ಸಂತೋಷಕುಮಾರ ಮೆಹೆಂದಳೆ
ಮತ್ತೊಂದು ಸ್ಲೀಪರ್ ಬಸ್ ಬೆಂಕಿಗೆ ಆಹುತಿಯಾಗಿ ನಾಲ್ಕಾರು ಜನರನ್ನು ಬಲಿ ಪಡೆಯಿತು. ಕಳೆದ ಹತ್ತು ವರ್ಷಗಳ ಅಂಕಿಸಂಕಿ ನೋಡಿದರೆ, ರಾತ್ರಿವೇಳೆ ಚಲಿಸುವ ಸ್ಲೀಪರ್ ಬಸ್‌ಗಳು ಅಲ್ಲಲ್ಲಿ ಬೆಂಕಿಗೆ ಆಹುತಿಯಾಗಿ, ಹಲವು ಪ್ರಯಾಣಕರ ಬಲಿ ಪಡೆದಿವೆ. ಪದೇ ಪದೇ ಇಂತಹ ಅನಾಹುತ ಆಗುವುದಕ್ಕೆ ಕಾರಣವೇನು? ಬಸ್‌ಗಳಲ್ಲಿ ಸಾಗಿಸುವ ಟನ್‌ಗಟ್ಟಲೆ ಅನಧಿಕೃತ ಲಗೇಜ್ ಮತ್ತು ಕಾನೂನು ನಿಗದಿ ಪಡಿಸಿರುವ ಸುರಕ್ಷಾ ಕ್ರಮಗಳನ್ನು ಗಾಳಿಗೆ ತೂರಿದ್ದೇ ಇಂತಹ ಅನಾಹುತಕ್ಕೆ ಮುಖ್ಯ ಕಾರಣವೆ?
ಪ್ರತಿ ಬಸ್ಸಿನ ಟಾಪ್ ಮೇಲೆ ನಾಲ್ಕು ಅಡಿ ಜಾಗ, ಜನ ಕುಳಿತುಕೊಳ್ಳುವ ಆಸನಗಳ ಕೆಳಗೆ ಮಾಡಿರುವ ಅರೆಗಳು ಆರು ಅಡಿ ಜಾಗ; ಅದರ ಅಗಲ ಉದ್ದ ಹೆಚ್ಚು ಕಡಿಮೆ ಬಸ್ಸುಗಳ ಶೇ. ಮುಕ್ಕಾಲು ಭಾಗ. ಇಷ್ಟೂ ಜಾಗದಲ್ಲಿ ಪೆಂಟ್ ಬಾಕ್ಸುಗಳು, ವೈರ್ ಬಂಡಲ್ಲು, ಬಟ್ಟೆ, ಮೆಟೀರಿಯಲ್ಸ್, ಬೇಕರಿ ಬಾಕ್ಸುಗಳು, ಸರಕು ಬಾಕ್ಸ್‌ಗಳ ಮಡಿಚಿದ ಕಟ್ಟು, ವಿದ್ಯುತ್ ಕೇಸಿಂಗ್ ಕ್ಯಾಬಿನ್ ಬಂಡಲ್ಲು - ಏನಿಲ್ಲವೆಂದರೂ ನೂರಿನ್ನೂರು, ಕಟ್ಟಡ ನಿರ್ಮಾಣ ಸಾಮಗ್ರಿಗಳು ಏನುಂಟು ಏನಿಲ್ಲ, ಜಗತ್ತಿನ ಎಲ್ಲ ವಸ್ತುಗಳೂ ಈ ಜಾಗದಲ್ಲಿ ಒಪ್ಪವಾಗಿ ಇರುತ್ತವೆ; ಜತೆಗೆ ತರಹೇವಾರಿ ಲಗ್ಗೆಜ್ ಹೇರಿಕೊಂಡು ಹೊರಡುವ ಬಸ್ಸಿನ ಕೆಳಭಾಗದಲ್ಲಿ ಇಂಜಿನ್ ಶಾಫ್ಟ್ʼಗಳು, ಕೇಬಲ್ ಟ್ರೆಗಳು, ಇನ್ನಿತರ ವಾಹನ ಸಂಬಂಧಿ ಸಂಪರ್ಕ ವ್ಯವಸ್ಥೆ, ಆಯಿಲ್ ಲೈನ್‌ಗಳು ಹೀಗೆ ದಹನಾನುಕೂಲಿ ಸಕಲ ವ್ಯವಸ್ಥೆ ಅತ್ತಿಂದಿತ್ತ, ಹಾಯ್ದು ಹೋಗಿರುತ್ತದೆ.
ಇಂಥ, ಭಾರೀ ಲೋಡು ತುಂಬಿಕೊಂಡು ಹೊರಡುವ ಬಸ್ಸಿನ ಇಂಜಿನ್ ಹಿಂಭಾಗದಲ್ಲಿದ್ದರೆ, ಚಾಲಕ ಮುಂಭಾಗದಲ್ಲಿ. ಲೈಟಿಂಗ್ ಪ್ಯಾನಲ್ಲು, ಬ್ಯಾಟರಿ ಸಂಪರ್ಕ, ಗೇರ್ ಬಾಕ್ಸು, ಅದರ ಆಯಿಲ್ ಟ್ಯಾಂಕು, ಇಂಜಿನಿ ಆಯಿಲ್ ಜೊತೆಗೆ ಈ ಎಲ್ಲ ನಿಯಂತ್ರಣಗಳ ಸಹಿತ ಬಸ್ಸಿನ ಎರ್ ಕಂಡಿಶನ್ ಪೂರೈಕೆ ಲೈನ್ ಮತ್ತು ಸಂಪರ್ಕ ಜೊತೆಗೆ, ಅವುಗಳನ್ನು ನಿಯಂತ್ರಿಸುವ ನಾಬ್‌ಗಳು, ಮೇಲ್ಗಡೆ ಪ್ರತಿ ಆಸನಕ್ಕೂ ಲೈಟ್ ವ್ಯವಸ್ಥೆಗಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆ, ಮೊಬೈಲ್ ಚಾರ್ಜರ್ ಪಾಯಿಂಟ್, ಅದಕ್ಕಾಗಿ ಕೇಬಲ್ ಕೇಸಿಂಗ್ ಕ್ಯಾಬಿನ್ನು, ಹೀಗೆ ಬರೆಯುತ್ತಾ ಹೋದರೆ ಪ್ರಯಾಣಿಕ ಕುಳಿತು ಅಥವಾ ಮಲಗುವ ಸೀಟಿನ್ ಕೆಳಗೂ ನಾನಾ ರೀತಿಯ ದಹನಾನುಕೂಲಿ ವಸ್ತುಗಳು!
ಅಕಸ್ಮಾತ್ ಕಡ್ಡಿ ಗೀರಿದರೆ ಮೂವತ್ತೇ ಸೆಕೆಂಡ್‌ನಲ್ಲಿ ದಾವಾನಲವಾಗಲು ಏನು ಬೇಕೋ ಅದೆಲ್ಲ ಇಲ್ಲಿ ಬೆರಳಂಚಿಗೆ ಲಭ್ಯ. ಜೀವ ಮಾತ್ರ ದಕ್ಕುವುದಿಲ್ಲ. ಇದು ಸಣ್ಣ ಸರಳ ವಿವರಣೆ; ಮೊನ್ನೆ ಚಿತ್ರದುರ್ಗದ ಸನಿಹ ಮತ್ತು ಕಳೆದ ಹತ್ತು ವರ್ಷದಲ್ಲಿ ಹೀಗೆ ಉರಿದು ಬಲಿಯಾದ ಸುಮಾರು ನೂರಾರು ಹೆಚ್ಚು ಜೀವ ಪಡೆದ ಬಸ್ಸುಗಳ ಮಾಹಿತಿ.
ಇದನ್ನೂ ಓದಿ: Santhosh Kumar Mehandale Column: ಸಾಹಿತ್ಯವನ್ನೇ ಧೇನಿಸಿಕೊಂಡು ಬಂದ ಕವಿ
ಆದರೂ ಯಾವುದೇ ಅಧಿಕಾರಿ, ಜನನಾಯಕ ‘ನಿಮ್ಮ ಬಸ್ಸಿನಲ್ಲಿ ಜನರ ಹೊರತಾಗಿ ಇದೆಲ್ಲ ವಸ್ತು ಸಾಗಾಟ ಯಾಕಯ್ಯ ಮಾಡ್ತೀರಿ?’ ಎಂದು ಕೇಳಿ, ಸುದ್ದಿ ಮಾಡಿದ ಉದಾಹರಣೆ ಒಂದೇ ಒಂದೂ ಇಲ್ಲ!
ಈ ರೀತಿ ಟನ್‌ಗಟ್ಟಲೆ ಲಗೇಜನ್ನು ಪ್ರಯಾಣಿಕರ ಬಸ್ಸಿನಲ್ಲಿ ಸಾಗಿಸುವುದು ಕಾನೂನು ಬಾಹಿರ! ಆದರೂ, ಕಾನೂನು ಕ್ರಮ ಜರುಗಿಸಿ, ಸುದ್ದಿ ಮಾಡಿದ ಅಧಿಕಾರಿಯೋ, ನಾಯಕ ರೋ ಇಲ್ಲ!
