Anil H T Column: ಕಾಫಿತೋಟದಲ್ಲಿ ನೆಮ್ಮದಿಯ ತಂಗಾಳಿ !
ಕಾಫಿ ತೋಟಗಳು ಹೆಚ್ಚಾಗಿರುವ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಜಿಲ್ಲೆಗಳಲ್ಲಿ ಈಗ ಕಾಫಿ ಕುಯ್ಲು ಭರದಿಂದ ಸಾಗುತ್ತಿದೆ. ಡಿಸೆಂಬರ್ ಮೂರನೇ ವಾರದಿಂದ ಇಲ್ಲಿ ಕಾಫಿ ಫಸಲಿನ ಕುಯ್ಲು ಹಬ್ಬದ ಸಂಭ್ರಮದಂತೆ ನಡೆಯುತ್ತಿದೆ. ಕಳೆದ ಒಂದೂವರೆ ದಶಕಗಳಿಂದ ಕಾಫಿ ತೋಟಗಳಲ್ಲ ಮಹಾಮಳೆ, ಅತಿವೃಷ್ಟಿ, ಅನಾವೃಷ್ಟಿಯ ಹೊಡೆತದಿಂದಾಗಿ ಸ್ವಲ್ಪ ನಲುಗಿದ್ದವು


ಅನಿಲ್ ಎಚ್.ಟಿ
ಕಾಫಿಯ ಸ್ವಾದಕ್ಕೆ ಸರಿಸಾಟಿ ಮತ್ತೊಂದಿಲ್ಲ ಎಂಬುದು ಕಾಫಿ ಪ್ರಿಯರ ಅಂಬೋಣ. ಕಾಫಿ ಯ ಅರೋಮಾ ವಿಶಿಷ್ಟ, ಅನನ್ಯ. ಮುಂದುವರಿದ ದೇಶಗಳಲ್ಲೂ ಕಾಫಿ ಬಹು ಜನಪ್ರಿಯ ಪೇಯ. ನಮ್ಮ ದೇಶದಲ್ಲಿ ಕಾಫಿ ಬೆಳೆಯುವವರ ಪಾಲಿಗೆ ಈಗ ಅಚ್ಚೇ ದಿನ್ ಬಂದಿದೆ. 16 ವರ್ಷಗಳ ಬಳಿಕ ಭಾರತದ ಕಾಫಿ ಬೀಜಕ್ಕೆ ಊಹೆಗೂ ನಿಲುಕದಂಥ ಬೆಲೆ ದೊರಕಿದೆ.
ಕಾಫಿ ತೋಟಗಳಲ್ಲಿ ಕೆಲವು ವಾರಗಳಿಂದ ನೆಮ್ಮದಿ ನೀಡುವ ತಂಗಾಳಿ ಬೀಸುತ್ತಿದೆ! ಕರುನಾಡಿನ ಕಾಫಿ ಬೆಳೆಗಾರರ ಮೊಗದಲ್ಲೀಗ ಹೂಮಳೆಯಂಥ ಮುಗುಳ್ನಗೆ! ಬೆಟ್ಟಗುಡ್ಡಗಳ ನಡುವೆ, ಕಷ್ಟಕರ ಕೆಲಸವನ್ನು ಮಾಡಿಸುತ್ತಾ, ಕಾಫಿಗಿಡಗಳ ಉಸ್ತುವಾರಿ ನೋಡಿಕೊಳ್ಳುವವರ ಮನಸ್ಸು ಪುಳಕ ಗೊಂಡಂತಿದೆ. ಇದಕ್ಕೆಲ್ಲಾ ಕಾರಣವಾದದ್ದು ಕಾಫಿ ಬೆಳೆಯ ಬೆಲೆ ಏರಿಕೆ. 16 ವರ್ಷಗಳ ತರುವಾಯ ಕಾಫಿ ಬೆಲೆ ಈಗ ಗಗನಕ್ಕೇರಿದೆ ಎನ್ನಬಹುದು. ಮೂರು ಸಾವಿರ ರುಪಾಯಿ ಇದ್ದ ಕಾಫಿಗೆ, ಈಗ 14 ಸಾವಿರ ರುಪಾಯಿ ದೊರಕುತ್ತಿದೆ ಎಂದರೆ ಯಾರು ತಾನೆ ಸಂಭ್ರಮ ಪಡುವುದಿಲ್ಲ ಹೇಳಿ!
