Siddaramaiah Record: ಸಿದ್ದರಾಮಯ್ಯ ಸೋತಾಗಲೂ, ಗೆದ್ದಾಗಲೂ ಜತೆಗಿದ್ದೇನೆ..!
ಗೆದ್ದಾಗ ಎಲ್ರೂ ತುಂಬ್ಕೊತ್ತಾರೆ, ಸೋತಾಗ ಒಬ್ರೂ ಇರೋದಿಲ್ಲ. ಹಿಂಗೆ ಎಲ್ಲಾ ರೀತಿಯ ಏಳುಬೀಳುಗಳನ್ನು ನೋಡಿಕೊಂಡೇ ಜತೆಯಲ್ಲಿ ಬಂದೆವು. ಆನಂತರ ಮತ್ತೆ ಚುನಾವಣೆ ಬಂತು. ಅಷ್ಟೊತ್ತಿಗೆ ವಿವೇಕಾನಂದನಗರ ಬಡಾವಣೆಯ ಮುಕುಂದಮಾಲಾ ಎಂಬ ಗಣಿತ ಮೇಷ್ಟ್ರು ಮನೆಗೆ ಬಾಡಿಗೆಗೆ ಬಂದಿದ್ದೆವು, ಆ ಚುನಾವಣೆಯಲ್ಲಿ ಗೆದ್ದೆವು. ಆಗ ಅವರ ಮನೆ ಮಾರುತ್ತೇವೆ
-
ಮರಿಸ್ವಾಮಿಗೌಡ
(ನಿರೂಪಣೆ: ಕೆ.ಜೆ.ಲೋಕೇಶ್ ಬಾಬು)
ಕರ್ನಾಟಕಕ್ಕೆ ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟ ಹಿರಿಮೆ ಮಲೆನಾಡಿನ ಶಿವಮೊಗ್ಗ ಜಿಲ್ಲೆಗಿದೆ. ಕಡಿದಾಳ್ ಮಂಜಪ್ಪ, ಜೆ.ಎಚ್.ಪಟೇಲ್, ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ, ಈ ನಾಲ್ವರು ಶಿವಮೊಗ್ಗ ಜಿಲ್ಲೆಯವರು. ಈ ದಾಖಲೆ ಮುರಿಯಲು ಈವರೆಗೆ ಯಾವ ಜಿಲ್ಲೆಗೂ ಸಾಧ್ಯವಾಗಿಲ್ಲ. ನಂತರ ಕಲಬುರಗಿ, ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು, ಈ ಜಿಲ್ಲೆಗಳು ತಲಾ ಇಬ್ಬರು ಮುಖ್ಯ ಮಂತ್ರಿಗಳನ್ನು ನೀಡಿವೆ. ಆದರೆ ಇಲ್ಲಿ ಸುದೀರ್ಘ ಅವಧಿಗೆ ಇಬ್ಬರು ಮುಖ್ಯಮಂತ್ರಿ ಗಳನ್ನು ಸಮರ್ಪಸಿದ ಏಕೈಕ ಜಿಲ್ಲೆ ಅಂದರೆ ಅದು ಮೈಸೂರು ಜಿಲ್ಲೆ. ಈ ಹೆಗ್ಗಳಿಕೆ ಸರಿಗಟ್ಟಲು ಬೇರಾವ ಜಿಲ್ಲೆಗೂ ಸಾಧ್ಯವಾಗಿಲ್ಲ. ಆ ಇಬ್ಬರು ಮಹನೀಯರಲ್ಲಿ ಮೊದಲಿಗರು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು, ಎರಡನೆ ಯವರು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಹಾಲಿ ಸಿಎಂ ಸಿದ್ದು ಜತೆಗಿನ ದೀರ್ಘ ಒಡನಾಡಿ ಮೈಸೂರಿನ ಮರಿಸ್ವಾಮಿಗೌಡ ತಮ್ಮ ಒಡನಾಟದ ನೆನಪುಗಳನ್ನು ‘ವಿಶ್ವವಾಣಿ’ಯ ವಿಶೇಷ ಸಂಚಿಕೆಗೆ ಹಂಚಿಕೊಂಡಿದ್ದಾರೆ. ಚಾರಿತ್ರಿಕವಾದ ಸಂದರ್ಭಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ...!
ನನ್ನ ಸ್ವಂತ ಊರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸುಗ್ಗನಹಳ್ಳಿ. ನಾನು ಮೂರು ವರ್ಷದವನಿದ್ದಾಗ ಮೈಸೂರು ತಾಲೂಕಿನ ಕುಪ್ಪೇಗಾಲದ ಅಜ್ಜಿ ಮನೆಗೆ ಬಂದೆ. ಬಾಲ್ಯದ ವಿದ್ಯಾಭ್ಯಾಸ ಅಲ್ಲಿಯೇ ಆಯಿತು. ಎಂಎ., ಬಿಇಡಿ., ಮುಗಿಸುವವರೆಗೂ ಅಲ್ಲೇ ಇದ್ದೆ.
ಒಮ್ಮೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಲು ಹಾರ್ಡ್ವಿಕ್ ಹೈಸ್ಕೂಲ್ ಗೆ ಬಂದಿದ್ದೆ. ಆಗ ಸಿದ್ದರಾಮಯ್ಯ ಅವರು ಮೈಸೂರಿನ ಪ್ರಕಾಶ್ ಲಾಡ್ಜ್ ನಲ್ಲಿ ಇದ್ದರು. ಅದರ ಮೇಲೆ ನಿಂತು, ಏನ್ರೋ ಯಾವಾಗ ಬಂದ್ರಿ? ಏನ್ ವಿಷಯ ಅಂತ ಅಂದ್ರು. ನಾನು ಎಕ್ಸಾಂ ಬರೆಯಕ್ಕೆ ಬಂದಿದ್ದೀವಿ ಅಂದೆ. ನಿಂದು ಯಾವುದು? ಏನ್ ವಿಷಯ ಅಂದ್ರು? ನಂದು ಎಸ್ ಎಸ್‌ಎಲ್‌ಸಿ ಹಾರ್ಡ್ವಿಕ್ ಹೈಸ್ಕೂಲ್ ಕನಣ್ಣ ಅಂದೆ. ಅವತ್ತೇ ಅವರ ಜತೆ ಮೊದಲು ಮಾತನಾಡಿದ್ದು. ಅದಕ್ಕೂ ಮೊದಲು ದೂರದಲ್ಲಿ ನಿಂತು ನೋಡಿದ್ದೆ.
ಆದರೆ, ಮಾತನಾಡಿರಲಿಲ್ಲ. ಅವರನ್ನು ನೋಡಿದರೆ ಹೆದರುತ್ತಿದ್ದೆವು. ಅವರು ಯಾವಾಗಲೂ ಗಡ್ಡ ಬಿಟ್ಕೊಂಡು, ಲುಂಗಿ ಸುತ್ತಿಕೊಂಡು ಇರುತ್ತಿದ್ದರು. ನಮಗೆ ಅವರನ್ನು ಕಂಡರೆ ಭಯ ಆವಾಗ. ಆ ವೇಳೆ ಇವರು ಯಾವಾಗಲೂ ಕುಪ್ಪೆಗಾಲಕ್ಕೆ ಯಾಲಕ್ಕಿಗೌಡರ ಮಗ ವೈ.ಮಹೇಶ್ ಅವರ ಮನೆಗೆ ಬರುತ್ತಿದ್ದರು. ಅಲ್ಲಿ ಜಾಸ್ತಿ ಪರಿಚಯ ಆಯ್ತು. ನಂತರ ನಾನು ಪ್ರಥಮ ಪಿಯುಸಿಗೆ ಅಗ್ರಹಾರದಲ್ಲಿ ರೂಮ್ ಮಾಡಿಕೊಂಡಿದ್ದೆ. ಆಗ ಅಲ್ಲಿ ಖಾಲಿ ಮಾಡಿಸಿದರು. ಆನಂತರ ಮೆಡಿಕಲ್ ಕಾಲೇಜು ಹಿಂಭಾಗಕ್ಕೆ ಬಂದೆವು. ಆಗ ಇವರೂ ಕೂಡ ಪ್ರಕಾಶ್ ಲಾಡ್ಜ್ ರೂಮ್ ಖಾಲಿ ಮಾಡಿಕೊಂಡು ನಾನೂ ನಿಮ್ಮ ಜತೆ ಬರುತ್ತೇನೋ ಕಣ್ರೋ, ನನಗೂ ಒಂದು ರೂಮ್ ಮಾಡಿಕೊಡಿ ಎಂದರು. ಆಮೇಲೆ ಅಲ್ಲೇ ಅವರಿಗೂ ರೂಮ್ ಮಾಡಿಕೊಟ್ಟಿದ್ದಾಯಿತು.
ಇಬ್ಬರ ರೂಮುಗಳು ಅಟ್ಯಾಚ್ ಆಗಿದ್ದವು. ಹಂಗೇ ಓದಿಕೊಂಡು ಬಂದದ್ದಾಯಿತು. ರೂಮಿನಲ್ಲಿ ಅವರ ಜತೆ ಯಾವಾಗಲೂ ಹುಡುಗರ ಗುಂಪು ಇರುತ್ತಿತ್ತು. ಒಮ್ಮೊಮ್ಮೆ ಬೆಳಗ್ಗೆ ತಿಂಡಿಯನ್ನು ಇಂದ್ರ ಕೆಫೆಯಲ್ಲಿ ಮಾಡುತ್ತಿದ್ದೆವು. ಅವರು ರೂಮಿನಲ್ಲಿ ಸ್ನಾನ ಮಾಡುವ ವೇಳೆ ನಾನು ಅವರ ಜೊತೆ ಅವರ ಟವಲ್, ಬಟ್ಟೆ ತೆಗೆದುಕೊಂಡು ಹೋಗಿ ಕೊಡಬೇಕಿತ್ತು, ಅಷ್ಟು ಹತ್ತಿರ ಆಗಿದ್ದೆವು. ಬೆಳಗ್ಗೆ ಹೋದರೆ ಇನ್ನೂ ರೂಮಿಗೆ ಬರುತ್ತಿದ್ದುದೇ ರಾತ್ರಿ ವೇಳೆಗೆ. ಆಗ ಸುಮಾರು ಬಾರಿ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆವಾಗ ಲಾಯರ್ ಕೆಲಸ ಮಾಡುತ್ತಿದ್ದರು.
ಚಿಕ್ಕಬೋರಯ್ಯ ಅವರು ಇವರ ಸೀನಿಯರ್. ಚಿಕ್ಕಬೋರಯ್ಯ ಅವರು ಯಾವಾಗಲೂ ಇವರಿಗೆ ಬರವಣಿಗೆ ಕೆಲಸ ಕೊಡುತ್ತಿದ್ದರು. ಅದೇ ವೇಳೆ ನಮ್ಮ ಊರು ಕುಪ್ಪೆಗಾಲದಲ್ಲಿ ಒಂದು ಗಲಾಟೆ ಆಯ್ತು. ಆ ಕೇಸನ್ನು ಅವರೇ ನೋಡಿದರು. ಆಗ ನಾನು ಕ್ಲಾಸ್ ಇಲ್ಲ ಅಂದರೆ ಅವರ ಜೊತೆಯಲ್ಲಿ ಯಾವಾಗಲೂ ಕೋರ್ಟಿಗೆ ಹೋಗಲು ಶುರುಮಾಡಿದೆ. ಆ ಕಾಲದ ಅವರು ರೈತರು ಬಂದರೆ ಅವರ ಕೇಸನ್ನೂ ನಿಭಾಯಿಸಿ, ಅವರ ಊಟ, ತಿಂಡಿ ಮಾಡಿದ್ದೀರಾ ಎಂದು ಕೇಳಿ ತಿನ್ನಿಸಿ, ಬಸ್ ಚಾರ್ಜ್ ಕೂಡ ಕೊಟ್ಟು ಕಳುಹಿಸುತ್ತಿದ್ದರು.
ಹಾಗೇ ಬರುತ್ತಾ ಬರುತ್ತಾ ಅವರು 1983ರಲ್ಲಿ ಚುನಾವಣೆಗೆ ನಿಂತು ಗೆದ್ದರು. ಅದಕ್ಕೂ ಮುನ್ನ ನಾನು ಎಂಎ., ಬಿಇಡಿ., ಮಾಡುವಾಗ ಸರಸ್ವತಿಪುರಂನಲ್ಲಿದ್ದ ನನ್ನ ರೂಮಿಗೆ ಬಂದು ಹೋಗುವುದು ಮಾಡುತ್ತಿದ್ದರು. ನನ್ನನ್ನು ಬಹಳ ಹಚ್ಚಿಕೊಂಡಿದ್ದರು. ನಾನೂ ಕೂಡ ಅವರನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದೆ. ಹೀಗೆ ನಮ್ಮಿಬ್ಬರ ಬಾಂಧವ್ಯ ಬಹಳ ಗಟ್ಟಿ ಯಾಗಿತ್ತು.
ಇದನ್ನೂ ಓದಿ: Siddaramaiah Record: ಸಿಎಂ ಸಿದ್ದರಾಮಯ್ಯ ಕರ್ನಾಟಕ ಕಂಡ ಮಾಸ್ ಲೀಡರ್
ಚುನಾವಣೆಯಲ್ಲಿ ಗೆದ್ದ ಬಳಿಕ ರೂಮಿನಲ್ಲಿ ಇರುವುದು ಬೇಡ ಕಣೋ, ಒಂದು ಮನೆ ಮಾಡು ಅಂದರು. ಆಗ ನಾನು ಗಂಗೋತ್ರಿ ಹುಡ್ಕೋ ಬಡಾವಣೆಯಲ್ಲಿ ಎಂಐಜಿ 9 ಸಂಖ್ಯೆಯ ಮನೆಯನ್ನು ಬಾಡಿಗೆಗೆ ತೆಗೆದುಕೊಂಡೆವು. ಅಂದಿನಿಂದ ಅವರು ಅಲ್ಲೇ ಇರುತ್ತಿದ್ದರು. ಅದಾದ ಮೇಲೆ ಶ್ರೀರಾಂಪುರದಲ್ಲಿ ಮನೆ ಮಾಡಲಾಯಿತು.
ನಂತರ ನಾನು ಎಲ್ಲಿ ಮನೆ ಮಾಡುತ್ತೇನೆ, ಅಲ್ಲಿ ಇರುತ್ತಿದ್ದರು. ಆನಂತರ ಎಸ್ ಬಿಎಂ ಕಾಲೋನಿಗೆ ಬಂದೆವು. ಆಗಲೇ ನಾವು ಎ.ಎಸ್. ಗುರುಸ್ವಾಮಿ ವಿರುದ್ಧ ಸೋತುಬಿಟ್ಟೆವು. ಅವರು ಸೋತಾಗಲೂ ನಾನು ಒಬ್ಬನೇ ಜೊತೆಯಲ್ಲಿ ಇದ್ದದ್ದು.
ಗೆದ್ದಾಗ ಎಲ್ರೂ ತುಂಬ್ಕೊತ್ತಾರೆ, ಸೋತಾಗ ಒಬ್ರೂ ಇರೋದಿಲ್ಲ. ಹಿಂಗೆ ಎಲ್ಲಾ ರೀತಿಯ ಏಳುಬೀಳುಗಳನ್ನು ನೋಡಿಕೊಂಡೇ ಜತೆಯಲ್ಲಿ ಬಂದೆವು. ಆನಂತರ ಮತ್ತೆ ಚುನಾವಣೆ ಬಂತು. ಅಷ್ಟೊತ್ತಿಗೆ ವಿವೇಕಾನಂದನಗರ ಬಡಾವಣೆಯ ಮುಕುಂದಮಾಲಾ ಎಂಬ ಗಣಿತ ಮೇಷ್ಟ್ರು ಮನೆಗೆ ಬಾಡಿಗೆಗೆ ಬಂದಿದ್ದೆವು, ಆ ಚುನಾವಣೆಯಲ್ಲಿ ಗೆದ್ದೆವು. ಆಗ ಅವರ ಮನೆ ಮಾರುತ್ತೇವೆ ಎಂದರು.
ಆಗ ಅಲ್ಲಿಂದ ಆಂದೋಲನ ಸರ್ಕಲ್ ಪಕ್ಕದಲ್ಲಿರುವ ಮಂಜುಳಾರಾಜು ಎಂಬವರ ಮನೆಗೆ ಬಂದೆವು. ಅಲ್ಲಿ ಸುಮಾರು ವರ್ಷಗಳ ಕಾಲ ಇದ್ದೆವು. ಇದೇ ಸಂದರ್ಭದಲ್ಲಿ ನಮ್ಮ ಸಾಹೇಬ್ರು, ಲೋ ಜೀವನಪೂರ್ತಿ ಆ ಮನೆಯಿಂದ ಈ ಮನೆ, ಈ ಮನೆಯಿಂದ ಆ ಮನೆ ಅಲೆಯಂಗೆ ಆಯ್ತ, ಬರೀ ಇದೇ ಆಯ್ತ ಎಂದು ಬೈದರು. ಆ ವೇಳೆಗೆ ನನಗೆ ಲಾಟರಿಯಲ್ಲಿ ಎಚ್ ಐಜಿ ಮನೆ ಅಲಾಟ್ ಆಗಿತ್ತು. ಆ ಮನೆ ಆಲ್ಟ್ರೇಷನ್ ಮಾಡಿ ಈಗಲೂ ಅ ಇದ್ದೀವಿ. ಅಡುಗೆಯವರು, ಆಳುಕಾಳು ಇದ್ದಾರೆ.
ಎಷ್ಟು ಜನ ಬಂದ್ರೂ ಅ ಊಟ. ದಿನಾ ಹತ್ತದಿನೈದು ಜನ ಊಟ ಮಾಡ್ತಾರೆ. ನಾವು ಹಿಂಗೇ ಬೆಳೆದುಕೊಂಡು ಬಂದೋ. ಅವರು ಆ ಮನೆಯಲ್ಲಿ ಇದ್ದಾರೆ, ನಾನು ಈ ಮನೆಗೆ ಬಾಡಿಗೆ ಕಟ್ಟಿಕೊಂಡು ಸಂಸಾರ ಸಮೇತ ಇಲ್ಲಿ ಇದ್ದೇನೆ.
ಅವರು ಎಂಎಲ್ಎ ಆಯ್ತರೆ, ಮಿನಿಸ್ಟರ್ ಆಯ್ತರೆ ಅಂತ ನಾನು ಅವರ ಸ್ನೇಹ ಮಾಡಲಿಲ್ಲ ಆವಾಗ. ನನಗಿಂತ ಅವರು ಏಳೆಂಟು ವರ್ಷ ದೊಡ್ಡವರು. ಅವರು ನನ್ನ ಸೋದರಮಾವ ಚಪ್ಪಯ್ಯನ ಕ್ಲಾಸ್ ಮೇಟ್.
ಹಂಗಾಗಿ ಮೊದಲಿಂದ ಜೊತೆಯಲ್ಲಿ ಬೆಳೆದುಕೊಂಡು ಬಂದು ಬಿಟ್ಟೆವು. ಬೈ ಎಲೆಕ್ಷನ್ ನಲ್ಲಿ ಎಲ್ಲಾ ಬಿಟ್ಟೋದ್ರು. ಆದರೆ, ನಾನು ಹೋಗಲಿಲ್ಲ, ನಾನೊಬ್ಬನೇ ಉಳಿದುಕೊಂಡವನು. ಯಾರೂ ಇರಲಿಲ್ಲ, ಯಾರಿದ್ದರು ? ಒಬ್ಬರೂ ಇಲ್ಲ.ನಂದೇನು ಅಂದ್ರೆ ನಾನು ಯಾವತ್ತೂ ಆಡಳಿತಾತ್ಮಕವಾಗಿ ನಾನು ಮೂಗು ತೂರಿಸುತ್ತಿರಲಿಲ್ಲ. ಅವರ ಜತೆ ಯಾರಾದರೂ ಬಂದರೆ ಅವರಿಗೆ ಊಟ ತಿಂಡಿ ವ್ಯವಸ್ಥೆ ಹಾಗೂ ಅವರು ಹೇಳಿದ ಕೆಲಸ ಮಾಡಿಕೊಂಡು ಇದ್ದೆ.
ಯಾವತ್ತೂ ನಾನು ಅಡ್ಮಿನಿಸ್ಟ್ರೇಷನ್ ನಲ್ಲಿ ನಾನು ಇಂಟರ್‌ಫಿಯರೆನ್ಸ್ ಆಗಲ್ಲ. ಆ ಕಾರಣ ದಿಂದ ನನ್ನ ಅವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು. ನಾವು ಆ ವಿಚಾರದಲ್ಲಿ ಮಧ್ಯೆ ಮಧ್ಯೆ ಮೂಗು ತೂರಿಸಬಾರದು. ಬೇರೆಯವರು ಏನೇ ಮಾಡಿಕೊಂಡರೂ ನಾನು ಆ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಹಿಂಗೇ ಬೆಳೆದುಕೊಂಡು ಬಂದೆವು. ಅವರೂ ನನ್ನನ್ನು ಹಚ್ಚಿ ಕೊಂಡಿದ್ದಾಯಿತು.
ಅವರು ಜೀವಂತವಾಗಿ ಇರುವ ತನಕ ನಾನು ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕೆಲವೊಮ್ಮೆ ಬೇಜಾರಾದಾಗ ನಮ್ಮ ರೂಮಿಗೆ ಬರುತ್ತಿದ್ದರು. ಆದರೂ, ಅವರು ತಮ್ಮ ಬೇಜಾರನ್ನು ಹೇಳಿಕೊಳ್ಳುತ್ತಿರಲಿಲ್ಲ. ಎಷ್ಟೋ ಜನ ಅವರ ಆತ್ಮೀಯರು ರೂಮಿಗೆ ಬಂದಾಗ ಅವರ ಪ್ಯಾಂಟು, ಶರ್ಟನ್ನೇ ಹಾಕಿಕೊಂಡು ಹೋಗುತ್ತಿದ್ದರು. ಆದರೂ, ಅವರು ಕೇಳುತ್ತಿರಲಿಲ್ಲ.
ಅವರಿಗೆ ಇಷ್ಟವಾದ ಊಟವನ್ನೇ ನಾನು ಮಾಡಿಸೋದು. ಅವರ ಊಟವನ್ನು ಬಹಳ ಇಷ್ಟಪಟ್ಟು ಮಾಡುತ್ತಿದ್ದರು. ನಾನು ಯಾವತ್ತೂ ಅವರು ಇಷ್ಟಪಟ್ಟ ಆಹಾರವನ್ನು ತಪ್ಪಿಸಿಲ್ಲ. ಹಿಂಗೇ ನಡೆದುಕೊಂಡು ಬಂತು. ಅವರು ತಾವು ಮಾತ್ರವಲ್ಲ, ತಮ್ಮನ್ನು ಕಾಣಲು ಬಂದವರನ್ನೂ ಹಾಗೇ ನೋಡಿಕೊಳ್ಳುತ್ತಿದ್ದರು.
ಅವರು ಹಾಗೆ ಇಲ್ಲದಿದ್ದರೆ ವರುಣಾ ನಾಲೆಯಂತಹ ದೊಡ್ಡ ಕೆಲಸ ಮಾಡಲು ಆಗುತ್ತಿತ್ತಾ? ಮಂಡ್ಯದವರು ಬಿಡುತ್ತಿದ್ದರಾ ? ಹಿಂದೆ ಕೃಷ್ಣರಾಜ ಒಡೆಯರ್ ಅವರು ಮಾಡಿದ ಕೆಲಸಗಳನ್ನು ಹೊರತುಪಡಿಸಿ , ನಂತರದಲ್ಲಿ ಹೆಚ್ಚಿನ ಕೆಲಸ ಮಾಡಿರುವುದು ಸಿದ್ದರಾಮಯ್ಯ ಅವರೇ. ಜಾತ್ಯತೀತ ಜನತಾದಳ ಬಿಟ್ಟಾಗ ಜನ ಎಲ್ಲಾ ಇವರ ವಿರುದ್ಧ ಒಗ್ಗಟ್ಟಾದರು.
ಬೇರೆಯವರು ಸಿದ್ದರಾಮಯ್ಯ ಅವರ ಜೊತೆ ಬರಲು ಬಿಡಲಿಲ್ಲ ಅವರು. ಆಗಲೂ ಅವರೊಂದಿಗೆ ನಾನು ಒಬ್ಬನೇ ಇದ್ದದ್ದು. ಅವರ ಪಾರ್ಟಿ, ರಾಜಕೀಯ ಏನೇ ಮಾಡಿದರೂ, ನಮ್ಮ ಸ್ನೇಹ ಹಾಗೇ ಇತ್ತು. ಅವರಿಗೆ ಎಲ್ಲಾ ಜಾತಿ, ಜನಾಂಗದವರೊಂದಿಗೆ ವಿಶ್ವಾಸ ಹಾಗೇ ಇತ್ತು. ಆದ್ದರಿಂದ ಅಂತಹ ತೊಂದರೆ ಏನೂ ಆಗಲಿಲ್ಲ.
ಆರಂಭದಲ್ಲಿ ಸ್ವಲ್ಪ ಸಮಸ್ಯೆ ಆಯಿತು. ಆದರೂ, ಚಾಮುಂಡೇಶ್ವರಿ ಬೈ ಎಲೆಕ್ಷನ್ ನಲ್ಲಿ ಒಕ್ಕಲಿಗರು 40-50 ಪರ್ಸೆಂಟ್ ಓಟು ಕೊಟ್ಟಿದ್ದಾರೆ. ಬೈ ಎಲೆಕ್ಷನ್ ನಿಂದ ಈಚೆಗೆ ಈ ವ್ಯವಸ್ಥೆ ಹಾಳಾದದ್ದು, ಅಲ್ಲಿವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಅದಕ್ಕೂ ಮುನ್ನ ಸಾಹೇಬರಿಗೆ ಆ ಸಮುದಾಯದವರೇ ಹೆಚ್ಚಿನ ಸ್ನೇಹ, ವಿಶ್ವಾಸದಲ್ಲಿ ಇದ್ದರು.
ರಾಕೇಶ್ ಆಡಳಿತ ವಿಚಾರದಲ್ಲಿ ನಂಬರ್ ಒನ್ ಇದ್ದ. ಆಗ ಯತೀಂದ್ರ ಸಾಹೇಬರು ಡಾಕ್ಟರ್. ಅವರ ಅಪ್ಪನ ತರನೇ ರಾಕೇಶ್ ಬರುತ್ತಿದ್ದರು. ಆದರೆ, ಏನ್ ಮಾಡೋದು ಅವರು ಹೋಗಿಬಿಟ್ಟರು. ಆದಾದ ಮೇಲೆಯೇ ಡಾಕ್ಟರ್ ಬಂದ್ರು. ಅವರು ತಿಂಗಳಲ್ಲಿ ಇಪ್ಪತ್ತು ದಿನ ಮೈಸೂರಿನ ಕ್ಷೇತ್ರದ ಇರುತ್ತಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ.
ಪ್ರತಿಯೊಂದನ್ನೂ ಯತೀಂದ್ರ ಅವರೇ ನೋಡಿಕೊಳ್ಳೋದು. ಚೆನ್ನಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ಅವರ ಕುಟುಂಬದ ಜೊತೆ ಒಡನಾಟ ಇಂದಿಗೂ ಹಾಗೇ ಇದೆ. ಮೇಡಂ ನವರು ಏನಾದರೂ ಇದ್ದರೆ ಹೇಳಿ ಕಳುಹಿಸುತ್ತಾರೆ.
ಕಳೆದ 20 ವರ್ಷಗಳಿಂದ ಆ ಮನೆಯಲ್ಲಿ ಅವರು ಇದ್ದಾರೆ. ಸಾಕು ಎನ್ನುವವರೆಗೂ ಅವರು ಆ ಮನೆಯಲ್ಲಿ ಇರಲಿ, ನಾನು ಕೇಳಲು ಹೋಗುವುದಿಲ್ಲ. ನನಗೆ ಅದು ಬೇಕಾಗಿಯೂ ಇಲ್ಲ. ಚಿಕ್ಕಂದಿನಿಂದಲೂ ನಾವು ಅವರ ಜತೆ ಹಾಗೇ ಬೆಳೆದುಕೊಂಡು ಬಂದೆವು. ಹಾಗಾಗಿ ಅವರೊಂದಿಗೆ ಯಾವುದೇ ರೀತಿಯ ವ್ಯಾವಹಾರಿಕ ವಿಚಾರವೇ ಇಲ್ಲ.
ಚಿಕ್ಕಂದಿನಿಂದಲೂ ನನ್ನದು ವ್ಯವಸಾಯ. ಸಿಟಿಯಲ್ಲಿ ಏನೂ ಕೆಲಸ ಇಲ್ಲ ಎಂದರೆ ಬೆಳಗ್ಗೆಯಿಂದ ಸಂಜೆವರೆಗೆ ಜಮೀನಿನಲ್ಲಿ ಇರುತ್ತೇನೆ. ತೆಂಗು, ಅಡಿಕೆ ಇದೆ. ಕೆಲಸ ಮಾಡಿ ಕೊಂಡು ಕಾಲ ಕಳೆಯುತ್ತೇನೆ. ಇವತ್ತಿನ ಈ ರಾಜಕೀಯಕ್ಕೂ ಆಗಿನ ಕಾಲದ ರಾಜಕೀಯಕ್ಕೂ ಬಹಳ ವ್ಯತ್ಯಾಸ ಇದೆ. ಆಗ ಒಂದು ರೀತಿಯ ಧರ್ಮಯುದ್ಧ ಇದ್ದ ಹಾಗೆ ಇತ್ತು. ಆದರೆ, ಈಗ ಅದೆಲ್ಲ ಇಲ್ಲ, ಇಡೀ ರಾಜಕೀಯ ಮಲೀನಗೊಂಡಿದೆ.
ಸಿದ್ದರಾಮಯ್ಯ ಅವರ ಮೊದಲ ಚುನಾವಣೆಯಲ್ಲಿ 60 ಸಾವಿರ ವೆಚ್ಚ ಆಗಿತ್ತು. ಅವರು ಪ್ರಚಾರಕ್ಕೆ ಹೋಗಿ ಬಂದರೆ ಅವರ ಜೇಬಿನ ತುಂಬಾ ಬರೀ ನಾಣ್ಯಗಳೇ ತುಂಬಿರುತ್ತಿತ್ತು. ಹೊದ ಕಡೆಯ ಕಾಸು ಕೊಡುತ್ತಿದ್ದರು. ನಾನು ಅದನ್ನು ತೆಗೆದು ಲೆಕ್ಕ ಹಾಕಿ ಬರೆದು ಇಡುತ್ತಿದ್ದೆ. ಈಗ ಇವರೇ ಕೊಡಬೇಕು, ಆ ಪರಿಸ್ಥಿತಿ ನಿರ್ಮಾಣ ಆಗಿದೆ.
ಎಲ್ಲವನ್ನೂ ಜನರೇ ಈಗ ಕುಲಗೆಡಿಸಿದ್ದಾರೆ. ಒಬ್ಬರಿಗಿಂತ ಒಬ್ಬರು ಮೀರಿಸುತ್ತಾರೆ. ಎಲ್ಲಾ ಪಕ್ಷಗಳಲ್ಲಿಯೂ ಅದು ಇದೆ. ನಾನು ಕಡಿಮೆ, ಅವನು ಹೆಚ್ಚು ಅಂತ ಹೇಳುವ ಹಾಗೇ ಇಲ್ಲ. ರಾಜಕೀಯದಲ್ಲಿ ಬಹಳ ವ್ಯತ್ಯಾಸ ಆಗಿದೆ. ಎಲ್ಲದಕ್ಕೂ ದುಡ್ಡೇ ಮುಂದು ಎಂಬಂತಾಗಿದೆ.
ಸಿದ್ದರಾಮಯ್ಯ ಅವರು ಬಹಳ ಮುಂದಾಲೋಚನೆಯಿಂದ ಕೆಲಸ ಮಾಡುತ್ತಾರೆ. ಯಾವ ಯೋಜನೆ ತಂದರೆ ಜನರಿಗೆ ಅನುಕೂಲ ಆಗಲಿದೆ ಎಂಬುದನ್ನು ಯೋಚಿಸಿಯೇ ಮಾಡು ತ್ತಾರೆ. ಅದರಲ್ಲೂ ರೈತರು ಹಾಗೂ ಕಾರ್ಮಿಕರ ವಿಚಾರದಲ್ಲಿ ಯಾವಾಗಲೂ ಮುಂದಿರು ತ್ತಾರೆ. ಅದು ಈ ನಾಡಿಗೂ ಗೊತ್ತಿದೆ.
ಇಲ್ಲದಿದ್ದರೆ ವರುಣ ನಾಲೆ ಎಲ್ಲಿ ಸಾಧ್ಯವಾಗುತ್ತಿತ್ತು?. ಹಣಕಾಸು ಸಚಿವರಾಗಿ ಅದಕ್ಕೆ ಯಥೇಚ್ಛವಾಗಿ ಹಣ ಕೊಟ್ಟರು. ಪ್ರತಿ ತಿಂಗಳು ನಾಲೆ ಪಿಲ್ಲರ್ ಬಳಿ ನಿಂತು ಕೆಲಸ ಗಮನಿಸು ತ್ತಿದ್ದರು. ಪ್ರತಿ ಪಿಲ್ಲರ್ ಕೆಲಸವನ್ನೂ ಕಣ್ಣಿಂದ ನೋಡಿ ಮಾಡಿಸಿದ್ದಾರೆ, ಅಂತಹ ಬದ್ದತೆ ಅವರದ್ದು. ಹಾಗಾಗಿ ವರುಣ ನಾಲೆ ಕೆಲಸ ಬೇಗ ಮುಗಿಯಿತು. ಇಲ್ಲವಾದರೆ ಸಾಧ್ಯವಾಗು ತ್ತಿತ್ತಾ? ಮಂಡ್ಯದವರು ಬಿಡುತ್ತಿದ್ದರಾ ? ಅದೆಲ್ಲವನ್ನೂ ಮೆಟ್ಟಿ ನಿಂತು ಕೆಲಸ ಮಾಡಿದರು.
ಸಿದ್ದರಾಮಯ್ಯ ಅವರ ನಡೆಯನ್ನು ಯತೀಂದ್ರ ಅನುಸರಿಸುತ್ತಾರೆ. ಅದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲ. ಇನ್ನೂ ಚಿಕ್ಕ ವಯಸ್ಸು, ಹಂತಹಂತವಾಗಿ ಆಗಲಿದೆ. ಕಲಿಯುವ ಆಸಕ್ತಿ ಇವರಲ್ಲಿ ಇದೆ. ಅವರ ಅಪ್ಪ ಕೂಡ ಕಲಿಸುತ್ತಾರೆ. ಪ. ಮಶ್, ಪ್ರೊ. ನಂಜುಂಡಸ್ವಾಮಿ ಅವರ ಜೊತೆ ಹೆಚ್ಚಾಗಿ ಇರುತ್ತಿದ್ದರು.
ನಾವೂ ಅವರೊಂದಿಗೆ ಇರುತ್ತಿದ್ದೆವು. ಅವರನ್ನು ನೋಡಿಯೇ ನಾವೂ ಕಲಿತದ್ದು. ಮೊದಲೆ ಅವರು ರಾಜಶೇಖರಮೂರ್ತಿ, ಗುರುಪಾದಸ್ವಾಮಿ ಅವರಿಗೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದರು. ಅದು ಅವರನ್ನು ಮತ್ತಷ್ಟು ಪಳಗಿಸಿತು.
ಇವತ್ತು ಕೂಡ ಸಿದ್ದರಾಮಯ್ಯ ಅವರ ನಡೆ ಅನುಸರಿಸುವವರು ಕೆಲವರು ಇದ್ದಾರೆ. ಆದರೆ, ಈ ಸಂದರ್ಭದಲ್ಲಿ ಅವರು ಅದನ್ನು ಎಕ್ಸ್ ಪ್ರೆಸ್ ಮಾಡಲಿಕ್ಕೆ ಆಗುತ್ತಿಲ್ಲ. ಏಕೆಂದರೆ, ಈಗೆ ಓಟ್ ಬ್ಯಾಂಕ್ ರಾಜಕೀಯ ಜಾಸ್ತಿ ಆಗಿದೆ. ಅದು ಅವರಿಗೆ ಆತಂಕದ ವಿಚಾರ. ಎಷ್ಟೋ ಜನ ಸಿದ್ದರಾಮಯ್ಯ ಅವರನ್ನು ನೋಡಿ ಕಲಿತು, ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ, ಇಂದು ಅದು ಕಷ್ಟಸಾಧ್ಯ. ಏಕೆಂದರೆ, ಇವತ್ತಿನ ರಾಜಕೀಯವೇ ಬೇರೆ ದಿಕ್ಕಿನಲ್ಲಿ ಸಾಗಿದೆ.
ಚಾಮುಂಡೇಶ್ವರಿ ಬೈ ಎಲೆಕ್ಷನ್ ವರೆಗೆ ಯಾರಿಗೂ ಇಷ್ಟೊಂದು ಗೊಂದಲ ಇರಲಿಲ್ಲ. ಯಾವಾಗ ಬೈ ಎಲೆಕ್ಷನ್ ಶುರು ಆಯ್ತೋ ಆವಾಗ ಜಾತಿ ರಾಜಕೀಯ ಹೆಚ್ಚಾಯಿತು. ಎಲ್ಲಾ ಪಕ್ಷದವರು ಮೈಸೂರಿಗೆ ಬಂದು ಇವರನ್ನು ಸೋಲಿಸಲೇಬೇಕೆಂದು ಶುರು ಮಾಡಿದರೋ ಆವಾಗಿನಿಂದ ಜಾತಿ ರಾಜಕೀಯ ಹೆಚ್ಚಾಯಿತು. ಆಯಾ ಭಾಗದವರು ಆಯಾ ಜಾತಿ ಜನಾಂಗದವರನ್ನು ಎತ್ತಿಕಟ್ಟುವ ಕೆಲಸ ಮಾಡಿದರು. ಆದರೂ ಗೆದ್ದರು, ಜನ ಕೈಬಿಡಲಿಲ್ಲ. ಅಲ್ಲಿಂದ ಶುರುವಾದ ಜಾತಿ ರಾಜಕೀಯ ಇನ್ನೂ ಆಳವಾಗಿ ಬೇರು ಬಿಟ್ಟಿದೆ.
ಬಹುಶಃ ಇನ್ನು ಅದನ್ನು ತೆಗೆಯಲು ಆಗದ ಮಟ್ಟಿಗೆ ಆಳಕ್ಕೆ ಹೋಗಿದೆ. ನಾನು ಅವರನ್ನು ಏನೂ ಕೇಳಲಿಲ್ಲ. ಆದರೂ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯನನ್ನಾಗಿ ಮಾಡಿದರು. ಈ ಸೆಪ್ಟೆಂಬರಗೆ ಅವಧಿ ಮುಗಿಯಲಿದೆ. ನನಗೆ ಅದ್ಯಾವುದೂ ಇಷ್ಟ ಇಲ್ಲ. ಅವರು ಬಂದರೆ ಮಾತ್ರ, ಮೈಸೂರಿನಲ್ಲಿ ಇರುತ್ತೇನೆ. ಇಲ್ಲವಾದರೆ ಜಮೀನು ಬಳಿ ಇರುತ್ತೇನೆ.
ಅವರು ಕೇಂದ್ರ ರಾಜಕಾರಣಕ್ಕೆ ಹೋಗುವುದು ಅನುಮಾನ. ಅವರಿಗೆ ಕರ್ನಾಟಕವೇ ಸೂಕ್ತ ವಾದ ಪ್ರಶಸ್ತ ಜಾಗ. ಅವರಿಗೆ ಕರ್ನಾಟಕದ ಪ್ರತಿ ವಿಚಾರವೂ ಗೊತ್ತಿದೆ. ಹಾಗಾಗಿ ಅವರು ಕೇಂದ್ರದ ಕಡೆ ಹೋಗುವುದು ಬಹುಶಃ ಕಷ್ಟ. ಅವರ ಮನಸ್ಥಿತಿಗೆ ರಾಷ್ಟ್ರ ರಾಜಕೀಯ ಒಗ್ಗುವುದಿಲ್ಲ.
ನನ್ನ ಅಪಾಯಿಂಟ್‌ಮೆಂಟ್ ಲೆಟರ್ ಹರಿದು ಹಾಕಿ್ದ್ದರು ..!
ನಾನು ಎಂಎ.,ಬಿಇಡಿ., ಮಾಡಿದ್ದೆ. ಮೆರಿಟ್ ಆಧಾರದ ಮೇಲೆ 1984ರ ನನಗೆ ಹೈಸ್ಕೂಲ್ ಟೀಚರ್ ಕೆಲಸ ಸಿಕ್ಕಿತ್ತು. ನಾನು ಸಿದ್ದರಾಮಯ್ಯ ಅವರೊಂದಿಗೆ ಜಿಲ್ಲಾ ಪರಿಷತ್ ಸೆಮಿನಾರ್ ನಲ್ಲಿ ಭಾಗವಹಿಸಲು ದೆಹಲಿಗೆ ಹೋಗಿದ್ದೆ. ಅಲ್ಲಿಂದ ಬರುವುದರೊಳಗಾಗಿ ಅಪಾಯಿಂಟ್ಮೆಂಟ್ ಆರ್ಡರ್ ರಿಜಿಸ್ಟರ್ ಪೋಸ್ಟ್ ಮೂಲಕ ಬಂದಿತ್ತು. ಆ ಪತ್ರವನ್ನು ನಾನು ಸಿದ್ದರಾಮಯ್ಯ ಅವರಿಗೆ ಕೊಟ್ಟೆ. ಅದನ್ನು ಅವರು ಓದಿ ಹರಿದು ಹಾಕಿದರು. ಅದು ನೋಡಿದರೆ ಅಪಾಯಿಂಟ್‌ಮೆಂಟ್ ಲೆಟರ್. ನೀನೇ ಇಷ್ಟು ದಡ್ಡ, ಇನ್ನು ನೀನು ಮೇಷ್ಟ್ರಾಗಿ ಹುಡುಗರನ್ನೂ ದಡ್ಡರನ್ನಾಗಿ ಮಾಡಿ ಹಾಳು ಮಾಡಿ ಹಾಕ್ತೀಯಾ ಅಂತ ಹರಿದು ಎಸೆದು, ನೀನು ಮಾತ್ರ ಕೆಲಸಕ್ಕೆ ಹೋಗಬೇಡ ಅಂತ ಹೇಳಿದರು.
ನಂಬಿದವರನ್ನು ಯಾವತ್ತೂ ಕೈಬಿಡದ ಸಿದ್ದು ಗುಣ..!
ದೇವರಾಜ ಅರಸು ನಂತರ ಅತೀ ಹೆಚ್ಚು ದಿನಗಳ ಕಾಲ ಆಡಳಿತ ಮಾಡಿದವರು ಸಿದ್ದರಾಮಯ್ಯ ಎಂಬುದು ಅತ್ಯಂತ ಹೆಚ್ಚಿನ ಸಂತೋಷ ನೀಡುವ ವಿಚಾರ. ಅವರು ಹತ್ತು ವರ್ಷಗಳ ಕಾಲ ಅಧಿಕಾರ ಮಾಡಿದರೆ ಒಂದು ಇತಿಹಾಸ ಸೃಷ್ಟಿ ಆಗಲಿದೆ. ಅದಕ್ಕಿಂತಲೂ ಮತ್ತೇನಿದೆ. ಮುಂದೆ ಈ ದಾಖಲೆ ಯಾರು ಮುರಿಯುತ್ತಾರೋ ಗೊತ್ತಿಲ್ಲ. ಅಷ್ಟು ವರ್ಷ ನಾವು ಇರಬೇಕ, ಇದ್ದರೆ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಒಬ್ಬರ ಮೇಲೆ ನಂಬಿಕೆ, ವಿಶ್ವಾಸ ಮೂಡಿದರೆ ಆ ವ್ಯಕ್ತಿಯನ್ನು ಅವರು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ.