ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safari restrictions: ಸಫಾರಿ ನಿರ್ಬಂಧ: ಎತ್ತಿಗೆ ಜ್ವರ, ಎಮ್ಮೆಗೆ ಬರೆ !

ಸಫಾರಿಯನ್ನೇ ನಿಲ್ಲಿಸಿರುವುರಿಂದ ಬಹುತೇಕ ಪ್ರವಾಸಿಗರು ಬರುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದ ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎನ್ನುವ ಆರೋಪವನ್ನು ರೆಸಾರ್ಟ್ ಮಾಲೀಕರು ಮಾಡು ತ್ತಿದ್ದಾರೆ. ಸಫಾರಿ ನಿರ್ಬಂಧದಿಂದ ಈ ಭಾಗದಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಹಲವು ದೂರುಗಳು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿದೆ.

Safari restrictions: ಸಫಾರಿ ನಿರ್ಬಂಧ: ಎತ್ತಿಗೆ ಜ್ವರ, ಎಮ್ಮೆಗೆ ಬರೆ !

-

Ashok Nayak
Ashok Nayak Feb 5, 2026 7:00 AM

ಸಿಎಂ ಸೂಚನೆ ಬಳಿಕವೂ ನಾಗರಹೊಳೆ, ಬಂಡೀಪುರದಲ್ಲಿ ಸಫಾರಿಗೆ ಸಿಗದ ಅನುಮತಿ

ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ಆದಾಯ ಮೂಲವಾಗಿದ್ದ ಬಂಡೀಪುರ- ನಾಗರಹೊಳೆ ಸಫಾರಿ ಸ್ಥಗಿತಗೊಂಡು ಹತ್ತಿರಹತ್ತಿರ ನಾಲ್ಕು ತಿಂಗಳಾಗುತ್ತಿದೆ. ಹುಲಿ-ಮಾನವ ಸಂಘರ್ಷ ನಿಯಂ ತ್ರಿಸಲು ಸಫಾರಿ ನಿರ್ಬಂಧಿಸಿರುವ ಅರಣ್ಯ ಇಲಾಖೆಯ ಅವೈಜ್ಞಾನಿಕ ನಡೆ ‘ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಳೆದಂತಾಗಿದೆ’ ಎನ್ನುವ ಅಸಮಾಧಾನ ಮಾತುಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶುರುವಾಗಿದೆ.

ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿ ಜನರ ಮೇಲೆ ಸರಣಿ ಹುಲಿ ದಾಳಿ ನಡೆಸಿ ಅನೇಕರನ್ನು ಬಲಿ ಪಡೆದಿತ್ತು. ನರಬಲಿ ಪಡೆದ ಹುಲಿಯನ್ನು ಹಿಡಿಯುವ ನೆಪದಲ್ಲಿ ಕಾಡಿನಲ್ಲಿದ್ದ 15ಕ್ಕೂ ಹೆಚ್ಚು ಹುಲಿಗಳನ್ನು ಅರಣ್ಯ ಇಲಾಖೆ ಬೋನಿಗೆ ಹಾಕಿತ್ತು.

ಇದಕ್ಕೂ ಮೊದಲು ‘ಹುಲಿ-ಮಾನವ’ ಸಂಘರ್ಷ ತಡೆಯಬೇಕೆಂದು ಬಂಡೀಪುರ-ನಾಗರಹೊಳೆ ಪ್ರಖ್ಯಾತ ಸಫಾರಿಗೆ ಬ್ರೇಕ್ ಹಾಕಲಾಗಿತು. ಆರಂಭದಲ್ಲಿ ಹುಲಿ ದಾಳಿಯನ್ನು ತಪ್ಪಿಸಲು ಈ ಕ್ರಮ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿತ್ತು. ಆದರೆ ಸಫಾರಿಯಲ್ಲಿ ಪ್ರವಾಸಿಗರ ಈವರೆಗೆ ಯಾವುದೇ ದಾಳಿ ನಡೆದಿರಲಿಲ್ಲವಾದರೂ, ಈ ರೀತಿಯ ನಿರ್ಬಂಧ ಹೇರಿದ್ದು ಏಕೆ? ಎನ್ನುವ ಪ್ರಶ್ನೆ ಗಳು ಶುರುವಾಗಿದೆ.

ಇದನ್ನೂ ಓದಿ: Safari Ban: ಸಫಾರಿಗೆ ಮತ್ತೆ ಅನುಮತಿ; ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲು ಸಿಎಂ ಸೂಚನೆ

ಅಂದಾಜಿನ ಪ್ರಕಾರ ನಾಗರಹೊಳೆ- ಬಂಡೀಪುರ ಸಫಾರಿಯಿಂದ ಈ ಭಾಗದಲ್ಲಿ ನಿತ್ಯ 25 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿತ್ತು. ಆದರೀಗ ಸಫಾರಿ ನಿರ್ಬಂಧಿಸಿರುವುದು ಪ್ರವಾಸೋದ್ಯಮ ಸಂಪೂರ್ಣ ಕುಸಿದಿದ್ದು, ಸಾವಿರು ಜನರು ಕೆಲಸ ಕಳೆದುಕೊಳ್ಳುವ ಹಾಗೂ ನೂರಾರು ರೆಸಾರ್ಟ್ ಮಾಲೀಕರು ಬೀದಿಗೆ ಬರುವ ಆತಂಕದಲ್ಲಿದ್ದಾರೆ. ಕಬಿನಿ ಹಿನ್ನೀರಿನ ಭಾಗದಲ್ಲಿರುವ ಬಹುತೇಕ ರೆಸಾರ್ಟ್‌ಗಳಿಗೆ ಜನ ಬರುವುದೇ ಸಫಾರಿಯ ಆನಂದ ಸವಿಯಲು.

