KPSC Controversy: ಕೆಪಿಎಸ್ಸಿ ವಿವಾದ: ಅಧಿಕಾರಿಗಳ ವಿರುದ್ದ ಕ್ರಮವಿಲ್ಲ !
ಕಳೆದ ವರ್ಷ ನಡೆದಿದ್ದ ಕೆಪಿಎಸ್ಸಿ ಪರೀಕ್ಷೆ ಯಲ್ಲಿ ಇಂಗ್ಲಿಷ್ನಿಂದ ಕನ್ನಡಕ್ಕೆ ಪ್ರಶ್ನೆಪತ್ರಿಕೆ ತರ್ಜುಮೆ ಯಾಗುವಾಗ ಎಡವಟ್ಟಾಗಿತ್ತು. ಈ ಕಾರಣಕ್ಕೆ ಭಾರಿ ವಿವಾದವಾಗಿದ್ದರಿಂದ, ಮರು ಪರೀಕ್ಷೆ ನಡೆಸ ಲಾಗಿತ್ತು. ಮರು ಪರೀಕ್ಷೆಯಲ್ಲಿಯೂ ತರ್ಜುಮೆಯ ಬಗ್ಗೆ ಭಾರೀ ಆಕ್ಷೇಪಗಳು ಕೇಳಿಬಂದಿದ್ದವು. ಆದರೆ ಇದೀಗ ಈ ಎಡವಟ್ಟು ಮಾಡಿದ ಭಾಷಾಂತರಕಾರರ ವಿರುದ್ಧ ಕ್ರಮವಹಿಸಲು ಸಾಧ್ಯವಿಲ್ಲ ಎನ್ನುವ ಅಚ್ಚರಿಯ ಉತ್ತರ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಬಂದಿದೆ.
-
ಪ್ರಶ್ನೆಪತ್ರಿಕೆಗಳ ಕನ್ನಡ ಅನುವಾದದಲ್ಲಿ ಎಡವಟ್ಟು
ಆಕ್ರೋಶದ ನಡುವೆ ಕ್ರಮ ಅಸಾಧ್ಯ ಎಂದ ಸರಕಾರ
ವಿಶ್ವವಾಣಿ ವಿಶೇಷ
ಬೆಳಗಾವಿ: ಕಳೆದ ವರ್ಷ ನಡೆದಿದ್ದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಭಾರಿ ವಿವಾದಕ್ಕೆ ಕಾರಣ ವಾಗಿದ್ದ ಪ್ರಶ್ನೆಪತ್ರಿಕೆ ತರ್ಜುಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಯಾವುದೇ ಕ್ರಮವಹಿಸಿಲ್ಲ ಎನ್ನುವ ಅಚ್ಚರಿಯ ವಿಷಯ ಬಹಿರಂಗವಾಗಿದೆ. ಕಳೆದ ವರ್ಷ ನಡೆದಿದ್ದ ಕೆಪಿಎಸ್ಸಿ ಪರೀಕ್ಷೆ ಯಲ್ಲಿ ಇಂಗ್ಲಿಷ್ನಿಂದ ಕನ್ನಡಕ್ಕೆ ಪ್ರಶ್ನೆಪತ್ರಿಕೆ ತರ್ಜುಮೆಯಾಗುವಾಗ ಎಡವಟ್ಟಾಗಿತ್ತು. ಈ ಕಾರಣ ಕ್ಕೆ ಭಾರಿ ವಿವಾದವಾಗಿದ್ದರಿಂದ, ಮರು ಪರೀಕ್ಷೆ ನಡೆಸಲಾಗಿತ್ತು. ಮರು ಪರೀಕ್ಷೆಯಲ್ಲಿಯೂ ತರ್ಜುಮೆಯ ಬಗ್ಗೆ ಭಾರೀ ಆಕ್ಷೇಪಗಳು ಕೇಳಿಬಂದಿದ್ದವು. ಆದರೆ ಇದೀಗ ಈ ಎಡವಟ್ಟು ಮಾಡಿದ ಭಾಷಾಂತರಕಾರರ ವಿರುದ್ಧ ಕ್ರಮವಹಿಸಲು ಸಾಧ್ಯವಿಲ್ಲ ಎನ್ನುವ ಅಚ್ಚರಿಯ ಉತ್ತರ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಬಂದಿದೆ.
ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾ ಮಯ್ಯ, ಕಾಲೇಜು / ವಿಶ್ವ ವಿದ್ಯಾಲಯಗಳಲ್ಲಿ ತಾಂತ್ರಿಕ ಮತ್ತು ವಿಜ್ಞಾನ ವಿಷಯಗಳನ್ನು ಕನ್ನಡ ದಲ್ಲಿ ಬೋಧನೆ ಮಾಡದಿರುವುದರಿಂದ ಹಾಗೂ ಕನ್ನಡದಲ್ಲಿ ಹೆಚ್ಚಿನ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳು ಲಭ್ಯವಿಲ್ಲದಿರುವುದರಿಂದ ವಿಷಯ ತಜ್ಞರು ಇಂಗ್ಲೀಷ್ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ: KPSC exam: ಕೆಪಿಎಸ್ಸಿ ಪರೀಕ್ಷೆ ಅಕ್ರಮ ತಡೆಗೆ ನೀಲಿ ಪೆನ್ ನಿಯಮ ಜಾರಿ
ಪ್ರಶ್ನೆಗಳನ್ನು ನುರಿತ ಭಾಷಾಂತರ ಕಾರರನ್ನು ನಿಯೋಜಿಸಿ ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರಿ ಸಲಾಗಿರುತ್ತದೆ. ಇದು ಅತ್ಯಂತ ಗೋಪ್ಯವಾಗಿ ನಡೆಯುವುದರಿಂದ ಭಾಷಾಂತರ ಮಾಡಿರು ವವರನ್ನು ಹಾಗೂ ಪ್ರಶ್ನೆಗಳ ಗೋಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರಶ್ನೆಗಳ ಭಾಷಾಂತರ ವನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದಿಲ್ಲ. ಆದ್ದರಿಂದ ಇದರಲ್ಲಿ ಕೆಪಿಎಸ್ಸಿ ಪಾತ್ರ ಇರುವುದಿಲ್ಲ ಎಂದಿದ್ದಾರೆ!
ಹೆಚ್ಚುವರಿ ಸಮಯ ನೀಡುವ ಚಿಂತನೆ ಇಲ್ಲ: ಈ ಹಿಂದೆ ಕನ್ನಡದಲ್ಲಿ ಪರೀಕ್ಷೆ ಬರೆಯುವಾಗ ಓದಿ ಅರ್ಥೈಸಿಕೊಳ್ಳುವುದಕ್ಕೆ ಹೆಚ್ಚುವರಿ ಸಮಯದ ಅಗತ್ಯವಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿತ್ತು. ಹೆಚ್ಚುವರಿ 20 ನಿಮಿಷ ಅವಕಾಶ ನೀಡಿದರೆ, ಕನ್ನಡ ಮಾಧ್ಯಮದಲ್ಲಿ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಹಾಗೂ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಾಗಬಹುದು ಎನ್ನುವ ಲೆಕ್ಕಾಚಾರಗಳಿದ್ದವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪರಿಷತ್ ಸದಸ್ಯ ಕೆ.ಪ್ರತಾಪ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಕನ್ನಡದಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆಯುವವರಿಗೆ ಹೆಚ್ಚುವರಿ 20 ನಿಮಿಷಗಳ ಅವಕಾಶ ನೀಡುವ ಪ್ರಸ್ತಾಪಕ್ಕೆ ಸಂಬಂಧಿಸಿ ದಂತೆ ಕೇಳಿರುವ ಪ್ರಶ್ನೆಗೆ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ರೀತಿ ಕನ್ನಡ ಮಾಧ್ಯಮ ಪರೀಕ್ಷೆ ಹಾಗೂ ಮೌಲ್ಯಮಾಪನ ಪದ್ಧತಿಯ ಬಗ್ಗೆ ಅಪಸ್ವರವಿದೆ. ಈ ಬಗ್ಗೆ ಕ್ರಮವಹಿಸುವ ಸಂಬಂಧ ಪ್ರಶ್ನಿಸಲಾಗಿದ್ದು, ಈ ರೀತಿಯ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.