ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026-27: ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ದೃಷ್ಟಿಯಿಂದ ದೊಡ್ಡ ಅಸಮಾಧಾನ ಮೂಲಸೌಕರ್ಯ ಹೂಡಿಕೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹೈಸ್ಪೀಡ್ ರೈಲು ಯೋಜನೆಗಳು ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅತ್ಯಂತ ಮುಖ್ಯವಾಗಿರುವ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ಮಾರ್ಗಗಳು ಸಂಪೂರ್ಣವಾಗಿ ನಿರ್ಲಕ್ಷಿತವಾಗಿವೆ.

ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

-

Ashok Nayak
Ashok Nayak Feb 2, 2026 8:46 AM

ಸಿದ್ದರಾಮಯ್ಯ, ಮುಖ್ಯಮಂತ್ರಿ

2026-27ನೇ ಸಾಲಿನ ಕೇಂದ್ರ ಬಜೆಟ್ ಪ್ರಕಟವಾದ ಬಳಿಕ ಕರ್ನಾಟಕದಲ್ಲಿ ಮೂಡಿದ ಚರ್ಚೆ ಒಂದು ಸ್ಪಷ್ಟ ಸಂದೇಶ ನೀಡುತ್ತಿದೆ. ಈ ಆಯವ್ಯಯ ರಾಜ್ಯದ ನಿರೀಕ್ಷೆಗಳಿಗೆ ಸ್ಪಂದಿಸಿಲ್ಲ. ಇದು ಘೋಷಣೆ ಗಳ ಮೇಲೆ ನಿಂತ ಬಜೆಟ್ ಆಗಿದ್ದು, ನೆಲಮಟ್ಟದ ಅಭಿವೃದ್ಧಿಗೆ ಅಗತ್ಯವಿರುವ ಸ್ಪಷ್ಟ ದಿಕ್ಕು ಮತ್ತು ಬದ್ಧತೆ ಕಾಣುತ್ತಿಲ್ಲ.

ಈ ಬಾರಿ ಬಜೆಟ್ ಗಾತ್ರ 53.47 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷದ ಪರಿಷ್ಕೃತ ಅಂದಾಜಿನ ಹೋಲಿಕೆಯಲ್ಲಿ ಇದು 5.56 ಶೇಕಡ ಹೆಚ್ಚಳ. ಆದರೆ ಕಳೆದ ವರ್ಷವೇ ಬಜೆಟ್ ಗಾತ್ರದಲ್ಲಿ ಸುಮಾರು ಒಂದು ಲಕ್ಷ ಕೋಟಿ ರು. ಕಡಿತಗೊಂಡ ಅನುಭವವಿರುವ ಹಿನ್ನೆಲೆಯಲ್ಲಿ, ಈ ವರ್ಷದ ಸೀಮಿತ ಏರಿಕೆ ದೇಶದ ವೇಗದ ಅಭಿವೃದ್ಧಿಗೆ ಸಾಕಾಗುವುದಿಲ್ಲ.

ರಾಜಸ್ವ ಕೊರತೆ 5.92 ಲಕ್ಷ ಕೋಟಿ ಮಟ್ಟದಲ್ಲಿರುವುದು ಮತ್ತು ಅದು ಬಜೆಟ್ ಗಾತ್ರದ ಸುತ್ತ 1.5 ಶೇಕಡಾಗಿರುವುದು, ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲ ಹಂಚಿಕೆ ಮಾಡಲು ಕೇಂದ್ರಕ್ಕೆ ಇರುವ ಅವಕಾಶ ಸೀಮಿತವಾಗಿರುವುದನ್ನೂ ಸೂಚಿಸುತ್ತದೆ.

ಕರ್ನಾಟಕದ ದೃಷ್ಟಿಯಿಂದ ದೊಡ್ಡ ಅಸಮಾಧಾನ ಮೂಲಸೌಕರ್ಯ ಹೂಡಿಕೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹೈಸ್ಪೀಡ್ ರೈಲು ಯೋಜನೆಗಳು ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅತ್ಯಂತ ಮುಖ್ಯವಾಗಿರುವ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ಮಾರ್ಗಗಳು ಸಂಪೂರ್ಣವಾಗಿ ನಿರ್ಲಕ್ಷಿತವಾಗಿವೆ.

ಇದನ್ನೂ ಓದಿ: Budget 2026: ಪ್ರವಾಸ ತಾಣಗಳ ಅಭಿವೃದ್ಧಿ, ವಿದೇಶ ಪ್ರಯಾಣ ಅಗ್ಗ; ಬಜೆಟ್‌ನಲ್ಲಿ ಪ್ರವಾಸೋದ್ಯಮ ವಲಯಕ್ಕೆ ಸಿಕ್ಕಿದ್ದೇನು?