ಆದರೀಗ, ಸಫಾರಿಯನ್ನೇ ನಿಲ್ಲಿಸಿರುವುರಿಂದ ಬಹುತೇಕ ಪ್ರವಾಸಿಗರು ಬರುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದ ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎನ್ನುವ ಆರೋಪವನ್ನು ರೆಸಾರ್ಟ್ ಮಾಲೀಕರು ಮಾಡುತ್ತಿದ್ದಾರೆ. ಸಫಾರಿ ನಿರ್ಬಂಧದಿಂದ ಈ ಭಾಗದಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಹಲವು ದೂರುಗಳು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿದೆ.

ಆದ್ದರಿಂದ ಒಂದುವರೆ ತಿಂಗಳ ಹಿಂದೆ ನಡೆದ ಅರಣ್ಯ ಇಲಾಖೆಯ ಸಭೆಯಲ್ಲಿ, ಸಫಾರಿ ಪುನರಾ ರಂಭಕ್ಕೆ ಕ್ರಮ ವಹಿಸುವಂತೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು. ಈ ಸೂಚನೆ ನೀಡಿ ತಿಂಗಳು ಕಳೆದರೂ ಈವರೆಗೆ ‘ತಾಂತ್ರಿಕ ಸಮಿತಿ’ಯ ವರದಿ ಸಲ್ಲಿಕೆಯಾಗಿಲ್ಲ.

ಆದ್ದರಿಂದ ಸಫಾರಿ ಆರಂಭಿಸಿಲ್ಲ. ಇದೇ ರೀತಿ ಸಫಾರಿ ನಿರ್ಬಂಧ ಮುಂದುವರೆದರೆ, ಬಂಡೀಪುರ-ನಾಗರಹೊಳೆ ಭಾಗದಲ್ಲಿ ದಶಕಗಳ ಶ್ರಮದಿಂದ ರೂಪುಗೊಂಡಿದ್ದ ‘ಪ್ರವಾಸೋದ್ಯಮ’ ಸಂಪೂರ್ಣ ನಾಶವಾಗಲಿದೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:Bandipur Nagarahole Safari Ban: ಬಂಡಿಪುರ, ನಾಗರಹೊಳೆಯಲ್ಲಿ ಸಫಾರಿ ಅನಿರ್ದಿಷ್ಟಾವಧಿ ಬಂದ್, ಚಾರಣ ಸ್ಥಗಿತ: ಸಚಿವರ ಆದೇಶ

ದಕ್ಷಿಣ ಭಾರತದಲ್ಲಿ ಉತ್ತಮ ಸಫಾರಿ: ಹುಲಿ, ಆನೆ ಹಾಗೂ ಕಪ್ಪು ಚಿರತೆಗಳನ್ನು ನೋಡಲೆಂದು ಬರುವ ಪ್ರವಾಸಿಗರಿಗೆ ದಕ್ಷಿಣ ಭಾರತದಲ್ಲಿ ಮೊದಲ ಆಯ್ಕೆ ನಾಗರಹೊಳೆಯಾದರೆ, ಎರಡನೇ ಆಯ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನ ವಾಗಿರುತ್ತದೆ. ಈ ಕಾರಣಕ್ಕೆ ಪ್ರತಿವರ್ಷ ದೇಶ ಹಾಗೂ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಕಾಡಿನ ಅಂಚಿನಲ್ಲಿ ನಡೆದ ಹುಲಿಗೂ, ಸಫಾರಿ ಯಲ್ಲಿರುವ ಹುಲಿಗಳು ಯಾವುದೇ ಸಂಬಂಧವಿಲ್ಲದಿದ್ದರೂ, ಸಫಾರಿ ನಿರ್ಬಂಧಿಸಿದ್ದಾರೆ.

safari

ಸಫಾರಿ ವೇಳೆ ದಾಳಿ ನಡೆದ ಇತಿಹಾಸವೇ ಇಲ್ಲ..!

