ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget 2026: ಪ್ರವಾಸ ತಾಣಗಳ ಅಭಿವೃದ್ಧಿ, ವಿದೇಶ ಪ್ರಯಾಣ ಅಗ್ಗ; ಬಜೆಟ್‌ನಲ್ಲಿ ಪ್ರವಾಸೋದ್ಯಮ ವಲಯಕ್ಕೆ ಸಿಕ್ಕಿದ್ದೇನು?

Nirmala Sitharaman: ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ಮತ್ತು ಆದಾಯ ಸೃಷ್ಟಿಸುವ ಪ್ರವಾಸೋದ್ಯಮ ವಲಯಕ್ಕೂ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಘೋಷಿಸಲಾಗಿದೆ. "ರಾಷ್ಟ್ರೀಯ ಆತಿಥ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದ್ದೇವೆ. ಇದು ಶೈಕ್ಷಣಿಕ, ಕೈಗಾರಿಕೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ" ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಪ್ರವಾಸ ತಾಣಗಳ ಅಭಿವೃದ್ಧಿ, ವಿದೇಶ ಪ್ರಯಾಣ ಅಗ್ಗ

ಸಾಂದರ್ಭಿಕ ಚಿತ್ರ -

Ramesh B
Ramesh B Feb 1, 2026 4:20 PM

ದೆಹಲಿ, ಫೆ. 1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಭಾನುವಾರ (ಫೆಬ್ರವರಿ 1) 9ನೇ ಬಜೆಟ್‌ ಮಂಡಿಸಿದರು. ಇದರಲ್ಲಿ ಮಧ್ಯಮ ವರ್ಗ ಮತ್ತು ಕೃಷಿಕರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ. ಜತೆಗೆ ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ಮತ್ತು ಆದಾಯ ಸೃಷ್ಟಿಸುವ ಪ್ರವಾಸೋದ್ಯಮ ವಲಯಕ್ಕೂ ಸಾಕಷ್ಟು ಅನುದಾನ ಘೋಷಿಸಲಾಗಿದೆ. "ರಾಷ್ಟ್ರೀಯ ಆತಿಥ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದ್ದೇವೆ. ಇದು ಶೈಕ್ಷಣಿಕ, ಕೈಗಾರಿಕೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ" ಎಂದು ಹೇಳಿದರು.

ಭಾರತದಾದ್ಯಂತ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮಾರ್ಗದರ್ಶಿಗಳಿಗೆ (Guides) ತರಬೇತಿ ನೀಡುವ ಪ್ರಾಯೋಗಿಕ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. "ಭಾರತವು ವಿಶ್ವ ದರ್ಜೆಯ ಟ್ರೆಕ್ಕಿಂಗ್‌ ಅನುಭವಗಳನ್ನು ನೀಡುವ ಸಾಮರ್ಥ್ಯ ಮತ್ತು ಅವಕಾಶವನ್ನು ಹೊಂದಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸರ ಸ್ನೇಹಿ ಪರ್ವತ ಹಾದಿಗಳನ್ನು ನಾವು ಅಭಿವೃದ್ಧಿಪಡಿಸುತ್ತೇವೆ. ಪೂರ್ವ ಘಟ್ಟಗಳ ಅರಕು ಕಣಿವೆ ಮತ್ತು ಪಶ್ಚಿಮ ಘಟ್ಟಗಳ ಪೋತಿಗೈ ಮಲೈನಲ್ಲಿಯೂ ಇದನ್ನು ಜಾರಿಗೊಳಿಸುತ್ತೇವೆ" ಎಂದು ಬಜೆಟ್ ಭಾಷಣದಲ್ಲಿ ಘೋಷಿಸಿದರು.

ಬಜೆಟ್‌ ಭಾಷಣ:



ಆಮೆಗಳ ವೀಕ್ಷಣಾ ಹಾದಿ ಅಭಿವೃದ್ಧಿ

ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿಯೂ ಇಕೋ ಟೂರಿಸಂ ಅನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು. ʼʼಆಮೆಗಳ ವೀಕ್ಷಣಾ ಹಾದಿ ಯೋಜನೆಯಡಿ ಒಡಿಶಾ ಮತ್ತು ಕೇರಳದ ಜತೆಗೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಆಮೆಗಳ ಸಂತಾನೋತ್ಪತ್ತಿ ತಾಣಗಳಲ್ಲಿ ವೀಕ್ಷಣಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದುʼʼ ಎಂದು ತಿಳಿಸಿದರು.

ʼʼಪಾರಂಪರಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಸಾರನಾಥ ಮತ್ತು ಹಸ್ತಿನಾಪುರ ಸೇರಿದಂತೆ 15 ಪುರಾತತ್ವ ತಾಣಗಳನ್ನು ರೋಮಾಂಚಕ ಸಾಂಸ್ಕೃತಿಕ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದುʼʼ ಎಂದರು.

ವಿದೇಶ ಪ್ರವಾಸ ಇನ್ನು ಅಗ್ಗ

ವಿದೇಶ ಪ್ರವಾಸ ಮಾಡುವವರಿಗೂ ಕೇಂದ್ರ ಗುಡ್‌ನ್ಯೂಸ್‌ ನೀಡಿದೆ. ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮೇಲಿನ ತೆರಿಗೆಯನ್ನು (TCS) ಶೇ. 5-ಶೇ. 20ರಿಂದ ಶೇ. 2ಕ್ಕೆ ಇಳಿಸಲಾಗಿದೆ. ಇದರಿಂದ ಅಂತಾರಾಷ್ಟ್ರೀಯ ಪ್ರಯಾಣವನ್ನು ಬುಕ್ ಮಾಡುವಾಗ ಜನರು ಕಡಿಮೆ ತೆರಿಗೆ ಪಾವತಿಸಿದರೆ ಸಾಕು. ಇದರಿಂದ ವಿದೇಶ ಪ್ರವಾಸ ಪ್ಯಾಕೇಜ್‌ ಅಗ್ಗವಾಗಲಿದೆ. ಅಲ್ಲದೆ ವಿದೇಶದಲ್ಲಿ ಶಿಕ್ಷಣ ಮತ್ತು ಚಿಕಿತ್ಸೆ ಪಡೆಯುವವರ ಹೊರೆಯೂ ತಗ್ಗಲಿದೆ. ಉದಾರೀಕೃತ ಹಣ ರವಾನೆ ಯೋಜನೆ (LRS)ಯಡಿ ವಿಧಿಸಲಾಗುವ ಟಿಸಿಎಸ್‌ ಅನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಲು ಪ್ರಸ್ತಾವಿಸಲಾಗಿದೆ. ಇದರಿಂದ ವಿದೇಶಕ್ಕೆ ಹಣ ಕಳುಹಿಸುವಾಗ ವಿಧಿಸಲಾಗುವ ಶುಲ್ಕವೂ ಕಡಿಮೆಯಾಗಲಿದೆ.

ಪೂರ್ವೋದಯ ರಾಜ್ಯಗಳಲ್ಲಿ 5 ಪ್ರವಾಸೋದ್ಯಮ ಕೇಂದ್ರಗಳು

ಸರ್ಕಾರವು 5 ಪೂರ್ವೋದಯ ರಾಜ್ಯಗಳಲ್ಲಿ (ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರ ಪ್ರದೇಶ) 5 ಪ್ರವಾಸೋದ್ಯಮ ತಾಣಗಳನ್ನು ರಚಿಸಲಿದೆ ಮತ್ತು 4,000 ಇ-ಬಸ್‌ಗಳಿಗೆ ಅವಕಾಶ ಕಲ್ಪಿಸಲಿದೆ. ದೇಶಾದ್ಯಂತ 20 ಪ್ರಸಿದ್ಧ ತಾಣಗಳಲ್ಲಿ 10,000 ಸಾವಿರ ಪ್ರಾವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗುತ್ತದೆ.

ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾಗಳಲ್ಲಿ ಬೌದ್ಧ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ ಮಠ ಸಂರಕ್ಷಣೆ ಮತ್ತು ಸಂಪರ್ಕವೂ ಸೇರಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಶೇಷ ಪರ್ವತ ರೈಲುಗಳು ರಮಣೀಯ ರೈಲು ಪ್ರವಾಸೋದ್ಯಮವನ್ನು ಹೆಚ್ಚಿಸುವ ಮತ್ತು ಬೆಟ್ಟದ ತಾಣಗಳಿಗೆ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.