ಇದು ಪ್ರಾದೇಶಿಕ ಆದ್ಯತೆಗಳ ಹಂಚಿಕೆಯಲ್ಲಿ ಅಸಮತೋಲನವನ್ನು ತೋರಿಸುತ್ತದೆ. ‘ವಿಕಸಿತ ಭಾರತ’ ಎಂಬ ಘೋಷಣೆಯ ಜತೆಗೆ ಹೋಲಿಸಿದರೆ, ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಲಭಿಸಿರುವುದು ಮಾತಿನ ಮಟ್ಟದ ಭರವಸೆಗಳಷ್ಟೇ ಎಂಬ ಅಭಿಪ್ರಾಯ ಬಲವಾಗುತ್ತಿದೆ.

ನೀರಾವರಿ ಕ್ಷೇತ್ರದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಭದ್ರಾ ಮೇಲ್ದಂಡೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವ ಬೇಡಿಕೆ ಈ ಬಜೆಟ್‌ ನಲ್ಲಿಯೂ ಸ್ಥಾನ ಪಡೆಯಲಿಲ್ಲ. 2023-24ರಲ್ಲಿ ಭದ್ರಾ ಯೋಜನೆಗೆ ಘೋಷಿಸಿದ್ದ 5300 ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂಬುದು ಘೋಷಣೆ ಮತ್ತು ಅನುಷ್ಠಾನದ ನಡುವಿನ ಅಂತರವನ್ನು ಸ್ಪಷ್ಟಪಡಿಸುತ್ತದೆ.

ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಂತಹ ಅಂತರರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರದ ಸ್ಪಷ್ಟ ಹಸ್ತಕ್ಷೇಪ ಕಾಣಿಸದಿರುವುದು ರಾಜ್ಯದ ನೀರಾವರಿ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಗಜೆಟ್ ನೋಟಿಫಿ ಕೇಶನ್ ಆಗದಿರುವುದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೇರ ಅಡ್ಡಿಯಾಗಿರುವ ಅಂಶವಾಗಿದೆ.

ಇದನ್ನೂ ಓದಿ:Union Budget 2026: ಅತಿ ಚಿಕ್ಕ ಅವಧಿಯ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಬೇಳೆ ಕಾಳುಗಳಿಗೆ ಸಹಾಯ ಮಾಡಿ ಎಂದು ಕರ್ನಾಟಕ ಮನವಿ ಮಾಡಿತ್ತು. ಆದರೆ ಅದನ್ನು ಸಹ ಮಾಡಿಲ್ಲ. ತೆರಿಗೆ ಆದಾಯದಲ್ಲಿ ನಾವು ಕನಿಷ್ಠ ಶೇ.50 ಕೊಡಿ ಅಂತ ಕೇಳಿದ್ದೆವು. ಆದರೆ, ಶೇ.41 ಮಾತ್ರ ಕೊಟ್ಟಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ.4.71 ಮಾತ್ರ. 14ನೇ ಹಣಕಾಸಿಗಿಂತ ಜಾಸ್ತಿ ಮಾಡಿ ಕೊಡಿ ಎಂದರೆ 4.131 ಮಾತ್ರ ಕೊಟ್ಟಿದ್ದಾರೆ.

ಈ ಮೂಲಕ ಕರ್ನಾಟಕಕ್ಕೆ 14ನೇ ಹಣಕಾಸಿನಷ್ಟು ಸಹ ಹಣ ನೀಡಿಲ್ಲ. ಉತ್ತರ ಪ್ರದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹಣಕಾಸಿನ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗಿ ನಮಗೆ ಅನ್ಯಾಯವಾಗಿದೆ. ಬಜೆಟ್‌‌ ಗೂ ಮುನ್ನ ನಮ್ಮ ರಾಜ್ಯದ ನೀರಾವರಿ, ಮೆಟ್ರೋ ಯೋಜನೆ, ಏಮ್ಸ್ ಕೊಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಅದಾಗಿಲ್ಲ.

