ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Yaaji Column: ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಸ್ ಬಾಬು ಎನ್ನುವ ಸುದ್ಧಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಈ ಇಬ್ಬರ ನಡುವೆ ಸಂಬಂಧಗಳು ಹೇಗಿತ್ತು ಎನ್ನುವುದಕ್ಕೆ ಈ ಎರಡೂ ಕೃತಿಗಳು ಸಹಾಯಕಾರಿ. ಇದು ಕೇವಲ ಅನುವಾದ ಮಾತ್ರವಲ್ಲ

ನಾರಾಯಣ ಯಾಜಿ

ಸುಭಾಸ್ ಚಂದ್ರ ಬೋಸ್ ಅವರ ಆತ ಕಥೆ ಮತ್ತು ಅನಾಮಿಕ ಯೋಧೆಯೊಬ್ಬಳು ಬರೆದ ದಿನಚರಿ, ಇವೆರಡನ್ನು ಕನ ಡಕೆ ಅನುವಾದ ಮಾಡಿದವರು ಪ್ರೊ. ಕೆ.ಇ.ರಾಧಾಕೃಷ್ಣ.

ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರು ಇಂಗ್ಲೀಷಿನಲ್ಲಿ ಬರೆದ ಆತ್ಮಕಥೆಯನ್ನು “ಭಾರತೀಯ ಹೋರಾಟ" ಎನ್ನುವ ಹೆಸರಿನಲ್ಲಿ ಪ್ರೊ.ಕೆ.ಇ.ರಾಧಾಕೃಷ್ಣ ಕನ್ನಡಕ್ಕೆ ತಂದಿ ದ್ದಾರೆ. ಹಾಗೇ ಅಜಾದ್ ಹಿಂದ್ ಪೌಜ್‌ನ ಅನಾಮಧೇಯ ಯೋಧಳೊಬ್ಬಳು ಬರೆದ “ಜೈ ಹಿಂದ್ ದಿನಚರಿ" ಈ ಎರಡೂ ಕೃತಿಗಳು ಇತಿಹಾಸಪುಟದ ಅನೇಕ ಸಂಗತಿಗಳನ್ನು ತೆರೆದಿಡು ತ್ತದೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಸ್ ಬಾಬು ಎನ್ನುವ ಸುದ್ಧಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಈ ಇಬ್ಬರ ನಡುವೆ ಸಂಬಂಧಗಳು ಹೇಗಿತ್ತು ಎನ್ನುವುದಕ್ಕೆ ಈ ಎರಡೂ ಕೃತಿಗಳು ಸಹಾಯ ಕಾರಿ. ಇದು ಕೇವಲ ಅನುವಾದ ಮಾತ್ರವಲ್ಲ. ನೇತಾಜಿಯವರ, ಅವರ ಅಣ್ಣ ಶರತ್ ಬಾಬು, ಎಮಿಲಿ ಅವರೆಲ್ಲರ ಅಪರೂಪದ ಪತ್ರಗಳು ಇಲ್ಲಿವೆ.

ನೇತಾಜಿ ಎಂದರೆ ಭಾರತೀಯರಿಗೆಲ್ಲ ಅದೇನೋ ಒಂದು ಆಕರ್ಷಣೆ. ಕಲಕತ್ತಾದ ಸಿರಿವಂತ ಕುಟುಂಬದ ಇವರು, ಬ್ರಿಟನ್ನಿನಲ್ಲಿ ಐಸಿಎಸ್ ಪಾಸಾಗಿ ಅತ್ಯನ್ನತ ಸರಕಾರಿ ಹುದ್ದೆಗೆ ಏರಬಹುದಾಗಿರುವುದನ್ನು ಬಿಟ್ಟು ಬ್ರಿಟಿಷರ ವಿರುದ್ಧ ಹೋರಾಡಲು ಭಾರತಕ್ಕೆ ಬರುತ್ತಾರೆ. ಅವರ ಹೋರಾಟದ ಚಿತ್ರಣ ಇಲ್ಲಿದೆ.

