ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಒಂದು ತಲೆಮಾರಿನ ಓದುಗರ ಅಭಿರುಚಿ ಹೆಚ್ಚಿಸಿದ ಸಾಹಿತಿ

ಭೈರಪ್ಪನವರ ಬಾಲ್ಯದ ದಟ್ಟ ಅನುಭವಗಳ ಹಂದರ ಹೊಂದಿರುವ ‘ಗೃಹಭಂಗ’ದ ಕುರಿತು ಈಗಾಗಲೇ ಸಾಕಷ್ಟು ವಿಶ್ಲೇಷಣೆಗಳು ನಡೆದಿವೆ. ಆದರೆ, ಪೂರ್ಣ ಪ್ರಮಾಣದಲ್ಲಿ ‘ಗೃಹಭಂಗ’ ವನ್ನು ವಿಶ್ಲೇಷಿಸುವ, ಚರ್ಚಿಸುವ ಕೆಲಸಕ್ಕೆ ಇನ್ನೂ ಅವಕಾಶವಿದೆ ಎಂದೇ ನನ್ನ ಅನಿಸಿಕೆ. ನಮ್ಮ ರಾಜ್ಯದ ಬಯಲುಸೀಮೆಯ (ಚನ್ನರಾಯಪಟ್ಟಣ ತಾಲೂಕು) ಹಳ್ಳಿಯ ಸಮತೋಲಿತ ಜೀವನವು, 1920-40ರ ದಶಕದ ಅವಧಿಯಲ್ಲಿ ಹೇಗೆ ನಲುಗಿತು, ಛಿದ್ರವಾಯಿತು ಎಂಬುದರ ಚಿತ್ರಣ ‘ಗೃಹಭಂಗ’ ದಲ್ಲಿದೆ.

ಒಂದು ತಲೆಮಾರಿನ ಓದುಗರ ಅಭಿರುಚಿ ಹೆಚ್ಚಿಸಿದ ಸಾಹಿತಿ

-

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Sep 25, 2025 7:09 AM

ಶಶಿಧರ ಹಾಲಾಡಿ

ನಾನು ಮೊದಲ ಬಾರಿ ಎಸ್.ಎಲ್.ಭೈರಪ್ಪ ಅವರನ್ನು ನೋಡಿದ್ದು ಶಿವಮೊಗ್ಗದಲ್ಲಿ, ಅದು ೯೦ರ ದಶಕ. ಕಾರ್ಯಕ್ರಮವೊಂದಕ್ಕೆ ಬಂದಿದ್ದ ಅವರನ್ನು ನಾನು, ನನ್ನ ಮಡದಿ, ಮಕ್ಕಳು ಎಲ್ಲರೂ ಹತ್ತಿರದಿಂದ ನೋಡಿದೆವು. ಅವರ ಒಂದು ಕಾದಂಬರಿಯನ್ನು ಖರೀದಿಸಿ, ಅದರ ಮೇಲೆ ಅವರ ಹಸ್ತಾಕ್ಷರ ಪಡೆದೆವು. ಕಾದಂಬರಿಕಾರ ಭೈರಪ್ಪನವರನ್ನು ಹತ್ತಿರದಿಂದ ನೋಡುವುದು ಎಂದರೆ, ಅದೊಂದು ಸಂಭ್ರಮ! ಏಕೆಂದರೆ, ನಮ್ಮ ಕುಟುಂಬದವರು, ಭಾವಂದಿರು, ಬಂಧುಗಳು ಎಲ್ಲರೂ ಬಹು ಹಿಂದಿನಿಂದಲೂ ಭೈರಪ್ಪನವರ ಕಾದಂಬರಿಗಳನ್ನು ಓದಿಕೊಂಡು ಬಂದಿದ್ದೇವೆ.

ಹೊನ್ನಾಳಿ ಸನಿಹದ ಸವಳಂಗ ಎಂಬ ಪುಟ್ಟ ಹಳ್ಳಿಯಲ್ಲಿ ಹೊಟೆಲ್ ವ್ಯವಹಾರ ನಡೆಸುತ್ತಿದ್ದ ನನ್ನ ಭಾವಂದಿರು, 1981ರ ಸಮಯದಲ್ಲೇ ಭೈರಪ್ಪನವರ ಅದುವರೆಗಿನ ಎಲ್ಲಾ ಕಾದಂಬರಿಗಳನ್ನು ಖರೀದಿಸಿ, ಓದಿ, ಆ ಹಳ್ಳಿಯಲ್ಲಿದ್ದ ತಮ್ಮ ಬಾಡಿಗೆ ಮನೆಯಲ್ಲಿಟ್ಟುಕೊಂಡು, ಬಂದವರಿಗೆಲ್ಲಾ ಅಭಿಮಾನದಿಂದ ತೋರಿಸುತ್ತಿದ್ದರು,