ತೆರಿಗೆ ಹಂಚಿಕೆ ವಿಷಯದಲ್ಲಿ ಮುಂದಿಟ್ಟಿರುವ ಅಂಕಿ-ಅಂಶಗಳು ಒಕ್ಕೂಟ ವ್ಯವಸ್ಥೆಯಲ್ಲಿ ಹಣಕಾಸು ಸಮತೋಲನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಕರ್ನಾಟಕ ಪ್ರತಿವರ್ಷ ಕೇಂದ್ರಕ್ಕೆ 4.5 ಲಕ್ಷ ಕೋಟಿಯಿಂದ 5.5 ಲಕ್ಷ ಕೋಟಿವರೆಗೆ ತೆರಿಗೆ ಕೊಡುಗೆ ನೀಡುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಆದರೆ ವಾಪಸ್ಸಾಗಿ ಸಿಗುವ ಪಾಲು ಹೋಲಿಕೆಯಾಗಿ ಕಡಿಮೆ ಎನ್ನುವ ಭಾವನೆ, ಬಿಹಾರ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಗೆ ಹೆಚ್ಚು ಶೇಕಡಾವಾರು ಪಾಲು ಸಿಗುತ್ತಿರುವ ಹಂಚಿಕೆಯೊಂದಿಗೆ ಹೋಲಿಸಿದಾಗ ಮತ್ತಷ್ಟು ಗಟ್ಟಿಯಾಗುತ್ತದೆ. ತಲಾ ಆದಾಯದಲ್ಲಿ ಮುಂಚೂಣಿ, ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನ, ವಿದೇಶಿ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯಕ್ಕೆ ಸಮರ್ಪಕ ಪ್ರತಿಫಲ ಸಿಗುತ್ತಿಲ್ಲ ಎಂಬ ವಾದ ಇಲ್ಲಿಂದಲೇ ಹುಟ್ಟುತ್ತದೆ.

ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿಯೂ ಇದೇ ಅಸಮಾನತೆ ಗೋಚರಿಸುತ್ತದೆ. ಐದು ವರ್ಷಗಳಿಗೆ ಉತ್ತರ ಪ್ರದೇಶಕ್ಕೆ 83,261 ಕೋಟಿ ರು., ಕರ್ನಾಟಕಕ್ಕೆ ಕೇವಲ 18,889 ಕೋಟಿ ರು. ಎಂಬ ಹಂಚಿಕೆ, ಅಭಿವೃದ್ಧಿ ಅಗತ್ಯಗಳು ಮತ್ತು ಕೊಡುಗೆ ಸಾಮರ್ಥ್ಯದ ನಡುವೆ ಹೊಂದಾಣಿಕೆ ಇಲ್ಲದಿರುವುದನ್ನು ತೋರಿಸುತ್ತದೆ.

ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಪಾಲನ್ನು 60:40ಗೆ ಬದಲಾಯಿಸಿರುವುದು ರಾಜ್ಯದ ಹಣಕಾಸಿನ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. ಜಲ ಜೀವನ್ ಮಿಷನ್‌ನಲ್ಲಿ ಬರಬೇಕಿದ್ದ ಸುಮಾರು 13000 ಕೋಟಿ ಬಾಕಿ ಉಳಿದಿರುವುದು ಅನುಷ್ಠಾನಾತ್ಮಕ ಸಮಸ್ಯೆಗಳನ್ನೂ ಬಯಲು ಮಾಡುತ್ತದೆ.

ಇದರ ನಡುವೆ ಕಲ್ಯಾಣ ಕರ್ನಾಟಕ ಭಾಗದ ಕುರಿತು ಡಾ.ಎಂ.ಗೋವಿಂದರಾವ್ ಸಮಿತಿ ವರದಿ ಸೂಚಿಸಿರುವ 43 ಸಾವಿರ ಕೋಟಿ ಅಗತ್ಯವು ಪ್ರಾದೇಶಿಕ ಅಸಮತೋಲನದ ಗಂಭೀರತೆಯನ್ನು ನೆನಪಿಸುತ್ತದೆ. ಕೇಂದ್ರದಿಂದ ನಿರೀಕ್ಷಿತ ನೆರವು ಸಿಗದಿದ್ದರೂ, ಈ ಹೊರೆ ಹೆಚ್ಚಿನ ಮಟ್ಟಿಗೆ ರಾಜ್ಯ ಬಜೆಟ್ ಮೇಲೆಯೇ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಒಟ್ಟಾರೆ, 2026-27ರ ಕೇಂದ್ರ ಬಜೆಟ್ ಕರ್ನಾಟಕದ ಪಾಲಿಗೆ ಅವಕಾಶಗಳಿಗಿಂತ ಪ್ರಶ್ನೆಗಳನ್ನೇ ಹೆಚ್ಚು ಬಿಟ್ಟಿದೆ. ಇದು ಕೇವಲ ಒಂದು ರಾಜ್ಯದ ಅಸಮಾಧಾನವಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಸಂಪನ್ಮೂಲ ಹಂಚಿಕೆ, ಪ್ರಾದೇಶಿಕ ಸಮತೋಲನ ಮತ್ತು ಘೋಷಣೆ-ಅನುಷ್ಠಾನದ ನಡುವಿನ ಅಂತರದ ಕುರಿತು ಮೂಡಿರುವ ದೊಡ್ಡ ಚರ್ಚೆಯ ಪ್ರತಿಬಿಂಬವಾಗಿದೆ.