ಇದನ್ನೂ ಓದಿ: Anil Kapoor: ಹ್ಯಾಂಡ್ಸಮ್ ಹೀರೋ ಅನಿಲ್ ಕಪೂರ್ ಆಸ್ತಿ ಮೌಲ್ಯವೆಷ್ಟು..? ಉದಯ್ ಭಾಯ್‌ಗಿದೆ ಸಖತ್ ಕಾರುಗಳ ಕ್ರೇಝ್!
ಕಾಫಿ ತೋಟಗಳು ಹೆಚ್ಚಾಗಿರುವ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಜಿಲ್ಲೆ ಗಳಲ್ಲಿ ಈಗ ಕಾಫಿ ಕುಯ್ಲು ಭರದಿಂದ ಸಾಗುತ್ತಿದೆ. ಡಿಸೆಂಬರ್ ಮೂರನೇ ವಾರದಿಂದ ಇಲ್ಲಿ ಕಾಫಿ ಫಸಲಿನ ಕುಯ್ಲು ಹಬ್ಬದ ಸಂಭ್ರಮದಂತೆ ನಡೆಯುತ್ತಿದೆ. ಕಳೆದ ಒಂದೂವರೆ ದಶಕಗಳಿಂದ ಕಾಫಿ ತೋಟಗಳಲ್ಲ ಮಹಾಮಳೆ, ಅತಿವೃಷ್ಟಿ, ಅನಾವೃಷ್ಟಿಯ ಹೊಡೆತದಿಂದಾಗಿ ಸ್ವಲ್ಪ ನಲುಗಿದ್ದವು.
ಕೆಲವು ವರ್ಷ ಅಕಾಲಿಕ ಮಳೆ ಬಂದು ಗಿಡದಲ್ಲಿ ಕಂಡುಬಂದಿದ್ದ ಫಸಲು ಬೆಳೆಗಾರನ ಮನೆಗೆ ತಲುಪದಂಥ ದುಸ್ಥಿತಿ ನಿರ್ಮಾಣವಾಗಿತ್ತು. ಕಾಫಿ ಬೆಳೆದವನ ಕಥೆ ಇಷ್ಟೇ ಎಂಬ ನೋವು ತೋಟ ಗಳಲ್ಲಿ ಮಡುಗಟ್ಟಿತ್ತು. ಅದಕ್ಕೆ ಸರಿಯಾಗಿ ಮೂರು ವರ್ಷಗಳಿಂದ ಅಕಾಲಿಕ ಅಧಿಕ ಮಳೆಯೂ ಕೂಡ ಕಾಫಿ ತೋಟಗಳಲ್ಲಿ ಫಸಲು ನಷ್ಟಕ್ಕೆ ತನ್ನ ಕೊಡುಗೆಯನ್ನೂ ನೀಡಿತ್ತು.

ಈ ವರ್ಷ ಕಾಫಿ ಬೆಳೆಗಾರ ಒಂದಿಷ್ಟು ನೆಮ್ಮದಿ ಪಡುವಂಥ ಸುಖಿ ದಿನಗಳು ಬಂದಂತಿದೆ. ಅರೆಬಿಕಾ ತಳಿಯ 50 ಕೆಜಿ ಪಾರ್ಚ್‌ಮೆಂಟ್ ಚೀಲಕ್ಕೆ ಈ ವರ್ಷ, 29 ಸಾವಿರ ರುಪಾಯಿ ದೊರಕಿದರೆ, ಚೆರಿ ಕಾಫಿಯ ಚೀಲಕ್ಕೆ 17 ಸಾವಿರ ರು. ದರವಿದೆ. ರೋಬಸ್ಟಾ ತಳಿಯ 50 ಕೆಜಿ ಪಾರ್ಚ್‌ಮೆಂಟ್ ಕಾಫಿ ಚೀಲಕ್ಕೆ 25000 ರುಪಾಯಿ ದರ ದೊರಕುತ್ತಿದ್ದರೆ, ಚೆರಿ ಚೀಲಕ್ಕೆ 14000 ರುಪಾಯಿ ಬೆಲೆ ಸಿಕ್ಕುತ್ತಿದೆ.