ಮೂರ‍್ನಾಲ್ಕು ತಿಂಗಳ ಹಿಂದೆ ಬಂಡೀಪುರ ಹಾಗೂ ನಾಗರಹೊಳೆ ಸುತ್ತಮುತ್ತ ಹುಲಿಗಳು ಹಳ್ಳಿಗರ ಮೇಲೆ ದಾಳಿ ನಡೆಸಿದ್ದರಿಂದ, ‘ಮುಂಜಾಗ್ರತೆ ’ ಕಾರಣಕ್ಕೆ ಬಂಡೀಪುರ ಹಾಗೂ ನಾಗರಹೊಳೆ ಸಫಾರಿ ಯನ್ನು ಅರಣ್ಯ ಇಲಾಖೆ ರದ್ದುಪಡಿಸಿತ್ತು. ಆದರೆ ಸ್ಥಳೀಯರು ಹಾಗೂ ಸಫಾರಿ ಸಿಬ್ಬಂದಿಗಳ ಪ್ರಕಾರ, ಈವರೆಗೆ ನಾಗರಹೊಳೆ ಬಂಡೀಪುರದಲ್ಲಿ ಪ್ರಾಣಿಗಳು ಸಫಾರಿ ವಾಹನವನ್ನು ಅಟ್ಟಿಸಿ ಕೊಂಡ ಬಂದ ಅಪರೂಪದ ಕೆಲವು ಘಟನೆಗಳನ್ನು ಬಿಟ್ಟರೆ ಎಂದಿಗೂ ಪ್ರಾಣಿಗಳಿಂದ ಸಫಾರಿಗೆ ತೆರಳಿದ ಪ್ರವಾಸಿಗರ ಮೇಲೆ ದಾಳಿಯಾಗಿಲ್ಲ.

ಹಾಗೆ ನೋಡಿದರೆ ಬೆಂಗಳೂರಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಪ್ರಾಣಿಗಳು ದಾಳಿ ನಡೆಸಿದ ಘಟನೆಗಳು ನಡೆದಿವೆ. ಇಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವ ಅರಣ್ಯ ಇಲಾಖೆ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ನಾಗರಹೊಳೆ, ಬಂಡೀಪುರ ಸಫಾರಿ ಬಂದ್ ಮಾಡಿ ಕೋಟ್ಯಂತರ ರುಪಾಯಿ ನಷ್ಟದ ಜತೆ ರಾಜ್ಯದ ಪ್ರವಾಸೋದ್ಯಮದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದೆ ಎಂಬ ಮಾತುಗಳು ಕೇಳಿ ಬಂದಿವೆ.

ವಿದೇಶಿಗರನ್ನು ಸೆಳೆಯಲು ಕನಿಷ್ಠ 5 ವರ್ಷ ಬೇಕಂತೆ !

ಕಬಿನಿ ಮತ್ತು ನಾಗರಹೊಳೆ-ಬಂಡೀಪುರ ಸಫಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರಿದೆ. ಕಬಿನಿ ಹಿನ್ನೀರಿನ ರೆಸಾರ್ಟ್‌ಗಳಲ್ಲಿ ಉಳಿದು ನಾಗರಹೊಳೆ-ಬಂಡೀಪುರದಲ್ಲಿ ಸಫಾರಿ ನಡೆಸಲು ವಿಶ್ವದ ಹಲವು ಭಾಗದಿಂದ ಆರು ತಿಂಗಳ ಮೊದಲೇ ಬುಕ್ ಮಾಡಿಕೊಂಡಿರುತ್ತಾರೆ. ಈ ರೀತಿ ಬುಕ್ ಮಾಡಿಕೊಂಡು ಬಂದಿರುವವರಿಗೆ ಸಫಾರಿ ನಿರ್ಬಂಧಿಸಲಾಗಿದೆ ಎಂದರೆ ಭ್ರಮನಿರಸನ ಗೊಂಡು, ಮತ್ತೊಮ್ಮೆ ಕರ್ನಾಟಕಕ್ಕೆ ವಾಪಸು ಬರಲು ಹಿಂದೇಟು ಹಾಕುತ್ತಾರೆ. ತಜ್ಞರ ಪ್ರಕಾರ, ಸಫಾರಿ ನಿರ್ಬಂಧದ ಈ ನಡೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಕರ್ನಾಟಕದ ವರ್ಚಸ್ಸಿಗೆ ಆಗಿರುವ ಧಕ್ಕೆ ಸರಿ ಹೋಗಿ, ವಿದೇಶಿಗರು ಮೊದಲಿನಂತೆ ಬರಲು ಕನಿಷ್ಠ ಐದು ವರ್ಷ ಬೇಕಾಗುತ್ತದೆ ಎನ್ನಲಾಗುತ್ತಿದೆ.

*

ಕಾಡಿನಲ್ಲಿ ಆದ ಹುಲಿ ದಾಳಿಗೂ, ಸಫಾರಿಗೂ ಸಂಬಂಧವೇ ಇಲ್ಲ

ಸಫಾರಿ ರದ್ದಿನಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ಭಾರೀ ಧಕ್ಕೆ

ಬಂಡೀಪುರ, ನಾಗರಹೊಳೆ ಸುತ್ತಮುತ್ತ ಪ್ರವಾಸಿ ಚಟುವಟಿಕೆ ಬಂದ್

ಸಿಎಂ ಸೂಚನೆ ಬಳಿಕವೂ ತಾಂತ್ರಿಕ ಸಮಿತಿ ವರದಿಗೆ ಕಾದು ಕೂತ ಇಲಾಖೆ