ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani special: ರಾಜ್ಯ ಬಿಜೆಪಿಗೆ ಮರೀಚಿಕೆಯಾದ ಉಸ್ತುವಾರಿ!

ಆಡಳಿತರೂಢ ಪಕ್ಷದಲ್ಲಿನ ಆಂತರಿಕ ಕಲಹದ ಲಾಭ ಪಡೆಯಲು ರಣತಂತ್ರ ರೂಪಿಸ ಬೇಕಿದ್ದ ರಾಧಾಮೋಹನ್ ದಾಸ್ ಅಗರ್ವಾಲ್, ರಾಜ್ಯದಲ್ಲಿ ಪಕ್ಷ ಸಂಘಟನೆಯತ್ತ ಮುಖಹಾಕದೇ ತಿಂಗಳುಗಳೇ ಕಳೆದಿವೆ. ವರ್ಷದಲ್ಲಿ ಒಂದೆರೆಡು ಬಾರಿ ರಾಜ್ಯಕ್ಕೆ ಆಗಮಿಸಿದ್ದರೂ, ‘ಅತಿಥಿ’ ರೂಪದಲ್ಲಿ ಬಂದು ಹೋಗಿದ್ದಾರೆ.

Vishwavani special: ರಾಜ್ಯ ಬಿಜೆಪಿಗೆ ಮರೀಚಿಕೆಯಾದ ಉಸ್ತುವಾರಿ!

-

Ashok Nayak
Ashok Nayak Nov 27, 2025 7:34 AM

ಅಪರೂಪಕ್ಕೆ ಮಾತ್ರ ರಾಧಾಮೋಹನ್ ದರ್ಶನ

ವಿಪಕ್ಷದೊಳಗೂ ಒಳಬೇಗುದಿ

ಬೆಂಗಳೂರು: ಆಡಳಿತ ಪಕ್ಷದಲ್ಲಿ ಪಟ್ಟಕ್ಕಾಗಿ ಕಾದಾಟ ನಡೆಯುತ್ತಿರುವ ಈ ಸಮಯ ವನ್ನು ‘ಬಳಸಿಕೊಳ್ಳ’ಬೇಕಾದ ರಾಜ್ಯ ಬಿಜೆಪಿ ‘ಮೌನ’ಕ್ಕೆ ಶರಣಾಗಿದೆ. ಇನ್ನು ರಾಜ್ಯ ಬಿಜೆಪಿ ಯನ್ನು ಎಚ್ಚರಿಸಬೇಕಾದ ಉಸ್ತುವಾರಿಯೇ ಕರ್ನಾಟಕದಲ್ಲಿ ಮರೀಚಿಕೆಯಾಗಿದ್ದಾರೆ.

ಆಡಳಿತರೂಢ ಪಕ್ಷದಲ್ಲಿನ ಆಂತರಿಕ ಕಲಹದ ಲಾಭ ಪಡೆಯಲು ರಣತಂತ್ರ ರೂಪಿಸ ಬೇಕಿದ್ದ ರಾಧಾಮೋಹನ್ ದಾಸ್ ಅಗರ್ವಾಲ್, ರಾಜ್ಯದಲ್ಲಿ ಪಕ್ಷ ಸಂಘಟನೆಯತ್ತ ಮುಖಹಾಕದೇ ತಿಂಗಳುಗಳೇ ಕಳೆದಿವೆ. ವರ್ಷದಲ್ಲಿ ಒಂದೆರೆಡು ಬಾರಿ ರಾಜ್ಯಕ್ಕೆ ಆಗಮಿಸಿ ದ್ದರೂ, ‘ಅತಿಥಿ’ ರೂಪದಲ್ಲಿ ಬಂದು ಹೋಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿನ ಹತ್ತು ಹಲವು ಗೊಂದಲಗಳಿಂದ ಸಂಘಟನೆ ಸಂಪೂರ್ಣ ಕುಸಿದಿದ್ದರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಾಧಾಮೋಹನ್, ನಾಮ್ ಕೇ ವಾಸ್ತೆ ಉಸ್ತುವಾರಿ ಯಾಗಿರುವುದು ಪಕ್ಷ ಸಂಘಟನೆಗೆ ಬಹುದೊಡ್ಡ ಹಿನ್ನಡೆ ಎನ್ನುವ ವಿಶ್ಲೇಷಣೆ ಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ: Vishweshwar Bhat Column: ನೊಬೆಲ್‌ ಪುರಸ್ಕೃತ ಸಾಹಿತಿಗಳಿಬ್ಬರು ಹೊಡೆದಾಡಿಕೊಂಡ ಪ್ರಸಂಗ !

