ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬದುಕಿನಿಂದಲೇ ಹುಟ್ಟಿಕೊಂಡ ಗೃಹಭಂಗ

ಗೃಹಭಂಗ ಶುರುವಾಗುವುದೇ ಜಾವಗಲ್ಲಿನ 13 ವರ್ಷದ ಗಂಗಮ್ಮ 45 ವರ್ಷದ ರಾಮಣ್ಣನವರನ್ನು ಮದುವೆಯಾಗುವು ದರೊಂದಿಗೆ. ಸಂಸ್ಕಾರವೇ ಇಲ್ಲದ ಈಕೆ ಕೈಹಿಡಿದ ಗಳಿಗೆಯಲ್ಲೇ ಮೂರು ಊರಿನ ಶ್ಯಾನುಭೋಗಿಕೆ, 6 ಎಕರೆ ಗದ್ದೆ, 8 ಎಕರೆ ಹೊಲ, ಮುನ್ನೂರು ತೆಂಗಿನ ಮರದ ಒಡೆಯನಾಗಿದ್ದ ರಾಮಣ್ಣನವರ ಮನೆ ಒಡೆಯುವುದಕ್ಕೂ ಆರಂಭವಾಗುತ್ತದೆ.

ನಿರೂಪ (ಕೆ.ಪೃಥ್ವಿಜಿತ್)

ಈ ಗೃಹ ಅದೆಷ್ಟು ಬಾರಿ ಭಂಗವಾಗಿರಬಹುದು? ಛಿದ್ರಗೊಂಡ ಮನೆ ಮತ್ತು ಮನಸ್ಸು ಅದೆಷ್ಟು ಬಾರಿ ಒಗ್ಗೂಡಲು ಯತ್ನಿಸುತ್ತಿದ್ದರೂ ಹಂತಹಂತವಾಗಿ ಒಡೆಯುತ್ತಲೇ ಸಾಗುತ್ತದೆ. ಕಡೆಗೂ ಮನೆಯಾಗಿ ಮತ್ತೆ ಎದ್ದು ನಿಂತಾಗ ಅದಕ್ಕೆ ಪ್ಲೇಗಿನ ರೂಪದಲ್ಲಿ ಬಂದೆರಗುವ ವಿಧಿ ಆ ಮನೆಯನ್ನು ಸ್ಮಶಾನಮೌನಕ್ಕೊಯ್ಯುತ್ತದೆ. ಆ ಮನೆಯ ಕುಡಿ ತನ್ನ ಮೂಲನೆಲೆಯನ್ನೇ ಕಳೆದುಕೊಂಡು ಮತ್ತೆಲ್ಲೋ ನೆಲೆಯರಸಿ ಹೊರಟು ಹೋಗುತ್ತದೆ.

ಇಲ್ಲಿ ಒಂದು ಕಡೆ ಮನೆ ಕಟ್ಟುವ ಮತ್ತೊಂದು ಕಡೆ ಮನೆ ಒಡೆಯುವ ಎರಡು ರೀತಿಯ ಮನಸ್ಸು ಗಳಿವೆ. ಮನೆ ಒಡೆಯುವ ಮನಸ್ಸುಗಳಿಗೆ ತಾವು ಒಡೆಯುತ್ತಿದ್ದೇವೆ, ಇದರ ಅಂತ್ಯ ದುರಂತ ಎಂಬ ಪ್ರಜ್ಞೆಯೇ ಇಲ್ಲ. ಮನೆಯನ್ನು ಕಟ್ಟುವ ಮನಸ್ಸುಗಳಿಗೆ ಒಡೆಯುವ ಮನಸ್ಸುಗಳ ಗಮ್ಯ ದುರಂತ ಮಾತ್ರವೆಂದು ತಿಳಿದೂ ಅದನ್ನು ತಡೆಯಲಾಗದ, ತಿದ್ದಲಾಗದ ಅಸಹಾಯಕ ನೋವಿದೆ.

ಎಲ್ಲ ಸವಾಲನ್ನು ಮೀರಿಯೂ ಮತ್ತೆ ಮನೆ ಕಟ್ಟಿ ನಿಲ್ಲುವ ಮನಸ್ಸು ಆ ಮನೆಯನ್ನು ಪ್ರವೇಶಿಸ ಲಾಗದೇ, ಸುಖಿಸಲಾಗದೇ, ಸಂಭ್ರಮಿಸಲಾಗದೇ ಸಾವನ್ನಪ್ಪುತ್ತದೆ. ಇದರ ಅರ್ಥವೇನು? ಧ್ವನಿ ಯೇನು? ತಥ್ಯವೇನು?

ಗೃಹಭಂಗ ಹಲವು ಪ್ರಶ್ನೆಗಳನ್ನು ಹುಟ್ಟಿಸಿ, ಉತ್ತರ ಕಂಡುಕೊಳ್ಳುವ ಹೊಣೆಗಾರಿಕೆಯನ್ನು ಓದುಗರಿಗೇ ಬಿಡುತ್ತದೆ. ತುಮಕೂರು ಜಿಲ್ಲೆಯ, ತಿಪಟೂರು ತಾಲೂಕಿನ, ಕಂಬನಕೆರೆ ಹೋಬಳಿಯ, ರಾಮಸಂದ್ರವೆಂಬ ಆ ಊರಿನಲ್ಲಿ ಬರೀ ನೋವು, ದುರಂತಗಳೇ ಯಾಕೆ ಸಂಭವಿಸುತ್ತವೆ? ಆ ಊರಿನಲ್ಲಿ ನಗುವೆಂಬುದೇ ಇಲ್ಲವೇ ಅಥವಾ ಅದು ಸೃಷ್ಟಿಕರ್ತನಿಗೆ ಬೇಕಿರಲಿಲ್ಲವೇ? ನಂಜಮ್ಮನೂ ಸೇರಿ ಅವಳ ಇಬ್ಬರು ಮಕ್ಕಳು ಪ್ಲೇಗಿಗೆ ಬಲಿಯಾಗುತ್ತಾರೆ ಯಾಕೆ? ಗಂಗಮ್ಮನೂ ಸೇರಿ ಅವಳ ಇಬ್ಬರೂ ಮಕ್ಕಳು ಸಂಸ್ಕಾರವೇ ಇಲ್ಲದೆ ಅಪಸವ್ಯದ ಪ್ರತಿಮೂರ್ತಿಗಳಂತೆ ಬದುಕುತ್ತಾರೆ, ಯಾಕೆ? ಮಾದೇವಯ್ಯ ಎಂಬ ಸನ್ಯಾಸಿ ಊರು ಬಿಟ್ಟಿದ್ದಕ್ಕೇ ರಾಮಸಂದ್ರದಲ್ಲಿ ಬರ ಬಂದಿದ್ದೇ? ಅವರು ಹಿಂತಿರುಗಿದ್ದಕ್ಕೇ ಮತ್ತೆ ಮಳೆ ಬಂತೇ? ಕಂಠೀ ಜೋಯಿಸರಿಗೆ ಮಾಟಮಂತ್ರಗಳೆಲ್ಲ ಗೊತ್ತಿದ್ದರೂ ಅವರಿಗೆ ತಮ್ಮ ವಿದ್ಯೆಯ ಬಗ್ಗೆ ನಿಜಕ್ಕೂ ಶ್ರದ್ಧೆಯಿತ್ತೇ? ಇಂತಹ ಹತ್ತು ಪ್ರಶ್ನೆಗಳಿಗೆಲ್ಲ ಅಸ್ಪಷ್ಟತೆಯೇ ಉತ್ತರ. ಇವೆಲ್ಲವೂ ಹೀಗೆ ಇರಬೇಕೆಂಬುದೇ ಸೃಷ್ಟಿಯ ಉದ್ದೇಶವೋ? ಸೃಷ್ಟಿಯ ಓಘದಲ್ಲಿ ತನ್ನಷ್ಟಕ್ಕೆ ತಾನು ರೂಪುಗೊಂಡ ಶಿಲ್ಪವೋ?

ಇದನ್ನೂ ಓದಿ: Narendra Parekat Column: ಭಾರತದ ವನಿತೆಯರಲ್ಲೂ ಗೆಲ್ಲುವ ಛಲ

ಭಾರತದಲ್ಲಿ ಸ್ತ್ರೀಯರ ಶೋಷಣೆ ಯಾವ ಮಟ್ಟದಲ್ಲಿ ಸಾಗಿದೆ ಎನ್ನುವ ಅರಿವು ಹುಟ್ಟಿದ್ದೇ ಬ್ರಿಟಿಷರ ಪ್ರವೇಶದ ನಂತರ. ಹಿಂದುಳಿದವರು, ಬಡವರು, ಕೆಳಜಾತಿಯವರನ್ನು ಶೋಷಣೆಗೊಳಪಡಿಸಿ, ಈಗ ಪಶ್ಚಾತ್ತಾಪಪಡುತ್ತಿರುವ ಭಾರತದಲ್ಲಿ ತಾಯಿ ಎಂಬ ಪದವಿಗೇರಿರುವ ಸ್ತ್ರೀ ಮಾತ್ರ ಮುಕ್ತಿ ಪಡೆದಿಲ್ಲ.

ಒಂದು ಕಡೆ ಬ್ರಿಟಿಷರು ತೋರಿದ ಹೊರದಾರಿಯನ್ನು ಹಿಡಿದು ಪೂರ್ಣವಾಗಿ ಹೊರಗೇ ಹೋಗಿರುವ ಮಹಿಳೆ, ಮತ್ತೊಂದು ಕಡೆ ಭಾರತೀಯ ಸಂಸ್ಕೃತಿಯನ್ನು ಬದ್ಧತೆಯಾಗಿ ಸ್ವೀಕರಿಸಿ ಬದುಕುತ್ತಿರುವ ಮಹಿಳೆ, ಇನ್ನೊಂದು ಕಡೆ ಇವೆರಡರಲ್ಲಿರುವ ಒಳಿತನ್ನೋ, ಕೆಡುಕನ್ನೋ ಸ್ವೀಕರಿಸಿ ಬದುಕುತ್ತಿರುವ ಮಹಿಳೆ...ಇಂತಹ ಸಂಕರಗಳ ನಡುವೆ ಭಾರತದಲ್ಲಿ ಕೋಟ್ಯಂತರ ಗಂಗಮ್ಮ, ನಂಜಮ್ಮ ಬದುಕುತ್ತಲೇ ಇದ್ದಾರೆ. ಗಂಡಸರು ತಮ್ಮ ಮುಟ್ಠಾಳತನದಿಂದ, ಅಹಂಕಾರದಿಂದ, ಅಶಿಸ್ತಿನಿಂದ ಮಾಡಿಕೊಂಡ ಎಡವಟ್ಟುಗಳನ್ನೆಲ್ಲ ಸರಿಪಡಿಸಲು ಜನ್ಮಪೂರ್ತಿ ಪಡಿಪಾಟಲು ಪಡುತ್ತ, ಸಾಯುವ ಹಂತದಲ್ಲಿ ಯಾತಕ್ಕಾಗಿ ಪಡಬೇಕಿತ್ತು ಇಷ್ಟೆಲ್ಲ ಕಷ್ಟವನ್ನೆಂದು ತಮ್ಮ ಆತ್ಮಾವಲೋಕನ ಮಾಡಿ ಕೊಳ್ಳುವ ಕೋಟ್ಯಂತರ ನಂಜಮ್ಮಂದಿರು ಇಂದಿಗೂ ಭಾರತದಲ್ಲಿ ಬದುಕಿದ್ದಾರೆ.

ಗ್ರಾಮಭಾರತವನ್ನು ಒಮ್ಮೆ ಪ್ರವೇಶಿಸಿ, ಪ್ರತಿಮನೆಗಳ ಕಿಟಕಿಗಳಿಂದ ಹಣಕಿ ನೋಡಿದರೂ ಸಾಕು ಮನೆಯಲ್ಲೊಬ್ಬ ನಂಜಮ್ಮ ಕಾಣಿಸುತ್ತಾಳೆ. ಮತ್ತೊಂದು ಕಡೆ ನಂಜಮ್ಮಳಿಗೆ ವಿರುದ್ಧ ಪದವಾಗಿ ಗಂಗಮ್ಮ ಇದ್ದಾಳೆ. ಸ್ವಲ್ಪ ಮುಂದುವರಿದು ನೋಡಿದರೆ ಅಲ್ಲೊಬ್ಬ ಸಾತು ಕಾಣಿಸುತ್ತಾಳೆ. ಇವರೆಲ್ಲರನ್ನು ಅಣಕಿಸುವಂತೆ ರಾಮಸಂದ್ರವೆಂಬ ಊರಿನಲ್ಲಿ ನರಸಿ ಎಂಬ ವೇಶ್ಯೆ ಕಾಣಿಸುತ್ತಾಳೆ (ಈಕೆ ಖುಲ್ಲಂಖುಲ್ಲ ವೇಶ್ಯೆಯೇ ಆದರೂ ತನ್ನ ಜೀವನ ನಿರ್ವಹಣೆಗೆ ಅಂಗಡಿಯೊಂದನ್ನು ಇಟ್ಟುಕೊಂಡು ಗೌರವದೊಂದಿಗೆ ಬದುಕುತ್ತಾಳೆ).

ಗೃಹಭಂಗದ ವಿಶೇಷವೆಂದರೆ ಸಂಸ್ಕಾರದ ಪ್ರತಿಮೂರ್ತಿಯಾದ ಸೊಸೆ ನಂಜಮ್ಮ ಸಾವನ್ನಪ್ಪಿ ದರೂ, ಸಂಸ್ಕಾರಹೀನತೆಯ ಪ್ರತೀಕವಾದ ಅತ್ತೆ ಗಂಗಮ್ಮ ಬದುಕಿಯೇ ಇರುತ್ತಾಳೆ. ಸಂಸ್ಕಾರಕ್ಕೆ ಸಾವು ಬೇಗ, ಸಂಸ್ಕಾರ ಹೀನತೆಗೆ ಆಯುಷ್ಯ ಜಾಸ್ತಿಯೆಂದು ಇದರರ್ಥವೋ? ತನ್ನ 13ನೇ ವಯಸ್ಸಿನಲ್ಲಿ ರಾಮಣ್ಣನವರನ್ನು ಮದುವೆಯಾದ ಗಂಗಮ್ಮ ತನ್ನ ಕಡೆ ಕಡೆ ವಯಸ್ಸಿನಲ್ಲೂ ತನ್ನ ಸಂಸ್ಕಾರಹೀನತೆಯನ್ನು, ದುಷ್ಟತೆಯನ್ನು, ಮುಟ್ಠಾಳತನವನ್ನು, ಅವಿವೇಕವನ್ನು ಕಳೆದು ಕೊಳ್ಳುವುದಿಲ್ಲ. ಬದಲಿಗೆ ಅವನ್ನೆಲ್ಲ ಒಂದು ಅಲಂಕಾರವಾಗಿ ಕಾಪಿಟ್ಟುಕೊಳ್ಳುತ್ತಾಳೆ.

ಗೃಹಭಂಗ ಶುರುವಾಗುವುದೇ ಜಾವಗಲ್ಲಿನ 13 ವರ್ಷದ ಗಂಗಮ್ಮ 45 ವರ್ಷದ ರಾಮಣ್ಣನವರನ್ನು ಮದುವೆಯಾಗುವು ದರೊಂದಿಗೆ. ಸಂಸ್ಕಾರವೇ ಇಲ್ಲದ ಈಕೆ ಕೈಹಿಡಿದ ಗಳಿಗೆಯಲ್ಲೇ ಮೂರು ಊರಿನ ಶ್ಯಾನುಭೋಗಿಕೆ, 6 ಎಕರೆ ಗದ್ದೆ, 8 ಎಕರೆ ಹೊಲ, ಮುನ್ನೂರು ತೆಂಗಿನ ಮರದ ಒಡೆಯ ನಾಗಿದ್ದ ರಾಮಣ್ಣನವರ ಮನೆ ಒಡೆಯುವುದಕ್ಕೂ ಆರಂಭವಾಗುತ್ತದೆ. ಆಕೆಯ ಅವಿವೇಕಗಳು (ಪದ ಸ್ವಲ್ಪ ಮೃದುವಾಯತು!) ಇಡೀ ಕಾದಂಬರಿಪೂರ್ತಿ ಪ್ರಸ್ತಾಪವಾಗುತ್ತವೆ.

ತನ್ನದೇ ಮಗನಿಗೆ ಅವಳು ಸೂಳೆಮಗ ಎಂದು ಸಲೀಸಾಗಿ ಬೈಯುತ್ತಾಳೆ. ಅವಳ ಬಾಯಲ್ಲಿ ಬರದ ಬೈಗುಳಗಳೇ ಇಲ್ಲ ಎಂದರೂ ಸರಿ. ತಾನೇ ನಿಂತು ಮದುವೆ ಮಾಡಿಸಿದ ಮಕ್ಕಳಿಗೆ ತಂತಮ್ಮ ಹೆಂಡತಿ ಯರ ತಾಳಿ ಕೀಳಿ ಎಂದು ಪದೇ ಪದೇ ಆದೇಶಿಸುತ್ತಾಳೆ (ಮೊದಲ ಮಗ ಚೆನ್ನಿಗರಾಯನಿಗೆ ಧೈರ್ಯ ಕಡಿಮೆ, ಪತ್ನಿಯ ತಾಳಿ ಕೀಳಲು ಹೋಗಲಿಲ್ಲ. ಎರಡನೆಯ ಮಗ ಅಪ್ಪಣ್ಣಯ್ಯ ಒಂದು ಪ್ರಸಂಗ ದಲ್ಲಿ ಅದನ್ನು ಮಾಡಿಯೂ ಮಾಡುತ್ತಾನೆ.

ಅವನಿಂದ ಪತ್ನಿ ಸಾತು ಶಾಶ್ವತವಾಗಿ ದೂರಾಗುತ್ತಾಳೆ. ಒಂದು ಕುಟುಂಬವನ್ನು ಒಗ್ಗೂಡಿಸಲು ನಂಜಮ್ಮ ಮಾಡಿದ ಯತ್ನ ತೊಳೆದುಕೊಂಡು ಹೋಗುತ್ತದೆ). ಗಂಗಮ್ಮನ ಪಾತ್ರ ಎಷ್ಟು ಒರಟಾಗಿದೆ ಎಂದರೆ ಈ ಮಟ್ಟದ ದುಃಖ ಸಂಸ್ಕಾರದ ಹೆಣ್ಣೊಬ್ಬಳ್ಳನ್ನು ಬಹುತೇಕರು ತಮ್ಮ ಜೀವನದಲ್ಲೆಂದೂ ನೋಡಿರಲಾರರು.

ಸ್ತ್ರೀಯೊಬ್ಬಳು ಹೀಗಿರಲು ಸಾಧ್ಯವೇ ಎಂದು ಅನುಮಾನಿಸುವವರು ಈ ಪಾತ್ರಕ್ಕೊಂದು ಬಲವಾದ ಬೇರಿದೆ ಎಂಬುದನ್ನು ತಿಳಿದಿರಬೇಕು. ಅದು ಸ್ವತಃ ಲೇಖಕರ ಜೀವನದಿಂದಲೇ ಬಂದಿದೆ. ಲೇಖಕರು ತಮ್ಮ ತಂದೆಯ ತಾಯಿ, ಅಜ್ಜಿಗೇ ಈ ಕಾದಂಬರಿಯ ಮೂಲಕ ಮತ್ತೊಮ್ಮೆ ಜೀವಿಸಲು ಅವಕಾಶ ನೀಡಿದ್ದಾರೆ (ಗೃಹಭಂಗದ ಬಹುತೇಕ ಪಾತ್ರಗಳು ಲೇಖಕರ ಜೀವನದಿಂದಲೇ ರೂಪು ತಳೆದಿದ್ದು). ಗಂಗಮ್ಮ ಪ್ರತಿಯೊಬ್ಬ ಓದುಗನಲ್ಲೂ ಜೀವತಳೆದು ಅಸಹ್ಯ ಹುಟ್ಟಿಸುತ್ತ ಹೋಗುತ್ತಾಳೆ.

ವಸ್ತುಸ್ಥಿತಿಯಲ್ಲಿ ಗೃಹಭಂಗ (ಮನೆ ಒಡೆಯುವುದು)ದ ಬುನಾದಿಯಿರುವುದೇ ಗಂಗಮ್ಮನ ಮದುವೆ ಯಲ್ಲಿ. ಮುಂದೆ ಅವಳಿಗೆ ಹುಟ್ಟುವ ಇಬ್ಬರು ಮಕ್ಕಳಾದ ಚೆನ್ನಿಗರಾಯ (15 ವರ್ಷ) ಮತ್ತು ಅಪ್ಪಣ್ಣಯ್ಯ (13 ವರ್ಷ) ತಾಯಿಗೇ ಕೆಟ್ಟದಾಗಿ ಬೈದು ಮನೆಯಿಂದ ಹೊರ ಓಡಿ ಕಬ್ಬಿನಗದ್ದೆಯಲ್ಲಿ ಅವಿತುಕೊಂಡು, ಅಪ್ಪಣ್ಣಯ್ಯನ ಬೀಡಿ ಚಟದಿಂದ ಹೊಲಕ್ಕೆ ಬೆಂಕಿ ಬಿದ್ದು, ಬೆಂಕಿಯಿಂದ ಊರಿನ ಬಹುತೇಕ ಬೆಳೆ ನಾಶವಾಗಿ, ಆ ನಾಶದ ನಷ್ಟಭರ್ತಿ ಮಾಡಿಕೊಡಲು ಗಂಗಮ್ಮ ಪಟೇಲ ಶಿವೇಗೌಡ ನಿಗೆ ಜಮೀನನ್ನೇ ಅಡ ಇಟ್ಟ ಗಳಿಗೆಯಲ್ಲಿ ಗೃಹಭಂಗದ ಮತ್ತೊಂದು ಮಜಲು ಶುರುವಾಗುತ್ತದೆ.