ಜರ್ಮನಿ, ಇಟಲಿ, ಜಪಾನ್ ಸಿಂಗಾಪುರ ನಂತಾರ ರಂಗೂನ್ ಹೀಗೆ ಹಲವು ದೇಶಗಳಲ್ಲಿ ತಿರುಗಿದ ಅವರ ಸಾಹಸೀ ನಡೆಯ ಕುರಿತು ಗಾಥೆಗಳನ್ನು ಕೇಳಿದ್ದೇವೆ. ಅವರ ಕೊನೆಯೂ ಸಹ ಒಂದು ರಹಸ್ಯವಾಗಿ ಉಳಿದಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನೇತಾಜಿ ಯಾಕೆ ಕಾಂಗ್ರೇಸಿ ನಿಂದ ಹೊರನಡೆದರು, ತಮ್ಮದೇ ಆದ ಫಾರ್ವರ್ಡ್ ಬ್ಲಾಕ್‌ ಪಕ್ಷ ಕಟ್ಟಿದರು ಎನ್ನುವ ವಿವರಗಳು ಇಲ್ಲಿವೆ.

ಇದನ್ನೂ ಓದಿ: Narayana Yaaji Column: ಅಗೋಚರ ಪತಂಗದ ಅನ್ವೇಷಣೆಯ ಚಾರಣ

ನೇತಾಜಿಯವರ ಆತ್ಮಕಥೆ “ದ ಇಂಡಿಯನ್ ಸ್ಟ್ರಗಲ್’ ಅನುವಾದ ಇದು. 1920ರಿಂದ 1934ರವರೆಗೆ ಮೊದಲ ಭಾಗ ಹಾಗೂ 1934ರಿಂದ 1942 ಎರಡೂ ಭಾಗಗಳಲ್ಲಿದೆ. ಇದರಲ್ಲಿ ಸ್ವತಃ ನೇತಾಜಿಯವರೇ ತನ್ನ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಹೇಳಿ ಕೊಂಡಿದ್ದಾರೆ.

ಇದರಲ್ಲಿ ಎಲ್ಲಿಯೂ ನೇತಾಜಿಯವರ ಜನನ, ತಂದೆ ತಾಯಿಗಳ ಉಲ್ಲೇಖವಿಲ್ಲ, ತನ್ನ ಬಾಲ್ಯ ಮತ್ತು ತನ್ನನ್ನು ತಾನು ಎಲ್ಲಕ್ಕಿಂತ ಮಿಗಿಲಾಗಿ ತೋರಿಸಿಕೊಳ್ಳಬೇಕೆನ್ನುವ ಹಪಹಪಿಕೆಯಿಲ್ಲ. ಗಾಂಧೀಜಿಯನ್ನು ದೂಷಣೆ ಮಾಡಿದ ಯಾವುದೇ ಒಂದು ವಾಕ್ಯವೂ ಇಲ್ಲ.

ಗಾಂದೀಜಿಯವರನ್ನು ಉಲ್ಲೇಖಿಸುವಾಗ “ಮಹಾತ್ಮಾ" ಎಂದೇ ಸಂಭೋಧಿಸುತ್ತಾರೆ. ವಿಭಿನ್ನ ಗುಂಪು ಮತ್ತು ಭಿನ್ನ ಭಿನ್ನ ನಡೆಯುಳ್ಳ ಕಾಂಗ್ರೆಸಿನಲ್ಲಿ ಎಲ್ಲರನ್ನು ಸಮನ್ವತೆ ಯಿಂದ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವವರು ಮಹಾತ್ಮಾ ಗಾಂಧೀಜಿ ಮಾತ್ರ ಎನನ್ನುತ್ತಾರೆ. ಗಾಂಧೀಜಿಯವರ ಜೊತೆ ತನಗೆ ಸಾಗಲಾಗಿರುವುದಕ್ಕೆ ಅವರ ಮನಸ್ಸಿನಲ್ಲಿ ವಿಷಾದ ಮೂಡಿರುವುದನ್ನು ಕಾಣಬಹುದು.