ಉಲ್ಲಾಸದಿಂದ ಅರಳಿದ ಮನಸ್ಸು ಈ ಬೆಲೆ ಕಾಫಿ ಬೆಳೆಗಾರನ ಊಹೆಗೂ ಮೀರಿದ್ದಾಗಿದೆ. ಹೀಗಾಗಿ ತೋಟದಲ್ಲಿ ಮಳೆಯ ಸಿಂಚನದಿಂದ ಕಾಫಿ ಹೂ ಅರಳಿದಂತೆ ಕಾಫಿ ಬೆಳೆಗಾರನ ಮನಸ್ಸು ಉಲ್ಲಾಸ ದಿಂದ ಅರಳಿದೆ. ಪ್ರತೀ ವರ್ಷವೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಯು ಜಗತ್ತಿನ 60 ಕ್ಕೂ ಅಧಿಕ ದೇಶಗಳ ಕಾಫಿ ಜತೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಬೇಕಾಗಿತ್ತು.
ಅದರಲ್ಲಿಯೂ ಜಗತ್ತಿನಲ್ಲಿಯೇ ಅತೀ ಹೆಚ್ಚು ಕಾಫಿ ಬೆಳೆಯುವ ವಿಯೆಟ್ನಾಂ ಮತ್ತು ಬ್ರೆಜಿಲ್‌ನ ಪಾರುಪತ್ಯದಿಂದಾಗಿ ಭಾರತೀಯ ಕಾಫಿ ಸಾಕಷ್ಟು ಸವಾಲನ್ನು ಎದುರಿಸಬೇಕಾಗಿತ್ತು.
ಬ್ರೆಜಿಲ್‌ನಲ್ಲಿ ಕುಸಿತ
ಆದರೆ ಈ ಸಾಲಿನಲ್ಲಿ, ವಿಯೆಟ್ನಾಂ ಮತ್ತು ಬ್ರೆಜಿಲ್ ದೇಶಗಳಲ್ಲಿ ಅಕಾಲಿಕ ಮಳೆ, ಅನಾವೃಷ್ಟಿ ಏಕ ಕಾಲದಲ್ಲಿ ಸಂಭವಿಸಿ ಅದರ ಪರಿಣಾಮ ಆ ದೇಶಗಳ ಕಾಫಿ -ಸಲಿನ ಮೇಲೆ ಉಂಟಾಗಿದೆ. ಜತೆಗೇ ಆ ಎರಡೂ ದೇಶಗಳಲ್ಲಿಯೂ ಕಾಫಿ ಸಸಿಗಳ ಮರುನಾಟೀಕರಣ ಸಮಾರೋಪಾದಿಯಲ್ಲಿ ಸಾಗಿದೆ. ಅಂದರೆ ಹಳೆಯ ಕಾಫಿ ಗಿಡಗಳನ್ನು ಕಡಿದು ಹಾಕಿ ಹೊಸದ್ದಾಗಿ ಕಾಫಿ ಸಸಿ ನೆಟ್ಟರೆ ಭವಿಷ್ಯದಲ್ಲಿ ಭರ್ಜರಿ ಫಸಲು ದೊರಕುತ್ತದೆ ಎಂಬ ಲೆಕ್ಕಾಚಾರದಿಂದ ಆ ದೇಶಗಳಲ್ಲಿ ಮರುನಾಟೀಕರಣ ನಡೆಯುತ್ತಿದೆ.

ಹೀಗಾಗಿ, ಆ ದೇಶಗಳಿಂದ ಜಾಗತಿಕ ಮಾರುಕಟ್ಟೆಗೆ ಸರಬರಾಜಾಗಬೇಕಾಗಿದ್ದ ಕಾಫಿಯಲ್ಲಿ ಭಾರೀ ಕುಸಿತ ಕಂಡಿದೆ. ವಿಶ್ವದ ಕಾಫಿ ಮಾರುಕಟ್ಟೆಯ ರಾಜ- ಮಹಾರಾಜರು ಎಂದು ಕರೆಸಿಕೊಂಡಿದ್ದ ದೇಶಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಾಫಿ ಸರಬರಾಜಾಗದಿರುವ ಹಿನ್ನಲೆಯಲ್ಲಿ ಭಾರತೀಯ ಕಾಫಿಗೆ ಉತ್ತಮ ಬೇಡಿಕೆ, ಬೆಲೆ ದೊರಕಲು ಸಾಧ್ಯವಾಗಿದೆ.