ಕರ್ನಾಟಕ ಬಿಜೆಪಿಗೆ ರಾಜ್ಯಾಧ್ಯಕ್ಷರ ನೇಮಕ ಇಲ್ಲವೇ ಮುಂದುವರಿಕೆಯ ಗೊಂದಲ ಇನ್ನೂ ಹಾಗೆ ಮುಂದುವರಿದಿದೆ. ಈ ಹೊತ್ತಿನಲ್ಲಿ ರಾಜ್ಯ ನಾಯಕರಿಗೆ ನಿರ್ದೇಶನ ನೀಡಬೇಕಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಜ್ಯ ಘಟಕದ ಪಾಲಿಗೆ ಮರೀಚಿಕೆಯಾಗಿ ಉಳಿದಿದ್ದಾರೆ. ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಬಾರಿ ಅಧಿಕೃತವಾಗಿ ಭೇಟಿ ಕೊಟ್ಟಿದ್ದು, ಇತ್ತೀಚಿಗೆ ಬಂದು ಹೋಗುವುದೂ ಗೊತ್ತಾಗುತ್ತಿಲ್ಲ.

ಹೀಗಾಗಿ ಪಕ್ಷ ಹಾಗೂ ಸಂಘಟನೆ ಸೊರಗುತ್ತಿದೆ ಎಂಬ ಬಲವಾದ ಕೂಗು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಬಿಜೆಪಿಯ ರಾಜ್ಯ ಉಸ್ತುವಾರಿಯಾಗಿ ರಾಧಾಮೋಹನ್ ದಾಸ್ ಅಗರ್ವಾಲ್‌ರನ್ನು ನೇಮಕ ಮಾಡಲಾಗಿತ್ತು. ಇದಕ್ಕಿಂತಲೂ ಮೊದಲು ಅರುಣ್ ಸಿಂಗ್ ರಾಜ್ಯದ ಉಸ್ತುವಾರಿಯಾಗಿದ್ದರು.

ರಾಧಾ ಮೋಹನ್ ದಾಸ್ ಅಗರ್ವಾಲ್ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಿದ್ದರು. ಉತ್ತರಪ್ರದೇಶದ ಗೋರಖ್‌ಪುರ (ನಗರ) ವಿಧಾನಸಭಾ ಕ್ಷೇತ್ರದಿಂದ ೪ ಬಾರಿ ಶಾಸಕರಾಗಿದ್ದ, ಅಗರ್ವಾಲ್ ಸದ್ಯ ರಾಜ್ಯಸಭಾ ಸದಸ್ಯರೂ ಆಗಿದ್ದಾರೆ.

ಒಳಜಗಳ ಬಿಡಿಸುವುದಕ್ಕೂ ಬರಲಿಲ್ಲ: ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿಯನ್ನು ಮತ್ತಷ್ಟು ಸಮರ್ಥವಾಗಿ ಕಟ್ಟಲು ಹಾಗೂ ಇಲ್ಲಿನ ಒಳಜಗಳ ಹಾಗೂ ಬಣ ಬಡಿದಾಟ ಸರಿಪಡಿಸಲು ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಇದ್ದಾರೆ. ರಾಜ್ಯ ಬಿಜೆಪಿ ಘಟಕದಲ್ಲಿ ಜಿಲ್ಲಾಧ್ಯಕ್ಷರ ನೇಮಕದಿಂದ ಆರಂಭವಾದ ಬಣ ಬಡಿದಾಟ ನಂತರ ಅಧ್ಯಕ್ಷ ಗಾದಿಯ ಗೊಂದಲ ಇಂದಿಗೂ ಮುಂದು ವರಿದಿದೆ. ಈ ವೇಳೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಜ್ಯ ಉಸ್ತುವಾರಿ ಬಂದು ಸಭೆ ಮಾಡಿ ದ್ದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ಸಮಸ್ಯೆ ಉಪಶಮನಕ್ಕೆ ಕೈಗೊಳ್ಳಬೇಕಾದ ಕೆಲಸವನ್ನೂ ಮಾಡಲಿಲ್ಲ ಎಂಬ ಅಳಲು ಕಾರ್ಯಕರ್ತರದ್ದಾಗಿದೆ.