“ಜೈ ಹಿಂದ್ ದಿನಚರಿ", ಅನಾಮಿಕರಾಗಿ ಉಳಿಯುವ ಅಜಾದ ಸೈನಿಕರ ಅಮೂಲ್ಯ ಸಾಧನೆ ಯನ್ನು ತಿಳಿಸುತ್ತದೆ. ಕೇವಲ ನೂರಾ ಮೂರು ದಿನಗಳಲ್ಲಿ ಲೇಖಕಿ ತನ್ನ ಅನುಭವವನ್ನು ದಾಖಲಿ ಸಿದ ಘಟನಾವಳಿಗಳು ಇಲ್ಲಿವೆ. ವಿವರಗಳು ಅಷ್ಟೇನೂ ಇಲ್ಲ.

ಪ್ರೊ.ರಾಧಾಕೃಷ್ಣ ಅವರಿಗೆ ಅವರ ಮಿತ್ರ, ಹಿರಿಯ ನ್ಯಾಯವಾದಿ ಶ್ರೀ ನಿರೂಪ್ ಅವರ ಮೂಲಕ ಸಿಕ್ಕಿದ ಅಪ್ರಕಟಿತ ಡೈರಿ ಈ “ಜೈ ಹಿಂದ್ ದಿನಚರಿ". ಯಾವುದೇ ಒಂದು ಕೃತಿಯ ಯಶಸ್ಸಿಗೆ ಅದರ ಕೃತಿಕಾರನ ಹೆಸರು ಮುಖ್ಯವಲ್ಲ. ಅದನ್ನು ನಿರೂಪಿಸುವಲ್ಲಿ ಆತ ತನ್ನನ್ನು ತಾನು ಹೇಗೆ ಅರ್ಪಣೆ ಮಾಡಿಕೊಂಡಿದ್ದಾನೆ ಎನ್ನುವುದರಲ್ಲಿ ಆ ಕೃತಿಯ ಯಶಸ್ಸು ಇದೆ. ಈ ದಿನಚರಿಯ ಲಿಪಿಕಾರ ಹೆಸರಿಲ್ಲದ ಓರ್ವ ಧೀರ ಮಹಿಳೆ. ತನ್ನನ್ನು ತಾನು ಶ್ರೀಮತಿ ಎಂ. ಎಂದು ಕರೆದುಕೊಂಡಿದ್ದಾಳೆ.

ಮಹಿಳೆಯ ಸಾಹಸಗಳು

ಆಕೆ ಅಜಾದ್ ಹಿಂದ್ ಪೌಜ್‌ನ ಝಾಂನ್ಸಿ ಲಕ್ಷ್ಮೀಬಾಯಿ ವಿಭಾಗದಲ್ಲಿ ಇದ್ದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ಮಹಿಳೆ. ಸುಭಾಸಚಂದ್ರ ಬೋಸರ ಕುರಿತು ಆಕೆಯ ನಿಷ್ಟೆ ಮತ್ತು ಅವರು ತಂದುಕೊಡ ಬಹುದಾದಂತಹ ಮಾತ್ರಭೂಮಿಯ ಸ್ವಾತಂತ್ರ್ಯದ ವಿಷಯದಲ್ಲಿ ಆಕೆಗೆ ಮತ್ತು ಆಕೆಯ ಪತಿಗೆ ಅಚಲವಾದ ನಂಬಿಕೆಯಿದೆ. ಈಕೆ ಮೂಲತಃ ತಮಿಳುನಾಡಿನವಳು ಎನ್ನುವದಷ್ಟೇ ಗೊತ್ತಾಗುತ್ತದೆ. ಅಜಾದ್ ಹಿಂದ್ ಪೌಜ್‌ನ ಸೈನಿಕರು ತಮ್ಮ ಗುರುತನ್ನು ಬಿಟ್ಟುಕೊಡುವುದಿಲ್ಲ.