ಭಾರತೀಯ ಕಾಫಿಯ ಗುಣಮಟ್ಟವೂ ಹೋಲಿಕೆಯಲ್ಲಿ ಇತರ ದೇಶಗಳಿಗಿಂತ ಉತ್ತಮವಾಗಿಯೂ ಇರುವ ಕಾರಣ ದಿನೇದಿನೇ ಜಾಗತಿಕ ಕಾಫಿ ಮಾರುಕಟ್ಟೆಯಲ್ಲಿ ಭಾರತದ ಕಾಫಿ ತನ್ನ ಪಾರಮ್ಯ ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೀಗಾಗಿ ನಮ್ಮ ದೇಶದ ಕಾಫಿಯ ಬೆಲೆಯಲ್ಲಿಯೂ ಅನಿರೀಕ್ಷಿತ ಹೆಚ್ಚಳ ಕಾಣುವಂತಾಗಿದೆ.
ಮಲೆನಾಡಿನಲ್ಲಿ ಹಿಂದಿ!
ಕಾಫಿ ಬೀಜಕ್ಕೆ ಈ ವರ್ಷ ಬೆಲೆ ಹೆಚ್ಚಾದ ಕೂಡಲೇ ಸಮಸ್ಯೆಗಳೆಲ್ಲವೂ ಅಂತ್ಯವಾದವು ಎಂದೇನಲ್ಲ. ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಅತ್ಯಗತ್ಯವಾಗಿ ಬೇಕಾದ ಕಾರ್ಮಿಕರ ಕೊರತೆ ಪ್ರತೀ ಜಿಲ್ಲೆ ಯಲ್ಲಿಯೂ ಭಾದಿಸುತ್ತಿದೆ. ಕಾರ್ಮಿಕರ ಕೊರತೆಯಿಂದಾಗಿ ಪರರಾಜ್ಯದಿಂದ ಕಾರ್ಮಿಕರನ್ನು ತೋಟಗಳಿಗೆ ಕರೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ಮಿಜೋರಾಂ, ಜಾರ್ಖಂಡ್‌ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕರ್ನಾಟಕದ ಕಾಫಿ ತೋಟಗಳಿಗೆ ಬರುತ್ತಿದ್ದಾರೆ.
ಒಂದು ಅಂದಾಜಿನ ಪ್ರಕಾರ ಕಳೆದ ಜನವರಿಯಲ್ಲಿ ಕೊಡಗಿಗೆ ಈ ರೀತಿ ಬಂದ ವಲಸೆ ಕಾರ್ಮಿಕರ ಸಂಖ್ಯೆ 1.60 ಲಕ್ಷದಷ್ಟಿದೆ. ಕೊಡಗಿನ ಪ್ರತೀ ಊರಿನಲ್ಲೂ ಹಿಂದಿ ಮಾತನಾಡುವ ಪರರಾಜ್ಯಗಳ ಕಾರ್ಮಿಕರು ಹೇರಳವಾಗಿ ಕಾಣಸಿಗುತ್ತಿದ್ದಾರೆ. ಕೊಡಗಿನ ವಾರದ ಸಂತೆಯಲ್ಲಿ ಕನ್ನಡದ ಬದಲಿಗೆ ಹಿಂದಿ ಭಾಷೆಯೇ ಕೇಳಿಬರುವಂತಾಗಿದೆ! ಅನೇಕ ಬೆಳೆಗಾರರು ಕನ್ನಡ, ಕೊಡವ, ಅರೆಭಾಷೆ, ಮಲಯಾಳದಂತೆಯೇ ಈಗ ಹಿಂದಿಯಲ್ಲಿಯೂ ಸರಾಗವಾಗಿ ಮಾತನಾಡಲು ಹಿಂದಿ ಭಾಷಿಕ ಕಾರ್ಮಿಕರೇ ಕಾರಣವಾಗಿದ್ದಾರೆ.
ಹಿಂದಿ ಭಾಷೆ ತಿಳಿಯದೇ ಹೋದರೆ ತೋಟಗಳಲ್ಲಿ ವಲಸೆ ಕಾರ್ಮಿಕರಿಂದ ಕೆಲಸ ಮಾಡಿಸಲೇ ಅಸಾಧ್ಯ ಎಂಬಂಥ ಪರಿಸ್ಥಿತಿ ಕಾಫಿ ತೋಟಗಳಲ್ಲಿ ನಿರ್ಮಣವಾಗಿದೆ. ಹೀಗಾಗಿ, ಕೊಡಗಿನ ಕಾಫಿ ತೋಟಗಳ ಮಾಲಿಕರೂ, ಮನೆಯವರೂ ಈಗ ಹಿಂದಿ ಕಲಿಯಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು!
ಅಧಿಕ ವೇತನದ ಸಮಸ್ಯೆ
ಕಾರ್ಮಿಕರಿಗೆ ಅಧಿಕ ವೇತನ ನೀಡಿಕೆ, ರಸಗೊಬ್ಬಗಳಿಗೆ ಬೆಲೆ ಏರಿಕೆಯಂಥ ಸಮಸ್ಯೆಗಳೂ ಕಾಫಿ ಬೆಳೆಗಾರರನ್ನು ಭಾದಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹವಾಮಾನ ವೈಪರೀತ್ಯದ ಪರಿಣಾಮ ಕಾಫಿ ಫಸಲಿಗೂ ಹೊಡೆತ ನೀಡಿದೆ. ಬೆಲೆ ಇದ್ದರೂ ನಿರೀಕ್ಷಿತ ಬೆಳೆ ಇಲ್ಲದೇ ಇರುವುದೂ ಕೊಂಚ ಮಟ್ಟಿಗೆ ನಿರಾಶೆಗೂ ಕಾರಣವಾಗಿದೆ. ಅಕಾಲಿಕ ಮಳೆ, ಕಾಫಿ ಕೊಯ್ಲಿನ ದಿನಗಳಲ್ಲಿಯೇ ಮಳೆಯ ಸಿಂಚನ, ಮಂಜಿನ ವಾತಾವರಣದಿಂದಾಗಿ ಕಾಫಿ ಹಣ್ಣು ಒಣಗದಿರುವುದು ಕೂಡ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.
ತೋಟದ ಆನೆಗಳ ಕಾಟ!
ಕರ್ನಾಟಕ ಕಾಫಿ ತೋಟಗಳಲ್ಲಿ ಬೆಳೆಗಾರರು ಕಾಡಾನೆಗಳ ಮುಖಾಮುಖಿಯ ಭೀತಿಯಲ್ಲಿಯೇ ತೋಟಗಳಲ್ಲಿ ಹೆಜ್ಜೆ ಹಾಕುವಂಥ ಪರಿಸ್ಥಿತಿಯಿದೆ. ಕಾಡಾನೆ, ಸಾಕಾನೆಗಳ ಜತೆಗೇ ತೋಟದಲ್ಲಿಯೇ ಹುಟ್ಟಿ, ಅದೇ ಸರಹದ್ದಿನಲ್ಲಿ ಬೆಳೆದ ‘ತೋಟದಾನೆ’ ಎಂಬ ಹೊಸ ತಳಿಯ ಆನೆಗಳೂ ಕಾಣ ಸಿಕ್ಕುತ್ತಿದೆ. ದಟ್ಟ ಕಾಡನ್ನೇ ಕಾಣದೇ ತೋಟಗಳಲ್ಲಿಯೇ ಹುಟ್ಟಿ, ಇಲ್ಲಿಯೇ ಬೀಡು ಬಿಟ್ಟು, ಕಾಫಿ ತೋಟಗಳ ಮಧ್ಯೆ ಏಕಾಏಕಿ ಜನರ ಮೇಲೆ ಧಾಳಿ ಮಾಡುವ ಇಂಥ ಆನೆಗಳ ಹಾವಳಿ ಮಿತಿ ಮೀರುತ್ತಿದೆ.
ಕಾಡಾನೆ ಸಮಸ್ಯೆಯನ್ನು ವಾಸ್ತವ ನೆಲಗಟ್ಟಿನಲ್ಲಿ ತೋಟಗಳಿಗೆ ಭೇಟಿ ಡಿನೀಡಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಬೇಕಾದ ಸಚಿವರು, ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಎಸಿ ಕೋಣೆ ಯಲ್ಲಿ ಕುಳಿತು, ಕಾಡಾನೆಗಳಿಗೆ ಪ್ರತ್ಯೇಕ ಧಾಮ ರೂಪಿಸುತ್ತೇವೆ ಎಂಬ ಅವಾಸ್ತವಿಕ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಇಂಥ ಹಲವಷ್ಟು ಸಮಸ್ಯೆಗಳ ನಡುವೆಯೇ, 2025ರ ಪ್ರಾರಂಭದಿಂದಲೂ ಒಂದೇ ಸಮನೆ ಏರಿಕೆ ಕಾಣುತ್ತಿರುವ ಬೆಲೆಯಿಂದಾಗಿ, ಕಾಫಿ ಬೆಳೆಯುವ ಬೆಳೆಗಾರ ಮುಂದಿನ 2-3ವರ್ಷಗಳೂ ಇದೇ ರೀತಿ ಉತ್ತಮ ಬೆಲೆ ದೊರಕುತ್ತದೆ ಎಂಬ ಆಶಾಭಾವನೆಯಿಂದ ಸಂಭ್ರಮಿಸು ತ್ತಿದ್ದಾನೆ. ಕಾಡಾನೆ, ವನ್ಯಜೀವಿಗಳ ಕಾಟ, ಅಕಾಲಿಕ ಮಳೆಯ ದುಸ್ವಪ್ನದ ನಡುವೆಯೂ ಕಾಫಿ ಬೆಳೆಗಾರ ಕೆಲಕಾಲವಾದರೂ ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ.
ಕರ್ನಾಟಕದ ಪಾಲು ಶೇ.೭೦
ಕಾಫಿ ತೋಟ ಮತ್ತು ಕಾಫಿ ಉದ್ಯಮದಲ್ಲಿ ಅಂದಾಜು ೮ ಲಕ್ಷ ಕಾರ್ಮಿಕರು ಸಕ್ರಿಯರಾಗಿದ್ದಾರೆ.
ಭಾರತದಿಂದ ವಿದೇಶಗಳಿಗೆ ರಫ್ತಾಗುವ ಕಾಫಿ - ೮೭,೯೩೮ ಮೆಟ್ರಿಕ್ ಟನ್
ಭಾರತದಲ್ಲಿ ಕಾಫಿ ಬೆಳೆಯಲಾಗುತ್ತಿರುವ ಪ್ರದೇಶ - ೪.೭೯ ಲಕ್ಷ ಹೆಕ್ಟೇರ್
ಜಗತ್ತಿನ ಒಟ್ಟು ಕಾಫಿ ಉತ್ಪಾದನೆಯಲ್ಲಿ ಭಾರತದ ಪಾಲು ಸುಮಾರು ಶೇ.೪. ಬ್ರೆಜಿಲ್‌ನ ಪಾಲು
ಸುಮಾರು ಶೇ.೨೯.
ಭಾರತದಲ್ಲಿ ಕಾಫಿ ಉತ್ಪಾದನೆ - ೩.೫೨ ಲಕ್ಷ ಮೆಟ್ರಿಕ್ ಟನ್ (ಅರೇಬಿಕಾ - ೧ ಲಕ್ಷ ಮೆಟ್ರಿಕ್ ಟನ್ , ರೋಬಸ್ಟಾ - ೨.೫೨ ಲಕ್ಷ ಮೆಟ್ರಿಕ್ ಟನ್)
ಕರ್ನಾಟಕದಲ್ಲಿ ಕಾಫಿ ಬೆಳೆಯುವ ಪ್ರದೇಶ- ೨.೪೬ ಲಕ್ಷ ಹೆಕ್ಟೇರ್ (ಕೊಡಗು - ೧.೦೭ ಲಕ್ಷ ಹೆಕ್ಟೇರ್,
ಚಿಕ್ಕಮಗಳೂರು - ೯೮ ಹೆಕ್ಟೇರ್, ಹಾಸನ - ೪೧ ಸಾವಿರ ಹೆಕ್ಟೇರ್)
ಭಾರತದ ಒಟ್ಟು ಕಾಫಿ ಬೀಜ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು - ಶೇ. ೭೦