ಮಾತ್ರವಲ್ಲ, ಓದಲು ಎರವಲು ಕೊಡುತ್ತಿದ್ದರು. ಅವರಲ್ಲಿದ್ದ ಆ ಎಲ್ಲಾ ಕಾದಂಬರಿಗಳ್ನೂ ನಮ್ಮ ಕುಟುಂಬದವರು, ಬಂಧುಗಳು ಪಡೆದು ಓದುವ ಪರಿಪಾಠವಿತ್ತು. ಇಲ್ಲಿ ಭೈರಪ್ಪನವರ ಮೇಲಿನ ಅಭಿಮಾನದ ಜತೆಯಲ್ಲೇ, ಹಳ್ಳಿಗಾಡಿನ ಸಾಮಾನ್ಯ ಕುಟುಂಬವೊಂದು ಓದುವ ಸಂಸ್ಕೃತಿಯನ್ನು ಬೆಳೆಸಿಕೊಂಡ ಪ್ರಕ್ರಿಯೆಯನ್ನೂ ಗಮನಿಸಬಹುದು.

ಇದನ್ನೂ ಓದಿ: Shashidhara Halady Column: ಬಿರುಬೇಸಗೆಯ ದಿನಗಳಲ್ಲಿ ಹೊಮ್ಮುತ್ತದೆ ತಾರಕ ಸ್ವರ !

ಆ ಪುಟ್ಟ ಹಳ್ಳಿಯಲ್ಲಿ ಹೊಟೇಲ್ ನಡೆಸುತ್ತಿದ್ದ ನಮ್ಮ ಭಾವಂದಿರಲ್ಲಿ ಓದುವ ಅಭಿರುಚಿ ಬೆಳೆಯಬೇಕೆಂದರೆ, ಅವರ ಎಲ್ಲಾ ಕಾದಂಬರಿಗಳನ್ನು ಖರೀದಿಸಿ, ಸಂಗ್ರಹಿಸಿಕೊಂಡು ಆಗಾಗ ಓದಬೇಕೆಂಬ ಆಸೆ ಬೆಳೆಯಬೇಕೆಂದರೆ, ಅವರ ಆ ಕಾದಂಬರಿಗಳ ಸತ್ವವನ್ನು ಗಮನಿಸಬೇಕು. ಅಂದಿನ ‘ಜನಪ್ರಿಯ ಸಾಹಿತ್ಯ’ಕ್ಕಿಂತ ಬಹು ಉನ್ನತ ಮಟ್ಟದ, ಆದರೆ ಬಿಡದೆ ಓದಿಸಿಕೊಂಡು ಹೋಗುವ, ಮನೋಜ್ಞ ಕಾದಂಬರಿಗಳನ್ನು ಬರೆದು, ಜನಸಾಮಾನ್ಯರನ್ನು ಓದಲು ಹಚ್ಚಿದ್ದು ಭೈರಪ್ಪನವರ ಹೆಗ್ಗಳಿಕೆ. ಕನ್ನಡ ನಾಡಿನ ಜನಸಾಮಾನ್ಯರಲ್ಲಿ ಭೈರಪ್ಪನವರ ಕಾದಂಬರಿಗಳು ಓದುವ ಅಭಿರುಚಿಯನ್ನು ಬೆಳೆಸಿದ ಪರಿಯು ಒಂದು ವಿಸ್ಮಯ. ಈ ಕುರಿತು ಇತರ ಸಾಹಿತಿಗಳು, ಚಿಂತಕರು, ಸಂಕೋಚವಿಲ್ಲದೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಒಂದೆರಡು ತಲೆಮಾರಿನ ಓದುಗರಿಗೆ, ಓದುವ ರುಚಿಯನ್ನು ಹತ್ತಿಸಿದವರಲ್ಲಿಲ ಭೈರಪ್ಪನವರು ಪ್ರಮುಖರು. ಈ ಕುರಿತು ತೇಜಸ್ವಿಯವರು ಹಿಂದೊಮ್ಮೆ ಬರೆದದ್ದನ್ನು ಗಮನಿಸಬಹುದು.

