ನಾರಾಯಣ ಯಾಜಿ
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಅನುಸರಿಸಿದ ಮಾರ್ಗ ಬಹುಮುಖ್ಯವಾದುದು ಮತ್ತು ನಮ್ಮ ದೇಶದ ಭವಿಷ್ಯ ನಿರ್ಧರಿಸುವಲ್ಲಿ ನಿರ್ಣಾ ಯಕ ಎನಿಸಿದೆ. ಸುಭಾಷರ ಆತ್ಮಕಥೆಯ ಕನ್ನಡ ಅನುವಾದ ಇದೀಗ ಹೊರ ಬಂದಿದ್ದು, ಇದು ಕನ್ನಡಕ್ಕೆ ಒಂದು ಉತ್ತಮ ಕೊಡುಗೆ.
ಪ್ರೊ.ಕೆ.ಇ.ರಾಧಾಕೃಷ್ಣ ಅವರು ಅನುವಾದಿಸಿದ ನೇತಾಜಿ ಸುಭಾಸ್ಚಂದ್ರ ಭೋಸರ ಆತ್ಮಕಥೆ “ಓರ್ವ ಭಾರತೀಯ ಯಾತ್ರಿಕ : ಒಂದು ಅಪೂರ್ಣ ಆತ್ಮಕಥೆ" ಮಹತ್ವದ ಕೃತಿ. ಮಹಾತ್ಮಾ ಗಾಂಧೀಜಿ ಯವರ ಅಭಿಮಾನಿಯಾಗಿ, ಅವರ ನಿಷ್ಠಾವಂತ ಅನುಯಾಯಿಯಾಗಿ, ಅವರ ಕರೆಗೋಸ್ಕರ ತನ್ನ ತಂದೆ, ತಾಯಿ, ಕುಟುಂಬಿಕರ ಕನಸಿನ ಐಸಿಎಸ್ ಸೇವೆಗೆ ರಾಜಿನಾಮೆ ನೀಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು ನೇತಾಜಿ. ಗಾಂಧೀಜಿಯವರ ಕೆಲ ಹಿಂಬಾಲಕರ ಕೆಲ ನಡತೆಗಳಿಂದ ನೊಂದು ಗಾಂಧೀಜಿಯ ಮಾರ್ಗದಿಂದ ದೂರ ಸರಿದರು.
ತನ್ನ ರಾಜಕೀಯದ ಬದುಕಿನಲ್ಲಿ ಎಡಪಂಥೀಯ ಧೋರಣೆಗಳನ್ನು ನೇತಾಜಿ ಹೊಂದಿದ್ದರು. ಜತೆಯಲ್ಲೇ, ರಾಮಕೃಷ್ಣ ಪರಮಹಂಸರಿಂದ, ವಿವೇಕಾನಂದರಿಂದ ಪ್ರಭಾವಿತರಾಗಿದ್ದರು. ಬದುಕಿರುವಾಗಲೇ ದಂತಕಥೆಯಾಗಿದ್ದ ನೇತಾಜಿ ಈಗಲೂ ಸಹ ಅಷ್ಟೇ ಗೂಢವಾಗಿದ್ದಾರೆ. ಅವರ ಬದುಕಿನ ಅನೇಕ ಮಹತ್ವದ ಘಟ್ಟಗಳು ಇನ್ನೂ ಅಪರಿಚಿತವಾಗಿಯೇ ಇವೆ.
ಅವರ ಕುಟುಂಬ, ಮದುವೆ, ಮಕ್ಕಳು. ಬೆಳೆದ ಪರಿಸರ, ಕೊನೆಗೆ ಅವರ ಮರಣವೂ ಸಹ ಇಂದಿಗೂ ಚರ್ಚೆಯ ವಸ್ತುವಾಗಿದೆ. ನೇತಾಜಿ ಎಂದ ಕೂಡಲೇ ಇತಿಹಾಸದಲ್ಲಿ ಹೆಚ್ಚಿನ ಪ್ರಚಾರದಲ್ಲಿರುವುದು ಅವರು 1939ರಲ್ಲಿ ಕಾಂಗ್ರೇಸ್ಸಿನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ರಾಜೀನಾಮೆ ನೀಡಿದ ವಿಷಯ.
ಇದನ್ನೂ ಓದಿ: Narayana Yaaji Column: ಅಗೋಚರ ಪತಂಗದ ಅನ್ವೇಷಣೆಯ ಚಾರಣ
ನಂತರದಲ್ಲಿ ಅವರು ಭಾರತವನ್ನು ತೊರೆದು, ವಿದೇಶಗಳಲ್ಲಿ ನೆಲೆಸಿ, ಸಶಸ್ತ್ರ ಹೋರಾಟದ ಹಾದಿಯಲ್ಲಿ ತೊಡಗಿಕೊಂಡರು; ಅವರನ್ನು ಮತ್ತೆ ಕಾಣುವ ಯೋಗ ನಮ್ಮ ದೇಶವಾಸಿಗಳಿಗೆ ಸಿಗಲೇ ಇಲ್ಲ. ಅವರ ಕುರಿತಾದ ಅನೇಕ ಕುತೂಹಲಗಳಿಗೆ, ಸಂಶಯಗಳಿಗೆ ಕೃತಿಯನು ಓದಿದಾಗ ಉತ್ತರ ಸಿಗುತ್ತದೆ.
ಮಹಾತ್ಮಾ ಗಾಂಧೀಜಿಯ ಆತ್ಮಕಥೆಯಲ್ಲಿ “ಸತ್ಯದೊಂದಿಗಿನ ಅವರ ಮುಖಾಮುಖಿ" ಪದೇ ಪದೇ ಬರುತ್ತದೆ. ಆತ್ಮಕಥೆಯನ್ನು ಮೀರಿ ಮಹಾತ್ಮಾ ಬೆಳೆದು ನಿಲ್ಲುತ್ತಾರೆ. ಅದು ಅವರ ವ್ಯಕ್ತಿಪೂಜೆಗೂ ಕಾರಣವಾಗಿದೆ. ಆದರೆ ಸುಭಾಸರನ್ನು ಓದುವಾಗ ಈ ಅನುಭವ ಆಗುವುದಿಲ್ಲ. ಹೇಳಬೇಕಾದ ವಿಷಯವನ್ನು ತಣ್ಣಗೆ ನಿರೂಪಣೆ ಮಾಡುತ್ತಾ ಹೋಗುತ್ತಾರೆ.
ಅದರಲ್ಲಿಯೇ ತೀಕ್ಷ್ಣಾವಾದ ಸತ್ಯ ಎದ್ದು ಕಾಣುತ್ತದೆ. 1937ರಲ್ಲಿ ಆಸ್ಟ್ರಿಯಾದ ಬ್ಯಾಡ್ಗಸ್ಟೀನ್‌ನಲ್ಲಿ ಹದಗೆಟ್ಟ ಆರೋಗ್ಯದ ಶಮನಕ್ಕೆಂದು ಆರು ವಾರಗಳ ಕಾಲ ಉಳಿದಿದ್ದಾಗ ಈ ಆತ್ಮಕಥೆಯ ಭಾಗವನ್ನು ರಚಿಸಿದ್ದಾರೆ. ಅಪೂರ್ಣವಾಗಿದ್ದರೂ, ಅಸಾಧಾರಣ ಜೀವನದ ಈ ನಿರೂಪಣೆಯು ತಾತ್ವಿಕ ಆಳ, ಭಾವನಾತ್ಮಕ ಸ್ಪಷ್ಟತೆ ಮತ್ತು ಕ್ರಾಂತಿಕಾರಿ ಆಲೋಚನೆ ಈ ಕೃತಿಯಲ್ಲಿ ಕಾಣಬಹು ದಾಗಿದೆ. ಬಾಲಕನಾಗಿರುವಾಗಲೇ ಸುಭಾಸರಿಗೆ ಆಗಲೇ ತನ್ನ ಮುಂದಿನ ಬದುಕು ಹೇಗೆ ರೂಪಿಸಿಕೊಳ್ಳಬೇಕೆ ನ್ನುವ ಕುರಿತು ನಿದಿಷ್ಟವಾದ ಗುರಿಯಿತ್ತು!
ತಮ್ಮ ಸ್ವ-ಹಸ್ತಾಕ್ಷರದಲ್ಲಿ ಬರೆದ ವೈಯಕ್ತಿಕ ಟೆಸ್ಟಾಮೆಂಟಿನಲ್ಲಿ “ಒಂದು ತತ್ವ ಸಿದ್ಧಾಂತಕ್ಕಾಗಿ ಬದುಕಿ ಅದಕ್ಕಾಗಿಯೇ ಜೀವಾರ್ಪಣೆ ಮಾಡಿಕೊಳ್ಳುವ ಆತ್ಮತೃಪ್ತಿಯ ಭಾವ ನೀಡುವ ನೆಮ್ಮದಿಗಿಂತ ಬೇರೊಂಡು ಸುಖೀ ಭಾವ ಬೇಕೆ?" ಎನ್ನುವ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಳ್ಳುತ್ತಾರೆ.
ನೇತಾಜಿಯವರಿಗೆ “ದೇಶಕ್ಕಾಗಿ ವ್ಯಕ್ತಿ ಸಾಯಲೂ ಸಿದ್ಧರಾಗಬೇಕು, ತನ್ಮೂಲಕ ದೇಶ ಬದುಕುಳಿಯ ಬೇಕು" ಎನ್ನುವುದು ನಂಬಿಕೆಯಾಗಿತ್ತು. ವಿವೇಕಾನಂದರ ವಿಚಾರಗಳು ಮತ್ತು ಭಗವದ್ಗೀತೆಯ ಪ್ರಭಾವ ಅವರ ಮೇಲೆ ಆಗಿತ್ತು. ಮೊದಲ ಮೂರು ಅಧ್ಯಾಯ ಸುಭಾಶ್ಚಂದ್ರರ ಮನೆತನದ ವಂಶವೃಕ್ಷವನ್ನು ವಿವರಿಸುತ್ತದೆ. ಬ್ರಿಟಿಷೋತ್ತರ ಭಾರತದ ಆಗುಹೋಗುಗಳನ್ನು ನಿರ್ಧರಿಸುವು ದರಲ್ಲಿ ಬಂಗಾಲದ ಪಾತ್ರ ಬಹುದೊಡ್ಡದು.
ಭಾರತೀಯ ಸಂಸ್ಕೃತಿ ಹೇಗೆ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ ಆಧುನಿಕಶಿಕ್ಷಣ, ಆಡಳಿತ, ಇತಿಹಾಸ ಗಳನ್ನು ತೌಲನಿಕ ಅಧ್ಯಯನದಲ್ಲಿ ನೋಡುವದನ್ನು ಕಲಿತುಕೊಂಡವರಲ್ಲಿ ಬಂಗಾಲಿಗಳೇ ಮೊದಲಿಗರು. ಕಾಯಸ್ಥ ಕುಟುಂಬಕ್ಕೆ ಸೇರಿದ ಬೋಸರ ತಂದೆ ಜಾನಕಿನಾಥ ಬೋಸರು ಒರಿಸ್ಸಾದ ಕಟಕ್‌ದಲ್ಲಿ ಪ್ರಸಿದ್ಧ ವಕೀಲರಾಗಿ ಹೆಸರು ಗಳಿಸಿದ್ದರು.
ಜಾನಕಿನಾಥ ಮತ್ತು ಪ್ರಭಾಬತಿ ದೇವಿಯವರಿಗೆ ಒಂಭತ್ತನೆಯ ಮಗುವಾಗಿ ಜನಿಸಿದ ಸುಭಾಸರಿಗೆ ಬಾಲ್ಯ ಯಾವ ಸವಾಲುಗಳಿಲ್ಲದೇ ಕಳೆದು ಹೋದದ್ದನ್ನು ಕಾಣಬಹುದು. ಶಿಕ್ಷಣ ಹೇಗಿರ ಬೇಕೆನ್ನುವುದಕ್ಕೆ ಅವರು ಇಂಗ್ಲೀಷ ಪಬ್ಲಿಕ್ ಮಾದರಿಗಳ ಶಾಲೆಗಳಂತೆ ಭಾರತೀಯ ಶಾಲೆಗಳನ್ನು ಸ್ಥಾಪಿಸುವುದಲ್ಲ ಎನ್ನುತ್ತಾರೆ.
