Interview: ತವರಿನ ಬವಣೆಗೆ ಮಿಡಿದ ಭೈರಪ್ಪ ಹೃದಯ
ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿ ಬಿದ್ದಿದೆ. ಕನ್ನಡದ ಹಿರಿಯ ಕಾದಂಬರಿ ಕಾರ, ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತ ಎಸ್‌ಎಲ್ ಭೈರಪ್ಪನವರು ಬುಧವಾರ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಕೊನೆಯದಾಗಿ ಭೈರಪ್ಪನವರು ವಿಶ್ವವಾಣಿ ಸಮೂಹಕ್ಕೆ ಸಂದರ್ಶನ ನೀಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು

-

ಭೈರಪ್ಪನವರ ಹುಟ್ಟೂರಿಗೆ ಕುಡಿಯುವ ನೀರಿನ ಯೋಜನೆ ಬಂದ ಸಮಯದಲ್ಲಿ ವಿಶ್ವವಾಣಿ ಸಮೂಹಕ್ಕೆ ವಿಶೇಷ ಸಂದರ್ಶನ ನೀಡಿದ್ದರು. ಇದು ಅವರ ಕೊನೆಯ ಸಂದರ್ಶನವೂ ಹೌದು. ಈ ಹೊತ್ತಿನಲ್ಲಿ ಹರೀಶ್ ಕೇರ ಅವರಿಗೆ ನೀಡಿದ ಸಂದರ್ಶನದ ಆಯ್ದ ಭಾಗ.
ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿ ಬಿದ್ದಿದೆ. ಕನ್ನಡದ ಹಿರಿಯ ಕಾದಂಬರಿ ಕಾರ, ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತ ಎಸ್‌ಎಲ್ ಭೈರಪ್ಪನವರು ಬುಧವಾರ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಕೊನೆಯದಾಗಿ ಭೈರಪ್ಪನವರು ವಿಶ್ವವಾಣಿ ಸಮೂಹಕ್ಕೆ ಸಂದರ್ಶನ ನೀಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಭೈರಪ್ಪನವರು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ಕಟ್ಟೆಗಳಿಗೆ ಸರಕಾರದ ವತಿಯಿಂದ ಏತ ನೀರಾವರಿ ಯೋಜನೆಯಡಿ ನೀರು ಪೂರೈಕೆಗೆ ಶ್ರಮ ವಹಿಸಿದ್ದಾರೆ.
ಯೋಜನೆ ಸಫಲಗೊಂಡು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಕಟ್ಟೆ ಗಳಿಗೆ ನೀರು ಪೂರೈಕೆಯಾಗಿದೆ. ಸುತ್ತಲ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಏರಿಕೆ ಯಿಂದಾಗಿ ಸಾವಿರಾರು ಕೊಳವೆ ಬಾವಿಗಳು ಮರುಪೂರಣಗೊಂಡು ರೈತ ಸಮುದಾಯಕ್ಕೆ ಖುಷಿ ನೆಮ್ಮದಿ ದೊರೆತಿದೆ. ಇದರಿಂದ ಹರ್ಷ ಗೊಂಡ ಊರಿನ ಜನ ಮಾ.9ರಂದು ಹುಟ್ಟೂರು ಸಂತೇಶಿವರ ದಲ್ಲಿ ಭೈರಪ್ಪನವರನ್ನು ಗೌರವಿಸಿದ್ದರು. ಈ ಹಿನ್ನೆಲೆಯಲ್ಲಿ ಭೈರಪ್ಪ ಅವರನ್ನು ವಿಶ್ವವಾಣಿ ಸಂದರ್ಶಿಸಿತ್ತು. ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: Harish Kera Column: ಹಾರಿ ಬಂದ ಪತಂಗ, ಚಂದ ಇದರ ಸಂಗ
ಭಾನುವಾರ ನಿಮ್ಮ ಹುಟ್ಟೂರಿನವರು ನಿಮಗೊಂದು ಕೃತಜ್ಞತಾ ಸಮರ್ಪಣೆ ಹಾಗೂ ಅಭಿನಂದನಾ ಸಮಾರಂಭ ಇಟ್ಟುಕೊಂಡಿದ್ದಾರೆ. ಹುಟ್ಟೂರಿನ ಕುರಿತ ನಿಮ್ಮ ಗಾಢವಾದ ನೆನಪುಗಳನ್ನು ನಿಮ್ಮ ಆತ್ಮಕತೆ ‘ಭಿತ್ತಿ’ಯಲ್ಲೂ ಕಟ್ಟಿಕೊಟ್ಟಿದ್ದೀರಿ. ಹಿಂದಿರುಗಿ ನೋಡಿದರೆ ಏನನಿಸುತ್ತದೆ?
ಭೈರಪ್ಪ: ಹುಟ್ಟೂರು ಅಂದರೆ ಎಲ್ಲರಿಗೂ ಪ್ರೀತಿಯೇ. ಆದರೆ ನನಗೆ ಸಂತೇಶಿವರದ ಬದುಕು ಸುಖಕರವಾಗೇನೂ ಇರಲಿಲ್ಲ. ಅದು ಸಂಕಟವಾಗಿಯೇ ಇತ್ತು. ಕಾರಣ ಮನೆಯಲ್ಲಿದ್ದ ಬಡತ, ಎಷ್ಟೋ ದಿವಸ ಒಂದಿಷ್ಟು ಊಟ ಮಾಡುವುದಕ್ಕೆ ರಾಗಿ ಕೂಡ ಇರುತ್ತಿರಲಿಲ್ಲ. ಅದಕ್ಕೆ ಕಾರಣ ನನ್ನ ಅಜ್ಜಿ ಮತ್ತು ತಂದೆ. ಚಿಕ್ಕಂದಿನಲ್ಲಿ ನಾನು ಸಾಹಸಿಯಾಗಿದ್ದೆ. ಮುಖ್ಯವಾಗಿ ಈಜು. ನನ್ನಮ್ಮನಿಗೆ ಅದರ ಬಗ್ಗೆ ಹೆದರಿಕೆ ಇತ್ತು. ಈಜಕೂಡದು ಎನ್ನುತ್ತಿದ್ದರು. ಆದರೆ ನಾನು ಕೇಳುತ್ತಿರಲಿಲ್ಲ. ಆಮೇಲೆ ನಾಟಕಗಳು ಆಗ ಬಹಳ. ಗುಬ್ಬಿ ವೀರಣ್ಣನವರ ಕಂಪನಿಯ ಪ್ರದರ್ಶನಗಳು ಆಗುತ್ತಿದ್ದವು.
ನಾಟಕದ ಹಾಡುಗಳು ಬಾಯಿಪಾಠ ಬರುತ್ತಿದ್ದವು. ಮನೆಯಲ್ಲಿ ತಾಯಿಗೆ ಹೇಳದೆ ನಾಟಕ ಕಂಪನಿ ಹಿಂದೆ ಹೊರಟುಬಿಡುತ್ತಿದ್ದೆ. ಒಮ್ಮೆ ಹೀಗೆ ಬೇರೆ ಹಳ್ಳಿಗೆ ಹೋಗಿ ರಾತ್ರಿಯಿಡೀ ಅಲ್ಲಿದ್ದು ಮರುದಿನ ಮಧ್ಯಾಹ್ನ ಮನೆಗೆ ಬಂದೆ. ಅಷ್ಟರಗಲೇ ಮನೆಯಲ್ಲಿ ತಾಯಿ ಭಯದಿಂದ ಊರೆ ನನ್ನನ್ನು ಹುಡುಕಿಸಿ, ಕೆರೆಯಲ್ಲೂ ಹುಡುಕಿಸಿದ್ದರು.
ನಿಮ್ಮ ಮಾವನ ಜತೆಗೆ ನೀವಿದ್ದ ದಿನಗಳು ಇನ್ನಷ್ಟು ಯಾತನಾದಾಯಕವಾಗಿದ್ದವು?
ಭೈರಪ್ಪ: ನಮ್ಮ ತಂದೆ ಲಿಂಗಣ್ಣಯ್ಯ ಅಂತ. ನಮ್ಮ ಕುಟುಂಬಕ್ಕೆ ಶಾನುಭೋಗಿಕೆ ಇತ್ತು. ಆದರೆ ನಮ್ಮ ತಂದೆಯ ಬೇಜವಾಬ್ದಾರಿಯಿಂದಾಗಿ ಅದನ್ನೆ ಕಳೆದುಕೊಂಡಿದ್ದರು. ನನ್ನನ್ನು ನನ್ನ ತಾಯಿ ಅವಳ ಅಣ್ಣನ ಹತ್ತಿರ ಕಳಿಸಿದರು. ಮಾವ ಗುಡ್ಡಪ್ಪ ಅಂತ, ಒಂದು ದೇವಸ್ಥಾನದಲ್ಲಿ ಪೂಜೆ, ಶಾಸ್ತ್ರ ಹೇಳೋದು ಎಲ್ಲ ಮಾಡುತ್ತಿದ್ದ. ಒಂದು ಪಲ್ಲ ರಾಗಿ, ಹುರುಳಿಕಾಳು, ಹರಳೆಣ್ಣೆ ಹೊರಿಸಿ ತಾಯಿ ನನ್ನನ್ನು ಅಲ್ಲಿಗೆ ಕಳಿಸಿದರು. ಎರಡು ವರ್ಷ ಇಟ್ಟುಕೊಂಡು ಲೋಯರ್ ಸೆಕೆಂಡರಿ ಓದಿಸು ಅಂತ ಹೇಳಿದರು. ತಾಯಿ ಇರುವಾಗ ಬಹಳ ಪ್ರೀತಿಯಿಂದ ನೋಡಿಕೊಂಡ.
ಮರುದಿನ ಮುಂಜಾನೆಯಿಂದಲೇ ಆತನ ಶಿಕ್ಷೆ ಶುರುವಾಯಿತು. ಆತ ನನ್ನ ಜುಟ್ಟು ಬಗ್ಗಿಸಿ ಹೊಡೆ ಯುತ್ತಿದ್ದ. ಇನ್ನೂ ಕತ್ತಲಿರುವಾಗಲೇ ಎದ್ದು ದನದ ಕೊಟ್ಟಿಗೆ ಕೆಲಸ ಮಾಡುತ್ತಿದ್ದೆ ಇಷ್ಟೆಲ್ಲ ಮಾಡಿದರೂ ಮಾವನಿಂದ ಹೊಡೆತ ಅಂದ್ರೆ ಹೊಡೆತ. ಸುತ್ತಲಿನ ಮನೆಗಳಲ್ಲಿ ಧಾನ್ಯ ಕದಿಯು ತ್ತಿದ್ದ. ನನಗೂ ಕದಿಯಲು ಪ್ರೇರೇಪಿಸುತ್ತಿದ್ದ. ನಾನು ಕದಿಯುತ್ತಿರಲಿಲ್ಲ. ಹೊಡೆಯುತ್ತಿದ್ದ.
ಭಾನುವಾರ ನಿಮ್ಮ ಹುಟ್ಟೂರಿನವರು ಪ್ಲೇಗ್‌ನ ದಾರುಣತೆ ನಿಮ್ಮ ಜೀವನದ ಘಟನೆಗಳಲ್ಲಿ ಹಾಸುಹೊಕ್ಕಾಗಿದೆ...
ಭೈರಪ್ಪ: ಆಗೆಲ್ಲ ಪ್ಲೇಗ್ ಸಾಕಷ್ಟು ಇತ್ತು. ಒಂದ್ಸಲ ನನ್ನ ಅಕ್ಕ, ಅಣ್ಣ, ನಾನು ಮೂವರಿಗೂ ಪ್ಲೇಗ್ ಬಂತು. ಒಂದೇ ದಿನ ಅಣ್ಣ ಮತ್ತು ಅಕ್ಕ ಇಬ್ಬರೂ ಸತ್ತುಹೋದರು. ನನಗೆ ಜೋರು ಕಾಯಿಲೆ. ನನ್ನಮ್ಮ ನನ್ನನ್ನು ಎತ್ತಿಕೊಂಡು ಹೋಗಿ ರಂಗಮ್ಮ ಎಂಬವರಿದ್ದರು, ಅವರ ಮಡಿಲಿನಲ್ಲಿ ಹಾಕಿ, ಈ ಮಗು ನನ್ನದಲ್ಲ, ನಿನ್ನ ಅದೃಷ್ಟ ಚೆನ್ನಾಗಿದ್ದರೆ ಬದುಕಿಕೊಳ್ಳಲಿ ಎಂದು ಅವರ ಮಡಿಲಿಗೆ ಹಾಕಿಬಿಟ್ಟರು. ನಾನು ಹೇಗೋ ಬದುಕಿದೆ. ಆಮೇಲೆ ನಾನು ಮಾವನ ಜತೆಗಿದ್ದಾಗ, ಪ್ಲೇಗ್‌ನಿಂದ ತಾಯಿ ತೀರಿಹೋಗಿ ಬಿಟ್ಟರು. ಅಪ್ಪ ಯಾವ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತಿರಲಿಲ್ಲ. ನಾನೇ ಊರಿಗೆ ಹೋಗಿ ತಾಯಿಯ ಅಂತ್ಯಕ್ರಿಯೆ ಮುಗಿಸಿ ಬಂದೆ. ಅದರ ಮರುದಿನವೂ ಬೆಳಗ್ಗೆ ಬೇಗ ಎದ್ದು ದದು ಸಗಣಿ ಬಾಚಲಿಲ್ಲ ಎಂದು ಮಾವ ಹೊಡೆದ. ನನ್ನ ತಮ್ಮ ಪ್ಲೇಗ್‌ನಿಂದ ತೀರಿಕೊಂಡಾಗ ನನಗೆ ಹದಿನಾರು ವರ್ಷ. ಅಂತ್ಯಸಂಸ್ಕಾರಕ್ಕೆ ಯಾರೂ ಬರಲಿಲ್ಲ. ಯಾಕೆಂದರೆ ಕುಟುಂಬದ ಬಡತನ, ದಾರಿದ್ರ್ಯ, ಅಪ್ಪನ ಬೇಜವಾಬ್ದಾರಿತನ, ಮೈತುಂಬ ಮಾಡಿಕೊಂಡ ಸಾಲ. ಆರು ವರ್ಷದ ಮಗುವಿನ ಹೆಣ ಹೆಗಲ ಮೇಲೆ ಹಾಕಿಕೊಂಡು ಹೋಗಿ ನಾನೇ ಸುಟ್ಟು ಹಾಕಿದೆ.
ಹುಟ್ಟಿ ಬೆಳೆದ ಊರಿನಲ್ಲಿ ಕೃತಜ್ಞತಾ ಸಮರ್ಪಣೆ ನಡೆಯುವ ಹೊತ್ತಿನಲ್ಲಿ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತಿರುವ ಭಾವನೆಗಳೇನು?
ಭೈರಪ್ಪ: ರಾಮಾಯಣದಲ್ಲಿ ಒಂದು ಪ್ರಸಂಗವಿದೆ. ರಾವಣನ್ನು ಕೊಂದ ಬಳಿಕ, ಲಂಕೆ ಚೆನ್ನಾಗಿದೆ, ಇಲ್ಲೇ ಇರೋಣ ಎಂದು ಲಕ್ಷ್ಮಣ ಹೇಳುವಾಗ ರಾಮ ಹೇಳುತ್ತಾನೆ- ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸ್ತ್ರೀ- ನನ್ನ ಜನ್ಮ ಭೂಮಿ ಅಯೋಧ್ಯೆಯೇ ನನಗೆ ಸ್ವರ್ಗಕ್ಕಿಂತ ಮಿಗಿಲು ಅಂತ. ಇಂಥ ಜನ್ಮಭೂಮಿಗಾಗಿ ಯಾವ ರೀತಿ ಸಹಾಯ ಮಾಡಬೇಕು ಅಂತ ಯೋಚನೆ ಮಾಡಿದೆ. ಅಂದು ಶಾಲೆಯಿದೆ. ಅಲ್ಲಿ ಕಲಿಯುತ್ತಿರುವವರು ಸುತ್ತಮುತ್ತಲಿನ ಹಳ್ಳಿಯ ಮಕ್ಕಳು. ಸಂತೇಶಿವರದ ಲೈಬ್ರರಿಗೆ ಪುಸ್ತಕಗಳನ್ನು ಕೊಟ್ಟು ಶಾಲೆಯ ಮಕ್ಕಳಿಗೆ ಓದಿಸಲು ಮುಂದಾದೆವು. ಅದಕ್ಕಿಂತ ಮುಖ್ಯ ವಾದ್ದು ಅಲ್ಲಿನ ಕೆರೆಯ ಹೂಳು ತೆಗೆಸಿ ಏತ ನೀರಾವರಿ ನೀರು ಬರುವಂತೆ ಶ್ರಮವಹಿಸಿದೆವು.
ನಲುವತ್ತು ವರ್ಷಗಳಿಂದ ಅದರ ಹೂಳು ತೆಗೆದೇ ಇರಲಿಲ್ಲ. ಅದಕ್ಕೆ ತುಂಬಾ ಪ್ರಯತ್ನ ಮಾಡ ಬೇಕಾಯಿತು. ಹಲವಾರು ವರ್ಷ ರಾಜಕಾರಣಿಗಳ ಹಿಂದೆ ಬೀಳಬೇಕಾಯಿತು. ಈ ಪ್ರಯತ್ನದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ನನಗೆ ತುಂಬಾ ಸಹಾಯ ಮಾಡಿದರು. ಮೊದಲು ಆಗ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪವರಲ್ಲಿಗೆ ನನ್ನನ್ನು ಕರೆದೊಯ್ದು, ಊರಿನ ಕೆರೆ ತುಂಬಿಸುವ ತೆಗೆಸುವ ಕುರಿತು ಮಾತನಾಡಿದರು. ಅವರು ಆ ಕಾರ್ಯಕ್ಕೆ ಸರಕಾರದ ವತಿಯಿಂದ ಚಾಲನೆ ನೀಡಿದರು. ಆದರೆ ಅಷ್ಟರಲ್ಲಿ ಕೊರೊನಾ ಕಾಯಿಲೆಯ ಪರಿಣಾಮ ಅದು ನಿಂತು ಹೋಯಿತು. ನಂತರ ಬಸವರಾಜ ಬೊಮ್ಮಾಯಿ ಅವರು ಬಂದರು. ಅವರ ಬಳಿಗೂ ಭಟ್ಟರು ನನ್ನನ್ನು ಕರೆದೊಯ್ದರು. ಅವರು ನನ್ನ ಕಾದಂಬರಿಗಳನ್ನು ಓದಿದ್ದಾರೆ. ನನ್ನನ್ನು ನೋಡಿ ಬೊಮ್ಮಾಯಿಯವರು ಆತ್ಮೀಯತೆ ಯಿಂದ ಮಾತನಾಡಿಸಿದರು. ಅವರ ಅವಧಿಯಲ್ಲಿ ಕೆರೆ ಹೂಳು ತೆಗೆಸಿ ನೀರು ತರಿಸುವ ಕಾರ್ಯ ಪೂರ್ತಿ ಮಾಡಲಾಯಿತು. ಅವರಲ್ಲದೇ ಇನ್ನೂ ಎಷ್ಟೋ ಮಂದಿ ಇದರಲ್ಲಿ ಸಹಾಯ ಮಾಡಿದ್ದಾರೆ.
ಮುಂದಿನ ಯೋಜನೆಗಳೇನು?
ಭೈರಪ್ಪ: ಊರಿನಲ್ಲಿ ನಡೆಯುವ ಕಾರ್ಯಕ್ರಮ ಚೆನ್ನಾಗಿ ಆಗಲಿ ಎಂಬುದು ನನ್ನ ಆಸೆ. ನನ್ನಲ್ಲಿ ಊರಿಗಾಗಿ ಇನ್ನೂ ಏನೇನೋ ಯೋಚನೆಗಳಿವೆ. ನಾನು ಬಹಳ ಕಷ್ಟಪಟ್ಟು, ಅನ್ನ ಬಟ್ಟೆ ಇಲ್ಲದೆ ಹೇಗೋ ಮೇಲೆ ಬಂದವನು. ಈಗ ಆ ಥರದ ಅನುಭವಗಳು ಬೇರೆ ಯಾರಿಗೂ ಆಗದಿರಲಿ ಅಂತ ಇದೆ. ಅಂಥವರಿಗೆ ಸಹಾಯ ಮಾಡಬೇಕು ಎಂದಿದೆ. ಪಿಯುಸಿಯಲ್ಲಿ ಒಳ್ಳೇ ಅಂಕ ಬಂದ ಬಡ ಮಕ್ಕಳಿಗೆ ಎಂಜಿನಿಯರಿಂಗ್ ಓದಲು ದುಡ್ಡಿಲ್ಲದಿದ್ದರೆ ಅಂಥವರಿಗೆ ನೆರವಾಗ ಬೇಕು. ಎಲ್ಲ ಜಾತಿಯಲ್ಲೂ ಅಂಥವರಿzರೆ. ಅಂಥವರನ್ನು ಹುಡುಕಿ ಪ್ರತಿವರ್ಷವೂ ಸ್ಕಾಲರ್‌ಶಿಪ್ ಕೊಡಬೇಕಿದೆ.
ಇದಕ್ಕಾಗಿ ಒಂದು ಟ್ರಸ್ಟ್ ಮಾಡಿಕೊಂಡು, ಅದಕ್ಕೆ ನಾನೇ ಅಧ್ಯಕ್ಷನಾಗಿ ಮುನ್ನಡೆಸಬೇಕು ಎಂಬ ಆಸೆಯಿದೆ. ನಾನು ಬದುಕಿರುವವರೆಗೆ ನನ್ನ ಪುಸ್ತಕಗಳ ರಾಯಲ್ಟಿ ಬರುತ್ತೆ, ಅದನ್ನು ಮಕ್ಕಳ ವಿದ್ಯೆಗಾಗಿಯೇ ಖರ್ಚು ಮಾಡಬೇಕು ಅನಿಸಿದೆ. ನನಗೆ ಹಣದ ಮೇಲೆ ಆಸೆ ಇಲ್ಲ. ಇರುವುದನ್ನು ದಾನ ಮಾಡಿ ಹೊರಟುಬಿಡಬೇಕು. ಪಾಪ- ಪುಣ್ಯ ಇಂಥದರಲ್ಲ ನನಗೆ ನಂಬಿಕೆಯಿಲ್ಲ.