ಮೊದಲನೆಯ ಹೆರಿಗೆಗೆಂದು ತವರಿಗೆ ಹೋಗಿದ್ದ ಅಪ್ಪಣ್ಣಯ್ಯನ ಹೆಂಡತಿ ಸಾತು, ನಿಮ್ಮಮ್ಮನ್ನ ಜೊತೆ ಬದುಕಲಿಕ್ಕೆ ಸಾಧ್ಯವಿಲ್ಲ. ನಿಮ್ಮ ಮನೆಯ ಹಿಂದೆ ಇನ್ನೊಂದು ಸಣ್ಣ ಮನೆ ಕಟ್ಸಿ, ಆಮೇಲೆ ನನ್ನ ಕರೆದುಕೊಂಡು ಹೋಗಿ ಎಂದು ಗಂಡನಿಗೆ ಹೇಳುವುದರೊಂದಿಗೆ ಗೃಹಭಂಗ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ. ಮುಂದೆ ಅಡವಿಟ್ಟಿದ್ದ ಜಮೀನಿನ ಜೊತೆ ಸ್ವಂತ ಮನೆಯನ್ನು ಪಟೇಲ ಶಿವೇಗೌಡ ಕಿತ್ತುಕೊಳ್ಳುತ್ತಾನೆ. ಆಗ ಗಂಗಮ್ಮ ಹಿರಿಯ ಸೊಸೆ ನಂಜಮ್ಮಳಿಗೆ ನಿನ್ನಿಂದಲೇ ಎಲ್ಲ ಅನಿಷ್ಟ ಸಂಭವಿಸಿದ್ದು, ನೀನು ಬೇರೆಯಿರು ಎನ್ನುತ್ತಾಳೆ.

ನಂಜಮ್ಮ ಬೇರೆ ವಾಸ್ತವ್ಯ ಹೂಡುತ್ತಾಳೆ. ಗಂಗಮ್ಮ ಮತ್ತು ಮಕ್ಕಳು ಹನುಮಂತದೇವರ ಗುಡಿ ಯಲ್ಲಿ ಮೊಕ್ಕಾಂಗೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದು ಗೃಹಭಂಗ ಸಂಪೂರ್ಣಗೊಂಡ ಹಂತ. ಮುಂದಿನದೆಲ್ಲ ಆ ಮನೆ ಇನ್ನಷ್ಟು ಛಿದ್ರವಿಚ್ಛದ್ರಗೊಳ್ಳುವ ಘಟ್ಟಗಳು.

ಇಷ್ಟು ಹೇಳುವ ಹೊತ್ತಿನಲ್ಲಿ ಮನೆ ಅಥವಾ ಗೃಹ ಎಂಬ ಪದ ಬಳಕೆಯೇ ತಪ್ಪು. ಅದು ಈಗಾಗಲೇ ಕೈಬಿಟ್ಟಾಗಿದೆ. ಆದರೆ ಮನೆ ಎನ್ನುವುದು ಇಲ್ಲಿ ಒಂದು ಸಾಂಕೇತಿಕ ಪದ. ಅದು ಎಲ್ಲರೂ ಒಂದಾಗಿ ಸಂಘಟಿತವಾಗಿ ಬಾಳುವುದನ್ನು ಧ್ವನಿಸುತ್ತದೆ. ಅದು ಒಡೆದಿದೆ ಎಂದರೆ ಅಲ್ಲಿ ಮನಸ್ಸ್ಸುಗಳು, ಭಾವನೆಗಳು ಒಡೆದು ವ್ಯಕ್ತಿಗಳು ಬೇರೆ ಬೇರೆಯಾಗಿದ್ದಾರೆ ಎಂಬುದರ ಬಿಂಬ. ಒಂದು ವೇಳೆ ವ್ಯಕ್ತಿಗಳು ಒಂದೇ ಸೂರಿನಲ್ಲಿದ್ದರೂ ಮನಸ್ಸ್ಸುಗಳು ಒಡೆದು ತಮ್ಮೊಳಗೇ ಬೇರೆಯಾಗಿ ಬದುಕಲು ಶುರು ಮಾಡಿದರೆಂದರೆ, ವಾಸಿಸುವ ಅಷ್ಟೂ ಜನರ ಭಾವನೆ, ಪ್ರೀತಿ, ಒಗ್ಗಟ್ಟು ಬೆಸೆದುಕೊಂಡು ಅವರವರ ಮನೋಲೋಕದಲ್ಲಿ ರೂಪುಗೊಂಡಿದ್ದ ಒಂದು ಬೆಸುಗೆಯ, ಬಂಧದ ಮನೆ ವಿಘಟಿತವಾಗಿರುತ್ತದೆ.

ಇಂತಹ ವಿಘಟನೆ ಮುಂದೆ ಭೌತಿಕವಾಗಿ ಸಂಭವಿಸುವ ಗೃಹಭಂಗಕ್ಕೆ ಮುನ್ಸೂಚನೆ ಮಾತ್ರ. ಮುಂದೆಯೂ ಈ ಬೆಸುಗೆ, ಬಂಧದ ಮನೆ ಒಡೆಯುತ್ತಲೇ ಸಾಗುತ್ತದೆ. ಅಪ್ಪಣ್ಣಯ್ಯ ತಾಯಿಯಿಂದ ದೂರಾಗಿ ತನ್ನದೇ ಸಂಸಾರ ಕಟ್ಟಿಕೊಳ್ಳುತ್ತಾನೆ (ಮುಂದೆ ಪತ್ನಿಯನ್ನು ದೂರತಳ್ಳಿ ತಾಯಿಯನ್ನೇ ಕೂಡಿಕೊಳ್ಳುತ್ತಾನೆ), ಅದು ಬೆಸುಗೆ ಇನ್ನಷ್ಟು ಸಡಿಲಗೊಳ್ಳುವ ಸ್ಥಿತಿ. ಇದಕ್ಕೂ ಮುಂದೆ ಅಪ್ಪಣ್ಣ ಯ್ಯನ ಪತ್ನಿ ಸಾತು, ಶಾನುಭೋಗಿಕೆ ಹಣದಲ್ಲಿ ನಮಗೂ ಪಾಲು ಬೇಕೆಂದು ನಂಜಮ್ಮನಲ್ಲಿ ಜೋರಾಗಿಯೇ ಕೇಳುತ್ತಾಳೆ.

ಶಾನುಭೋಗಿಕೆ ನಡೆಸಲು ಕಿಂಚಿತ್ತೂ ಪರಿಶ್ರಮಪಡದೇ, ಅದರ ಕಷ್ಟದ ಅರಿವೂ ಇಲ್ಲದೇ, ಹಿನ್ನೆಲೆ ಮುನ್ನೆಲೆಗಳ ತಿಳಿವೂ ಇಲ್ಲದೇ ಪಾಲು ಮಾತ್ರ ತಮಗೂ ಬೇಕೆಂದು ಕೇಳುವ ಈ ಘಳಿಗೆಯಲ್ಲಿ ಬಂಧ ಪೂರ್ಣ ಹರಿದುಹೋಗುತ್ತದೆ. ನಂಜಮ್ಮನ ಬೇರು ಯಾವುದು?: ನಂಜಮ್ಮನ ಪಾತ್ರವನ್ನು ಆಳವಾಗಿ ಧ್ಯಾನಿಸಿದರೆ ಇಲ್ಲೊಬ್ಬಳು ಕುಂತಿ ಕಾಣಿಸುತ್ತಾಳೆ. ಆಕೆ ಮಹಾಭಾರತದ ಕುಂತಿಯಲ್ಲ ಪರ್ವದ ಕುಂತಿ!

