬಿಟ್ಟು ನೆಟಿವೋಟಿಗೆ ಹೋಗೋಣ ಎಂದು ಒತ್ತಾಯಿಸಿದರೂ ತಾನು ಭಯೋತ್ಪಾದಕರ ದಾಳಿಗೆ ಗುರಿಯಾದವರಿಗೆ ಔಷದೋಪಚಾರ ಮಾಡುವ ಸಂಕಲ್ಪದಿಂದ ಅಲ್ಲೆ ಉಳಿದುಕೊಂಡು ತಾನೂ ಗಾಯಾಳುವಾದರೂ ಉಳಿದವರನ್ನುಬದುಕಿಸಿ ಹುತಾತ್ಮಳಾದಳು.
ತಾನೊಬ್ಬ ತಾಯಿ ಎನ್ನುವುದನ್ನು ಬದಿಗಿಟ್ಟು ದೇಶ ರಕ್ಷಣೆಗೆ ಮುಡಿಪಾಗಿಟ್ಟ ಓರ್ ಬೆನ್ ಯಹುದಾ ‘ನನಗೆ 543 ಮಕ್ಕಳು, ೩ ತನ್ನ ಸ್ವಂತದ್ದಾದರೆ ಇನ್ನುಳಿದ 540 ತನ್ನ ಬೆಟಾಲಿಯನ್ನಿನಲ್ಲಿರುವವರು’ ಎನ್ನುತ್ತಾಳೆ. ೫೯ ರ ರಾಮಿ ಡೇವಿಡ್ಯಾನ್ ಸಾಮಾನ್ಯ ವ್ಯಕ್ತಿ, ಮುಸ್ಲಿಂ. ಆತ ಅಮಿತ್ ಎನ್ನುವ ಹುಡುಗಿಯನ್ನು ಪ್ಯಾಲೆಸ್ತಿನಿಗಳಿಂದ ತನ್ನ ಧರ್ಮದ ಐಡೆಂಟಿಟಿಯಿಂದಲೇ ರಕ್ಷಿಸುತ್ತಾನೆ.
ಕೇವಲ ಯುಹೂದಿಗಳೂ ಮಾತ್ರ ಇಸ್ರೇಲನ್ನು ರಕ್ಷಿಸುತ್ತಿಲ್ಲ; ಮುಸ್ಲಿಂ, ಇಸಾಯಿ ಎಲ್ಲರೂ ತಮ್ಮ ತಾಯ್ನಾಡನ್ನು ಸಮಾನವಾಗಿ ಪ್ರೀತಿಸುತ್ತಾರೆ ಎನ್ನುವುದಕ್ಕೆ ಈ ಕೃತಿಯಲ್ಲಿ ಅನೇಕ ಉದಾಹರಣೆ ಗಳಿವೆ. ಮುಸ್ಲಿಂ ಎಂದು ತನ್ನನ್ನು ಉಳಿಸಲು ಕೋರಿದ ಟೆಲ್ ಶೇವಾದ ವ್ಯಕ್ತಿಯೊಬ್ಬನನ್ನು ‘ನಮ್ಮ ಪಾಲಿಗೆ ನೀನು ಯುಹೂದಿಗಳಿಗಿಂತ ಹೆಚ್ಚಿನವನು’ ಎಂದು ಕೊಲ್ಲುತ್ತಾರೆ. ಅಲ್ಲಿ ಮಾನವತೆಗೆ ಬೆಲೆಯೇ ಇರಲಿಲ್ಲ. ಭಯದ ನೆರಳು ಹೊಸ ರೂಪ ತಾಳಿತು. ಮನುಷ್ಯತ್ವಕ್ಕೆ ಪ್ರಶ್ನೆಯೇ ಬಂತು.
ತಾಯಿಯ ದೇಹವೇ ಗೋಡೆ
ಈ ಕೃತಿಯ ವಿಶಿಷ್ಟ ಗುಣವು, ಅದರ ಸರಳ ರೂಪದಲ್ಲೇ ಅಡಗಿದೆ. ನೋವುಂಡ ಜೀವಗಳ ಮನ ಹಿಂಡುವ ಕಥೆಗಳು, ಉಗ್ರರ ದಾಳಿಯ ಬಗ್ಗೆ ನಾವು ಸಾಮಾನ್ಯವಾಗಿ “ಅಷ್ಟೋ ಮಂದಿ ಪ್ರಾಣ ಬಿಟ್ಟರು", “ಇಷ್ಟೋ ಮನೆಗಳು ನಾಶವಾದವು" ಎಂದು ಮಾತನಾಡುತ್ತೇವೆ. ಆದರೆ ಇಲ್ಲಿ ಪ್ರತಿ ಯೊಂದು ಕಥೆಯೂ ಒಂದು ವಿಶಿಷ್ಟ ಮಾನವಮುಖ. ಗುಂಡಿನ ದಾಳಿ ನಡೆದ ಮನೆಯ ಕೋಣೆ ಯಲ್ಲಿ ಅಳುತ್ತಿರುವ ಬಾಲಕ, ತನ್ನ ಮಕ್ಕಳನ್ನು ಕಾಪಾಡಲು ದೇಹವನ್ನೇ ಗೋಡೆಯಾಗಿಸಿದ ತಾಯಿ, ಗಾಯಗೊಂಡವರನ್ನು ಎತ್ತಿಕೊಂಡು ಓಡಿದ ಅಪರಿಚಿತರ ಧೈರ್ಯ, ಇವು ಎಲ್ಲವೂ ಪುಸ್ತಕದಲ್ಲಿ ಜೀವಂತವಾಗುತ್ತವೆ.
ಈ ಜೀವಂತಿಕೆಗೆ ಕಾರಣ ವಿಶ್ವೇಶ್ವರ ಭಟ್ಟರ, ನಂತರ ಒಂದು ದಿನ ಅಲ್ಲಿಗೆ ಹೋಗಿ, ಆ ಸ್ಥಳದಲ್ಲಿ ನಿಂತು ಅನುಭವಿಸಿದ ನೋವಿನ ಮಾರ್ದನಿ. ವಿಶ್ವೇಶ್ವರ ಭಟ್ಟರು ಮೂಲದ ಭಾವವನ್ನು ಕೇವಲ “ಅನುಭವಿಸಿ" ಅನುವಾದಿಸಿರುವುದಲ್ಲ, ಅದನ್ನು ಕನ್ನಡದ ಮನಸ್ಸಿಗೆ ಹೊಂದುವ ಭಾಷೆಯಲ್ಲಿ ಪುನಶ್ಚೇತನಗೊಳಿಸಿದ್ದಾರೆ.
ಓಡುತ್ತಿರುವ ಧ್ವನಿಗಳ ತುರ್ತು, ಬದುಕುಳಿದವರ ಉಸಿರಾಟದ ಬಿಗು ಇವೆಲ್ಲವೂ ಸರಳಗನ್ನಡ ದಲ್ಲಿದೆ. ಅಲ್ಲಿನ ನೋವು ಸಂಕಟದ ಸಮಯದಲ್ಲಿ ಇಸ್ರೇಲಿಗಳ ವಿಪತ್ತು ನಿರ್ವಹಣೆ ಇವೆಲ್ಲವೂ ಮನನೀಯ. ಅವರ ಧೈರ್ಯ, ಗುಂಡಿನ ಮಳೆಯಲ್ಲೂ ‘ನಾನು ಹೋಗಲೇಬೇಕು, ಉಳಿದವರನ್ನು ರಕ್ಷಿಸಬೇಕೆನ್ನುವ’ ಗಟ್ಟಿಯಾದ ನಿರ್ಧಾರ, ಕತ್ತಲೆಯ ಮಧ್ಯದಲ್ಲಿ ಕಿರುಚುವ ಮಕ್ಕಳನ್ನು ಎತ್ತಿ ಕೊಂಡು ಓಡುವ ವೀರತ್ವ, ವೈರಾಗ್ಯದ ಕೂಪುಗಳಿಂದ ಹೊರಬಂದು ಇನ್ನೊಬ್ಬರನ್ನು ರಕ್ಷಿಸುವ ಮನುಷ್ಯತ್ವ.