ಇದೇ ಸಮಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಣ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದು ಹೋರಾಟ ಮಾಡಿದ್ದರೂ, ರಾಜ್ಯ ಉಸ್ತುವಾರಿ ಇಲ್ಲಿನ ಸಮಸ್ಯೆ ತಣಿಸುವ ಕೆಲಸ ಮಾಡಲಿಲ್ಲ. ಸಹ ಉಸ್ತುವಾರಿಯಾಗಿರುವ ಸುಧಾಕರ ರೆಡ್ಡಿ ಒಂದೆರಡು ಸಭೆಗಳನ್ನು ನಡೆಸಿದರೇ ವಿನಃ ಸಮಸ್ಯೆ ಪರಿಹಾರಕ್ಕೆ ಸೂತ್ರ ವನ್ನೂ ಹಣಿಯಲಿಲ್ಲ. ಹೀಗಾಗಿ ಕಾರ್ಯ ಕರ್ತರಲ್ಲದೆ ನಾಯಕರ ಮಟ್ಟದಲ್ಲೂ ಕೂಡ ಉಸ್ತುವಾರಿ ಬಗ್ಗೆ ಅಸಮಾಧಾನವಿದ್ದರೂ ಹೊರಗಡವುವಂತಿಲ್ಲ ಎಂಬಂತಾಗಿದೆ.

ಹೋರಾಟಗಳನ್ನು ಗಟ್ಟಿ ಮಾಡಿಲ್ಲ: ಬೇಸರ ಸರಕಾರದ ಕಿವಿ ಹಿಂಡಿ ಕೆಲಸ ಮಾಡಲು ನಿರ್ದೇಶನ ನೀಡಲು ರಾಜ್ಯ ಬಿಜೆಪಿ ನಾಯಕರು ಇನ್ನೂ ಮುಂದಡಿ ಇಟ್ಟಿಲ್ಲ. ಪ್ರತಿಪಕ್ಷದ ನಾಯಕ ಬೆಂಗಳೂರಿಗೆ ಸೀಮಿತವಾಗಿ ಹೋರಾಟಗಳನ್ನು ಮಾಡುತ್ತಿದ್ದರೂ ಅದು ಗಟ್ಟಿ ಯಾಗಿ ನಿಲ್ಲುತ್ತಿಲ್ಲ ಎಂಬುದು ಕೂಡ ಜನಜನಿತ. ಇನ್ನು ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಕಳೆದೆರಡು ದಿನದಲ್ಲಿ ದೆಹಲಿ ಯಾತ್ರೆಯಲ್ಲಿದ್ದರೂ ರಾಜ್ಯದಲ್ಲಿ ಹೋರಾಟ ಮಾಡಬೇಕಾದ ವಿಚಾರದ ಬಗ್ಗೆ ಕಾರ್ಯತಂತ್ರ ಹೆಣೆದಿಲ್ಲ ಎಂಬುದು ಕಾರ್ಯಕರ್ತರ ನೋವಿನ ನುಡಿಯಾಗಿದೆ.

ಇವೆಲ್ಲದಕ್ಕೂ ರಾಜ್ಯ ಬಿಜೆಪಿ ನಾಯಕರಲ್ಲಿ ಉತ್ಸಾಹ ತುಂಬಿ ರಾಜ್ಯ ಕಾಂಗ್ರೆಸ್ ಸರಕಾರದ ಲೋಪದೋಷಗಳನ್ನು ಪತ್ತೆ ಹಚ್ಚಿ ಹೋರಾಟಕ್ಕೆ ಅಣಿ ಮಾಡಬೇಕಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಎರಡು ತಿಂಗಳಿನಿಂದ ರಾಜ್ಯದ ಕಡೆ ತಿರುಗಿಯೂ ನೋಡಿಲ್ಲ. ಇದಲ್ಲದೆ ರೈತರ ಸಮಸ್ಯೆ ಸೇರಿದಂತೆ ರಾಜ್ಯದಲ್ಲಿ ಕಂಡು ಬರುತ್ತಿ ರುವ ಹಲವು ಸಮಸ್ಯೆಗಳ ಬಗ್ಗೆ ಕಾರ್ಯತಂತ್ರ ಹಣಿಯಲು ಯಾವುದೇ ಸಲಹೆ, ಸೂಚನೆ ಕೊಟ್ಟಂತೆ ಕಾಣುತ್ತಿಲ್ಲ ಎಂಬುದು ಕೂಡ ರಾಜ್ಯ ನಾಯಕರ ಹಾಗೂ ಕಾರ್ಯಕರ್ತರ ಅಳಲಾಗಿದೆ.