ಇದರ ಹೊರತಾಗಿಯೂ, ಹಿಂದಿನ ಇಂಜಿನ್‌ನಿಂದ ಮುಂದಿನ ಚಾಲನೆಗೆ ಸಂಪರ್ಕ ಕಾರಣ ಬಸ್ಸು ಯಾವಾಗಲೂ ಕುಲುಮೆಯ ರೇಂಜ್‌ನ ಶಾಫ್ಟ್ ʼಗಳ ಮೇಲೆ ಚಲಿಸುತ್ತಿದ್ದರೆ, ಬಸ್ಸಿನ ಪ್ರತಿ ಬಾಗಿಲು ಕಿಟಕಿಗಳು ಮಾತ್ರ ಯಾವಾಗಲೂ ಜಾಮ್. ಇನ್ನು ನಿಯಂತ್ರಕನ ಅಕ್ಕ ಪಕ್ಕದ ಪ್ಯಾನೆಲ್ ಮತ್ತು ಅದರ ಸಂವಹನ ಮಾಧ್ಯಮವೆಲ್ಲ ಬಸ್ಸಿನ ಪೂರ್ತಿ ಸುತ್ತು ಆವರಿಸಿರು ತ್ತದೆ.
ಈಗೀಗ ಪ್ರತಿ ಆಸನದ ಮುಂದೆ ಟಿ.ವಿ. ಪ್ಯಾನೆಲ್ ಸ್ಕ್ರೀನು, ಅದರ ಪ್ರತ್ಯೇಕ ಕೇಬಲ್ ಸಂಪರ್ಕ, ಅದರ ನಿಯಂತ್ರಣದ ಮತ್ತೊಂದು ವೈರು ಜಾಲ, ಹಿಂಭಾಗದ ಲೈಟುಗಳು, ಬ್ರೆಕ್ ಲೈಟು, ಶೋಕಿಗಾಗಿ ಮಾಡಿಸಿರುವ ಪುಕುಪುಕು ಲೈಟುಗಳು, ಬ್ರೇಕ್ ಅದುಮಿದಾಗ ಮತ್ತು ಇನ್ನಿತರ ಕಾರಣಕ್ಕೆ ವಿಭಿನ್ನವಾಗಿ ಜೋಡಿಸಿದ ಆಯಾ ಬಣ್ಣದ ಲೈಟುಗಳ ಸುತ್ತುವರಿದ ಕೇಬಲ್ ಕೇಸಿಂಗ್‌ನ ದೊಡ್ಡ ಸರಪಳಿ ನಮ್ಮ ಸುತ್ತ ಬಿಗಿದೇ ಇರುತ್ತದೆ. ಪ್ರತಿಯೊಂದು ವಿದ್ಯುತ್ ಪ್ರವಹಿಸುವ ಜೀವಂತ ಜಾಲಕ್ಕೆ ಅಗ್ನಿ ಸಿಕ್ಕರೆ ಸೆಕೆಂಡ್ ಕಾಲಾವಧಿ ಸಾಕು ಆವರಿಸಿ ಕೊಳ್ಳಲು.
ಮುಖ್ಯ ಬಾಗಿಲು ಲಾಕ್!
ಸುಲಭಕ್ಕೆ ತೆರೆದುಕೊಳ್ಳಲಾಗದ ಈ ವ್ಯವಸ್ಥೆ, ಅಕಸ್ಮಾತ್ ಅಪಘಾತವಾದರೆ, ಆಟೊ ಮೋಡ್‌ಗೆ ಹೋಗುವ ವ್ಯವಸ್ಥೆಯಿಂದ ಮುಖ್ಯ ದ್ವಾರವೇ ಲಾಕ್ ಆಗಿ ಬಿಡುತ್ತದೆ. ಕಾರಣ, ಮೊದಲು ಸ್ಥಗಿತಗೊಳ್ಳುವುದೇ ಬ್ಯಾಟರಿ! ಅದರ ಬಲವಿಲ್ಲದೆ ಹೈಡ್ರಾಲಿಕ್ ವ್ಯವಸ್ಥೆಯ ಬಾಗಿಲು ಸೇರಿದಂತೆ ಎಲ್ಲ ಸಂಪರ್ಕಗಳು ಕಡಿತಗೊಂಡು ಬಸ್ಸು ಉರಿಯಲು ಸಿದ್ಧವಾದ ಕುಲುಮೆಯ ಪೆಟ್ಟಿಗೆಯಂತಾಗಿ ಬಿಡುತ್ತದೆ.
ಇದಕ್ಕೆ ಬೆಂಕಿ ತಗುಲಿದರೆ ಮೂವತ್ತರಿಂದ ನೂರೆಂಭತ್ತು ಸೆಕೆಂಡು ಸಾಕು ಪೂರ್ತಿ ಆವರಿಸಲು. ಅಷ್ಟರೊಳಗೆ ಕನಿಷ್ಠ ಮೂವತ್ತೆರಡು ಜೀವಗಳು, ತಾವಿರುವ ಸೀಟಿನಿಂದ ಎದ್ದು, ಕಿಟಕಿ ತೆರೆಯಲಾಗುತ್ತಿಲ್ಲ, ಎಂದು ಗೊತ್ತಾಗಿ ಇರುವ ಸಲಕರಣೆ ಹುಡುಕಿ, ಕಿಟಿಕಿ ಬಡಿದಾಡಿ ಅಂತೂ ದಕ್ಕುವ ಮಾರ್ಗದಲ್ಲಿ ಹೊರಕ್ಕೆ ಬರಬೇಕು. ಇದರ ಸಾಧ್ಯತೆ ಶೇ.ಕಾಲು ಭಾಗ ಮಾತ್ರ. ಕಾರಣ ಹಾಗೆ ಬೆಂಕಿ ತಗಲುತ್ತಿದ್ದಂತೆ ಗೂಡಿನಿಂದ ಹೊರ ಬೀಳುವ ಆತುರ ದಲ್ಲಿ ಎಲ್ಲರೂ ಮೊದಲು ಕಾಲಿಕ್ಕುವುದೇ ಪ್ಯಾಸೆಜ್ ಗ್ಯಾಪ್‌ನಲ್ಲಿ. ಇದು ಕೇವಲ ಎರಡಡಿ ಗೂ ಕಮ್ಮಿ ಜಾಗದಲ್ಲಿ, ಉಳಿದೆಲ್ಲ ತಲೆ ಎತ್ತಲಾಗದ ಅರೆಗಳೆ.
ಅಲ್ಲಿ ಒಮ್ಮೆ ಆಗುವ ಟ್ರಾಫಿಕ್ ಜಾಮ್‌ನಿಂದಾಗಿ ಬದುಕು ಉಳಿಸಿಕೊಳ್ಳಬಹುದಾದ ಅವಕಾಶ ಕೇವಲ ಶೇ. ಹತ್ತು ಮಾತ್ರ. ಈ ಪ್ಯಾಸೆಜ್‌ನಲ್ಲಿ ಸಾಲಾಗಿ ನಿಂತರೆ ಹೆಚ್ಚೆಂದರೆ ಹದಿನೈದು ಹದಿನಾರು ಜನ ನಿಲ್ಲಬಹುದು. ಮಾಡಿಕೊಳ್ಳಿ ಉಳಿದವರ ಕತೆ?
ದಹನಾನುಕೂಲಿ ಸಾಮಾನು ಸರಂಜಾಮು
ಈಗ ಹೇಳಿ, ಬಸ್‌ಗೆ ಬೆಂಕಿ ಹತ್ತಲು ಡಿಸೈಲ್ ಟ್ಯಾಂಕಿಗೇ ಬೆಂಕಿ ಬೀಳಬೇಕೆ? ಒಂದು ಗೊತ್ತಿರಲಿ. ಯಾವುದೇ ವಾಹನದ -ಯೆಲ್ ಬಾಕ್ಸ್ ಅಥವಾ ಇಂಧನ ಪೆಟ್ಟಿಗೆ ಎಲ್ಲದಕ್ಕಿಂತ ಹೆಚ್ಚಿನ ಸುರಕ್ಷಿತ ಜಾಗದಲ್ಲಿರುತ್ತದೆ. ಅದು ಉರಿಯುವುದೇ ಕೊನೆಯ ಹಂತದಲ್ಲಿ. ಅದಕ್ಕೂ ಮೊದಲೇ ಹೊರಟು ಅರ್ಧ ಗಂಟೆಯಲ್ಲೇ ಕುಲುಮೆಯಂತಾಗುವ ವಾಹನದ ಯಾವುದೇ ಭಾಗಕ್ಕೆ ಬೆಂಕಿ ಕಿಡಿ ಬಿದ್ದರೂ ಉರಿಯಲು ಸಿದ್ಧವಾಗಿರುವಷ್ಟು ತೀವ್ರ ಉಷ್ಣ ಉತ್ಪನ್ನ ಆಗುತ್ತಲೇ ಇರುತ್ತದೆ. ಅದರಲ್ಲೂ ಇಂಜಿನ್‌ನ ಯಾವುದೇ ಭಾಗ ನೋಡಿ ನಿಗಿನಿಗಿ ಎನ್ನುತ್ತಿರುತ್ತದೆ. ಹೀಗಿದ್ದಾಗ ಪ್ರತಿಯೊಬ್ಬರೂ ಡಿಸೆಲ್ ಟ್ಯಾಂಕ್‌ನಿಂದ ಬೆಂಕಿ ಎನ್ನುವ ಮೊದಲು, ಈ ಅರೆಗಳಲ್ಲಿ ಕೂಡಿಡುವ ಸಾಮಾನು ಸರಂಜಾಮುಗಳ ಕಡೆಗೊಮ್ಮೆ ಗಮನ ಹರಿಸಿ.