ಇವು ಯುದ್ಧದ ಕಥೆಗಳಲ್ಲ, ಸಾಮಾನ್ಯರ ಅತ್ಯಸಾಮಾನ್ಯ ಕ್ಷಣಗಳ ವಿವರಗಳು.ಪ್ರತಿ ಕಥೆಯೂ ಭರವಸೆಯನ್ನೂ, ನಂಬಲೂ ಆಗದ ಕ್ರೌರ್ಯವನ್ನೂ ಏಕಕಾಲಕ್ಕೆ ತೋರಿಸುತ್ತದೆ. ಲೇಖಕರ ಉದ್ದೇಶ ತನಿಖಾ ವರದಿಯಲ್ಲ; ಈ ಪುಸ್ತಕವು ಸರಕಾರದ ವೈಫಲ್ಯ ಸಾರುವುದಲ್ಲ. ಆ ದಿನ ಅದೃಷ್ಟ ವಶಾತ್ ಬದುಕುಳಿದವರ ಕಂಠವಾಗಲು ಬಂದವರು.
ದೌರ್ಬಲ್ಯ ಮತ್ತು ಭಯದ ನಡುವೆ ಧೈರ್ಯ ಹೇಗೆ ಹುಟ್ಟುತ್ತದೆ, ಕ್ರೌರ್ಯದ ಎದುರು ಮನುಷ್ಯತ್ವ ಎಷ್ಟರ ಮಟ್ಟಿಗೆ ನಿಂತುಕೊಳ್ಳುತ್ತದೆ, ಮರಣದ ನೆರಳಲ್ಲಿ ಬದುಕು ಹೇಗೆ ತನ್ನ ಅಸ್ಥಿಪಂಜರ ಕಟ್ಟಿಕೊಳ್ಳುತ್ತದೆ ಎನ್ನುವುದನ್ನು ಸಾರತ್ತದೆ. ಇಲ್ಲಿನ ಜನಸಾಮಾನ್ಯರ ನೋವು, ಸಾವುಗಳು, ನಮ್ಮ ದೇಶದ ಕಾಶ್ಮೀರದಲ್ಲಿ ಪಂಡಿತ ಜನಾಂಗದವರು ಅನುಭವಿಸಿದ ಯಾತನೆಯನ್ನು ನೆನಪಿಗೆ ತರುತ್ತದೆ.
ಭಯೋತ್ಪಾದನೆ ಎನ್ನುವುದರ ವಿರುದ್ಧ ದೇಶ ಜಾಗ್ರತಗೊಳ್ಳದಿದ್ದರೆ ಆಗುವ ಪರಿಣಾಮಗಳನ್ನು ಗಮನಿಸಬಹುದು. ತಮ್ಮ ಬಂಧುಗಳು ಸಾಯುತ್ತಾರೆ ಎನ್ನುವುದು ತಿಳಿದರೂ ಬಿಡದೇ ಹೋರಾ ಡುವ ಛಲ, ಬದುಕುಳಿದವರನ್ನು ಬದುಕಿಸಲು ತಮ್ಮನ್ನೇ ತಾವು ಮುಂದೆ ಸಾಗುವ ಇಸ್ರೇಲಿಗಳ ಅರ್ಪಣಾಮನೋಭಾವ ಇಲ್ಲಿನ ವಿಶೇಷ. ಈ ಕಾರಣಕ್ಕೆ, ಬದುಕುಳಿದವರು ಕಂಡಂತೆ ಒಂದು ಅನುವಾದಿತ ಕೃತಿ ಎಂಬ ಮಿತಿಯನ್ನು ಮೀರಿ ಮನಸ್ಸಿನಲ್ಲಿ ನಿಂತುಕೊಳ್ಳುವ ಮಾನವೀಯ ಸಾಕ್ಷ್ಯವಾಗಿದೆ.