Pragati Shetty Interview: ಸವಾಲಿನ ಕೆಲಸದಲ್ಲಿ ಮಿಂಚಿದ ಮಹಿಳೆ !
ಚಾರ್ಲಿ, ಬೆಲ್ ಬಾಟಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರ, ಕಾಂತಾರ ಚಾಪ್ಟರ್ 1 ಹೀಗೆ ಸಾಲು ಸಾಲು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದವರು ಇವರೇ! ಖ್ಯಾತ ನಟ ರಿಷಬ್ ಶೆಟ್ಟಿಯವರ ಅವರ ಮುದ್ದಿನ ಮಡದಿ ಯಾಗಿ, ಅವರ ಪ್ರತಿ ಸಿನಿಮಾಗಳಿಗೂ ಬೆನ್ನೆಲುಬಾಗಿ ನಿಂತು ಹೊಸತನಕ್ಕೆ ನಾಂದಿ ಹಾಡಿದವರು.
-
ಭಾಗ್ಯ ದಿವಾಣ
ಚಾರ್ಲಿ, ಬೆಲ್ ಬಾಟಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರ, ಕಾಂತಾರ ಚಾಪ್ಟರ್ 1 ಹೀಗೆ ಸಾಲು ಸಾಲು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದವರು ಇವರೇ! ಖ್ಯಾತ ನಟ ರಿಷಬ್ ಶೆಟ್ಟಿಯವರ ಅವರ ಮುದ್ದಿನ ಮಡದಿ ಯಾಗಿ, ಅವರ ಪ್ರತಿ ಸಿನಿಮಾಗಳಿಗೂ ಬೆನ್ನೆಲುಬಾಗಿ ನಿಂತು ಹೊಸತನಕ್ಕೆ ನಾಂದಿ ಹಾಡಿದವರು. ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸೊಸೆಯಾಗಿ ಅನೇಕ ಪಾತ್ರಗಳನ್ನು ಏಕಕಾಲಕ್ಕೆ ನಿಭಾಯಿಸುತ್ತಲೇ ಸಿನಿಮಾ ಕ್ಷೇತ್ರದಲ್ಲೂ ಗುರುತಿಸಿ ಕೊಂಡ ದಿಟ್ಟ ಮಹಿಳೆ ಪ್ರಗತಿ ಶೆಟ್ಟಿ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರಗತಿ ಶೆಟ್ಟಿಯವರೊಂದಿಗೆ ವಿಶೇಷ ಸಂದರ್ಶನ.
ಪ್ರ: ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯಿರುತ್ತಾಳೆ. ನಿಮ್ಮ ಪತಿಯ ಯಶಸ್ಸಿನಲ್ಲಿ ನಿಮ್ಮ ಪಾತ್ರವೇನು ?
ಉ: ರಿಷಬ್ ಶೆಟ್ಟಿಯವರು ಪ್ರತಿಯೊಂದು ವಿಚಾರದಲ್ಲಿಯೂ ಡೆಡಿಕೇಟೆಡ್ ಹಾಗೂ ಪ್ಯಾಷ ನೇಟ್ ವ್ಯಕ್ತಿ. ಅವರಿಗೆ ಸಿನಿಮಾ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಪ್ರತಿ ಕ್ಷಣವನ್ನೂ ಸಿನಿಮಾ ಲೋಕದಲ್ಲೇ ಕಳೆಯಲು ಇಷ್ಟಪಡುವವರು ಅವರು. ಅದಕ್ಕೆ ಅವರ ಆಸಕ್ತಿಗೆ ನಾನು ಬೆಂಬಲವಾಗಿ ನಿಂತಿದ್ದೇನೆ. ಅವರ ಯೋಜನೆಗಳು, ಚಿಂತನೆಗಳಿಗೆ ಅಡ್ಡಿಯಾಗದಂತೆ ನನ್ನ ಕೈಲಾಗುವಷ್ಟರ ಮಟ್ಟಿಗೆ ಅವರಿಗೆ ಹೆಗಲಾದ್ದೇನೆ. ಉಳಿದಂತೆ ಅವರೊಂದಿಗೆ ಯಾವ ಜವಾಬ್ದಾರಿಯನ್ನೂ ಹಂಚಿಕೊಳ್ಳವುದಿಲ್ಲ. ಅವರ ಜೀವನ ಸಂಗಾತಿಯಾಗಿ ಪ್ರತಿ ಹೆಜ್ಜೆ ಯಲ್ಲೂ ಅವರೊಂದಿಗೆ ನಡೆಯುವುದು ನನ್ನ ಕರ್ತವ್ಯ.
ಪ್ರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಬಗ್ಗೆ ನಿಮ್ಮ ಮಾತುಗಳೇನು ?