ತಾನಾಗಿಯೇ ಪುಡಿಯಾಗುವ ಕಿಟಕಿ?
ಕಾರಣ ಹೀಗೆ, ಬೆಂಕಿಗೆ ಸಿಲುಕುವ ಪಯಣದಲ್ಲಿ ಸುಲಭಕ್ಕೆ ಒಡೆಯಬಲ್ಲ ಗಾಜುಗಳ ಬಳಕೆ ಆಗದಿರುವುದು ಸೇರಿದಂತೆ ಸರಕಾರಿ ವಾಹನ ಸೌಲಭ್ಯಗಳು ಸಾಕಷ್ಟು ಅನುಕೂಲಕಾರಿ ಆಗಿಲ್ಲದಿರುವುದು ಈ ಕುಲುಮೆ ಬಸ್‌ಗಳನ್ನು ಜನ ಕಾಯ್ದು ನಿಲ್ಲುವ ಕೆಂಡದ ಮೇಲೆ ಮಲಗಿ ಪಯಣಿಸುತ್ತಿದ್ದಾರೆ. ಫೈರ್ ಎಕ್ಸ್ಟಿಂಗ್ವಿಶರ್ ನಮ್ಮಲ್ಲಿ ಎಷ್ಟು ಬಸ್‌ನಲ್ಲಿ ಎಷ್ಟು ಪ್ರಮಾಣದಲ್ಲಿದೆ? 2013 ರಲ್ಲಿ ಕೊರ್ಟೊಂದು ಪ್ರತಿ ಬಸ್ಸಿನ ಕಿಟಕಿಗಳೂ ಮತ್ತು ಗಾಜಿನ ಬಾಗಿಲು ಇತ್ಯಾದಿ ನಿರ್ದಿಷ್ಟ ಅಘಾತದ ಹೊಡೆತಕ್ಕೆ ತಾನಾಗೇ ಪುಡಿಯಾಗಿ ಉದುರುವ ಗಾಜುಗಳನ್ನೇ ಹೊಂದಿರಬೇಕು ಎಂದು ಆದೇಶ ಜಾರಿ ಮಾಡಿತ್ತು. ಇದನ್ನು ಪಾಲಿಸುವವರು ಕಡಿಮೆ. ವರ್ಷಕ್ಕೊಮ್ಮೆಯಾದರೂ ಹೆದ್ದಾರಿಯಲ್ಲಿ ಬೆಂಕಿಗೆ ಆಹುತಿಯಾಗುವ ಬಸ್ ಪ್ರಕರಣ ಆದಾಗಲೆಲ್ಲ ನಾವು ಎದ್ದು ಕೂರುತ್ತೇವೆ; ಆದರೆ ದಿನವೀಡಿ ನಮ್ಮೆದುರೇ ಮೇಲೂ ಒಳಗೂ ನಾಲ್ಕು, ಆರು ಅಡಿ ಮಿಕ್ಕಿ ಲಗೇಜು ಹೇರುವ ಬಗ್ಗೆ ಸರಕಾರದ ಯಂತ್ರ ಕುಂಯ್ ಎನ್ನುವುದೇ ಇಲ್ಲ. ಅಸಲಿಗೆ, ಕೇವಲ ಪಯಣಕ್ಕಾಗಿ ಮಾತ್ರ ಇರುವ ಪರ್ಮಿಟ್‌ನಲ್ಲಿ ನಮ್ಮ ಖಾಸಗಿ ಲಗ್ಗೇಜ್ ಬಿಟ್ಟರೆ ಬೇರೆ ಸಾಗಾಣಿಕೆಗೆ ಅನುಮತಿ ಇಲ್ಲವೇ ಇಲ್ಲ. ಪೊಲೀಸ್ ಅಥವಾ ಸಾರಿಗೆ ಇಲಾಖೆ ಮನಸ್ಸು ಮಾಡಿದರೆದನ್ನು ತಡೆಯಬಹುದು. ದಿನವೊಂದಕ್ಕೆ ಬೆಂಗಳೂರಿ ನಿಂದ ಹೊರಹೋಗುವ ಒಂದೊಂದು ಬಸ್‌ಗೂ ಕೇವಲ ಐದೇ ಟನ್ ಲೆಕ್ಕಿಸಿದರೂ, ರಾತ್ರಿ ಒಂದು ಹೊತ್ತಿನಲ್ಲಿ ಅನಾಮತ್ತು ಹನ್ನೆರಡರಿಂದ, ಹದಿನೈದು ಸಾವಿರ ಟನ್ ಕುಲುಮೆಗಳು ನಮ್ಮನ್ನು ಉರಿಸಲು ಸತತವಾಗಿ ಎಂಭತ್ತರಿಂದ ನೂರರ ವೇಗದಲ್ಲಿ ಚಲಿಸುತ್ತಲೇ ಇರುತ್ತವೆ. ನಮ್ಮ ಅದೃಷ್ಟ ಚೆನ್ನಾಗಿದ್ದಷ್ಟೂ ನಾವು ಬದುಕುತ್ತಿದ್ದೇವೆ, ಅಷ್ಟೆ!
ಕೇಬಲ್ ಟ್ರೇಗೆ ಮೊದಲು ಬೆಂಕಿ
ಮೂಲತ: ಯಾವುದೇ ವಾಹನ ಅಪಘಾತವಾದಾಗ ತತಕ್ಷಣ ಡಿಸೆಲ್ ಟ್ಯಾಂಕಿಗೆ ಹೋಗಿ ಬೆಂಕಿ ಬೀಳುವುದೇ ಇಲ್ಲ. ಅದು ಬಲಿಯಾಗುವುದು ಮತ್ತು ತನ್ನ ಕೊಡುಗೆ ಸೇರಿಸುವುದು ತುಸು ಹೊತ್ತಿನ ನಂತರ. ಆದರೆ ಅದಾಗಲೇ ಹಿಂದಿನ ಭಾಗ ಮತ್ತು ಮುಂದಿನ ಭಾಗಕ್ಕೆ ಸಂಪರ್ಕವಾಗಿ ಕಾರ್ಯನಿರ್ವಹಿಸುವ ಹಲವಾರು ಶಾಫ್ಟ್ ಮತ್ತು ಕೇಬಲ್ ಟ್ರೇಗಳು ಬೆಂಕಿ ಯನ್ನು ಸುಲಭಕ್ಕೆ ದಾಟಿಸಲು ಕಾಯ್ದು ನಿಂತಿರುತ್ತವೆ. ಅದಕ್ಕೆ ಸರಿಯಾಗಿ ಲಗೇಜ್ ರೂಪ ದಲ್ಲಿ ಹೇರಿರುವ ವಸ್ತುಗಳಲ್ಲಿರುವ ದಹನಾನುಕೂಲಿ ವಸ್ತುಗಳು ಸರಕ್ಕನೆ ಬೆಂಕಿ ಕಚ್ಚಿ ಕೊಂಡು ಅದನ್ನು ಡಿಸೆಲ್ ಟ್ಯಾಂಕು ಮತ್ತು ಇತರ ಇಂಜಿನ್ ಆಯಿಲ್‌ವರೆಗೂ ಒಯ್ಯುತ್ತವೆ. ಇದೆಲ್ಲ ಮೊದಲೆ ಒಂದೆರಡು ಅಥವ ಹೆಚ್ಚೆಂದರೆ ಐದು ನಿಮಿಷದಲ್ಲಾಗುವ ಅಗ್ನಿ ಪಲ್ಲಟ. ಅಷ್ಟರಲ್ಲಿ ಬಾಗಿಲು ಜಾಮ್ ಆಗಿ ಲಾಕ್ ಆಗುತ್ತದೆ. ಗ್ಲಾಸು ಒಡೆಯಲು ಬರುವುದಿಲ್ಲ. ಅದು ಕೆಲವೊಮ್ಮೆ ಗಂಡಸರಿಗೂ ಆಗದಿರುವ ಕೆಲಸ! ಇನ್ನು ಮಕ್ಕಳು ಹೆಂಗಸರು ಎಲ್ಲಿಂದ ಸುತ್ತಿಗೆ ತಂದು ಕಿಟಕಿ ಹಾರಿ ಬದುಕು ಕಟ್ಟಿಕೊಂಡಾರು. ಮಾಡಿದರೂ ಪ್ಯಾಸೆಜ್‌ನಲ್ಲಿ ಎಲ್ಲರೂ ಒಮ್ಮೆ ತುಂಬಿಕೊಂಡು ತಳ್ಳಾಡುವಾಗ ಕೇವಲ ಆರೆಂಟು ಜನ ಹಾರಿಕೊಂಡಾರು. ಅದರ ನಂತರ ಮತ್ತೊಂದು ಸಾಲು ಜಿಗಿಯುತ್ತದೆ ಎಂದಿಟ್ಟುಕೊಂಡರೂ ಎರಡನೆಯವರಿಗೆ ಶೇ.20 ಸುಡುವ ಗಾಯ ಖಂಡಿತ. ಆದರೆ ಆ ಹೊತ್ತಿಗೆ ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆ ಯಾವ ಪರಿ ಏರಿ ಬಿಡುತ್ತದೆ ಎಂದರೆ ‘ಗೋಲ್ಡನ್ ಅವರ್’ ಮುಗಿದ ಅಪಾಯಕಾರಿ ಸಮಯದಲ್ಲಿ ಹೆಚ್ಹೆಂದರೆ ಬದುಕುವ ಅವಕಾಶ ಶೇ.ಒಂದು ಮಾತ್ರ.
ಕಾರಣ ಹೊರಕ್ಕೆ ಜಿಗಿದರೂ ಬೆಂಕಿಯ ಬಾಯಿಗೆ, ಅದರಲ್ಲೂ ಸುಡುವ ಚರ್ಮ ಲೆಕ್ಕಿಸದೆ ಆಚೆಗೆ ದೌಡಾಯಿಸಲು ನಾವೆಲ್ಲ ಏನು ಸಿನೇಮಾ ನಾಯಕರಾ? ಶ್ವಾಸಕೋಶದ ಹೊಗೆ ತುಂಬಿ ಉಸಿರು ಚೆಲ್ಲಿ ಅಲ್ಲೆ ಆಹುತಿ. ಮೇಲೂ ಕೆಳಗೂ ಇದ್ದ ಸರಂಜಾಮು ತಮ್ಮ ಕೆಲಸ ಮುಗಿಸುತ್ತವೆ. ದೂರದಲ್ಲಿ ನಿಂತವರು ವಿಡಿಯೋ ಮಡುತ್ತಿರುತ್ತಾರೆ. ರೋದನೆ ಮುಗಿಲು ಮುಟ್ಟುತ್ತದೆ.
ಅನಧಿಕೃತ ಹೇರಿಕೆ
ಡಿಸೆಲ್ ಟ್ಯಾಂಕ್ ನೀಡುವ ಕೊಡುಗೆ ಎಂದರೆ ಅದು ಕೊನೆಯ ಉರಿಗೆ ತನ್ನ ಕೊಡುಗೆ ನೀಡುತ್ತದೆ. ಅದಕ್ಕೂ ಮೊದಲೇ, ಹೇರಿರುವ ಸರಂಜಾಮು ನಮ್ಮನ್ನು ಮುಕ್ಕಾಲು ಭಾಗ ಉರಿಸಿ ಹಾಕಿರುತ್ತದೆ. ಈ ಅನಧಿಕೃತ ಹೇರಿಕೆಯ ಬಗ್ಗೆ ಒಬ್ಬರೂ ಉಸಿರೆತ್ತುತ್ತಿಲ್ಲ! ವಾಹನ ಗಳಲ್ಲಿ ದಹನಾನುಕೂಲಿ ವಸ್ತುಗಳ ಸಾಗಣೆ ನಡೆಯುತ್ತಿರುವುದು, ಅದೂ ತೀರ ಪಟಾಕಿ, ಬಾಂಬು, ಮದ್ದು ಇಂಥವೇ ಆಗಬೇಕೆಂದೇನಿಲ್ಲ. ಸಿಂಥೇಟಿಕ್ ಬಣ್ಣಗಳು, ಕೂದಲು, ರಾಸಾಯನಿಕ ಪದಾರ್ಥಗಳು (ಇವುಗಳಲ್ಲಿ ಪ್ರತಿಯೊಂದು ವಸ್ತುವು ಅದರದ್ದೇ ಆದ ಶೈಲಿಯಲ್ಲಿ ದಹನಾನು ಕೂಲಿ ಎನ್ನುವುದನ್ನು ಗಮನಿಸಬೇಕು) ಪಾಲಿಯೆಸ್ಟರ್ ಬಟ್ಟೆಗಳ ಬಾಕ್ಸುಗಳು, ಇಲೆಕ್ಟ್ರಿಕಲ್ ಕೇಬಲ್ ಬಂಡಲ್ ಗಳು, ಪ್ಲಾಸ್ಟಿಕ್ ಸುರುಳಿಗಳು, ಒಣ ಪದಾರ್ಥ ಗಳ ರಟ್ಟಿನ ಪೆಟ್ಟಿಗೆಗಳು, ಇವನ್ನೆಲ್ಲ ಅವರಿಸಿರುವ ಪ್ಯಾಕಿಂಗ್ ಮೆಟೀರಿಯಲ್ಲು ಬೆಂಕಿಗೆ ತುಪ್ಪ ಸುರಿಯುವ ಪದಾರ್ಥಗಳೆ.
ಇನ್ನೊಂದೆಂದರೆ, ಅಪಘಾತವಾಗುತ್ತಲೇ ಕಿಟಕಿ ಗ್ಲಾಸ್ ಒಡೆಯುವುದಂತೂ ಸಾಧ್ಯವೇ ಇರುವುದಿಲ್ಲ. ಎಂಜಿನ್ ಆಫ್ ಆಗುತ್ತಲೇ, ಇಂದಿನ ತಂತ್ರಜ್ಞಾನ ಕೈಕೊಡುವುದರಿಂದ, ಮುಖ್ಯ ಬಾಗಿಲು ಆಟೋ ಲಾಕ್ ಆಗುವುದರಿಂದ ಪ್ರಯಾಣಿಕರಿಗೆ ಉಳಿಯುವ ಏಕೈಕ ದಾರಿ ಗಾಜು ಒಡೆಯುವುದೆ. ಆದರೆ ಅದಕ್ಕೆ ಬೇಕಾದ ಸಲಕರಣೆ ಇರುತ್ತದೇಯೇ ? ಇದರ ಜೊತೆಗೆ ಬಸ್ ಆಪರೇಟರ್‌ಗಳು ಹಣಕ್ಕಾಗಿ ಕಂಡು ಕೊಂಡಿರುವ ಇನ್ನೊಂದು ಮಾರ್ಗ ರಜಾವಧಿ ಯಲ್ಲಿ ರೇಟನ್ನು ಬೇಕಾಬಿಟ್ಟಿ ಏರಿಸುವುದು. ಒಬ್ಬೊಬರೇ ಮಲಗುವ ಆಸನಕ್ಕೆ ಶೇ.20 ಜಾಸ್ತಿ.
ಕೆಳಗಾದರೆ ಮತ್ತೇ ಶೇ.10 ಜಾಸ್ತಿ. ಅರೆ ಇದೇನಿದು? ಒಂದೇ ಬಸ್ಸು ಒಂದರೆ ದಾರಿ.. ರಹೇವಾರಿ ರೇಟು... ಮೈಯೆಲ್ಲಾ ಉರಿದುಕೊಳುವ ಪ್ರಯಾಣಿಕ ಮಾತ್ರ ದವಡೆ ಕಚ್ಚಿಕೊಂಡು ಕುಳಿತಿರು ತ್ತಾನೆ. ಇನ್ನು ಬ್ಯಾಗೇಜ್ ಚಾರ್ಝು ಎಂದು, ಬ್ಯಾಗನ್ನು ಕೆಳಗಿನ ಅರೆಯಲ್ಲಿಡಲು ಪ್ರತಿ ಬ್ಯಾಗಿಗೆ 10 ರೂಪಾಯಿ ಕೊಡಬೇಕು. ಕೊಡುವ ಬೆಡ್‌ಶೀಟ್‌ಗಳು ಕನಿಷ್ಟ ನಾಲ್ಕಾರು ಬಾರಿ ಉಪಯೋಗಿಸಿದ್ದು!
ಇಷ್ಟೆಲ್ಲಾ ಲಾಭದತ್ತಲೆ ದೃಷ್ಟಿ ನೆಡುವ ಬಸ್‌ಗಳು, ಪ್ರಯಾಣಿಕರ ಸುರಕ್ಷತೆಯತ್ತ ಯಾವ ಗಮನ ನೀಡುತ್ತದೆ? ಉತ್ತರ ಸೊನ್ನೆ. ಪ್ರತಿ ಬಸ್‌ಗೆ ಸ್ವಯಂ ಚಾಲಿತ ಅಗ್ನಿ ಸುರಕ್ಷಾ ವ್ಯವಸ್ಥೆ ಕೊಡದೆ ಹೋದರೆ, ವರ್ಷಕ್ಕೊಮ್ಮೆ ಒಂದೆರಡು ಡಜನ್ ಲೆಕ್ಕದಲ್ಲಿ ಜೀವ ಆಹುತಿ ಪಕ್ಕ. ಎರಡು ದಿನ ಮಾಧ್ಯಮಗಳು ಬಾಯಿ ಬಡಿದುಕೊಂಡು ಸುಮ್ಮನಾಗುತ್ತವೆ. ಮುಂದೆ ಮತ್ತೊಂದು ಬಸ್ ಆಹುತಿಯಾಗುವವರೆಗೆ.