ನಮ್ಮ ಶಿಕ್ಷಣ ಪದ್ಧತಿ ಹೇಗಿರಬೇಕೆನ್ನುವುದನ್ನು ವಸ್ತುನಿಷ್ಠವಾಗಿ ವಿವರಿಸುವುದು ಹೀಗೆ. “ಪೂರ್ವ ಮತ್ತು ಪಶ್ಚಿಮಗಳ ಸಮನ್ವಯತೆ ಉಂಟಾಗಬೇಕಾದರೆ ಮತ್ತು ಸಾಂಸ್ಕೃತಿಕ ಹೊಂದಾಣಿಕೆ ಯಾಗಬೇಕಾದರೆ, ಅದಕ್ಕೆ ಬೇಕಾದ ಮನೋವೈಜ್ಞಾನಿಕ ಮಾರ್ಗ ಎಂದರೆ, ಭಾರತೀಯ ಮಕ್ಕಳಿಗೆ ಎಳವೆಯಲ್ಲಿ ಇಂಗ್ಲಿಷ್ ಮಾದರಿಯ ಶಿಕ್ಷಣವನ್ನು ಹೇರದೇ ಇರುವುದು ಎನ್ನುವ ಅವರ ವಿಚಾರ ಧಾರೆ ಇಂದಿಗೂ ಪ್ರಸ್ತುತ.
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬ್ರಿಟಿಷ್ ಉಪನ್ಯಾಸಕರೋರ್ವರು ನಡೆಸಿದ ಭೇದಭಾವವದ ವಿರುದ್ಧದ ಪ್ರತಿಭಟನೆ ನಡೆಯದಾಗ ಸುಭಾಸರದು ಯಾವ ತಪ್ಪೂ ಇಲ್ಲದಿದ್ದರೂ ಅವರನ್ನು ಅಮಾನತಿನ ಶಿಕ್ಷೆಗೆ ಗುರಿಪಡಿಸಲಾಯಿತು. ಆದರೆ ಈ ಸಂದರ್ಭದಲ್ಲಿ ಸುಭಾಸರ ಅಣ್ಣ ಮತ್ತು ತಂದೆ ತೋರಿದ ಸಂಯಮ ಬಲು ಮುಖ್ಯ. ನಂತರದಲ್ಲಿ ಸ್ಕಾಟಿಷ್ ಕಾಲೇಜು ಸೇರಿ ಮತ್ತೆ ತನ್ನ ಪ್ರತಿಭೆಯನ್ನು ತೋರಿದ್ದು ಕಡಿಮೆಯ ಸಾಧನೆಯಲ್ಲ. ಈ ಹುಡುಗನಲ್ಲಿರುವ ಪ್ರತಿಭೆಗೆ ಐಸಿಎಸ್ ಸರಿಯಾದ ಮಾನದಂಡ ಎಂದು ಕುಟುಂಬಿಕರ ಅವರನ್ನು ಕೇಂಬ್ರಿಡ್ಜಿಗೆ ಐಸಿಎಸ್ ಕಲಿಸಲು ಕಳಿಸತ್ತದೆ.
ಅಲ್ಲಿಯೂ ಪ್ರಾರಂಭದ ಕೆಲ ತೊಂದರೆಗಳು ಬಂದರೂ ಅದನ್ನು ಎದುರಿಸಿ ನಾಲ್ಕನೇ ರ‍್ಯಾಂಕಿನಲ್ಲಿ ಪಾಸಾದರೂ, ಬ್ರಿಟಿಷ್ ಸರಕಾರದ ಉದ್ಯೋಗಕ್ಕಾಗಿ ಅವರು ಬರೆದುಕೊಡಬೇಕಾಗಿದ್ದ ಒಡಂಬಡಿಕೆ ಪತ್ರ ಅವರ ಕಣ್ಣನ್ನು ತೆರೆಸಿತು.
“ಪರದೇಶಿ ಗುಲಾಮ ಆಡಳಿತ ವ್ಯವಸ್ಥೆಯ ಭಾಗವಾಗಲೂ ಬರೆದುಕೊಡಬೇಕಾದ ಪತ್ರಕ್ಕೆ ಸಹಿ ಹಾಕುವುದೂ ಒಂದೇ, ಆತ್ಮವನ್ನು ಸಾಯಿಸುವುದೂ ಒಂದೇ" ಎನ್ನುವ ಪ್ರಜ್ಞೆ ಜಾಗ್ರತವಾಯಿತು.
ಇಲ್ಲಿ ಅನುವಾದಕರು ಪ್ರತೀ ಪದಗಳ ಆಯ್ಕೆಯನ್ನೂ ಅತ್ಯಂತ ಕರಾರುವಕ್ಕಾಗಿ, ಭಾವ ಪೂರ್ಣ ವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪೇಲವವಾಗಬಹುದಾದ ಕಡೆ ಸ್ಪೂರ್ತಿಯುತ ಶಬ್ಧಗಳನ್ನು ಮತ್ತು ವಾಕ್ಯವನ್ನು ಉಪಯೋಗಿಸಿದ್ದಾರೆ. ಐಸಿಎಸ್ ಪರೀಕ್ಷೆಯನ್ನು ಬಿಟ್ಟು ದೇಶಸೇವೆಗೆ ಸೇರಿ ಎಂದು 1916ರಲ್ಲಿ ಲಂಡನ್ನಿನಲ್ಲಿ ಲೋಕಮಾನ್ಯ ತಿಲಕರು ಕರೆಕೊಟ್ಟಿದ್ದರು.
ಅವರ ಕರೆಗೆ ಪ್ರಭಾವಿತರಾಗಿ ಅನೇಕರು ತಾವು ರಾಜಿನಾಮೆ ಕೊಡುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಹೆಚ್ಚಿನವರೆಲ್ಲರೂ ಸರಕಾರಿ ಜೀತಕ್ಕೆ ತಮ್ಮನ್ನು ಅರ್ಪಿಸಿಕೊಂಡು ಆರಾಮದಿಂದ ಇದ್ದರು. ತನ್ನನ್ನು ಬಹುವಾಗಿ ಅರ್ಥಮಾಡಿಕೊಂಡಿದ್ದ ಅಣ್ಣ ಶರಶ್ಚಂದ್ರ ಬೋಸರಿಗೆ ಬರೆದ ಪತ್ರದಲ್ಲಿ ಅವೆಲ್ಲವನ್ನೂ ತೋಡಿಕೊಂಡಿದ್ದಾರೆ.
ಸುಭಾಸರ ತಂದೆ ಅವರ ಯೋಜನೆಯನ್ನು ತಿರಸ್ಕರಿಸಿ ಪತ್ರ ಬರೆದಿದ್ದು ಅವರ ಕೈ ಸೇರಿರುತ್ತದೆ. ಆದರೂ ತನ್ನ ನಿರ್ಧಾರದಿಂದ ಹಿಂದೆಸರಿಯುವುದಿಲ್ಲ. ಅನುವಾದವೆಂದರೆ ಕೇವಲ ಶಬ್ದಗಳಿಗೆ ಇರುವ ಅರ್ಥವಲ್ಲ. ಉಪಯೋಗಿಸುವ ಭಾಷೆ, ಸಮಯ ಸಂದರ್ಭಾನುಸಾರ ಬಳಸಿಕೊಳ್ಳುವ ಶೈಲಿ ಎಲ್ಲದರಲ್ಲಿಯೂ ಗಮನ ಕೊಡಬೇಕಾಗುತ್ತದೆ. ರಾಧಾಕೃಷ್ಣರು ಇದನ್ನು ಜತನದಿಂದಲೇ ನಿಭಾಯಿಸಿದ್ದಾರೆ. ಸುಭಾಷ್ ಚಂದ್ರ ಬೋಸರ ಬದುಕನ್ನು ತೆರೆದಿಡುವ ಈ ಕೃತಿ ಕನ್ನಡಕ್ಕೆ ಒಂದು ಉತ್ತಮ ಕೊಡುಗೆ.