“ಕಾದಂಬರಿಕಾರರಾಗಿ ಖ್ಯಾತರಾಗಿರುವ ಎಸ್.ಎಲ್. ಭೈರಪ್ಪನವರು ಕನ್ನಡ ಗದ್ಯಸಾಹಿತ್ಯದ ಬೆಳವಣಿಗೆಗೆ ಗಣನೀಯ ಸೇವೆ ಸಲ್ಲಿಸಿರುವವರು. ನವ್ಯಸಾಹಿತ್ಯ ಸಂದರ್ಭದಲ್ಲಿ ಸಾಹಿತ್ಯವನ್ನು ಕೊಂಡು ಓದುವವರ ಸಂಖ್ಯೆಯೇ ನಶಿಸಿ ಹೋಗುತ್ತಿದ್ದಾಗ, ಭೈರಪ್ಪನವರು ಓದುಗ ಸಹೃದಯರ ಸಮುದಾಯವನ್ನು ಜೀವಂತವಾಗಿ ಇಟ್ಟವರು. ಸಾಹಿತಿಗಳಲ್ಲಿ ಬಹುಪಾಲು ಪ್ರಶಸ್ತಿ, ಸನ್ಮಾನಗಳ ಬೆನ್ನುಹತ್ತಿರುವ, ಸ್ವಂತ ಅಭಿಮಾನಿಗಳ ಕೂಟವನ್ನು ಕಟ್ಟಿಕೊಳ್ಳುತ್ತಿರುವ ಸಮಕಾಲೀನ ಸಂದರ್ಭದಲ್ಲಿ, ಸಾಹಿತ್ಯ ಅಂತಿಮವಾಗಿ ಲೇಖಕ ಮತ್ತು ಓದುಗರ ನಡುವಿನ ಸಂವಾದವಾಗಿಯೇ ಬದುಕಬೇಕಾಗುತ್ತದೆ ಎಂಬ ವಾಸ್ತವವನ್ನು ಮರೆಯದೆ ಇವತ್ತಿಗೂ ಕೃತಿರಚನೆ ಮಾಡುತ್ತ ಬಂದಿರುವ ಲೇಖಕ ಶ್ರೀಯುತ ಎಸ್.ಎಲ್. ಭೈರಪ್ಪನವರು"-ಕೆ.ಪಿ ಪೂರ್ಣಚಂದ್ರ ತೇಜಸ್ವಿ (ತೇಜಸ್ವಿ ಪತ್ರಗಳು ಕೃತಿಯಲ್ಲಿ) ನನ್ನ ಮೇಲೆ ಪ್ರಚಂಡ ಪರಿಣಾಮ ಬೀರಿದ ಕಾದಂಬರಿಗಳಲ್ಲಿ ಭೈರಪ್ಪನವರ ‘ಗೃಹಭಂಗ’ ಮುಂಚೂಣಿಯಲ್ಲಿದೆ. ನಮ್ಮ ದೇಶದ 14 ಕ್ಕೂ ಅಧಿಕ ಭಾಷೆಗಳಿಗೆ ಅನುವಾದಗೊಂಡಿ ರುವ ಈ ಕಾದಂಬರಿಯು, ವಿಶ್ವದರ್ಜೆಯ ಕಾದಂಬರಿಯಾಗಿ ಗುರುತಿಸಿಕೊಳ್ಳುವಷ್ಟು ಸಶಕ್ತಿವಾಗಿದೆ, ಮನೋಜ್ಞವಾಗಿದೆ.

ಭೈರಪ್ಪನವರ ಬಾಲ್ಯದ ದಟ್ಟ ಅನುಭವಗಳ ಹಂದರ ಹೊಂದಿರುವ ‘ಗೃಹಭಂಗ’ದ ಕುರಿತು ಈಗಾಗಲೇ ಸಾಕಷ್ಟು ವಿಶ್ಲೇಷಣೆಗಳು ನಡೆದಿವೆ. ಆದರೆ, ಪೂರ್ಣ ಪ್ರಮಾಣದಲ್ಲಿ ‘ಗೃಹಭಂಗ’ ವನ್ನು ವಿಶ್ಲೇಷಿಸುವ, ಚರ್ಚಿಸುವ ಕೆಲಸಕ್ಕೆ ಇನ್ನೂ ಅವಕಾಶವಿದೆ ಎಂದೇ ನನ್ನ ಅನಿಸಿಕೆ. ನಮ್ಮ ರಾಜ್ಯದ ಬಯಲುಸೀಮೆಯ (ಚನ್ನರಾಯಪಟ್ಟಣ ತಾಲೂಕು) ಹಳ್ಳಿಯ ಸಮತೋಲಿತ ಜೀವನವು, 1920-40ರ ದಶಕದ ಅವಧಿಯಲ್ಲಿ ಹೇಗೆ ನಲುಗಿತು, ಛಿದ್ರವಾಯಿತು ಎಂಬುದರ ಚಿತ್ರಣ ‘ಗೃಹಭಂಗ’ ದಲ್ಲಿದೆ.