ಉ: ಮಹಿಳಾ ದಿನಾಚರಣೆಯ ಸಂಭ್ರಮ ಬರಿಯ ಒಂದು ದಿನದ ಮಾತಾಗದೆ, ಪ್ರತಿ ಯೊಂದು ದಿನವನ್ನೂ ಮಹಿಳಾ ದಿನಾಚರಣೆಯಾಗಿಯೇ ಸಂಭ್ರಮಿಸಬೇಕು. ಪ್ರತಿಯೊಬ್ಬರ ಜೀವನದಲ್ಲಿ ಮಹಿಳೆಯರಿಗಿರುವ ಪಾತ್ರ ಅಷ್ಟು ಮಹತ್ವದ್ದಾಗಿರುತ್ತದೆ. ತಾಯಿ, ಪತ್ನಿ, ತಂಗಿ, ಮಗಳು, ಮೊಮ್ಮಗಳು ಹೀಗೆ ಅನೇಕ ಪಾತ್ರಗಳು ಅವಳದ್ದು. ಆ ಪಾತ್ರಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಜತೆಗೆ ಇಂದು ಎಲ್ಲರೂ ಸ್ವಾವಲಂಬಿಳಾಗಿದ್ದಾರೆ. ಮನೆಯ ಕೆಲಸಗಳು, ಮಕ್ಕಳ ಲಾಲನೆ-ಪಾಲನೆಯ ಜತೆಗೆ ವೃತ್ತಿ ಜೀವನವನ್ನೂ ಅಚ್ಚು ಕಟ್ಟಾಗಿಯೇ ನಿಭಾಯಿಸುತ್ತಾರೆ. ವಿದ್ಯಾಭ್ಯಾಸವಷ್ಟೇ ಅಲ್ಲದೆ ನೀವು ಎಷ್ಟು ಚುರುಕಿನಿಂದ, ಕ್ರಿಯಾತ್ಮಕ ಚಿಂತನೆಗಳ ಮೂಲಕ ವೃತ್ತಿಯನ್ನು ನಿಭಾಯಿಸುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ಉದ್ಯೋಗ ಮಾಡುವ ಮನಸ್ಸಿದ್ದರೆ ಸಾಕು ಅವಕಾಶಗಳು ಸಾಕಷ್ಟಿವೆ.
ಪ್ರ: ಇತ್ತೀಚಿನ ದಿನಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ನಟನೆಗಷ್ಟೇ ಸೀಮಿತವಾಗು ತ್ತಿದ್ದಾರಾ?
ಉ: ಸಿನಿಮಾ ತಂತ್ರಜ್ಞರಲ್ಲಿ ಗಂಡುಮಕ್ಕಳೇ ಹೆಚ್ಚು. ಕ್ಯಾಮರಾ ಹಿಂದೆ ನಾನೂ ಕೆಲಸ ಮಾಡುತ್ತಿದ್ದೇನೆ. ಆದರೆ ನನಗೆ ತಿಳಿದಂತೆ ಹೆಣ್ಣುಮಕ್ಕಳು ನಟನೆಗಷ್ಟೇ ಸೀಮಿತವಾಗು ತ್ತಿದ್ದಾರೆ. ತಾಂತ್ರಿಕ ಕೆಲಸಗಳತ್ತ ಹೆಣ್ಣುಮಕ್ಕಳು ಒಲವು ತೋರಿಸುತ್ತಿಲ್ಲ. ಈ ಇಂಡಸ್ಟ್ರಿ ಯಲ್ಲಿ ಒಮ್ಮೆ ಯಶಸ್ಸು ಕಂಡರೆ ಎಲ್ಲರೂ ಗುರುತಿಸುತ್ತಾರೆ. ಅದಕ್ಕಿಂತ ಮೊದಲು ಸ್ಟ್ರಗ್ಲಿಂಗ್ ಪಿರಿಯಡ್ ಆಗಿರುತ್ತದೆ. ತಾಳ್ಮೆ, ಕಠಿಣ ಪರಿಶ್ರಮ, ಪ್ರತಿಭೆ ಜೊತೆ ಅದೃಷ್ಟವಿದ್ದ ರಷ್ಟೇ ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಸಿಗುವುದಕ್ಕೆ ಸಾಧ್ಯ.
ಇದನ್ನೂ ಓದಿ: Hari Paraak Column: ಟಾಕ್ಸಿಕ್, ಧುರಂದರ್-2 ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್
ಪ್ರ: ಕಾಂತಾರದಿಂದ ಕಾಂತಾರ ಚಾಪ್ಟರ್ 1.. ಈ ಪಯಣದಲ್ಲಿ ನಿಮ್ಮ ಪಾತ್ರ ಹೇಗಿತ್ತು ?
ಉ: ಇದು ನಮಗೆ 4 ವರ್ಷಗಳ ಪರಿಶ್ರಮದ ಪಯಣ. ಕನ್ಸೀವ್ ಆದ ಸಂದರ್ಭದಲ್ಲಿ ಮೊದಲ ಬಾರಿಗೆ ಬೆಂಗಳೂರಿನಿಂದ ಊರಿಗೆ ಪ್ರಯಾಣ ಮಾಡಿದ್ದೆ. ಅಲ್ಲಿಂದ ಶುರು ವಾಗಿದ್ದು, ನನ್ನ ಮಗಳಿಗೀಗ 4 ವರ್ಷ ತುಂಬಿದೆ. 4 ವರ್ಷಗಳ ಸುದೀರ್ಘ ಪಯಣ ವಿತ್ತು ಕಾಂತಾರದ ಯಶಸ್ಸಿಗೆ. ನನಗೂ ರಿಷಬ್ ಗೂ ಕಾಂತಾರ ಸ್ಪೆಷಲ್ ಸಿನಿಮಾ. ಕುಟುಂಬವೇ ಈ ಸಿನಿಮಾದಲ್ಲಿದ್ದೇವೆ.
ಕಾಂತಾರ ಹಾಗೂ ಕಾಂತಾರ ಚಾಪ್ಟರ್ 1 ರಲ್ಲಿಯೂ ಚಿಕ್ಕದಾದರೂ ನಾನು ಹಾಗೂ ಮಕ್ಕಳು ರಿಷಬ್ ಅವರ ಜತೆಯಾಗಿದ್ದೇವೆ. ಶಾರೀರಿಕವಾಗಿ ಹಾಗೂ ದೈಹಿಕವಾಗಿ ನಾನು ಸದೃಡಳಾಗಿದ್ದೇನೆಂದು ನನಗೆ ತಿಳಿಸಿಕೊಟ್ಟ ಸಿನಿಮಾ ಕಾಂತಾರ. ಅಷ್ಟೊಂದು ಒತ್ತಡದಿಂದ ಕೆಲಸ ಮಾಡಿದ್ದರೂ ಒಳ್ಳೆಯ ರಿಸಲ್ಟ್ ಕೊಟ್ಟಿರುವುದು ಖುಷಿ ತಂದಿದೆ. ಕುಂದಾಪುರದ ಸುತ್ತಮುತ್ತಲಿನ ಅನೇಕ ಜಾಗಗಳಲ್ಲಿ ಕಾಂತಾರ ಚಾಪ್ಟರ್ 1ರ ಚಿತ್ರೀಕರಣವಾಗಿದೆ. ಅದರಲ್ಲಿ ರಾಜಬೀದಿಯ ಚಿತ್ರೀಕರಣವಾಗಿರುವುದು ಮುದೂರು ಎಂಬ ಜಾಗದ ಗುಡ್ಡ ಪ್ರದೇಶದಲ್ಲಿ. ಗುಡ್ಡದ ಕೆಳಭಾಗದಲ್ಲಿ ಹಟ್‌ಗಳನ್ನು ನಿರ್ಮಿಸಿ ದಿನಕ್ಕೆರಡು ಮೂರು ಬಾರಿ ಹತ್ತಿ ಇಳಿದು ಮಾಡಬೇಕಾಗಿತ್ತು. ಬ್ರಹ್ಮಕಲಶ ಹಾಡಿಗಾಗಿ ಒಂದು ತಿಂಗಳ ಕಾಲ ಶೂಟಿಂಗ್ ಮಾಡಬೇಕಾಗಿ ಬಂದಿತ್ತು.
ಪ್ರ: ಮಕ್ಕಳಾದ ಮೇಲೆ ಮಹಿಳೆಯರಲ್ಲಿ ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳಾಗುತ್ತವೆ. ನಿಮಗೆ ಹಾಗನ್ನಿಸಿಲ್ಲವೇ ?
ಉ: ಬದಲಾವಣೆಗಳು ಎಲ್ಲರಲ್ಲೂ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿ ಆಧಾರಿತ ವಾಗಿರುತ್ತದೆ. ತಾಯ್ತನದ ಪ್ರತಿ ಹಂತವನ್ನೂ ಕಷ್ಟಪಡುವ ಅನೇಕ ಮಹಿಳೆಯರಿರುತ್ತಾರೆ. ನನಗೆ ತಾಯಿಯಾಗುವ ಎರಡು ಸಂದರ್ಭಗಳಲ್ಲಿಯೂ ಅಷ್ಟೇನೂ ಕಷ್ಟವಾಗಿರಲಿಲ್ಲ. ವೈದ್ಯರ ಅನುಮತಿಯ ಮೇರೆಗೆ ಚುರುಕಿನಿಂದಲೇ ಎಲ್ಲ ಕೆಲಸಗಳನ್ನೂ ನಿಭಾಯಿಸುತ್ತಿದ್ದೆ. ಕಾಂತಾರದಲ್ಲೂ ಭಾಗಿಯಾಗಿದ್ದೆ. ಕೊನೆಯ ದಿನಗಳಲ್ಲಿ ಒಂದಷ್ಟು ಆರೋಗ್ಯ ಸಮಸ್ಯೆ ಯಾಗಿತ್ತು. ಪ್ರೆಗ್ನೆನ್ಸಿ, ಚೈಲ್ಡ್ ಬರ್ತ್ ಸಮಯದ ಸಮಸ್ಯೆಗಳನ್ನು ಹೀಗೇ ಇರುತ್ತದೆಯೆನ್ನುವು ದಕ್ಕಾಗುವುದಿಲ್ಲ. ಆದರೆ ಅದರ ಬಗೆಗೆ ಅರಿವಿರಬೇಕು. ಹೆಣ್ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಕುಗ್ಗುವಾಗ ಸಂಗಾತಿ ಅರ್ಥಮಾಡಿಕೊಂಡು ಜತೆಯಾಗಿ ನಿಲ್ಲಬೇಕು. ಇದರ ಬಗ್ಗೆ ಪಾಶ್ಚಾತ್ಯ ದೇಶದಲ್ಲಿರುವಷ್ಟು ಅರಿವು ನಮ್ಮ ದೇಶದಲ್ಲಿಲ್ಲ.
ಪ್ರ: ನೀವು ಇತ್ತೀಚೆಗಂತೂ ಸಾಂಪ್ರದಾಯಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಿದ್ದೀರಿ. ಸೀರೆ ಅಂದರೆ ನಿಮಗಿಷ್ಟವಾ?
ಉ: ಹೌದು..ಯಾವುದೇ ಭಾರತೀಯ ನಾರಿಗೂ ಸೀರೆ ಒಪ್ಪುತ್ತದೆ. ನನಗಂತೂ ಸೀರೆಯೆಂದರೆ ಬಹಳ ಪ್ರೀತಿ. ಮೊದಲಿನಿಂದಲೂ ಬಳೆ, ಬಿಂದಿ, ಜುಮ್ಕಾ, ಸೀರೆಯುಟ್ಟು ಸಾಂಪ್ರದಾಯಿಕ ವಾಗಿ ಸಿದ್ಧವಾಗುವುದೆಂದರೆ ನನಗೆ ಬಹಳ ಅಚ್ಚುಮೆಚ್ಚು.ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿನ ಪ್ರಮುಖ ಸೀರೆಯಂಗಡಿಗೆ ಭೇಟಿ ನೀಡಿ ಮನಕ್ಕೊಪ್ಪಿದ ಸೀರೆಯನ್ನು ಶಾಪಿಂಗ್ ಮಾಡಿಕೊಳ್ಳುತ್ತೇನೆ.
ಪ್ರ: ರಿಷಬ್ ಶೆಟ್ಟಿ ಅಂದರೆ ಒಂದು ವಾಕ್ಯದಲ್ಲಿ ವರ್ಣಿಸಬಹುದೇ?
ಉ: ಅವರನ್ನು ಒಂದು ವಾಕ್ಯದಲ್ಲಿ ಬಣ್ಣಿಸುವುದು ಕಷ್ಟ. ಆದರೂ ನನಗೆ ಅವರೇ ಎಲ್ಲ..ಶಕ್ತಿ, ಸ್ಪೂರ್ತಿ, ಪೈಪೋಟಿ ಎಲ್ಲವೂ. ಅವರಿಗಿರುವ ತಾಳ್ಮೆ, ಸಮರ್ಪಣಾ ಮನೋ ಭಾವ, ಪರಿಶ್ರಮ, ಯೋಜನಾ ಶಕ್ತಿ, ಒಳ್ಳೆತನ ಇವನ್ನು ಕಂಡರೆ ನನಗೂ ಹೀಗಿರಲು ಯಾಕೆ ಸಾಧ್ಯವಿಲ್ಲವೆನಿಸುತ್ತದೆ. ನನಗೂ ಅವುಗಳನ್ನು ರೂಢಿಸಿಕೊಳ್ಳಬೇಕೆನಿಸುತ್ತದೆ.
ಪ್ರ: ಮುಂದಿನ ಯೋಜನೆಗಳು?
ಉ: ಈಗಿನ್ನೂ ಕಾಂತಾರ ಚಾಪ್ಟರ್ 1ರಿಂದ ಹೊರಬರುತ್ತಿದ್ದೇವೆ. ಮುಂದಿನ ಭಾಗದ ಬಗ್ಗೆ ಯೋಚಿಸುವ ಗೋಜಿಗೇ ಹೋಗಿಲ್ಲ. ಕಾಲ ಕೂಡಿ ಬಂದಾಗ ಆ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸಿದರಾಯಿತು.