Siddaramaiah Record: ಮಣ್ಣಿನ ಸಂವೇದನೆ, ಅಹಿಂದ ಆಶಯದ ಸಂಕೇತ
ಕಳೆದ 35 ವರ್ಷಗಳಲ್ಲಿ ಜನರು ನೆನಪಿಸಿಕೊಂಡ ನಾಯಕ ಅಂತ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ಯಾಕೆ ಈ 35 ವರ್ಷಗಳು ಅನ್ನೋದಕ್ಕೆ ಕಾರಣ ಇದೆ. 79 ವರ್ಷಗಳ ಸ್ವತಂತ್ರ ಭಾರತದ ನಂತರ ಕರ್ನಾಟಕ ಕಂಡ 23 ಮುಖ್ಯಮಂತ್ರಿಗಳಲ್ಲಿ, 44 ವರ್ಷ ರಾಜ್ಯವನ್ನಾಳಿದ 11 ಜನ ಮುಖ್ಯಮಂತ್ರಿಗಳು ತಮ್ಮ ಪಕ್ಷಗಳ ಹಾಗೂ ತಮ್ಮ ನಾಯಕರ ಸುಧಾರಣೆಗೆ ಪ್ರಯತ್ನಪಟ್ಟರು.
-
ಕೆ.ಎಸ್.ಶಿವರಾಮು
ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ
ಸುದೀರ್ಘ ಅವಧಿ ಆಡಳಿತ ನಡೆಸಿದ ಕರ್ನಾಟಕದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನವರಿ 6ರಂದು ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ಒಟ್ಟು 2792 ಆಡಳಿತ ದಿನಗಳ ದಾಖಲೆಯನ್ನು ಸರಿಗಟ್ಟಿ, ಕರ್ನಾಟಕದ ಸುದೀರ್ಘ ಅವಧಿ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇಂದು ನಾವು ಮಾತನಾಡುತ್ತಿರೋದು ಕೇವಲ ಒಬ್ಬ ಮುಖ್ಯಮಂತ್ರಿಯ ಬಗ್ಗೆ ಅಲ್ಲ, ಇತರೆ ಯಾವುದೇ ಮುಖ್ಯಮಂತ್ರಿಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲದ, ಇತರೆ ಯಾವುದೇ ವಿರೋಧ ಪಕ್ಷದ ನಾಯಕರಿಗೂ ಹೋಲಿಕೆ ಮಾಡಲಾಗದ ಮಾದರಿ ರಾಜಕಾರಣಿಯ ಬಗ್ಗೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು ಮಣ್ಣಿನ ಸಂವೇದನೆ, ಅಹಿಂದದ ಆಶಯ ಮತ್ತು ಸಾಮಾಜಿಕ ನ್ಯಾಯದ ಪ್ರತೀಕ. ಅವರು ರಾಜಕೀಯವನ್ನು ಅಧಿಕಾರದ ಮೆಟ್ಟಿಲಾಗಿ ಅಲ್ಲ, ಸಾಮಾಜಿಕ ನ್ಯಾಯದ ಸಾಧನವಾಗಿ ರೂಪಿಸಿದವರು.
ಕಳೆದ 35 ವರ್ಷಗಳಲ್ಲಿ ಜನರು ನೆನಪಿಸಿಕೊಂಡ ನಾಯಕ ಅಂತ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ಯಾಕೆ ಈ 35 ವರ್ಷಗಳು ಅನ್ನೋದಕ್ಕೆ ಕಾರಣ ಇದೆ. 79 ವರ್ಷಗಳ ಸ್ವತಂತ್ರ ಭಾರತದ ನಂತರ ಕರ್ನಾಟಕ ಕಂಡ 23 ಮುಖ್ಯಮಂತ್ರಿಗಳಲ್ಲಿ, 44 ವರ್ಷ ರಾಜ್ಯವನ್ನಾಳಿದ 11 ಜನ ಮುಖ್ಯಮಂತ್ರಿಗಳು ತಮ್ಮ ಪಕ್ಷಗಳ ಹಾಗೂ ತಮ್ಮ ನಾಯಕರ ಸುಧಾರಣೆಗೆ ಪ್ರಯತ್ನಪಟ್ಟರು. ನಂತರ ಬಂದ 10 ಜನ ಮುಖ್ಯಮಂತ್ರಿಗಳು ಕೇವಲ ಅಧಿಕಾರ ಸಂರಕ್ಷಣೆಗೆ ಪ್ರಯತ್ನಪಟ್ಟರು. ಆದರೆ ಇವರೆಲ್ಲರ ನಡುವೆ ಸಾಮಾಜಿಕ ನ್ಯಾಯ ಹಾಗೂ ಆಡಳಿತ ಸುಧಾರಣೆಗೆ ಅರ್ಥ ಕೊಟ್ಟ ಮುಖ್ಯಮಂತ್ರಿಯಾಗಿದ್ದು ನಮ್ಮ ಸಿದ್ದರಾಮಯ್ಯನವರು ಮಾತ್ರ.
ಇದನ್ನೂ ಓದಿ: Siddaramaiah Record: ಸಿದ್ದರಾಮಯ್ಯ ಸೋತಾಗಲೂ, ಗೆದ್ದಾಗಲೂ ಜತೆಗಿದ್ದೇನೆ..!
ಮುಖ್ಯಮಂತ್ರಿಯಾಗಿ ಅವರು ಜಾರಿಗೆ ತಂದ ಯೋಜನೆಗಳು ಜನಪರ ಆಡಳಿತದ ಜೀವಂತ ಉದಾಹರಣೆಗಳಾಗಿವೆ. ಅನ್ನಭಾಗ್ಯ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಿದರು. ಕ್ಷೀರಭಾಗ್ಯ ಯೋಜನೆ ಮಕ್ಕಳ ಪೌಷ್ಟಿಕತೆಯನ್ನು ಹೆಚ್ಚಿಸಿ ಸರಕಾರಿ ಶಾಲೆಗಳ ಮೇಲಿನ ನಂಬಿಕೆಯನ್ನು ವೃದ್ಧಿಸಿದೆ.
ವಿದ್ಯಾಸಿರಿ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ನೀಡಿ ಉನ್ನತ ಶಿಕ್ಷಣಕ್ಕೆ ದಾರಿ ತೆರೆದಿದ್ದಾರೆ. ಇಂದಿರಾ ಕ್ಯಾಂಟೀನ್ ಮೂಲಕ ನಗರ ಬಡವರಿಗೆ ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಊಟ ಒದಗಿಸಿದ್ದಾರೆ. ಕೃಷಿ ಭಾಗ್ಯ ಹಾಗೂ ರೈತಪರ ಕಾರ್ಯಕ್ರಮ ಗಳು ರೈತರ ಆದಾಯ ಹೆಚ್ಚಿಸಲು ನೆರವಾಗಿವೆ. ಅಷ್ಟೇ ಅಲ್ಲ, 2013ರ ಆಡಳಿತ ವ್ಯವಸ್ಥೆ ಯಲ್ಲಿ ಮೊಬೈಲ್ ಒನ್ ಸೇವೆಯನ್ನು ಜಾರಿಗೆ ತಂದು, ಸುಮಾರು 4 ಸಾವಿರ ಸರಕಾರಿ ಹಾಗೂ ಖಾಸಗಿ ಯೋಜನೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ನಿಮಗೆ ನೆನಪಿರಲಿ, ಅಂದು ಆ ನಿರ್ಧಾರ ಕೈಗೊಂಡ ದೇಶದ ಮೊದಲ ರಾಜ್ಯವಾಗಿತ್ತು ಕರ್ನಾಟಕ. ಆ ಶುದ್ಧ ಉದ್ದೇಶದ ಹಿಂದೆ ನಿಂತಿದ್ದು ನಮ್ಮ ಶುದ್ಧಹಸ್ತದ ನಾಯಕ ಸಿದ್ದರಾಮಯ್ಯನವರು.
ಇತರೆ ಮುಖ್ಯಮಂತ್ರಿಗಳು ಅಧಿಕಾರದಿಂದ ದೊಡ್ಡವರಾಗಿರಬಹುದು, ಆದರೆ ಸಿದ್ದರಾಮಯ್ಯನವರು ತತ್ವದಿಂದ ಎತ್ತರದಲ್ಲಿದ್ದಾರೆ. ಇಂದು ಅತಿ ಹೆಚ್ಚು ದಿನಗಳ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಕರ್ನಾಟಕ ರಾಜಕೀಯಕ್ಕೆ ದಿಕ್ಕು ತೋರಿದ, ಮಾದರಿ ರಾಜಕಾರಣಿ. ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತ ಮುಖ್ಯಮಂತ್ರಿಯಾಗಿದ್ದಾರೆ.