ಬ್ರಿಟಿಷರು ತಮ್ಮ ಲಾಭಕ್ಕಾಗಿ ತಂದ ಬಿಗಿ ಕಾನೂನುಗಳು, ಅವರ ಆಶ್ರಯದಲ್ಲಿ ರಾಜ್ಯಭಾರ ನಡೆಸುತ್ತಿದ್ದ ಮೈಸೂರು ಸಂಸ್ಥಾನದ ಅಧಿಕಾರಶಾಹಿ ನಡೆಸುತ್ತಿದ್ದ ದಬ್ಬಾಳಿಕೆ, ಮೈಸೂರು ಪೊಲೀಸರು ಸ್ವಾತಂತ್ರ್ಯಪೂರ್ವದಲ್ಲಿ ತೋರುತ್ತಿದ್ದ ದರ್ಪ, ದುಂಡಾವರ್ತಿ - ಇವೆಲ್ಲವೂ, ಅಂದಿನ ಗ್ರಾಮೀಣ ಬದುಕಿನ ಬೆನ್ನೆಲುಬನ್ನೇ ಮುರಿದ ಚಿತ್ರಣ ಈ ಕಾದಂಬರಿಯಲ್ಲಿದೆ.

ಶಾನುಭೋಗಿಕೆ ನಡೆಸುತ್ತಿದ್ದ ಕುಟುಂಬವೊಂದು ಸಂಪೂರ್ಣವಾಗಿ ಛಿದ್ರವಾಗುವ ಸನ್ನಿವೇಶವು, ಮುಂದಿನ ದಶಕಗಳಲ್ಲಿ ಕೃಷಿಕರು, ಇತರ ಸಮುದಾಯದವರು ಪ್ರಾಧಾನ್ಯ ಪಡೆಯುವುದರ ಮುನ್ ಸೂಚನೆಯಾಗಿಯೂ ರೂಪುಗೊಂಡಿದೆ ಮತ್ತು ಈ ರೀತಿಯ ಹಲವು ವಿಚಾರಗಳ ಹಿನ್ನೆಲೆಯಲ್ಲಿ ಗೃಹಭಂಗವನ್ನು ಮರುಓದಿಗೆ ಒಳಪಡಿಸುವ ಅಗತ್ಯವಿದೆ.

ಗೃಹಭಂಗ, ದೂರಸರಿದರು, ಪರ್ವ, ಸಾರ್ಥ, ವಂಶವೃಕ್ಷ, ಅನ್ವೇಷಣೆ, ದಾಟು, ತಂತು ಮೊದಲಾದ ಅವರ ಕಾದಂಬರಿಗಳನ್ನು ರಚನಾ ತಂತ್ರದ ದೃಷ್ಟಿಯಿಂದಲೂ ಗುರುತಿಸಬೇಕಾದ ಅಗತ್ಯವಿದೆ. ಒಂದೊಂದು ಕಾದಂಬರಿಯಲ್ಲಿ ಒಂದೊಂದು ಬಗೆಯ ತಂತ್ರವನ್ನು ಬೈರಪ್ಪನವರು ಅಳವಡಿಸಿದ್ದು ಗಮನಕ್ಕೆ ಬರುತ್ತದೆ. ಭೈರಪ್ಪನವರು ಕನ್ನಡ ಸಾರಸ್ವತ ಲೋಕ ನೀಡಿದ ಕೆಲವೇ ವಿಶ್ವದರ್ಜೆಯ ಸಾಹಿತಿಗಳಲ್ಲಿ ಒಬ್ಬರು ಎಂಬುದನ್ನು ಗುರುತಿಸಿದಾಗ, ಅವರ ಕೊಡುಗೆಯ ಮೌಲ್ಯ ಅರಿವಾದೀತು.

ಕನ್ನಡ ಕಾದಂಬರಿ ಲೋಕವನ್ನು ಶ್ರೀಮಂತಗೊಳಿಸಿದ, ಪ್ರಬುದ್ಧ ವಿಷಯಗಳನ್ನು ಕಾದಂಬರಿ ಯಲ್ಲಿ ಅಳವಡಿಸಿ, ಜನಸಾಮಾನ್ಯ ಓದುಗರನ್ನು ಬೆರಗಾಗಿಸಿದ, ಚಿಂತನೆಗೆ ದೂಡಿದ ಕಾದಂಬರಿ ಕಾರರಾದ ಎಸ್.ಎಲ್ ಭೈರಪ್ಪನವರಿಗೆ ಅಂತಿಮ ನಮನಗಳು..!