Vishwavani Special: ಜನತಾದಳದಲ್ಲಿ ಕುಟುಂಬ ಗಾದಿ, ಬಿಜೆಪೀಲಿ ಹುದ್ದೆಗಾಗಿ ಹೋರಾಟ
ಜೆಡಿಎಸ್ ತನ್ನ ಮೈತ್ರಿಯನ್ನು ಎನ್‌ಡಿಎದೊಂದಿಗೆ ಮುಂದುವರೆಸುವ ಹೇಳಿಕೆ ನೀಡಿದೆ ಯಾದರೂ, ಮುಂಬರುವ ರಾಜ್ಯದ ಚುನಾವಣೆಗಳಲ್ಲಿ ಇದು ಎಷ್ಟರ ಮಟ್ಟಿಗೆ ಮೈತ್ರಿ ಪ್ರಭಾವ ಬೀರಲಿದೆ ಎನ್ನುವುದು ಕೂಡ ಒಂದು ಲೆಕ್ಕಾಚಾರ ನಡೆಯುತ್ತಿದೆ. ಮೈತ್ರಿ ಮುಂದುವರೆಯಲಿದೆ ಎಂದು ಜೆಡಿಎಸ್ ಹೇಳಿಕೊಂಡಿದ್ದರೂ, ಇತ್ತ ರಾಜ್ಯ ಬಿಜೆಪಿ ಘಟಕ ದಲ್ಲಿ ಜೆಡಿಎಸ್‌ನೊಂದಿಗೆ ಅಂತಹ ಒಲವಿಲ್ಲ ಎನ್ನುವಂತಾಗಿದೆ.
-
ಜೆಡಿಎಸ್‌ನಲ್ಲಿ ಮುಂದುವರಿದ ಕುಟುಂಬ ರಾಜಕಾರಣ
ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಬಿ.ವೈ.ವಿಜಯೇಂದ್ರ ದೆಹಲಿ ದಂಡಯಾತ್ರೆ?
ಬೆಂಗಳೂರು: ಕಾಂಗ್ರೆಸ್ ಕಲಹದ ಮಧ್ಯೆಯೇ ಜೆಡಿಎಸ್ ಕುಟುಂಬಗಾದಿ ಮುಂದು ವರೆದಿದ್ದು, ಬಿಜೆಪಿಯಲ್ಲಿ ಹುದ್ದೆ ಮುಂದುವರೆಯುವ ಲಕ್ಷಣಗಳಿದ್ದರೂ, ಅಲ್ಲೂ ಹೋರಾಟ ಮಾಡಬೇಕಾದ ಸನ್ನಿವೇಶ ಎದುರಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಎಚ್.ಡಿ. ಕುಮಾರಸ್ವಾಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಅವಿರೋಧ ಆಯ್ಕೆಯಾಗಿರುವುದು ನಿರೀಕ್ಷಿತವಾಗಿಯೇ ಇದೆ.
ಇಲ್ಲಿ ಯಾರೂ ಸ್ಪರ್ಧಿಗಳೇ ಇಲ್ಲ. ಕಾರಣವೇನೆಂದರೆ ರಾಜ್ಯದಲ್ಲಿರುವ ಏಕೈಕ ಪ್ರಾದೇಶಿಕ ಪಕ್ಷ ಈಗ ಉಳಿಯಲೇಬೇಕಾಗಿದೆ. ತನ್ನ ಹಿಂದಿನ ಶಕ್ತಿ ಕ್ರೋಢೀಕರಿಸಬೇಕಿದೆ. ಈ ಹಿಂದೆ ಜೆಡಿಎಸ್‌ನಲ್ಲಿದ್ದ ಬಹುತೇಕ ಘಟಾನುಘಟಿ ನಾಯಕರು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡು ಅಧಿಕಾರದ ಗದ್ದುಗೆಯಲ್ಲಿದ್ದಾರೆ.
ಹೀಗಿದ್ದರೂ ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷಕ್ಕೆ ಈಗ 25 ವರ್ಷ ತುಂಬಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಶ್ರಮದಿಂದ ಪಕ್ಷ ಇವತ್ತಿಗೂ ಗಟ್ಟಿಯಾಗಿ ಉಳಿದಿದೆ. ಕಾರ್ಯಕರ್ತ ಪಡೆ ಹೊಂದಿದ್ದರೂ, ದೇವೇಗೌಡರು ಪಕ್ಷವನ್ನು ಕಟ್ಟಿ ಬೆಳೆಸಿ, ತಮ್ಮ ಬದುಕನ್ನೇ ಪಕ್ಷಕ್ಕೆ ಮೀಸಲು ಇರಿಸಿದ್ದಾರೆ.
ಇದನ್ನೂ ಓದಿ; Vinayaka V Bhat Column: ತುತ್ತು ಅನ್ನಕ್ಕಿರುವಷ್ಟೇ ಗೌರವ ಕವಳಕ್ಕೂ ಇದೆ
ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ ಇಬ್ಬರು ಬಲಿಷ್ಠ ನಾಯಕರೇ ಪಕ್ಷ ಮುನ್ನಡೆಸಬೇಕು ಎಂದು ರಾಷ್ಟ್ರೀಯ ಮಂಡಳಿ ತೀರ್ಮಾನಿಸಿದಂತೆ ನಡೆದಿದೆಯಾದರೂ ಇಲ್ಲಿ ಯಾರೂ ಸ್ಪರ್ಧಿಗಳೂ ಇಲ್ಲ ಹಾಗೂ ಪ್ರಾದೇಶಿಕ ಪಕ್ಷ ಮೇಲೆತ್ತುವ ಪರ್ಯಾಯ ನಾಯಕರೂ ಸದ್ಯಕ್ಕೆ ಜೆಡಿಎಸ್ ನಲ್ಲಿ ಕಾಣುತ್ತಿಲ್ಲ. ಹೀಗಾಗಿ ಕುಟುಂಬದೊಗಳಗೆ ರಾಷ್ಟ್ರ ಹಾಗೂ ರಾಜ್ಯದ ಅಧ್ಯಕ್ಷರ ಹುದ್ದೆಗಳು ಅನಾಯಾಸವಾಗಿ ಹಂಚಿಕೆಯಾದಂತಿದೆ.
ಜೆಡಿಎಸ್ ತನ್ನ ಮೈತ್ರಿಯನ್ನು ಎನ್‌ಡಿಎದೊಂದಿಗೆ ಮುಂದುವರೆಸುವ ಹೇಳಿಕೆ ನೀಡಿದೆ ಯಾದರೂ, ಮುಂಬರುವ ರಾಜ್ಯದ ಚುನಾವಣೆಗಳಲ್ಲಿ ಇದು ಎಷ್ಟರ ಮಟ್ಟಿಗೆ ಮೈತ್ರಿ ಪ್ರಭಾವ ಬೀರಲಿದೆ ಎನ್ನುವುದು ಕೂಡ ಒಂದು ಲೆಕ್ಕಾಚಾರ ನಡೆಯುತ್ತಿದೆ. ಮೈತ್ರಿ ಮುಂದುವರೆಯಲಿದೆ ಎಂದು ಜೆಡಿಎಸ್ ಹೇಳಿಕೊಂಡಿದ್ದರೂ, ಇತ್ತ ರಾಜ್ಯ ಬಿಜೆಪಿ ಘಟಕ ದಲ್ಲಿ ಜೆಡಿಎಸ್‌ನೊಂದಿಗೆ ಅಂತಹ ಒಲವಿಲ್ಲ ಎನ್ನುವಂತಾಗಿದೆ.
ಬಿಜೆಪಿಯ ಕೇಂದ್ರದ ನಾಯಕರು ಸೂಚನೆ ಕೊಟ್ಟರಷ್ಟೇ ರಾಜ್ಯ ಬಿಜೆಪಿ ನಾಯಕರು ನಡೆದುಕೊಳ್ಳಬೇಕಾಗುತ್ತದೆ. ಬಿಜೆಪಿಗೆ ಕಾರ್ಯಕರ್ತರ ಬಲವಿದ್ದರೂ, ಇಲ್ಲಿನ ಬಣ ಬಡಿದಾಟವೂ ನಿರಂತರವಾಗಿದೆ.
ಜೆಡಿಎಸ್ ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರಭಾವ ಹೊಂದಿದ್ದರೂ ತವರು ಜಿಲ್ಲೆಯಲ್ಲೇ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಬೇಕಾಗಿ ಬಂದಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ಮೇಲೆ ಬಂದಿರುವ ಆಪಾದನೆ ಗಳಿಂದ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿರುವುದಂತೂ ನಿಜ.
ಇಲ್ಲಿ ದೇವೇಗೌಡ ಮುಖ ನೋಡಿ ಪಕ್ಷಕ್ಕೆ ಮತ ಹಾಕುವವರಿದ್ದರೂ ತಮ್ಮ ಇಳಿ ವಯಸ್ಸಿ ನಲ್ಲಿ ಗೌಡರಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗೂ ಇದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಎಚ್.ಡಿ.ರೇವಣ್ಣ ಕುಟುಂಬ ಭಾಗಿಯಾಗದಿರುವುದೂ ಕೂಡ ಹಲವು ಕಾರ್ಯಕರ್ತರಲ್ಲಿ ಗುಸುಗುಸು ಆರಂಭವಾಗಿದೆ.
ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಹೋದ ನಂತರ ರಾಜ್ಯಕ್ಕೆ ಅಷ್ಟು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯುವ ಘಟಕದ ನಿಖಿಲ್ ಕುಮಾರಸ್ವಾಮಿ ರಾಜ್ಯದೆಲ್ಲೆಡೆ ಕೈಗೊಂಡಿರುವ ಸಂಘಟನಾ ಪ್ರವಾಸ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಸು ತ್ತಿದ್ದು ಮತ್ತೊಮ್ಮೆ ಕುಟುಂಬಕ್ಕೆ ಮಾತ್ರ ಹುದ್ದೆ ಎಂಬ ಪ್ರತಿಪಕ್ಷಗಳ ಮಾತು ಸಾರ್ವಜನಿಕ ವಾಗಿ ಮುಂದುವರೆದಿದೆ
ಕುಟುಂಬ ರಾಜಕಾರಣ ಸಾಧ್ಯತೆ?
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಈಗ ಕ್ಷೀಣಿಸಿದಂತಿದ್ದರೂ ಈ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿರುವುದಂತೂ ನಿಜ. ಒಂದು ವೇಳೆ ವಿಜಯೇಂದ್ರರೇ ಅಧ್ಯಕ್ಷರಾಗಿ ಮುಂದುವರೆದರೆ ಇಲ್ಲೂ ಕೂಡ ಕುಟುಂಬ ರಾಜಕಾರಣದ ಮುಂದುವರಿದ ಭಾಗ ವಾಗಲಿದೆ. ಹೀಗಾಗಿ ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರಲು ಹಿರಿಯರೊಬ್ಬರ ಅವಶ್ಯವಿದೆ ಎನ್ನುವುದು ಕೂಡ ಒಂದು ಲೆಕ್ಕಾಚಾರವಿದ್ದರೂ, ಸಂಪನ್ಮೂಲ ಕ್ರೋಢೀ ಕರಣಕ್ಕೆ ಹಿರಿಯರಿಂದ ಸಾಧ್ಯವಾ ಎನ್ನುವ ಪ್ರಶ್ನೆಯೂ ಕೂಡ ಒಂದು ಬಣದಲ್ಲಿದೆ.
ಹುದ್ದೆಗಾಗಿ ಹೋರಾಟ
ಕಾಂಗ್ರೆಸ್ ಕಲಹದಿಂದ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುವಲ್ಲಿ ಬಿಜೆಪಿ ಎಡವುತ್ತಿದೆ. ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇದ್ದರೂ ಆ ಸ್ಥಾನದ ಮುಂದುವರಿಕೆಯ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆಯ ನಂತರ ರಾಜ್ಯದ ಅಧ್ಯಕ್ಷರ ಆಯ್ಕೆಯೂ ನಡೆಯುತ್ತದೆಯಾದರೂ, ಇದೇ ಹೊತ್ತಿನಲ್ಲಿ ವಿಜಯೇಂದ್ರ ಕೇಂದ್ರ ನಾಯಕ ರನ್ನು ಭೇಟಿಯಾಗುತ್ತಿದ್ದಾರೆ. ಶನಿವಾರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಹಾಗೂ ರಾಜ್ಯ ಉಸ್ತುವಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜ್ಯದ ಅಧಿಕಾರದ ಕಲಹ ನಡೆಯುತ್ತಿರುವ ಮಧ್ಯೆಯೇ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಭೇಟಿಯಾಗಿರುವ ವಿಜಯೇಂದ್ರ ರಾಜ್ಯದ ಪರಿಸ್ಥಿತಿಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ರಾಜಕಾರಣದ ಪ್ರಸ್ತುತ ವಿದ್ಯಮಾನಗಳ ಮಾಹಿತಿ ನೀಡಲಾಯಿತು. ರಾಜ್ಯದಲ್ಲಿ ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ಪಡೆಯಲಾಗಿದೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.
ಹೀಗಿದ್ದರೂ ರಾಜ್ಯದ ಬಿಜೆಪಿ ನಾಯಕರು ಕಾಂಗ್ರೆಸ್ ನ ಬೆಳವಣಿಗೆಗಳ ಬಗ್ಗೆ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಪ್ರಬಲವಾದ ಹೋರಾಟ ರೂಪಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಆ ಪಕ್ಷದ ಕಾರ್ಯಕರ್ತರೇ ಮಾತನಾಡಿಕೊಳ್ಳುವಂತಾಗಿದೆ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕುರಿತಂತೆ ಶೀಘ್ರದಲ್ಲೇ ಕೇಂದ್ರದ ವರಿಷ್ಠರು ತೀರ್ಮಾನ ಕೈಗೊಳ್ಳ ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲೇ ವಿಜಯೇಂದ್ರ ಭೇಟಿಯೂ ಕುತೂಹಲ ಮೂಡಿಸಿದೆ.
*
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವೇ ಇಲ್ಲ. ಯಾರು ಅದರ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಗೊತ್ತಿಲ್ಲ.
-ಜಗದೀಶ್ ಶೆಟ್ಟರ್ ಸಂಸದ