ವಿಶ್ವನಾಥ ಪ್ಲೇಗಿನಿಂದ ಬಚಾವಾಗಿದ್ದಕ್ಕೆ ಶೃಂಗೇರಿಗೆ ಹರಕೆ ತೀರಿಸಲು ಹೊರಟ ನಂಜಮ್ಮ ಮೊದಲು ಹರಿಹರಪುರ ತಲುಪುತ್ತಾಳೆ. ಮಠದ ಕೆಳಭಾಗದಲ್ಲಿ ತುಂಗಾ ನದಿಯಿದೆ. ಮರಳಲ್ಲಿ ನಡೆದು ಕಲ್ಲಿನ ಮೇಲೆ ಕುಳಿತು ನದಿಗೆ ಕಾಲುಬಿಟ್ಟು ಮನೋವಾರಿಧಿಯಲ್ಲಿ ದೂರವ್ಯಾಪಿ ಸಂಚಾರ ಹೊರಡುವ ನಂಜಮ್ಮನೆ ವಿಸ್ತಾರಗೊಂಡು ಪರ್ವದಲ್ಲಿ ಮಧ್ಯಾಹ್ನದೊತ್ತು ಗಂಗಾನದಿಯಲ್ಲಿ ಕಾಲಿಳಿಬಿಟ್ಟುಕೊಂಡು ಬಾಲ್ಯದಲ್ಲೇ ತ್ಯಜಿಸಿದ ಕರ್ಣನ ಬಗ್ಗೆ ಯೋಚಿಸುವ ಕುಂತಿಯಾಗಿ ಜೀವ ಪಡೆದಳೆ? ಅನ್ನಿಸುತ್ತದೆ.

ಇಬ್ಬರಿಗೂ ಎಲ್ಲೆಂದೆಲ್ಲಿಗೆ ಹೋಲಿಕೆ? ಆಕೆಯೆಲ್ಲಿ ಈಕೆಯೆಲ್ಲಿ ಎನ್ನುವಂತಿಲ್ಲ. ಕುಂತಿಯೆಂಬ ಪಾತ್ರಕ್ಕೆ ಜೀವತುಂಬಬಲ್ಲ ಮತ್ತೊಬ್ಬಾಕೆಯನ್ನು ಲೇಖಕರು ಇನ್ನೆಲ್ಲಿಂದ ತರಲು ಸಾಧ್ಯ? ಈ ನಂಜಮ್ಮ ಬೇರಾರೂ ಅಲ್ಲ ಗೌರಮ್ಮ. ಸ್ವತಃ ಲೇಖಕರ ತಾಯಿ.

ಗೌರಮ್ಮ ನಂಜಮ್ಮಳಾಗಿ ಗೃಹಭಂಗದಲ್ಲಿ ರೂಪಾಂತರಗೊಂಡ ನಂತರ ಆಕೆಯೇ ಕುಂತಿಯಾಗಿ ಪರ್ವದಲ್ಲಿ ಪುರಾಣ ಸೇರಿಕೊಳ್ಳುತ್ತಾಳೆ. ಕುಂತಿ ಪಟ್ಟ ಕಷ್ಟಕ್ಕೂ ನಂಜಮ್ಮ ಪಟ್ಟ ಕಷ್ಟಕ್ಕೂ ಬಹಳ ವ್ಯತ್ಯಾಸವೇನಿಲ್ಲ. ಪರ್ವದಲ್ಲಿ ಪಾಂಡುರಾಜ ಬೇಗ ಮೃತಪಡುತ್ತಾನೆ. ಗೃಹಭಂಗದಲ್ಲಿ ಚೆನ್ನಿಗರಾಯ ಬದುಕಿದ್ದರೂ ಸತ್ತಂತಿರುತ್ತಾನೆ. ಈ ಇಬ್ಬರೂ ತಮ್ಮ ಗಂಡಂದಿರಿಂದ ಯಾವ ಸುಖ ಪಡೆದರು? ಪಾಂಡು ಒಬ್ಬ ಸ್ತ್ರೀಲೋಲ (ಪರ್ವದ ಪ್ರಕಾರ).

ಚೆನ್ನಿಗರಾಯನಿಗೆ ಸದಾ ಊಟದ ಚಿಂತೆ. ಪತ್ನಿ ಇಡೀ ದಿನ ಉಪವಾಸವಿದ್ದರೂ ತನ್ನೊಂದಿಗೆ ಮಲಗು ಬಾ ಎಂದು ಒತ್ತಾಯಿಸುವಷ್ಟು ಲಂಪಟ. ನಂಜಮ್ಮ ಮುಟ್ಟಾದರೆ ಹೊರಗೆ ಕೂರುತ್ತಿರ ಲಿಲ್ಲ. ಬದಲಿಗೆ ತಾನೇ ಅಡುಗೆ ಮಾಡುತ್ತಿದ್ದಳು. ಶಾಸ್ತ್ರ ಪಾಲನೆಯನ್ನೆಲ್ಲ ತೋರಿಸಿಕೊಳ್ಳುವು ದಕ್ಕಷ್ಟೇ ಉಳಿಸಿಕೊಂಡು ಉಳಿದಿದ್ದೆನ್ನೆಲ್ಲ ಬಿಟ್ಟೇ ಬಿಟ್ಟಿದ್ದಳು. ಅಂತಹ ಬಡತನ, ಹಸಿವು, ದೈನ್ಯತೆಯ ಸ್ಥಿತಿಯಲ್ಲಿ ಅವಕ್ಕೆಲ್ಲ ಅವಕಾಶವಾದರೂ ಎಲ್ಲಿತ್ತು? ಆಕೆ ಮಡಿಗಿಂತ ಮನುಷ್ಯತ್ವ ದೊಡ್ಡದು ಎಂದು ಭಾವಿಸುತ್ತಾಳೆ.

ಪತ್ನಿ ಸಾತುವಿನ ತಾಳಿ ಕಿತ್ತುಕೊಂಡು ಆಕೆಯನ್ನು ಪತಿ ಅಪ್ಪಣ್ಣಯ್ಯ ಅಟ್ಟಾಡಿಸಿದಾಗ ಸಾತುವನ್ನು ತನ್ನ ಮನೆಯಲ್ಲಿಟ್ಟುಕೊಳ್ಳುತ್ತಾಳೆ. ಗಂಡನ ತಾಳಿಯನ್ನೇ ಬೇಡವೆಂದಿರುವ ಹೆಣ್ಣನ್ನು ತನ್ನ ಮನೆಯಲ್ಲಿಟ್ಟುಕೊಂಡಿದ್ದು ತಪ್ಪು, ಧರ್ಮಶಾಸ್ತ್ರಕ್ಕೆ ವಿರುದ್ಧ ಎಂದು ಊರಿನ ಅಯ್ಯಾ ಶಾಸ್ತ್ರಿ, ಅಣ್ಣಾ ಜೋಯಿಸರು ಸುಳ್ಳೇ ತೀರ್ಪು ನೀಡಿದಾಗ ಅದಕ್ಕೆ ಕಿಂಚಿತ್ತೂ ನಂಜಮ್ಮ ತಲೆಕೆಡಿಸಿ ಕೊಳ್ಳುವುದಿಲ್ಲ.

ಶೃಂಗೇರಿ ಮಠದಿಂದಲೇ ಸುಳ್ಳುಸುಳ್ಳೇ ಬಹಿಷ್ಕಾರದ ಪತ್ರ ತರಿಸಿದರೂ ನಂಜಮ್ಮ ಚಿಂತಿಸುವುದಿಲ್ಲ. ಬಣಜಿಗರ ಜಾತಿಗೆ ಸೇರಿದ ಲಿಂಗಾಯತ ಸ್ವಾಮಿ ಮಾದೇವಯ್ಯನವರ ತೊಡೆ ಮೇಲೆ ಕುಳಿತು ಅವರು ತಿನ್ನಿಸಿದ್ದನ್ನು ಮಗ ವಿಶ್ವ ತಿಂದರೂ ನಂಜಮ್ಮನ ಮನಸ್ಸು ಗಲಿಬಿಲಿಗೊಳಗಾಗಲಿಲ್ಲ.

ಸ್ವಾತಂತ್ರ್ಯಪೂರ್ವದ ಪಾತ್ರವಾದ ನಂಜಮ್ಮ ಆಗಲೇ ಜಾತಿಯನ್ನು ಮೀರಿದ್ದಳು! ನಂಜಮ್ಮ ಪಾತ್ರ ಮಾತ್ರವಲ್ಲ ಆಕೆಯೊಂದು ಸಂಸ್ಕೃತಿ ಮತ್ತು ಗಂಗಮ್ಮನಂತಹ ವಿಕೃತಿಗೆ ಲೇಖಕರ ಬದುಕೋ ಅಥವಾ ಅವರ ಲೇಖನಿಯೋ ನೀಡಿದ ಉತ್ತರ. ಚೆನ್ನಿಗರಾಯ ಮತ್ತು ಅಪ್ಪಣ್ಣಯ್ಯನ ಅಣ್ಣ ತಮ್ಮಂದಿರ ಪಾತ್ರದ ಮೂಲಕ ಎರಡು ವಿಚಾರವನ್ನು ಗ್ರಹಿಸಬಹುದು.

೧. ಒಂದೇ ಕುಟುಂಬದಲ್ಲಿ ಎರಡು ದರಿದ್ರಗಳು ಹುಟ್ಟಲು ಸಾಧ್ಯ. ಅಲ್ಲಿ ಬದಲೇ ಆಗಲೊಲ್ಲೆ ಎನ್ನುವ ಚೆನ್ನಿಗರಾಯರೂ ಇರುತ್ತಾರೆ. ಎತ್ತಿದರೆ ಏಳಬಲ್ಲೆ ಎನ್ನುವ ಅಪ್ಪಣ್ಣಯ್ಯನಂತವರೂ ಇರುತ್ತಾರೆ. ೨. ಒಂದು ವೇಳೆ ಚೆನ್ನಿಗರಾಯನ ಪತ್ನಿಯಾಗಿ ಸಾತು, ಅಪ್ಪಣ್ಣಯ್ಯನ ಪತ್ನಿಯಾಗಿ ನಂಜಮ್ಮ ಬಂದಿದ್ದರೆ ಗೃಹಭಂಗದ ಕಥೆಯೇ ಬೇರಾಗುತ್ತಿತ್ತು!

ರಾಮಸಂದ್ರದ ಒಡೆದ ಮನೆಗಳು

ರಾಮಸಂದ್ರವೆಂಬ ಆ ಊರಿನಲ್ಲಿ ಭಂಗಗೊಂಡ ಒಂದು ಮನೆಯ ಕಥೆಯನ್ನು ಲೇಖಕರು ಸಂಪೂರ್ಣವಾಗಿ ಕೆನೆಗಟ್ಟಿಸಿದ್ದಾರೆ. ಆದರೂ ಆ ಊರಿನಲ್ಲಿ ಅದೆಷ್ಟು ಮನೆಗಳು ಹಾಗೆ ಒಡೆದು ಹೋಗಿವೆಯೋ? ಜೂಜುಕೋರ ರೇವಣ್ಣಶೆಟ್ಟಿಯ ಪತ್ನಿ ಸರ್ವಕ್ಕ, ಮಾವನನ್ನೇ ಕೂಡಿದ್ದಾಳೆ ಎಂಬ ಆರೋಪದಿಂದ ಗಂಡನಿಂದ ಬೇರೆ ಬದುಕುವ ನರಸಿ ಇವರೆಲ್ಲ ಭಗ್ನವಾದ ಮನೆಗಳ ಸರಣಿಯ ಸುಳಿವು ನೀಡುತ್ತಾರೆ.

ರೇವಣ್ಣಶೆಟ್ಟಿ ಇಸ್ಪೀಟಾಟಕ್ಕೆ ದುಡ್ಡು ಬೇಕೆಂದು ತನ್ನ ಸ್ವಂತ ಮಗಳನ್ನೇ ಕಾಶಿಂಬಡ್ಡಿಗೆ ಒತ್ತೆ ಯಿಡುತ್ತಾನೆ. ಅಂದರೆ ಸೂಳೆಗಾರಿಕೆ ಮಾಡಿಸುತ್ತಾನೆ. ಮುಂದೆ ಗರ್ಭಪಾತಕ್ಕೆ ಔಷಧ ಕೊಟ್ಟು ಮಗಳನ್ನು ಕೊಂದೂ ಬಿಡುತ್ತಾನೆ!

ಮಗಳಿಂದಲೇ ಸೂಳೆಗಾರಿಕೆ ಮಾಡಿಸಿದ ಗಂಡನ ಕೃತ್ಯದಿಂದ ಸಿಡಿದೆದ್ದ ಸರ್ವಕ್ಕನ ಮನೆ ಮನಸ್ಸು ಒಳಗೊಳಗೇ ಒಡೆದುಹೋಗುತ್ತದೆ. ತನ್ನ ಅಪ್ಪನೊಂದಿಗೆ ಪತ್ನಿ ನರಸಿ ಅಡ್ಡ ಸಂಬಂಧ ಹೊಂದಿ ದ್ದಾಳೆ ಎಂಬ ಕಾರಣಕ್ಕೆ ಪತಿ ಗಿರಿಯಶೆಟ್ಟಿ ಪಂಚಾಯ್ತಿ ಸೇರಿಸುತ್ತಾನೆ. ಮುಂದೆ ಅಪ್ಪ ಚನ್ನಸೆಟ್ಟಿ, ಮಗ ಗಿರಿಯಸೆಟ್ಟಿ, ಪತ್ನಿ ನರಸಿ ಮೂವರೂ ಬೇರಾಗುತ್ತಾರೆ.

ಇದು ಮತ್ತೊಂದು ಗೃಹಭಂಗ. ಈ ನರಸಿ ಊರಿನ ರಸಿಕರಿಗೆಲ್ಲ ರಾಣಿಯಾದ ನಂತರ ಅದೆಷ್ಟು ಮನೆಗಳು ಒಳಗೊಳಗೇ ಛಿದ್ರಗೊಂಡವೋ? ಇಲ್ಲಿ ನರಸಿಯನ್ನು ಬೈಯುವಂತಿಲ್ಲ. ಒಬ್ಬಂಟಿಯಾಗಿ ಬದುಕುವ ಆ ಸುಂದರ ಕನ್ಯೆ ಮರ‍್ಯಾದಸ್ಥೆಯಾಗಿ ಬದುಕಲು ರಾಮಸಂದ್ರದ ವಿಟಪುರುಷರು ಅವಕಾಶ ಕೊಡುತ್ತಾರೆನ್ನುವುದು ಕಷ್ಟ. ಸ್ತ್ರೀಯನ್ನು ಆ ಮಟ್ಟದ ಭೋಗವಸ್ತುವಾಗಿ ನೋಡುವಾಗ ನರಸಿಯ ಕಷ್ಟಗಳೇನಿದ್ದವೋ? ಶಿವೇಗೌಡನೆಂಬ ಸಿರಿವಂತ ಪಟೇಲ ಇಡೀ ಊರಿಗೇ ಊರೇ ಬರಗಾಲದಿಂದ ತತ್ತರಿಸುತ್ತಿದ್ದರೂ ಅದಕ್ಕೆ ಮರುಗಲಿಲ್ಲ.

ಬದಲಿಗೆ ಕಾಶಿ ಪ್ರವಾಸ ಹೋಗಿರುವ ಸನ್ಯಾಸಿ ಮಾದೇವಯ್ಯನವರ ಕೋಣೆಯಲ್ಲಿದ್ದ ರಾಗಿಯನ್ನು ಕದ್ದು ತನ್ನ ಮನೆಗೆ ಸಾಗಿಸುತ್ತಾನೆ. ಹಸಿವಿನಿಂದ ಅದೇ ಕೋಣೆಗೆ ಕದಿಯಲೆಂದು ಹೋದ ಇತರರಿಗೆ ಸಿಕ್ಕಿದ್ದು ದಿಗ್ಭ್ರಮೆ ಮಾತ್ರ. ಈ ಶಿವೇಗೌಡ ಊರಿಗೆ ಕಾಶಿಂಬಡ್ಡಿಯನ್ನು ಪ್ರವೇಶ ಮಾಡಿಸುತ್ತಾನೆ. ಅಂದರೆ ಕಾಶಿಂಬಡ್ಡಿ ವಸ್ತುಗಳನ್ನು ಅಡವಿಟ್ಟುಕೊಂಡು ಬಡ್ಡಿಗೆ ಹಣ ಕೊಡುತ್ತಾನೆ.

ಬರಗಾಲದಿಂದ ಊರಜನ ತಮ್ಮಲ್ಲಿರುವ ಅಮೂಲ್ಯ ವಸ್ತುಗಳನ್ನೆಲ್ಲ ಕಳಕೊಳ್ಳುತ್ತಾರೆ. ಕಾಶಿಂ ಬಡ್ಡಿಗೆ ಒಳಗೊಳಗೇ ಹಣ ನೀಡಿ ಬಡ್ಡಿ ವ್ಯವಹಾರ ಮಾಡಿಸುವ ಶಿವೇಗೌಡ (ಹಾಗಂತ ಹಲವರ ಗುಮಾನಿ)ನ ಖಜಾನೆಯನ್ನು ಈ ವಸ್ತುಗಳು ಸೇರುತ್ತವೆ. ಹೀಗೆ ಊರನ್ನು ಶಕ್ತಿಬಲದಿಂದ, ಯುಕ್ತಿಬಲ ದಿಂದ ದೋಚುವ ಶಿವೇಗೌಡನ ಕಾರಣಕ್ಕೆ ನೂರಾರು ಮನೆಗಳು ಒಡೆದು ಹೋಗುತ್ತವೆ, ನರಳಿ ನಾಶವಾಗುತ್ತವೆ.

ಇದು ಗೃಹಭಂಗದ ಇನ್ನೊಂದು ಅಧೋಮುಖ ಯಾತ್ರೆ. ಪುರೋಹಿತ ದ್ವಯರಾದ ಅಯ್ಯಾಶಾಸಿ, ಅಣ್ಣಾ ಜೋಯಿಸರು ತಮ್ಮ ಶಾಸ್ತ್ರ ಜ್ಞಾನದಿಂದ ಊರನ್ನು ದೋಚುತ್ತಾರೆ. ಕಷ್ಟಪಟ್ಟು ನಂಜಮ್ಮ ಶ್ಯಾನುಭೋಗಿಕೆ ನಡೆಸುತ್ತಿದ್ದರೂ ಅದರ ಪಾಲು ನಿನಗೂ ಸೇರಬೇಕೆಂದು ಅಪ್ಪಣ್ಣಯ್ಯನನ್ನು ಅಣ್ಣಾ ಜೋಯಿಸ ರೊಚ್ಚಿಗೆಬ್ಬಿಸುತ್ತಾನೆ.

ಬಡತನದಲ್ಲಿ ಶ್ರಾದ್ಧ ಮಾಡುವ ಗಂಗಮ್ಮ ತುಪ್ಪದಲ್ಲೇ ತಿಂಡಿಯನ್ನು ಕರಿಯುವಂತೆ ಮಾಡಿ, ತನ್ನ ತುಪ್ಪ ತಿನ್ನುವ ಆಸೆಯನ್ನು ಅಣ್ಣಾ ಜೋಯಿಸ ತೀರಿಸಿಕೊಳ್ಳುತ್ತಾನೆ. ಗಂಡನಿಂದ ತಾಳಿ ಕೀಳಿಸಿ ಕೊಂಡು ಅನಾಥಳಾದ ಸಾತುವನ್ನು ಮಾನವೀಯತೆಯಿಂದ ಮನೆಗೆ ಸೇರಿಸಿಕೊಂಡರೆ ಅದು ತಪ್ಪು ಎಂದು ನಂಜಮ್ಮಳಿಗೇ ಬಹಿಷ್ಕಾರ ಹಾಕಿಸುತ್ತಾನೆ. ಹೀಗೆ ಈ ಘನ ಪುರೋಹಿತರು ಒಂದು ಊರನ್ನು ತಮ್ಮ ಶಾಸ್ತ್ರ ತೇಜಸ್ಸಿನಿಂದ ವಿಭಜಿಸುತ್ತಾರೆ!

ಬಡತನಕ್ಕೆ, ಪ್ಲೇಗಿಗೆ, ಬರಗಾಲಕ್ಕೆ, ಅeನಕ್ಕೆ, ಸಿಡುಕಿಗೆ, ಚಟಗಳಿಗೆ ಸಿಕ್ಕಿ ಇಡೀ ಊರಿಗೆ ಊರೇ ಒಡೆದು ಹೋಗಿದೆ. ಇಲ್ಲಿರುವ ಶಿವೇಗೌಡ, ಗಂಗಮ್ಮ, ಚೆನ್ನಿಗರಾಯ, ನರಸಿ, ಪುರೋಹಿತದ್ವಯರು ಒಡೆತನಕ್ಕೆ ಹೆಸರುವಾಸಿ. ಅಂತಹ ಕಥೆಯನ್ನು ಕಟ್ಟುವ ಗೃಹಭಂಗ ತಾನೇ ಒಂದು ಊರಾಗಿದೆ. ಅಲ್ಲಿ ಬರೀ ಒಡೆದುಹೋದ ಮನೆ ಮತ್ತು ಮನಸ್ಸುಗಳೇ ಕಾಣುತ್ತವೆ.

ಗೃಹಭಂಗದ ಕಾದಂಬರಿಯಲ್ಲಿನ ದುರ್ಬಲ ವ್ಯಕ್ತಿಗಳು, ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲೆಲ್ಲ ತುಂಬಿಕೊಂಡಿದ್ದರು. ಅದೇ ಭಾರತವನ್ನು ಬ್ರಿಟಿಷರ ಕೈಗೆ ಕೊಟ್ಟು ಅವರು 200ಕ್ಕೂ ಹೆಚ್ಚು ವರ್ಷ ಆಳಲು ಅವಕಾಶ ಮಾಡಿಕೊಟ್ಟಿದ್ದು. ಇಂತಹ ದುರ್ಬಲರ ನಾಯಕರು ಒಳಗೊಳಗೇ ಬೇರೊಂದು ಲೆಕ್ಕಾಚಾರ ಹಾಕಿಕೊಂಡು ಮೇಲ್ನೋಟಕ್ಕೆ ಭಾರತವನ್ನು ಮತದ ಆಧಾರದಲ್ಲಿ ಒಡೆದರು.

ಪಾಕಿಸ್ತಾನವನ್ನು ಸೃಷ್ಟಿಸಿದ ಮೊಹಮ್ಮದ್ ಅಲಿ ಜಿನ್ನಾರಿಗೆ ಸ್ವತಂತ್ರ ದೇಶದ ನಾಯಕರಾಗುವ ಪರೋಕ್ಷ ಕನಸಿದ್ದರೆ, ತನ್ನ ನಾಯಕತ್ವಕ್ಕೆ ಅಡ್ಡಿಯಾಗುವ ಯಾವುದೇ ನಾಯಕ ಭಾರತದಲ್ಲಿರು ವುದು ಜವಾಹರ್‌ಲಾಲ್ ನೆಹರೂಗೆ ಬೇಕಿರಲಿಲ್ಲ. ಒಂದು ರೀತಿಯಲ್ಲಿ ಮತದ ಭೂತವನ್ನು ಸೃಷ್ಟಿಸಿ ಅದನ್ನು ದೇಶ ಒಡೆಯುವುದಕ್ಕೆ ಬಳಸಿಕೊಂಡರು ಎಂದರೂ ಸರಿಯೇ. ಬ್ರಿಟಿಷರು ಹಿಂದೂ ಮುಸ್ಲಿಮರನ್ನು ಒಡೆದರೆ, ಶಿವೇಗೌಡ ಚೆನ್ನಿಗರಾಯ, ಅಪ್ಪಣ್ಣಯ್ಯನನ್ನು ಒಡೆದರು. ಈ ಇಬ್ಬರ ಕನ್ನಡಿಯಲ್ಲಿ ನೆಹರೂ, ಜಿನ್ನಾರ ಪ್ರತಿಬಿಂಬಗಳು ಮಸುಕು ಮಸುಕಾಗಿ ಕಂಡು ಮರೆಯಾಗುತ್ತವೆ.

(ಭೈರಪ್ಪನವರ ಸಾಹಿತ್ಯದ ಕುರಿತು ಪ್ರಕಟವಾದ ವಿಮರ್ಶಾಕೃತಿ ನಿರ್ಲಿಪ್ತಿ

ಪುಸ್ತಕದ ಲೇಖನದಿಂದ ಆಯ್ದಭಾಗಗಳು

ಕಥನಕಲೆಯೇ ವಿಶಿಷ್ಟ

ಭೈರಪ್ಪನವರ ಕಥನಶೈಲಿ ಹೀಗೆಯೇ ಎಂದು ವಿವರಿಸಲಾಗದ ಒಂದು ಸೌಂದರ‍್ಯ ಹೊಂದಿದೆ. ಕನ್ನಡ ಸಾಹಿತ್ಯದಲ್ಲಿ ಯಾವೊಂದು ಪ್ರಕಾರಕ್ಕೆ ಸೇರದ, ತಾನೇ ಒಂದು ಹೊಸ ಪ್ರಕಾರವಾಗಲೂ ಅವಕಾಶ ನೀಡದ, ಯಾರ ಹಿಡಿತಕ್ಕೂ ಸಿಗದ ಅಸಮಾನ್ಯತೆ ಅವರದ್ದು. ಅವರನ್ನು ಯಾರೆಷ್ಟಾದರೂ ಬೈಯಲಿ ಓದಿಸಿಕೊಂಡು ಹೋಗುವಂತೆ ಬರೆಯಬಲ್ಲ ಅವರ ಕೌಶಲ್ಯಕ್ಕೆ ಬೆರಗಾಗದೇ ಇರಲಾರರು. ಓದಿ ಮುಗಿದ ಮೇಲೆ ಒದಗುವ ಧ್ಯಾನಸ್ಥ ಸ್ಥಿತಿ ಉಂಟು ಮಾಡುವ ಧನ್ಯತಾ ಭಾವಕ್ಕೆ ಬೆಲೆ ಕಟ್ಟಲಾಗದು. ಅಂತಹದ್ದೇ ಒಂದು ಅನನ್ಯ ಅನುಭವಕ್ಕೆ ನಮ್ಮನ್ನು ಒಡ್ಡುವುದು ಗೃಹಭಂಗದ ಸಾಮರ್ಥ್ಯ. ನಿಮ್ಮನ್ನು ಆಗಾಗ ಕರಗಿಸುತ್ತ, ವಿಸ್ಮಯಗೊಳಿಸುತ್ತ, ದುಃಖದಲ್ಲಿ ಮುಳುಗೇಳಿಸುತ್ತ ಗೃಹಭಂಗ ಮುಂದೆ ಸಾಗುತ್ತದೆ. ಇಡೀ ಕಾದಂಬರಿ ಪೂರ್ಣ ಗಂಭೀರವಾಗಿದೆ. ಅದಕ್ಕಿಂತ ಹೆಚ್ಚಾಗಿ ಕಾದಂಬರಿಯ ಪ್ರತಿ ಸಾಲಿನಲ್ಲೂ ಒಂದು ನೋವಿನ ಹರಿವಿದೆ. ಅದು ಕೆಲವೊಮ್ಮೆ ಹೆಪ್ಪುಗಟ್ಟಿದ್ದರೆ, ಕೆಲವೆಡೆ ಬರೀ ತೇವವಾಗಿದೆ. ವಾಕ್ಯವಾಕ್ಯವನ್ನು ಅಂತಃಶ್ಚಕ್ಷುವಿನ ಮೂಲಕ ನೀವು ಸ್ಪರ್ಶಿಸಿದರೆ ಕಡೆಯ ಪಕ್ಷ ನೋವಿನ ಪಸೆಯಾದರೂ ನಿಮ್ಮ ಕೈಗೆ ತಾಕದೇ ಇರಲಾರದು. ಮೊದಲ ಪುಟದಿಂದ ಶುರುವಾಗುವ ಈ ನೋವು, ಮ್ಲಾನತೆ, ಕಡೆಯ ಪುಟದವರೆಗೂ ಯಾಕಿದೆ? ಗೃಹಭಂಗ ಮಾತ್ರವಲ್ಲ ಭೈರಪ್ಪನವರ ಬಹುತೇಕ ಕಾದಂಬರಿಗಳ ಹರಿವೂ ಹೀಗೆಯೇ..