ಆಕೆಯ ಪತಿ ಸಹ ಅಜಾದ್ ಹಿಂದ್ ಪೌಜ್‌ನ ಸೈನಿಕ. ಅವರು ಎಲ್ಲಿಯವರು ಎನ್ನುವ ವಿವರಣೆ ಇಲ್ಲ. ಅವರಿಗೆ ಓರ್ವ ಮಗನಿದ್ದಾನೆ. ತಮ್ಮ ನಂತರ ಆತನ ಗತಿ ಏನು ಎನ್ನುವುದ ಕಳವಳ ಆಗಾಗ ಕಾಣಿಸಿದರೂ ಅದು ಈ ದಂಪತಿಗಳ ಹೋರಾಟದ ಕೆಚ್ಚನ್ನು ಕಡಿಮೆ ಮಾಡುವುದಿಲ್ಲ. ಈ ಕೃತಿಯುದ್ದಕ್ಕೂ ಕಂಡುಬರುವುದು ಅಜಾದ್ ಹಿಂದ್ ಫೌಜ್‌ನ ಸ್ವಾತಂತ್ರ್ಯದ ಹಸಿವು. ಆ ಕಾರಣಕ್ಕಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಮರೆತು ಇವರೆಲ್ಲರೂ ಮುನ್ನೆಡೆಯುತ್ತಿದ್ದಾರೆ.

“ದೇಶಕ್ಕಾಗಿ ಎಲ್ಲ, ಸ್ವಂತಕ್ಕೆ ಸ್ವಲ್ಪ" ಎನ್ನುವ ಘೋಷವಾಕ್ಯ ಇವರ ನಿರ್ವಚನವಾಗಿದೆ. ಹಾಗಾಗಿ ಇಲ್ಲಿ ಬರುವ ಹೆಸರುಗಳಾದ ಲೇಖಕಿ ಶ್ರೀಮತಿ ಎಂ.. ಅವರ ಪತಿ ಶ್ರೀ. ಪಿ ಟಿ, ಎಂ, ಎನ್, ಕೆ, ಆರ್, ಕರ್ನಲ್ ಜಿ, ಕುಮಾರಿ ಸಿ, ಎಂ., ಎಸ್., ಡಿ., ಎಲ್., ಹೀಗೆ ಹಲವಾರು ಹೆಸರು ಗಳಿವೆ. ಅವುಗಳ ವಿವರಗಳನ್ನು ಪ್ರೋ. ರಾಧಾಕೃಷ್ಣ ಅವರು ಅನುಬಂಧದಲ್ಲಿ ನೀಡಿದ್ದಾರೆ.

ಗಾಂಧೀಜಿಯವರಿಗೆ ಗೌರವ

ಜೂನ್ ೧೯, ೧೯೪೩ರಂದು ಸುಭಾಶ್ಚಂದ್ರ ಭೋಸರು ಸ್ಯುನ್ಯಾನ್‌ಗೆ ಬಂದು ನೇರವಾಗಿ ಅಜಾದ್ ಹಿಂದ್ ಫೌಜ್‌ನ ನಾಯಕತ್ವವನ್ನು ಸ್ವೀಕರಿಸುವ ವೇದಿಕೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಒಂದು ದೊಡ್ಡ ಚಿತ್ರವನ್ನು ವೇದಿಕೆಯಲ್ಲಿ ಪ್ರಧಾನವಾಗಿ ಹಾಕಲಾ ಗಿತ್ತು. ಇನ್ನೊಂದು ಭಾರತಮಾತೆಯ ಆಕೃತಿ. ಗಾಂಧೀಜಿಯ ಹೋರಾಟವನ್ನು ಎಲ್ಲಿಯೂ ಸುಭಾಸರು ಅಗೌರವದಿಂದ ನೋಡುವುದಿಲ್ಲ.

ಗಾಂಧೀಜಿಯವರ “ಭಾರತ ಬಿಟ್ಟು ತೊಲಗಿ’ ಚಳುವಳಿ ಸ್ವಾತಂತ್ರ್ಯ ಹೋರಾಟದಲ್ಲಿಯೇ ಮಹತ್ವದ ಪಾತ್ರ ವಹಿಸುತ್ತದೆ. ಒಂದರ್ಥದಲ್ಲಿ ಇದು ಸುಭಾಸರು ತನ್ನ ಪೌಜಿಗೆ ಕೊಟ್ಟ “ದಿಲ್ಲಿ ಚಲೋ" ಘೋಷಣೆಗೆ ಪ್ರತಿಯಾಗಿ ಬಂದಿದ್ದು. ಎರಡನೆಯ ಮಹಾಯುದ್ಧದಲ್ಲಿ ಆಂಗ್ಲರು ಭಾರತವನ್ನು ಕೇಳದೇ ಯುದ್ಧದಲ್ಲಿ ತೊಡಗಿಸಿಕೊಂಡಿದ್ದು ಅವರಿಗೆ ಸಹ್ಯವಾಗಿರ ಲಿಲ್ಲ.

ಆಗ ಅವರು“ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಕರೆ ಕೊಟ್ಟರು. ಆಂಗ್ಲರು ಸುಳ್ಳು ಸುದ್ಧಿ ಯನ್ನು ಹರಡುವಲ್ಲಿ ನಿಸ್ಸೀಮರು. ಕುತಂತ್ರ ಮಾಡುವುದರಲ್ಲಿ ಎತ್ತಿದವರು. ಗಾಂಧಿ ಮಾರ್ಗ ಮತ್ತು ಸುಭಾಸರ ಮಾರ್ಗ ಇಲ್ಲಿ ಕವಲೊಡೆಯುವುದಕ್ಕೆ ಕಾರಣ ಇಲ್ಲಿದೆ.

ಯಶಸ್ಸಿನ ಮಾರ್ಗದಲ್ಲಿದ್ದ ಜಪಾನಿ ಪಡೆ ಸೋತಾಗ ಅನಿವಾರ್ಯವಾಗಿ ಅಜಾದ್ ಹಿಂದ್ ಸಹ ಸೋಲನ್ನು ಕಾಣಬೇಕಾಗುತ್ತದೆ. ಸ್ವತಃ ನೇತಾಜಿಯವರೇ ತಮ್ಮ ಪಡೆ ಸೋಲಲು ಕಾರಣವನ್ನು ವಿವರಿಸುವಾಗ ವಿಧಿ ಅವರ ಹಾದಿಗೆ ಅಡ್ಡ ಬಂದಿರುವುದನ್ನು ಕಾಣುತ್ತೇವೆ. ಆದರೂ ಅಜಾದ್ ಹಿಂದ್ ಬ್ಯಾಂಕಿನಲ್ಲಿ ಠೇವಣಿ ಇಟ್ಟವರಿಗೆಲ್ಲ ವಾಪಾಸು ಕೊಟ್ಟಿದೆ.

ಕೊನೆಯಲ್ಲಿ ನೇತಾಜಿ ಅವರ ಅಪಘಾತದ ವಿಷಯವನ್ನು ಹೇಳುವಾಗ “ಅವರು ಮುನ್ನಡೆ ದರು! ಎಂತಹ ಮಹಾನ್ ವ್ಯಕ್ತಿ ಇವರು!" ಎನ್ನುವ ವೀರ ವರ್ಣನೆಗಳು ಯಾವ ಮಹಾನ್ ಸಾಹಿತ್ಯವನ್ನು ಮೀರಬಲ್ಲವು.

“ನನ್ನ ದಿನಚರಿಯೇ! ನಿನ್ನಲ್ಲಿ ನಾನು ಮನ ಬಿಚ್ಚಿ ಮಾತನಾಡುತ್ತೇನೆ. ನಿನ್ನಲ್ಲಿ ನಾನು ಹೃದಯ ಬಿಚ್ಚಿಡುತ್ತೇನೆ. ನಾನೀಗ ಝರ್ಝರಿತ ಮಹಿಳೆ!" ಎನ್ನುತ್ತಲೇ ಡೈರಿ ಕೊನೆಯಾಗು ತ್ತದೆ. ಆದರೆ ದೇಶಪ್ರೇಮವಲ್ಲ. ಮುಗಿಸುವ ಮುನ್ನ ಆಕೆ ಹೇಳುವ “ಜೈ ಹಿಂದ್,. ಜೈ ಹಿಂದ್ ಜೈ" ನಮ್ಮನ್ನು ಕಾಡುತ್ತದೆ. ಇವೆರಡೂ ಅನುವಾದಿತ ಪುಸ್ತಕಗಳು ಕನ್ನಡದ ಓದುಗರಿಗೆ ಇತಿಹಾಸದಲ್ಲಿ ಅಡಗಿದ ಹೊಸ ವಿಚಾರಗಳನ್ನು ನೀಡುತ್ತವೆ.